ಜನವರಿ 30ಕ್ಕೆ ಕರ್ನಾಟಕದಲ್ಲಿ ರೈಲು ಸಂಚಾರ ಬಂದ್
ಚಿಕ್ಕಬಳ್ಳಾಪುರ, ಜನವರಿ 25 : ಜನವರಿ 30ರ ಶನಿವಾರ ಕರ್ನಾಟಕದಲ್ಲಿ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ರೈಲು ಬಂದ್‌ಗೆ ಕರೆ ಕೊಟ್ಟಿದ್ದಾರೆ.
ಸೋಮವಾರ ಚಿಕ್ಕಬಳ್ಳಾಪುರ ರೈಲು ನಿಲ್ದಾಣದಲ್ಲಿ ಕಪ್ಪುಪಟ್ಟಿ ಧರಿಸಿ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು. "ಮರಾಠ ಅಭಿವೃದ್ಧಿ ಪ್ರಾಧಿಕಾರ ರದ್ದು, ಎಂಇಎಸ್ ಸಂಘಟನೆ ನಿಷೇಧಿಸಿವಂತೆ ಒತ್ತಾಯಿಸಿ ಜನವರಿ 30ರಂದು ಪ್ರತಿಭಟನೆ ನಡೆಸುವುದಾಗಿ" ಹೇಳಿದರು.
ಯಡಿಯೂರಪ್ಪ ಮುಂದೆ ಹೊಸ ಬೇಡಿಕೆ ಇಟ್ಟ ಮರಾಠ ಸಮುದಾಯ
"ಜನವರಿ 30ರಂದು ರಾಜ್ಯದಲ್ಲಿ ರೈಲು ಸೇವೆಯನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಗುತ್ತದೆ. ಕರ್ನಾಟಕ ಸರ್ಕಾರ ನಿಷ್ಕ್ರೀಯವಾಗಿದೆ, ಬೆಳಗಾವಿಯ ರಾಜಕಾರಣಿಗಳು ಕೋಮಾದಲ್ಲಿದ್ದಾರೆ" ಎಂದು ವಾಟಾಳ್ ನಾಗರಾಜ್ ಆರೋಪಿಸಿದರು.
ಸುವರ್ಣಸೌಧವನ್ನು ಮರಾಠ ಶ್ರೀಮಂತರಿಗೆ ಮಾರುತ್ತಾರೆ: ವಾಟಾಳ್
"ಕರ್ನಾಟಕ ಆಕ್ರಮಿತ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತೇವೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳುತ್ತಾರೆ. ಅವರಿಗೆ ಎಂಇಎಸ್ ನವರು ಬೆಂಬಲ ಕೊಡುತ್ತಾರೆ" ಎಂದು ವಾಟಾಳ್ ನಾಗರಾಜ್ ದೂರಿದರು.
"ಬೆಳಗಾವಿ ರಾಜಕಾರಣಿಗಳಿಗೆ ಏನೂ ಬೇಕಾಗಿಲ್ಲ. ಮಂತ್ರಿ ಆಗುವುದು ಮಾತ್ರ ಬೇಕು. ಬೆಳಗಾವಿಯ ರಾಜಕಾರಣಿಗಳು ಮಹಾರಾಷ್ಟ್ರ ಮತ್ತು ಎಂಇಎಸ್ ಏಜೆಂಟ್‌ಗಳಾಗಿದ್ದಾರೆ" ಎಂದು ವಾಟಾಳ್ ನಾಗರಾಜ್ ವಾಗ್ದಾಳಿ ನಡೆಸಿದರು.
"ಕನ್ನಡ ಉಳಿದಿರುವುದು ಕನ್ನಡ ಪರ ಸಂಘಟನೆಗಳಿಂದ. ಯಡಿಯೂರಪ್ಪ ಸರ್ಕಾರ ಇತ್ತೇಚಿಗೆ ಬಂದ ಎಲ್ಲಾ ಸರ್ಕಾರಗಳಿಗಿಂತ ಹೀನಾಯ ಸರ್ಕಾರ. ಕನ್ನಡ ವಿರೋಧಿ ಸರ್ಕಾರ, ಕನ್ನಡ ಸಂಘಟನೆಗಳ ವಿರೋಧಿ ಸರ್ಕಾರ" ಎಂದು ವಾಟಾಳ್ ನಾಗರಾಜ್ ಆರೋಪಿಸಿದರು.
"ಬಿಜೆಪಿ, ಆರ್‌ಎಸ್‌ಎಸ್ ಅವರಿಗೆ ಹಿಂದಿ ಬಗ್ಗೆ ಅಭಿಮಾನವೇ ಹೊರತು ಕನ್ನಡದ ಬಗ್ಗೆಯಲ್ಲ. ಯಡಿಯೂರಪ್ಪ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವ ಮೂಲಕ ಕನ್ನಡಿಗರಿಗೆ ದ್ರೋಹ ಬಗೆದಿದ್ದಾರೆ" ಎಂದು ವಾಟಾಳ್ ನಾಗರಾಜ್ ವಾಗ್ದಾಳಿ ನಡೆಸಿದರು.