ಘಾಟಿ ಸುಬ್ರಮಣ್ಯ ಬ್ರಹ್ಮ ರಥೋತ್ಸವದಲ್ಲಿ ನೂಕು ನುಗ್ಗಲು: ರಥದ ಚಕ್ರದ ಬಳಿ ಬಿದ್ದ ಮಹಿಳೆ
ಚಿಕ್ಕಬಳ್ಳಾಪುರ ಜನವರಿ 16: ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರ ಘಾಟಿಯಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿಯ ಬ್ರಹ್ಮ ರಥೋತ್ಸವವು ಅದ್ಧೂರಿಯಾಗಿ ನೆರವೇರಿದೆ. ಈ ನಡುವೆ ಘಾಟಿ ಸುಬ್ರಮಣ್ಯ ದೇವಸ್ಥಾನದಲ್ಲಿ ಬ್ರಹ್ಮ ರಥೋತ್ಸವ ಎಳೆಯುವ ವೇಳೆ ಸಂಭವಿಸುತ್ತಿದ್ದ ಭಾರೀ ಅನಾಹುತವೊಂದು ತಪ್ಪಿಹೋಗಿದೆ.
ಬ್ರಹ್ಮ ರಥೋತ್ಸವದ ರಥ ಎಳೆಯುವ ಸಂದರ್ಭದಲ್ಲಿ ಮಹಿಳೆಯೊಬ್ಬರು ಆಯತಪ್ಪಿ ರಥದ ಚಕ್ರದ ಬಳಿ ಬಿದ್ದಿದ್ದಾರೆ. ಬ್ರಹ್ಮ ರಥೋತ್ಸವ ವೇಳೆ ನೂಕು ನುಗ್ಗಲಾಗಿದ್ದು, ಮಹಿಳೆ ಜೊತೆಗೆ ಅನೇಕರು ಕೆಳಕ್ಕೆ ಬಿದ್ದಿದ್ದಾರೆ. ಕೂಡಲೇ ಪೊಲೀಸರು ಮತ್ತು ಸ್ಥಳದಲ್ಲಿದ್ದವರು ರಕ್ಷಣೆ ಮಾಡಿದ್ದು, ಸಂಭವಿಸುತ್ತಿದ್ದ ಅನಾಹುತವನ್ನು ತಪ್ಪಿಸಿದ್ದಾರೆ.

ಲಕ್ಷಾಂತರ ಭಕ್ತರ ಆರಾಧ್ಯ ದೈವವಾಗಿರುವ ಪ್ರಸಿದ್ಧ ಪುಣ್ಯಕ್ಷೇತ್ರ ಘಾಟಿಯಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿಯ ಬ್ರಹ್ಮ ರಥೋತ್ಸವವು ವಿಜೃಂಭಣೆಯಿಂದ ಇಂದು ನೆರವೇರಿತು. ರಾಜ್ಯದ ವಿವಿಧ ಭಾಗಗಳಿಂದ ಹಾಗೂ ನೆರೆ ರಾಜ್ಯದಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ರಥಕ್ಕೆ ಹೂವು ಹಣ್ಣು ಸಮರ್ಪಿಸಿ ಪ್ರಾರ್ಥನೆ ಸಲ್ಲಿಸಿದರು.
ಬ್ರಹ್ಮ ರಥೋತ್ಸವದ ಹಿನ್ನೆಲೆಯಲ್ಲಿ ಮುಂಜಾನೆಯೇ ಶ್ರೀ ಸುಬ್ರಹ್ಮಣ್ಯಸ್ವಾಮಿ ಸ್ವಾಮಿಗೆ ವಿವಿಧ ಅಭಿಷೇಕ ಮಾಡಿ, ಮಹಾಮಂಗಳಾರತಿ ನಂತರ ಭಕ್ತಾದಿಗಳಿಗೆ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ಮಧ್ಯಾಹ್ನ 12.30 ಗಂಟೆಗೆ ಬ್ರಹ್ಮ ರಥೋತ್ಸವವು ನೆರವೇರಿತು. ಶ್ರೀ ಸುಬ್ರಹ್ಮಣ್ಯಸ್ವಾಮಿಯ ದರ್ಶನ ಪಡೆಯಲು ಬೆಳಗಿನಿಂದಲೇ ಭಕ್ತಾದಿಗಳು ಸಾಲುಗಟ್ಟಿ ನಿಂತಿದ್ದರು. ಷಷ್ಠಿಯ ದಿನದಂದು ಕ್ಷೇತ್ರದಲ್ಲಿರುವ ನಾಗರಕಲ್ಲುಗಳಿಗೆ ಭಕ್ತ ಸಮೂಹ ಹಾಲೆರೆದು ಪೂಜಿಸಿದರು.
ಜಾತ್ರೆಯ ಅಂಗವಾಗಿ ದೇವಾಲಯದಲ್ಲಿ ವಿಶೇಷವಾಗಿ ಹೂ ಅಲಂಕಾರ ಹಾಗೂ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಈ ಬಾರಿ ದೇವಾಲಯದಲ್ಲಿ ವಿದ್ಯುತ್ ದೀಪಾಲಂಕಾರದ ಕಟೌಟ್‍ಗಳು ಎಲ್ಲರ ಗಮನ ಸೆಳೆದವು. ರಥೋತ್ಸವಕ್ಕೆ ಆಗಮಿಸುವ ಭಕ್ತಾದಿಗಳಿಗೆ ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಕೋಲಾರ, ಗೌರಿಬಿದನೂರು ಬೆಂಗಳೂರು ಕಡೆಗಳಿಂದ ರಾಜ್ಯ ಸಾರಿಗೆ ಸಂಸ್ಥೆ ವತಿಯಿಂದ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು.

