20 ವರ್ಷದ ಸೇವೆಗೆ ನಾಲ್ಕು ಸಾವಿರ ದಾಟದ ಸಂಬಳ: ಅಕ್ಷರ ದಾಸೋಹ ನೌಕರರಿಂದ ವಿಧಾನಸೌಧ ಚಲೋ
ಚಿಕ್ಕಬಳ್ಳಾಪುರ, ನವೆಂಬರ್ 07: ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಬಿಸಿಯೂಟ ಸಿದ್ಧಪಡಿಸುವ ಅಕ್ಷರ ದಾಸೋಹ ಸಿಬ್ಬಂದಿಗೆ ಕನಿಷ್ಠ ವೇತನ ಜಾರಿಯಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಸ್ತುತ ಚಿಕ್ಕಬಳ್ಳಾಪುರ ಜಿಲ್ಲೆಯ 1,630 ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 2,630 ಬಿಸಿಯೂಟ ತಯಾರಕ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಅವರು ಪ್ರತಿನಿತ್ಯ 86 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಬಿಸಿಯೂಟ ಉಣ ಬಡಿಸುತ್ತಿದ್ದಾರೆ.
ಬಿಸಿಯೂಟ ತಯಾರಿಸುವವರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿದರೂ ಪ್ರಸ್ತುತ ನೀಡಲಾಗುತ್ತಿರುವ ಸಂಬಳ ಕೇವಲ 3,700ರೂ. ಮಾಸಿಕ ವೇತನದಲ್ಲಿ ಜೀವನ ನಿರ್ವಹಣೆ ಸಾಧ್ಯವಾಗದೆ ಈ ಕುಟುಂಬಗಳು ಬೀದಿಗೆ ಬಂದಿವೆ.

ಅಧಿಕಾರಕ್ಕೆ ಬಂದ ಕೂಡಲೇ ವೇತನವನ್ನು 6 ಸಾವಿರ ರೂ.ಗಳಿಗೆ ಹೆಚ್ಚಿಸುವುದಾಗಿ ಚುನಾವಣಾ ಪೂರ್ವದಲ್ಲಿ ಗ್ಯಾರಂಟಿ ಕೊಟ್ಟಿದ್ದ ಕಾಂಗ್ರೆಸ್ ಸರ್ಕಾರವು ಮೌನಕ್ಕೆ ಶರಣಾದ ಪರಿಣಾಮ ಕೆಲಸ ಸ್ಥಗಿತಗೊಳಿಸಿ ಸಿಐಟಿಯು ವತಿಯಿಂದ ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ವಿಧಾನಸೌಧ ಛಲೋ ಮುಷ್ಕರಕ್ಕೆ ಮುಂದಾಗಿದ್ದಾರೆ.
2002-03ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರ ಶಾಲಾ ಮಕ್ಕಳಿಗೆ ಉತ್ತಮ ಪೋಷಕಾಂಶ ಭರಿತ ಆಹಾರವನ್ನು ಒದಗಿಸುವ ದೃಷ್ಟಿಯಿಂದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಜಾರಿಗೊಳಿಸಿತು. ಈ ಯೋಜನೆ ಜಾರಿಗೆ ಬಂದು ಬರೋಬ್ಬರಿ 20 ವರ್ಷಗಳೇ ಕಳೆದು ಹೋದರು, ಅಡುಗೆ ಸಿಬ್ಬಂದಿ ಮಾತ್ರ ನೆಲೆ ಕಂಡುಕೊಂಡಿಲ್ಲ.

