Zika virus: ಝಿಕಾ ವೈರಸ್ ತಡೆಗೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ತೆಗೆದುಕೊಂಡ ಕ್ರಮಗಳಿವು
ಚಿಕ್ಕಬಳ್ಳಾಪುರ, ನವೆಂಬರ್, 03: ಸೊಳ್ಳೆಘಟ್ಟ ಎಂದು ದಶಕಗಳಿಂದಲೂ ಕುಖ್ಯಾತಿ ಗಳಿಸಿರುವ ಶಿಡ್ಲಘಟ್ಟ ತಾಲೂಕಿನಲ್ಲಿ ಈಗ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ದಿಬ್ಬೂರಹಳ್ಳಿಯ ವ್ಯಕ್ತಿಗೆ ಜ್ವರ ತಪಾಸಣೆ ಮಾಡುವಾಗ ಝಿಕಾ ವೈರಸ್ ಇರುವ ಅನುಮಾನ ಬಂದು ಮತ್ತಷ್ಟು ಪರೀಕ್ಷೆಗಳನ್ನು ನಡೆಸಿದಾಗ ಸೊಳ್ಳೆಗಳಲ್ಲಿ ಝಿಕಾ ವೈರಸ್ ಇರುವುದು ಪತ್ತೆಯಾಗಿತ್ತು. ತಕ್ಷಣವೇ ಎಚ್ಚೆತ್ತ ಜಿಲ್ಲಾಡಳಿತ ಸಮರೋಪಾದಿಯಲ್ಲಿ ನಿಯಂತ್ರಣ ಕ್ರಮಗಳಿಗೆ ಮುಂದಾಗಿದೆ.
ಜಿಲ್ಲಾ ಅರೋಗ್ಯ ಇಲಾಖೆಯು ಸೊಳ್ಳೆಗಳ ನಾಶಕ್ಕೆ ವಿನೂತನ ಕ್ರಮ ಕೈಗೊಳ್ಳಲು ಮುಂದಾಗಿದ್ದು, ಸೊಳ್ಳೆಗಳನ್ನು ನುಂಗಿಹಾಕಲು ವಿಶೇಷ ಮೀನುಗಳ ಮೊರೆ ಹೋಗಿದೆ. ನೀರಿಗೆ ಗಪ್ಪಿ ಹಾಗೂ ಗಾಂಬೋಸಿಯಾ ಜಾತಿಯ ಮೀನುಗಳನ್ನು ಇಳಿಬಿಟ್ಟು, ಅಲ್ಲೇ ಸೊಳ್ಳೆಗಳನ್ನು ಸ್ವಾಹಾ ಮಾಡುವುದು ಈ ಮೀನುಗಳ ಕೆಲಸವಾಗಲಿದೆ.

ಆದ್ದರಿಂದ ಜಿಕಾ ವೈರಸ್ ಹುಟ್ಟಡಗಿಸುವುದು ಈ ಕಾರ್ಯಯೋಜನೆಯ ತಂತ್ರವಾಗಿದೆ. ನಿರ್ದಿಷ್ಟವಾಗಿ ತಲಕಾಯಲಬೆಟ್ಟ ಗ್ರಾಮದ ಸೊಳ್ಳೆಗಳಲ್ಲಿ ಜಿಕಾ ವೈರಸ್ ಕಂಡುಬಂದಿರುವ ಹಿನ್ನೆಲೆಯಲ್ಲಿ ಸೊಳ್ಳೆಗಳನ್ನು ಸಾಯಿಸಲು ಆರೋಗ್ಯ ಇಲಾಖೆ ಸಿಬ್ಬಂದಿಯು ಗಪ್ಪಿ ಹಾಗೂ ಗಾಂಬೋಸಿಯಾ ಮೀನುಗಳನ್ನು ಹಿಡಿದುಕೊಂಡು ಮನೆ ಮನೆಗೆ ಭೇಟಿ ನೀಡುತ್ತಿದ್ದಾರೆ.
