ಚಿಕ್ಕಬಳ್ಳಾಪುರ: ಯಾರ ಕೊರಳಿಗೆ ಗೆಲುವಿನ ಹಾರ.. ಗೆಲ್ಲೋರು ಯಾರು.. ಅಭ್ಯರ್ಥಿಗಳ ಎದೆಬಡಿತ ಜೋರು..!
ಚಿಕ್ಕಬಳ್ಳಾಪುರ, ಜೂನ್. 04: ಇಡೀ ದೇಶವೇ ಕಾಯುತ್ತಿರುವ ಲೋಕಸಭೆಯ ಮಹಾ ಸಮರದ ಫಲಿತಾಂಶಕ್ಕೆ ಕ್ಷಣಗಣನೆಗೆ ಕೆಲವೇ ಗಂಟೆಗಳಷ್ಟೇ ಬಾಕಿ ಇದೆ. ಅದರಲ್ಲೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಫಲಿತಾಂಶ ಯಾರಿಗೆ 'ಮಂಗಳ' ತರಲಿದೆ ಎಂಬ ಕುತೂಹಲ ಮೂಡಿಸಿದೆ.
ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ವಿವಿಧ ಪಕ್ಷಗಳ ಹಾಗೂ ಪಕ್ಷೇತರರು ಸೇರಿ ಒಟ್ಟು 28 ಅಭ್ಯರ್ಥಿಗಳ ರಾಜಕೀಯ ಭವಿಷ್ಯವು ಮಂಗಳವಾರ ಸಂಜೆಯೊಳಗೆ ಹೊರ ಬೀಳಲಿದ್ದು ಅಭ್ಯರ್ಥಿಗಳ ಹೃದಯ ಬಡಿತ ಮತ್ತಷ್ಟು ಹೆಚ್ಚಾಗಿದ್ದು, ಹಿಂಬಾಲಕರ ಮೂಲಕ ಮತಗಳ ಲೆಕ್ಕಾಚಾರದೊಂದಿಗೆ ಮತ ಎಣಿಕೆ ಕೇಂದ್ರದತ್ತ ಹೆಜ್ಜೆ ಹಾಕಲಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಅನಿರೀಕ್ಷಿತ ಸೋಲು ಕಂಡ ನಂತರ ಲೋಕಸಭಾ ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ಸ್ವೀಕರಿಸಿರುವ ಮೈತ್ರಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಹಾಗೂ ಮೊದಲ ಬಾರಿಗೆ ಪರೀಕ್ಷೆಗೆ ದುಮುಕಿರುವ ಕಾಂಗ್ರೆಸ್ ಅಭ್ಯರ್ಥಿ ರಕ್ಷಾರಾಮಯ್ಯ ಅವರ ನಡುವೆ ನೇರಹಣಾಹಣಿ ಏರ್ಪಟ್ಟಿದೆ. ಕ್ಷೇತ್ರವನ್ನು ಶತಾಯಗತಾಯ ಗೆಲ್ಲಲೇಬೇಕೆಂದು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಇನ್ನಿಲ್ಲದ ಕಸರತ್ತು ನಡೆಸಿದ್ದರು. ರಾಜ್ಯ, ರಾಷ್ಟ್ರಮಟ್ಟದ ನಾಯಕರು, ಪ್ರಚಾರಕರನ್ನು ಕರೆತಂದು ತಮ್ಮದೇ ಶೈಲಿಯಲ್ಲಿ ಮತದಾರರನ್ನು ಸೆಳೆಯುವ ಸಾಹಸ ಮಾಡಿದ್ದರು.
ಈಗಾಗಲೇ ಅಭ್ಯರ್ಥಿಗಳ ಎದೆಯಲ್ಲಿ ಢವಢವ ಶುರುವಾಗಿದ್ದು, ಕೆಲ ಅಭ್ಯರ್ಥಿಗಳು ಒಳ್ಳೆಯ ಫಲಿತಾಂಶ ಬರಲೆಂದು ದೇವರ ಮೊರೆ ಹೋದರೆ, ಕೆಲ ಅಭ್ಯರ್ಥಿಗಳು ಗೌಪ್ಯ ಸಭೆಗಳನ್ನು ನಡೆಸಿ ಮತ್ತೊಮ್ಮೆ ಲೆಕ್ಕಾಚಾರವಿಟ್ಟಿದ್ದಾರೆ. ತಮ್ಮ ನೆಚ್ಚಿನ ನಾಯಕರು ಗೆಲ್ಲುವರೆಂದು ಬೆಟ್ಟಿಂಗ್ ಭರಾಟೆಯು ಸದ್ದಿಲ್ಲದೇ ನಡೆಯುತ್ತಿದ್ದು, ಸೋಲು ಗೆಲುವಿನ ಲೆಕ್ಕಾಚಾರದೊಂದಿಗೆ ಇಷ್ಟೇ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂಬ ಚರ್ಚೆಗಳು ಕೂಡ ಜೋರಾಗಿದೆ.
