ಚಿಕ್ಕಬಳ್ಳಾಪುರದಲ್ಲಿ ಮರಳು ದಂಧೆಗಿಲ್ಲ ಕಡಿವಾಣ: ವಿವಿಧ ಕೆರೆಗಳಲ್ಲಿ ಮಣ್ಣು ನಾಪತ್ತೆ..!
ಚಿಕ್ಕಬಳ್ಳಾಪುರ ನವೆಂಬರ್ 28: ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಹಲವು ಗ್ರಾಮ ಪಂಚಾಯತಿ ವ್ಯಾಪ್ತಿಯ ಸರಕಾರಿ ಸ್ವಾಮ್ಯದ ಗೋಮಾಳ, ಕೆರೆ ಸೇರಿದಂತೆ ಸರಕಾರಿ ಜಾಗದಲ್ಲಿ ದೊಡ್ಡ ದೊಡ್ಡ ಗುಂಡಿಗಳನ್ನು ತೋಡಿ ಅಕ್ರಮ ಮಣ್ಣು ಸಾಗಾಟ ಮಾಡಿ ಮಣ್ಣು ಮಾರಾಟ ದಂಧೆಯೂ ಆರಂಭವಾಗಿರುವುದು ಸಾರ್ವಜನಿಕರ ಹಾಗೂ ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಗುಡಿಬಂಡೆ ತಾಲೂಕಿನ ಹಲವು ಗ್ರಾಮ ಪಂಚಾಯತಿ ವ್ಯಾಪ್ತಿಯ ಹಲವು ಕೆರೆಗಳಲ್ಲಿ ಎಗ್ಗಿಲ್ಲದೇ ಮಣ್ಣು ದಂಧೆ, ಕೆಂಪು ಮಣ್ಣು ದಂಧೆ ನಡೆಯುತ್ತಿದ್ದೂ ಲಂಗು ಲಗಾಮು ಇಲ್ಲದೆ ಈ ಅಕ್ರಮ ಮಣ್ಣು ದಂಧೆಯಲ್ಲಿ ತೊಡಗಿರುವವರಿಗೇ ಕಡಿವಾಣ ಹಾಕಬೇಕಾದ ಅಧಿಕಾರಿಗಳು ಕಣ್ಣಿದ್ದು ಕುರುಡರಂತಾಗಿದ್ದಾರೆಂಬ ಆರೋಪ ಸಾರ್ವಜನಿಕ ವಲಯದಲ್ಲಿ ವ್ಯಾಪಾಕವಾಗಿ ನಡೆಯುತ್ತಿದೆ.

ಸ್ಥಳೀಯ ಜನಪ್ರತಿನಿದಿಗಳು ಹಾಗೂ ಅಧಿಕಾರಿಗಳ ಕೃಪಾಶಿರ್ವಾದಿಂದ ಸರಕಾರಿ ಗೋಮಾಳ, ಕೆರೆಗಳಲ್ಲಿನ ಸಮೃದ್ಧ ಮಣ್ಣನ್ನು ಅವಶ್ಯಕತೆ ಇರುವ ರಿಯಲ್ ಎಸ್ಟೇಟ್ ಮಾಲೀಕರು, ರೈತರು ಸೇರಿದಂತೆ ಇನ್ನಿತರರಿಗೆ ದುಪ್ಪಟ್ಟು ಹಣಕ್ಕೆ ಮಾರಾಟ ಮಾಡುತ್ತಿರುವ ವಿಚಾರ ಜಗಜ್ಜಾಹಿರು ಆದರೂ ಖಾಸಗಿ ಲೇಔಟ್ ಗಳಿಂದಾಗಿ ರಿಯಲ್ ಎಸ್ಟೇಟ್ ಹಾಗೂ ಅಕ್ರಮ ದಂಧೆ ಕೋರರ ಕಿಸೆ ತುಂಬಿಸುತ್ತಿರುವ ವಿಚಾರ ತಿಳಿದಿದ್ದರೂ ಸಂಬಂಧ ಪಟ್ಟ ಅಧಿಕಾರಿಗಳು ಮಾತ್ರ ಗಾಢ ನಿದ್ರೆಯಲ್ಲಿದ್ದಂತಿದೆ.