ಈ ಹಿನ್ನೆಲೆ ಚಿಕ್ಕಬಳ್ಳಾಫುರ ಜಿಲ್ಲೆ ಶಿಡ್ಲಘಟ್ಟ ತಾಲೂಕು ತಲಕಾಯಲಬೆಟ್ಟ ಗ್ರಾಮದ ಸೊಳ್ಳೆಗಳಲ್ಲಿ ಜಿಕಾ ವೈರಸ್ ಕಂಡು ಬಂದಿದ್ದು, ಸೊಳ್ಳೆಗಳು ಹಾಗೂ ಅವುಗಳ ಉತ್ಪತ್ತಿಯನ್ನು ನಾಶ ಮಾಡಲು ಮುಂದಾಗಿರುವ ಆರೋಗ್ಯ ಇಲಾಖೆ ಸೊಳ್ಳೆಯನ್ನು ತಿಂದು ಹಾಕುವ ವಿಶೇಷ ಜಾತಿಯ ಮೀನುಗಳನ್ನು ನೀರಿನ ತೊಟ್ಟಿಗೆ ಹಾಕುವ ಕೆಲಸ ಮಾಡುತ್ತಿದೆ.
ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ತಲಕಾಯಲಬೆಟ್ಟ ಗ್ರಾಮದಲ್ಲಿ ಮೊಕ್ಕಾಂ ಹೂಡಿದ್ದಾರೆ. ಜಿಲ್ಲಾ ಆರೋಗ್ಯಾಧಿಕಾರಿ ಮಹೇಶ್ ಕುಮಾರ್, ತಾಲೂಕು ಆರೋಗ್ಯಾಧಿಕಾರಿ ವೆಂಕಟೇಶಮೂರ್ತಿ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ, ಆಶಾ ಕಾರ್ಯಕರ್ತರು ಗ್ರಾಮ ಭಾಗದಲ್ಲಿ ಬೀಡು ಬಿಟ್ಟಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಸೊಳ್ಳೆಗಳಲ್ಲಿ ಝಿಕಾ ವೈರಸ್ ಪತ್ತೆಯಾಗುತ್ತಿದ್ದಂತೆ ತಲಕಾಯಲಬೆಟ್ಟ ಗ್ರಾಮ ಪಂಚಾಯತಿ ಅಧಿಕಾರಿಗಳು, ಜನ ಪ್ರತಿನಿಧಿಗಳ ವಿರುದ್ಧ ತೀವ್ರ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಸ್ಥಳೀಯರು ತಲಕಾಯಲಬೆಟ್ಟ ಗ್ರಾಮ ಪಂಚಾಯತಿಯ ನಿರ್ಲಕ್ಷ್ಯದಿಂದ ಈ ಪರಿಸ್ಥಿತಿ ಉದ್ಭವಿಸಿದೆ ಎಂದು ಕಿಡಿಕಾರಿದ್ದಾರೆ.
ತಲಕಾಯಲಬೆಟ್ಟ ಗ್ರಾಮದಲ್ಲಿ ನೈರ್ಮಲ್ಯ ಕೊರತೆ ಕಾಡುತ್ತಿದೆ. ಗ್ರಾಮದ ಚರಂಡಿಗಳನ್ನು ಶುಚಿಗೊಳಿಸಿ ಯಾವುದೋ ಕಾಲವಾಗಿದೆ. ಇನ್ನಾದರೂ ಗ್ರಾ. ಪಂ. ಎಚ್ಚೆತ್ತುಕೊಂಡು, ಸ್ವಚ್ಛತೆ ಅಭಿಯಾನ ಶುರುಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಗ್ರಾಮ ಪಂಚಾಯತಿ ಸದಸ್ಯ ಅಶ್ವತ್ಥರೆಡ್ಡಿಯನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ.