ಮತ ಎಣಿಕೆಗೆ ಸಕಲ ಸಿದ್ಧತೆ
ಲೋಕಸಭಾ ಚುನಾವಣೆ ಮತ ಎಣಿಕೆ ಪ್ರಕ್ರಿಯೆಗೆ ಜಿಲ್ಲಾಡಳಿತವು ಅಗತ್ಯವಾದ ಸಿದ್ಧತೆಗಳನ್ನು ಕೈಗೊಂಡಿದ್ದು, ನಾಗಾರ್ಜುನ ಇಂಜಿನಿಯರ್ ಕಾಲೇಜಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಬೆಳಗ್ಗೆ 8 ಮತ ಎಣಿಕೆಯು ನಡೆಯಲಿದೆ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ 26 ರಂದು ನಡೆದ ಚುನಾವಣೆಯಲ್ಲಿ ಶೇ.76.98ರಷ್ಟು ಮತದಾನವಾಗುವ ಮೂಲಕ ಹಿಂದಿನ ಎಲ್ಲ ಚುನಾವಣೆಗಳ ಮತದಾನದ ಪ್ರಮಾಣದ ದಾಖಲೆಗಳನ್ನು ಹಿಂದಿಕ್ಕಿತ್ತು. ಕ್ಷೇತ್ರದ ಒಟ್ಟು 19,81,347 ಮತದಾರ ಪೈಕಿ 7,66,348 ಪುರುಷ, 7,59,275 ಮಹಿಳೆ ಮತ್ತು 94 ಮಂದಿ ಇತರೆ ಸೇರಿ ಒಟ್ಟು 15,25,717 ಮಂದಿ ಚಲಾಯಿಸಿರುವ ಮತದಾನದ ತೀರ್ಪು ಮಂಗಳವಾರ ಹೊರಬೀಳಲಿದೆ.
ಮತ ಎಣಿಕೆಗಾಗಿ ಒಟ್ಟು 10 ಕೊಠಡಿಗಳನ್ನು ಸಿದ್ಧಪಡಿಸಲಾಗಿದೆ. 10 ಕೊಠಡಿಗಳಲ್ಲಿ ಒಟ್ಟು 94 ಟೇಬಲ್‍ಗಳ ಮೇಲೆ ಮತ ಎಣಿಕೆ ನಡೆಯಲಿದೆ. ಇದಕ್ಕಾಗಿ 128 ಸಿಬ್ಬಂದಿ, 112 ಮೇಲ್ವಿಚಾರಕರು ಮತ್ತು ಮತ ಎಣಿಕೆ ಸೂಕ್ಷ್ಮ Acceptance 113 ಮಂದಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಟೇಬಲ್‌ಗಳ ಸಂಖ್ಯೆ ಎಷ್ಟು?
ಅಂಚೆ ಮತ ಪತ್ರಗಳ ಎಣಿಕೆಗೆ 9 ಟೇಬಲ್‍ಗಳಲ್ಲಿ, ಯಲಹಂಕ ವಿಧಾನಸಭಾ ಕ್ಷೇತ್ರಕ್ಕೆ 14 ಎಣಿಕೆ ಟೇಬಲ್, ಗೌರಿಬಿದನೂರು, ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ ವಿಧಾನಸಭಾ ಕ್ಷೇತ್ರಗಳಿಗೆ ತಲಾ 10 ಎಣಿಕೆ ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದೆ.
ಮತಎಣಿಕೆ ಎಷ್ಟು ಸುತ್ತು?