ವಿವಿಧ ಭಕ್ತ ಮಂಡಲದಿಂದ ಅರವಂಟಿಗೆ ಹಾಗೂ ಅನ್ನ ಸಂತರ್ಪಣೆಗಳನ್ನು ಏರ್ಪಡಿಸಲಾಗಿತ್ತು. ಜೊತೆಗೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆಯಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಘಾಟಿ ಶ್ರೀಸುಬ್ರಹ್ಮಣ್ಯಸ್ವಾಮಿ ಸ್ವಾಮಿ ಕ್ಷೇತ್ರದ ವಿಶೇಷತೆ ಏನು..?
ಶ್ರೀ ಸುಬ್ರಹ್ಮಣ್ಯಸ್ವಾಮಿ ಹಾಗೂ ನರಸಿಂಹಸ್ವಾಮಿ ಮೂರ್ತಿಗಳು ಏಕಶಿಲೆಯಲ್ಲಿರುವ ಬಹು ಅಪರೂಪದ ದೃಶ್ಯವಿರುವ ಘಾಟಿ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯವು ಪೌರಾಣಿಕ ಹಿನ್ನಲೆಯಿಂದಲೂ ಮಹತ್ವ ಪಡೆದಿದೆ. ತಾರಕಾಸುರ ಸಂಹಾರಕ್ಕಾಗಿ ಸ್ವಾಮಿಯು ಅಪರಿಮಿತ ಶಕ್ತಿ ಗಳಿಸಲು ಘೋರ ತಪಸ್ಸು ಮಾಡಲು ಸರ್ಪ ರೂಪವನ್ನು ತಾಳಿ, ಕೊನೆಗೆ ನಿಜರೂಪ ಪಡೆಯಲು ನರಸಿಂಹಸ್ವಾಮಿಯನ್ನು ಆಲಂಗಿಸಿ ಇಬ್ಬರೂ ಈ ಕ್ಷೇತ್ರದಲ್ಲಿಯೇ ನೆಲೆಸಲು ಪ್ರೇರಣೆಯಾಗಿದೆ ಎಂದು ಸ್ಥಳ ಪುರಾಣದಿಂದ ತಿಳಿದು ಬರುತ್ತದೆ.
ಸ್ವಾಮಿಗೆ ಸರ್ಪರೂಪದಿಂದ ನಿಜರೂಪ ಪ್ರಾಪ್ತಿಯಾಗಲು ಪಾರ್ವತಿ ಷಷ್ಠಿ ವ್ರತವನ್ನು ಕೈಗೊಳ್ಳುವ ಹಿನ್ನಲೆಯಲ್ಲಿ ಷಷ್ಠಿ ದಿನವು ಸ್ವಾಮಿಯ ವಿಶೇಷ ಪೂಜೆಗೆ ಪ್ರಶಸ್ತವಾಗಿದೆ. ಜಾತ್ರೆಯ ಒಂದು ತಿಂಗಳ ನಂತರ ಬರುವ ಕುಮಾರ ಷಷ್ಠಿಯ ದಿನದಂದೂ ಸಹ ಸಹಸ್ರಾರು ಭಕ್ತಾದಿಗಳು ಕ್ಷೇತ್ರಕ್ಕೆ ಆಗಮಿಸುತ್ತಾರೆ. ಸುಬ್ರಹ್ಮಣ್ಯಸ್ವಾಮಿ ಬ್ರಹ್ಮರಥೋತ್ಸವ ಹಾಗೂ ದನಗಳ ಜಾತ್ರೆಗೆ ಘಾಟಿ ಕ್ಷೇತ್ರ ಪ್ರಸಿದ್ಧಿಯಾಗಿದ್ದು, ಕ್ಷೇತ್ರದಲ್ಲಿ ಕಳೆದ 15ದಿನಗಳ ಹಿಂದೆಯಷ್ಟೇ ಭಾರಿ ದನಗಳ ಜಾತ್ರೆ ನಡೆದಿತ್ತು.












Click it and Unblock the Notifications