ಕೇರಳ ಬಿಟ್ಟರೆ ಕರ್ನಾಟಕದಲ್ಲಿ ಮಾತ್ರವೇ ಈ ಝಿಕಾ ವೈರಸ್ ಪತ್ತೆಯಾಗಿದೆ. ಇದರಿಂದ ಸಹಜವಾಗಿ ರಾಜ್ಯದ ಜನತೆ ಆತಂಕಗೊಂಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ 5 ಗ್ರಾಮಗಳ ವ್ಯಾಪ್ತಿಯಲ್ಲಿ ವೈರಸ್ ಆತಂಕ ಎದುರಾಗಿದೆ. ದಿಬ್ಬೂರಹಳ್ಳಿ, ತಲಾಕಾಯಲ ಬೆಟ್ಟ, ಸುತ್ತಮುತ್ತ ಝಿಕಾ ಆತಂಕ ಮನೆ ಮಾಡಿದೆ. ಸೊಳ್ಳೆಗಳಲ್ಲಿ ಝಿಕಾ ವೈರಸ್ ಪತ್ತೆ ಹಿನ್ನೆಲೆ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಹೆಚ್ಚು ಆತಂಕ ಮೂಡಿಸಿದೆ.
ಈ ವೈರಸ್ ಆತಂಕದ ನಡುವೆ ತಲಕಾಯಲಬೆಟ್ಟ ಸುತ್ತಮುತ್ತಲ ಗ್ರಾಮಗಳಲ್ಲಿನ ಸಾರ್ವಜನಿಕರನ್ನು ವಿಚಾರಿಸಿದಾಗ ಕಾಲಕಾಲಕ್ಕೆ ಚರಂಡಿಗಳಲ್ಲಿ ಹೂಳು ತೆಗೆಯುತ್ತಿಲ್ಲ. ಹೀಗಾಗಿ ಸೊಳ್ಳೆಗಳು ಉತ್ಪತ್ತಿ ಆಗುತ್ತಿವೆ. ಅದರಿಂದ ಈ ವೈರಸ್ ಬಂದಿದೆ ಅಂತಾ ಆರೋಗ್ಯ ಇಲಾಖೆಯವರು ಹೇಳುತ್ತಿದ್ದಾರೆ. ಅದು ನಮ್ಮ ಆತಂಕವನ್ನು ಹೆಚ್ಚಿಸಿದೆ ಎಂದು ಗ್ರಾಮಸ್ಥರು ತಮ್ಮ ಅಸಹಾಯಕ ಸ್ಥಿತಿ ಬಗ್ಗೆ ಆಕ್ರೋಶಗೊಂಡಿದ್ದಾರೆ.
ಆರೋಗ್ಯ ಇಲಾಖೆಯವರು ಬಂದು ಸೊಳ್ಳೆಗಳ ನಿವಾರಣೆಗೆ ರಾಸಾಯನಿಕ ಸಿಂಪಡಣೆ ಮಾಡಿದ್ದಾರೆ. ಆದರೆ ಇದರ ಬಗ್ಗೆ ಸಾರ್ವಜನಿಕರಲ್ಲಿ ಇನ್ನಷ್ಟು ಅರಿವು ಮೂಡಿಸಬೇಕು ಎಂದು ಗ್ರಾಮಸ್ಥರರು ತಿಳಿಸಿದ್ದಾರೆ.
ಚಿಕ್ಕಬಳ್ಳಾಫುರ ಜಿಲ್ಲೆ ಶಿಡ್ಲಘಟ್ಟ ತಾಲೂಕು ತಲಕಾಯಲಬೆಟ್ಟ ಗ್ರಾಮದ ಸೊಳ್ಳೆಗಳಲ್ಲಿ ವೈರಸ್ ಕಂಡುಬಂದ ಹಿನ್ನೆಲೆ ಗ್ರಾಮದ ಗರ್ಭಿಣಿ ಮಹಿಳೆಯರು ಆತಂಕಕ್ಕೊಳಗಾಗಿದ್ದಾರೆ. ಈ ವೈರಸ್ ಗರ್ಭಿಣಿ ಮಹಿಳೆಯರಿಗೆ ತಗುಲಿದರೆ ಹುಟ್ಟುವ ಮಕ್ಕಳ ನರಮಂಡಲದ ಮೇಲೆ ಪರಿಣಾಮ ಬೀರುವ ಕಾರಣ ಈಗ ಗರ್ಭಿಣಿಯರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲು ನಿರ್ಧರಿಸಲಾಗಿದೆ.