ಗೌರಿಬಿದನೂರು, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಎಣಿಕೆಯು 26 ಸುತ್ತುಗಳಲ್ಲಿ, ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಎಣಿಕೆಯು 27 ಸುತ್ತುಗಳಲ್ಲಿ, ಯಲಹಂಕ, ಹೊಸಕೋಟೆ, ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆ 30 ಸುತ್ತುಗಳಲ್ಲಿ, ದೊಡ್ಡಬಳ್ಳಾಪುರ, ನೆಲಮಂಗಲ ವಿಧಾನಸಭಾ ಕ್ಷೇತ್ರದ ಮತ ಎಣಿಕೆ 28 ಸುತ್ತುಗಳಲ್ಲಿ ನಡೆಯಲಿದೆ. ಮತ ಎಣಿಕೆ ಕಾರ್ಯಕ್ಕೆ ಒಟ್ಟು 112 ಎಣಿಕೆ ಮೇಲ್ವಿಚಾರಕರು, 128 ಎಣಿಕೆ ಸಿಬ್ಬಂದಿ ಹಾಗೂ 113 ಎಣಿಕೆ ಸೂಕ್ಷ್ಮ ವೀಕ್ಷಕರನ್ನು ನಿಯೋಜನೆ ಮಾಡಲಾಗಿದೆ.
ಸೂಕ್ತ ಬಂದೋಬಸ್ತ್
ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಜೂ.04 ರಂದು ಮದ್ಯ ಮಾರಾಟ ನಿಷೇಧಿಸಲಾಗಿದೆ. ದಂಡ ಪ್ರಕ್ರಿಯಾ ಸಂಹಿತೆ 1973ರ ಕಲಂ 144ರನ್ವಯ ಷರತ್ತುಗಳಿಗೆ ಒಳಪಡಿಸಿ ನಿಷೇದಾಜ್ಞೆ ಜಾರಿ ಮಾಡಲಾಗಿದೆ. ಮತ ಎಣಿಕೆ ಕೇಂದ್ರ ಮತ್ತು ಕೇಂದ್ರ ಹೊರಗೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿದೆ. 600 ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಜೊತೆಗೆ ಸಿಆರ್‍ಪಿಎಫ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
ಕಣದಲ್ಲಿರುವ ಅಭ್ಯರ್ಥಿಗಳು
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ 15 ಲಕ್ಷ 25ಸಾವಿರದ 717 ಸಾಮಾನ್ಯ ಮತದಾರರಿದ್ದು, 6035 ಸೇವಾ ಮತದಾರರನ್ನು ಒಳಗೊಂಡಿದ್ದು, 9 ವಿವಿಧ ರಾಜಕೀಯ ಪಕ್ಷಗಳಿಂದ ಅಭ್ಯರ್ಥಿಗಳಾಗಿ ಹಾಗೂ ಪಕ್ಷೇತರ ಅಭ್ಯರ್ಥಿಗಳು 20 ಜನ ಸೇರಿ ಒಟ್ಟು 29 ಅಭ್ಯರ್ಥಿಗಳಿದ್ದು, ಪ್ರಮುಖವಾಗಿ ರಾಜಕೀಯ ಪಕ್ಷಗಳಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ.
ಕಾಂಗ್ರೆಸ್ ಪಕ್ಷದಿಂದ ಎಂ ಎಸ್ ರಕ್ಷಾ ರಾಮಯ್ಯ, ಬಿಜೆಪಿ ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಡಾಕ್ಟರ್ ಕೆ ಸುಧಾಕರ್, ಬಹುಜನ ಸಮಾಜವಾದಿ ಪಾರ್ಟಿ ವತಿಯಿಂದ ಪಿ ಮಹದೇವ್, ಸಿಪಿಎಂ ಪಕ್ಷದಿಂದ ಎಂ.ಪಿ. ಮುನಿ ವೆಂಕಟಪ್ಪ, ಸಿಪಿಐ ಪಕ್ಷದಿಂದ ಎನ್ ಕಲಾವತಿ, ದಿಗ್ವಿಜಯ ಭಾರತ ಪಾರ್ಟಿಯಿಂದ ಎಸ್ ನಾಗೇಶ್, ಇಂಡಿಯನ್ ಲೇಬರ್ ಪಾರ್ಟಿ ಅಂಬೇಡ್ಕರ್ ಪುಲೆ ಪಾರ್ಟಿಯಿಂದ ಟಿ ಆರ್ ನಾರಾಯಣರಾವ್, ಉತ್ತಮ ಪ್ರಜಾಕೀಯ ಪಾರ್ಟಿಯಿಂದ ವಿ ವೆಂಕಟೇಶಮೂರ್ತಿ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಜೀ ಸುಬ್ರಮಣಿ ಶೆಟ್ಟಿ ಸೇರಿದಂತೆ, 20 ಪಕ್ಷೇತರ ಅಭ್ಯರ್ಥಿಗಳು ಸೇರಿ ಒಟ್ಟು 29 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಸ್ಪರ್ಧಿಸಿದ್ದಾರೆ.












Click it and Unblock the Notifications