ಹಿಡುವಳಿ ರೈತರಿಗೆ ಹಣದ ಅಮಿಷ: ಈಗಾಗಲೇ ಹಿಡುವಳಿ ಮಾಡುತ್ತಿರುವ ರೈತರ ಜಮೀನುಗಳಲ್ಲಿ ಇರುವ ಕೆಂಪು ಮಣ್ಣನ್ನು ದಾಳಿಂಬೆ, ದ್ರಾಕ್ಷಿ, ಬಾಳೆ ಸೇರಿದಂತೆ ಇನ್ನಿತರ ಬೆಳೆಗಳಿಗೆ ಬಳಕೆ ಮಾಡಲಾಗುತ್ತದೆ, ಹಾಗಾಗಿ ಹೆಚ್ಚಿನ ಹಣದ ಅಮಿಷ ತೋರಿಸಿ ಮಣ್ಣು ತೆಗೆದುಕೊಳ್ಳಲಾಗುತ್ತೀದೆ.
ಸಮತಟ್ಟು ಮಾಡುವ ಜವಾಬ್ದಾರಿ:
ಮಣ್ಣು ತೆಗೆದ ನಂತರ ಜಮೀನುಗಳನ್ನು ಸಮತಟ್ಟು ಮಾಡಿ ಮಾಡಿಕೊಡುತ್ತೇವೆ ಎಂಬ ಭರವಸೆ ನೀಡುಲಾಗುತ್ತಿದೆ. ಆಜುಬಾಜಿನ ಹಿಡುವಳಿ ಜಮೀನುಗಳಲ್ಲೂ ಮಣ್ಣು ತೆಗೆದು ಸಾಗಣೆ ಮಾಡುವುದು ನಿರಂತರವಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಗ್ರಾಮಸ್ಥರಿಂದ ಆಕ್ರೋಶ : ಗೋಮಾಳದ ಕೆರೆ ಜಾಗದಲ್ಲಿ ಅಕ್ರಮವಾಗಿ ಮಣ್ಣು ತೆಗೆದು ಸಾಗಣೆ ಮಾಡುತ್ತಿರುವುದರ ಬಗ್ಗೆ ಹಲವು ಗ್ರಾಮಗಳಲ್ಲಿ ಜನರು ಜೆಸಿಬಿ, ಟಿಪ್ಪರ್‌ಗಳನ್ನು ತಡೆದು ಮಣ್ಣು ತೆಗೆಯದಂತೆ ಒತ್ತಡ ಹೆರಲಾಗುತ್ತಿದೆ, ವಿರೋಧ ವ್ಯಕ್ತವಾದಾಗ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಿ ಮಣ್ಣು ತೆಗೆಯಲಾಗುತ್ತಿದೆ, ಹೊರತು ಮಣ್ಣು ತೆಗೆಯುವುದು ಮಾತ್ರ ನಿಂತಿಲ್ಲ.
ನರ್ಸರಿಗಳಿಗೂ ಕೆಂಪು ಮಣ್ಣು ಅತ್ಯವಶ್ಯ :
ಕೆಂಪು ಮಣ್ಣು ಹೂಗಿಡಗಳಿಗೆ ತುಂಬಾ ಒಳ್ಳೆಯದು. ನರ್ಸರಿಗಳಲ್ಲಿ ಸಸಿಗಳನ್ನು ಬೆಳೆಸುವವರು ಇದನ್ನು ಹೆಚ್ಚಾಗಿ ಬಳಸುತ್ತಾರೆ. ಮನೆ ಮುಂದೆ ಹೂದೋಟ ಹೊಂದಿರುವವರು ಮಳೆಗಾಲ ಆರಂಭವಾಗುವ ಸಮಯದಲ್ಲಿ ಕೆಂಪು ಮಣ್ಣು ಖರೀದಿಸುತ್ತಾರೆ. ಬರೀ ಗೊಬ್ಬರವನ್ನು ಮಾತ್ರ ಬುಡಕ್ಕೆ ಹಾಕಿದರೆ ಗಿಡಕ್ಕೆ ಹಾನಿ ಉಂಟಾಗುವ ಅಪಾಯವಿದೆ. ಹಾಗಾಗಿ ಸಾವಯವ ಗೊಬ್ಬರ ಮಿಶ್ರ ಮಾಡಿ ಗಿಡಗಳಿಗೆ ಹಾಕುತ್ತಾರೆ.