ಹುಟ್ಟುವ ಮಕ್ಕಳಲ್ಲಿ ಯಾವುದಾದರೂ ನ್ಯೂನತೆ ಕಂಡು ಬಂದರೆ ಅದನ್ನು ಪತ್ತೆ ಹಚ್ಚಲು ಆರೋಗ್ಯ ಇಲಾಖೆ ಮುಂದಾಗಿದೆ. ಅರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು ಗರ್ಭಿಣಿ ಮಹಿಳೆಯರ ಮನೆ ಮನೆಗೆ ಭೇಟಿ ನೀಡಿ ತಪಾಸಣೆ ನಡೆಸುತ್ತಿದ್ದಾರೆ.
DHO ಮಹೇಶ್ ಕುಮಾರ್ ಹೇಳಿದ್ದೇನು?
ಚಿಕ್ಕಬಳ್ಳಾಪುರ ಜಿಲ್ಲೆಯ ಸೊಳ್ಳೆಗಳಲ್ಲಿ ಜೀಕಾ ವೈರಸ್ ಪತ್ತೆಯಾಗಿದ್ದು, ಈ ಬಗ್ಗೆ ತಲಕಾಯಲಬೆಟ್ಟದಲ್ಲಿ ಜಿಲ್ಲಾ ವೈದ್ಯಾಧಿಕಾರಿ S.S.ಮಹೇಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ತಲಕಾಯಲಬೆಟ್ಟದ ಗ್ರಾ.ಪಂ. ವ್ಯಾಪ್ತಿಯಲ್ಲಿ ಝಿಕಾ ವೈರಸ್ ಪತ್ತೆಯಾಗಿದೆ. ನಮ್ಮ ವೈದ್ಯಕೀಯ ಸರ್ವೇಕ್ಷಣಾ ಸಮಿತಿ ಕಳೆದ ಆಗಸ್ಟ್ ತಿಂಗಳಲ್ಲಿ ಪರೀಕ್ಷೆ ನಡೆಸಿದಾಗ ಇದು ಸಾಬೀತಾಗಿದೆ. ಪರೀಕ್ಷೆ ವೇಳೆ ಸೊಳ್ಳೆಗಳಲ್ಲಿ ವೈರಸ್ ಪತ್ತೆಯಾಗಿರುವುದು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.
ಝಿಕಾ ವೈರಸ್ ಸಮ್ಮುಖದಲ್ಲಿ ಐದು ಗ್ರಾಮಗಳ ವ್ಯಾಪ್ತಿಯ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಈಗಾಗಲೇ 30 ಗರ್ಭಿಣಿಯರ ರಕ್ತ ಪರೀಕ್ಷೆ ಮಾಡಿದ್ದೇವೆ. 34 ರಕ್ತದ ಸ್ಯಾಂಪಲ್ಗಳನ್ನು ಪರೀಕ್ಷೆಗೆ ಕಳುಹಿಸಿದ್ದೇವೆ. ಹೆಚ್ಚಿನ ಪರೀಕ್ಷೆಗಳಿಗಾಗಿ ಬೆಂಗಳೂರು, ಪುಣೆಗೂ (NIV) ಮಾದರಿಗಳನ್ನು ಕಳಿಸಿದ್ದೇವೆ. ವೈರಸ್ ಬಗ್ಗೆ ಯಾವುದೇ ಆತಂಕಪಡುವ ಅಗತ್ಯವಿಲ್ಲ. ಅಗತ್ಯ ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವುದರಿಂದ ರೋಗ ನಿಯಂತ್ರಣ ಸಾಧ್ಯ ಎಂದು ಹೇಳಿದರು.












Click it and Unblock the Notifications