ಅಕ್ಷರ ದಾಸೋಹ ಯೋಜನೆ ಆರಂಭಗೊಂಡಾಗ ಪುಟಾಣಿ ಮಕ್ಕಳಿಗೆ ಬಿಸಿ ಬಿಸಿಯಾದ ಅಡುಗೆ ತಯಾರಿಸಿಕೊಡುವ ಜವಾಬ್ದಾರಿ ಹೊತ್ತು ತಿಂಗಳಿಗೆ ಕೇವಲ 650 ರೂಪಾಯಿ ಸಂಬಳಕ್ಕೆ 20 ವರ್ಷಗಳ ಹಿಂದೆ ಕೆಲಸಕ್ಕೆ ಸೇರಿದ ಸಾವಿರಾರು ಮಹಿಳೆಯರು ಇಂದಲ್ಲ ನಾಳೆ ತಮಗೂ ಕನಿಷ್ಠ ವೇತನವಾದರೂ ಸಿಕ್ಕೀತೆಂದು ಕಾದು ಕುಳಿತಿದ್ದೇ ಬಂತು. ದುರದೃಷ್ಟವಶಾತ್, ಅಧಿಕಾರಕ್ಕೆ ಬಂದ ಯಾವ ಸರ್ಕಾರಗಳೂ ಇವರತ್ತ ಒಂದು ಕ್ಷಣವೂ ಸಹ ಗಮನ ಹರಿಸಿಲ್ಲ.
ಪ್ರಸ್ತುತ ಸಂಬಳ ಎಷ್ಟು?
ಅಕ್ಷರ ದಾಸೋಹ ಯೋಜನೆಯ ಅಡುಗೆ ಸಿಬ್ಬಂದಿಗೆ ಪ್ರಸ್ತುತ ಮಾಸಿಕ 3,700 ರೂ., ಸಹಾಯಕಿ ಗೆ 3,600 ರೂ. ನೀಡಲಾಗುತ್ತಿದೆ. 2003ರಲ್ಲಿ ಯೋಜನೆ ಆರಂಭ ಗೊಂಡಾಗ 650 ರೂ. ನೀಡಲಾಗುತ್ತಿತ್ತು. ಪ್ರತಿ ವರ್ಷವೂ ಕನಿಷ್ಠ 500 ರೂ. ಹೆಚ್ಚಳ ಮಾಡುತ್ತಾ ಬಂದಿದ್ದರೂ ಈಗ 10 ಸಾವಿರ ರೂ. ಆಗಬೇಕಿತ್ತು.
ಅಕ್ಷರ ದಾಸೋಹ ನೌಕರರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಸೇರಿ ಗೌರವಧನ ನೀಡುತ್ತಿವೆ. 4 ಗಂಟೆ ಕೆಲಸ ಎಂಬ ನಿಯಮ ಮಾಡಿದ್ದು, ಬಿಸಿಯೂಟ ಸಿಬ್ಬಂದಿ 6 ಗಂಟೆಯಷ್ಟು ಹೊತ್ತು ಶಾಲೆಯಲ್ಲಿ ಕೆಲಸ ಮಾಡ ಬೇಕಾಗುತ್ತದೆ. ಗ್ರಾಮೀಣ ಪ್ರದೇಶಗಳ ಶಾಲೆಗಳಲ್ಲಿ ಡಿ ಗ್ರೂಪ್ ನೌಕರರು ಇಲ್ಲದ ಕಾರಣ ಶಾಲೆಯನ್ನು ಸ್ವಚ್ಛಗೊಳಿಸುವ, ಬೀಗ ತೆಗೆಯುವ, ಕೊಠಡಿಗಳನ್ನು ತೊಳೆಯುವ ಮುಂತಾದ ಕೆಲಸಗಳನ್ನು ಮುಖ್ಯ ಶಿಕ್ಷಕರ ಮರ್ಜಿಗೆ ಒಳಗಾಗಿ ಮಾಡುತ್ತಿದ್ದಾರೆ. ಸರ್ಕಾರ ಇದನ್ನು ಪರಿಗಣಿಸಿಯೇ ಇಲ್ಲ ಎಂಬ ನೋವು ಬಿಸಿಯೂಟ ನೌಕರರದ್ದು.
ಅಕ್ಷರ ದಾಸೋಹ ನೌಕರರ ಬೇಡಿಕೆ ಏನು..?