ಕೆಂಪು ಮಣ್ಣಿಗೆ ಯಾಕಿಷ್ಟು ಬೇಡಿಕೆ?
ಕೆಂಪು ಮಣ್ಣು ತೇವಾಂಶವನ್ನು ಹಿಡಿದಿಟ್ಟುಕೊಳ್ಳುತ್ತದೆ. ಇದನ್ನು ಬುಡಕ್ಕೆ ಹಾಕಿದರೆ ಗಿಡ ಹುಲುಸಾಗಿ ಬೆಳೆಯುತ್ತದೆ. ಎಲ್ಲ ಕಡೆ ಕಟ್ಟಡಗಳೇ ತುಂಬಿರುವುದರಿಂದ ಎಲ್ಲೂ ಇಂತಹ ಮಣ್ಣು ಎಲ್ಲ ಕಡೆ ಇದು ಸಿಗುವುದಿಲ್ಲ. ಹೊರವಲಯದಿಂದ ಟ್ರ್ಯಾಕ್ಟರ್‌ನಿಂದ ಕೆಂಪು ಮಣ್ಣು ತುಂಬಿಸಿಕೊಂಡು ಬಂದು ನಗರದಲ್ಲಿ ಮಾರಾಟ ಮಾಡುತ್ತಾರೆ.
ಪರವಾನಿಗೆ ಅತ್ಯವಶ್ಯಕ:
ತಾಲೂಕಿನಲ್ಲಿ ಸಣ್ಣ ನೀರಾವರಿ ಹಾಗೂ ಜಿಪಂ ಇಲಾಖೆಗೆ ಸೇರಿದ ಬಹಳಷ್ಟು ಕೆರೆಗಳಿವೆ. ಈ ಕೆರೆಗಳಲ್ಲಿ ಸಂಗ್ರವಾಗಿರುವ ಮಣ್ಣನ್ನು ರೈತರು ಕೃಷಿ ಉದ್ದೇಶಕ್ಕಾಗಿ ತಮ್ಮ ಜಮೀನುಗಳಿಗೆ ಅನುಮತಿ ಪಡೆದು ಹೊಡೆದುಕೊಳ್ಳಬಹುದು.
ಆದರೆ ಲೇಔಟ್ ಗಳ ನಿರ್ಮಾಣ, ಇಟ್ಟಿಗೆ ಕಾರ್ಖಾನೆ ಹಾಗೂ ಇತರೆ ವಾಣಿಜ್ಯ ಉದ್ದೇಶಕ್ಕೆ ಕೆರೆ, ಗೋಮಾಳದಲ್ಲಿನ ಮಣ್ಣನ್ನು ತೆಗೆಯ ಬೇಕಾದರೆ ಸಂಬಂಧಪಟ್ಟ ಇಲಾಖೆಗೆ ರಾಜಧನವನ್ನು ಪಾವತಿಸಿ, ಪರವಾನಿಗೆ ಪಡೆಯುವುದು ಅತ್ಯವಶ್ಯಕವಾಗಿದೆ. ಯಾವುದೇ ಪರವಾನಗಿ ಪಡೆಯದೇ ರಾಯಲ್ಟಿ ಪಾವತಿಸದೇ ಮಣ್ಣನ್ನು ತೆಗೆಯುವುದು ಕಾನೂನು ಬಾಹಿರವಾಗುತ್ತದೆ. ತಾಲೂಕಿನಲ್ಲಿ ಬಹುತೇಕ ಕಡೆ ಯಾವುದೇ ಪರವಾನಗಿ ಪಡೆಯದೇ ಅಕ್ರಮವಾಗಿ ನೂರಾರು ಟ್ರಾಕ್ಟರ್ ಹಾಗೂ ಟಿಪ್ಪರ್ ಗಳಲ್ಲಿ ಮಣ್ಣನ್ನು ಸಾಗಿಸಲಾಗುತ್ತಿದೆ.ಈ ಕುರಿತು ಅಧಿಕಾರಿಗಳಿಂದ ಅಭಿಪ್ರಾಯ ಪಡೆಯಲು ಸಂಪರ್ಕಿಸುವ ಪ್ರಯತ್ನ ಮಾಡಿದರು ತಹಶೀಲ್ದಾರರು ಕರೆಯನ್ನು ಸ್ವೀಕರಿಸಲಿಲ್ಲ.