ಸಾದಿಲ್ವಾರು ಜಂಟಿ ಖಾತೆ ಮೊದಲಿನಂತೆ ಇರಬೇಕು, ದಸರಾ ಹಾಗೂ ಬೇಸಿಗೆ ರಜೆ ವೇತನ ಕಡ್ಡಾಯವಾಗಿ ನೀಡಬೇಕು, ಕನಿಷ್ಠ ವೇತನ ಜಾರಿಗೊಳಿಸಿ ಮಾಸಿಕ 15 ಸಾವಿರ ರೂ. ಸಂಬಳ ನೀಡಬೇಕು. ನಿವೃತ್ತಿ ಹೊತ್ತಲ್ಲಿ 1 ಲಕ್ಷ ರೂ ಠೇವಣಿ ರೀತಿ ನೀಡಬೇಕು. ಕರ್ತವ್ಯದ ಅವಧಿಯಲ್ಲಿ ಮೃತಪಟ್ಟರೆ 25 ಲಕ್ಷ ರೂ. ಪರಿಹಾರ ನೀಡಬೇಕು ಎಂಬ ಬೇಡಿಕೆಗಳನ್ನು ನೌಕಕರು ಸರ್ಕಾರದ ಮುಂದೆ ಇಟ್ಟಿದ್ದಾರೆ.
ಈ ಬಗ್ಗೆ ಚಿಕ್ಕಬಳ್ಳಾಪುರ ಜಿಲ್ಲಾ ಶಿಕ್ಷಣಾಧಿಕಾರಿ ಶೋಭಾ ಮಾತನಾಡಿದ್ದು, " ಬಿಸಿಯೂಟ ನೌಕರರು ವಿಧಾನಸೌಧ ಛಲೋ ಅನಿರ್ದಿಷ್ಟಾವಧಿ ಧರಣಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮಕ್ಕಳಿಗೆ ಬಿಸಿಯೂಟದಿಂದ ವಂಚಿತರಾಗದಂತೆ, ಎಸ್‌ಡಿಎಂಸಿ ಹಾಗೂ ಸಮುದಾಯದ ಸಹಾಯ ಪಡೆದು ಬಿಸಿಯೂಟ ವ್ಯವಸ್ಥೆ ಮಾಡಿಕೊಳ್ಳುವಂತೆ ಕ್ರಮ ಕೈಗೊಳ್ಳಲು ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಲಾಗಿದೆ" ಎಂದರು.
ಇನ್ನು ಸಿಐಟಿಯು ಸಂಘಟನೆಯ ಗೌರವಧ್ಯಕ್ಷ ಬಿ. ಎನ್. ಮುನಿಕೃಷ್ಣಪ್ಪ ಮಾತನಾಡಿದ್ದು, " ಪ್ರತಿ 3 ಜಿಲ್ಲೆಗಳಿಂದ ಒಂದೊಂದು ದಿನ ಮುಷ್ಕರ ಮಾಡುತ್ತಿದ್ದೇವೆ. ಹಿಂದಿನ ರಾಜ್ಯ ಬಿಜೆಪಿ ಸರಕಾರ ತನ್ನ ಕೊನೆಯ ಬಜೆಟ್‌ನಲ್ಲಿ ಬಿಸಿಯೂಟ ಸಿಬ್ಬಂದಿಗೆ ಮಾಸಿಕ 1 ಸಾವಿರ ರೂ. ಹೆಚ್ಚಳ ಮಾಡಿತ್ತು. ಆದರೆ ಅದು ಅನುಷ್ಠಾನಕ್ಕೆ ಬರಲೇ ಇಲ್ಲ. ಈಗಿನ ಕಾಂಗ್ರೆಸ್ ಸರಕಾರ ಕೊಟ್ಟಿದ್ದ ಭರವಸೆ ಈಡೇರಿಸಲಿ, ನಿವೃತ್ತಿ ಸಮಯದಲ್ಲಿ ಕನಿಷ್ಠ 1 ಲಕ್ಷ ಇಡಗಂಟು ನೀಡಬೇಕು ಅಲ್ಲಿಯ ತನಕ ನಮ್ಮ ಹೋರಾಟ ಮುಂದುವರಿಯಲಿದೆ" ಎಂದು ಹೇಳಿದರು.












Click it and Unblock the Notifications