ಹಿಡುವಳಿ ಜಮೀನುಗಳನ್ನೂ ಬಿಟ್ಟಿಲ್ಲ:
ಗೋಮಾಳದ ಸರಕಾರಿ ಕೆರೆಯಿಂದ ಅಕ್ರಮವಾಗಿ ಮಣ್ಣು ಸಾಗಣೆ ಮಾಡುವುದನ್ನು ಅಧಿಕಾರಿಗಳು ಕೂಡಲೇ ನಿಲ್ಲಿಸಲಿ, ಕೆಲವು ರೈತರಿಗೆ ಹಣದ ಅಮಿಷ ತೋರಿಸಿ ಹಿಡುವಳಿ ಜಮೀನುಗಳಲ್ಲಿಯೂ ಮಣ್ಣು ತೆಗೆದು ಲೇಔಟ್ ಮಾಲೀಕರಿಗೆ ದುಪ್ಪಟ್ಟು ಹಣಕ್ಕೆ ಮಣ್ಣು ಮಾರಾಟ ದಂಧೆ ನಿರಂತರವಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ರೈತರೊಬ್ಬರು ಮಾಹಿತಿ ನೀಡಿದ್ದಾರೆ.
ಸಾಗಾಣೆ ಕಡಿವಾಣಕ್ಕೆ ಆಗ್ರಹ:
ಕೆರೆಯ ಅಂಚಿನಲ್ಲಿ ಗುಂಡಿಗಳನ್ನು ತೆಗೆಯುವುದರಿಂದ ಮಳೆ ಬಂದ ಸಮಯದಲ್ಲಿ ಗುಂಡಿಗಳಲ್ಲಿ ನೀರು ತುಂಬಿಕೊಳ್ಳುತ್ತದೆ, ಜಾನುವಾರುಗಳು ನೀರು ಕುಡಿಯಲು ಬಂದ ಸಮಯದಲ್ಲಿ ಗುಂಡಿಯಲ್ಲಿ ಮುಳುಗುವ ಸಂಭವ ಹೆಚ್ಚಿರುತ್ತದೆ. ಅಲ್ಲದೇ ಮನುಷ್ಯರಿಗೂ ಸಹ ಅಪಾಯ ತಂದೊಡ್ಡುತ್ತದೆ ಆದ್ದರಿಂದ ಕೆರೆ, ಗೋಮಾಳ ಸೇರಿದಂತೆ ಸರಕಾರಿ ಜಾಗಗಳಲ್ಲಿ ನಡೆಯುತ್ತಿರುವ ಅಕ್ರಮ ಮಣ್ಣು ಸಾಗಾಣಿಕೆಗೆ ಕಡಿವಾಣ ಹಾಕಬೇಕು ಎಂಬುದು ಹಲವು ಸಂಘಟನೆ ಹಾಗೂ ಸಾರ್ವಜನಿಕರ ಆಗ್ರಹವಾಗಿದೆ.












Click it and Unblock the Notifications