ಬಾಗೇಪಲ್ಲಿಯಲ್ಲಿ ಎನ್.ಸಂಪಂಗಿ ಬಂಡಾಯ ಶಮನ: ಶಿಡ್ಲಘಟ್ಟದಲ್ಲಿ ಕಾಂಗ್ರೆಸ್ ವಿರುದ್ಧ ತೊಡೆ ತಟ್ಟಿದ ಸ್ಥಳೀಯ ಮುಖಂಡ
ಚಿಕ್ಕಬಳ್ಳಾಪುರ, ಏಪ್ರಿಲ್ 25: ವಿಧಾನಸಭೆ ಚುನಾವಣೆಗೆ ಅಂತಿಮ ಕಣ ಸಿದ್ಧವಾಗಿದೆ. ಜಿಲ್ಲೆಯ ಶಿಡ್ಲಘಟ್ಟ ಕ್ಷೇತ್ರ ಹೊರತು ಪಡಿಸಿದಂತೆ ಐದೂ ಕ್ಷೇತ್ರಗಳಲ್ಲಿ ಯಾವ ಪಕ್ಷದಿಂದಲೂ ಬಂಡಾಯ ಅಭ್ಯರ್ಥಿಗಳು ಕಣದಲ್ಲಿ ಇಲ್ಲ. ಬಾಗೇಪಲ್ಲಿಯಲ್ಲಿ ಕಾಂಗ್ರೆಸ್, ಬಂಡಾಯವಾಗಿ ನಾಮಪತ್ರ ಹಾಕಿದ್ದ ಮಾಜಿ ಶಾಸಕ ಎನ್. ಸಂಪಂಗಿ ವಾಪಸ್ ಪಡೆದಿದ್ದಾರೆ.
ಒಟ್ಟು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ 70 ಮಂದಿ ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದು, 12 ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದಾರೆ. ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ 18, ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ 15, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ 12, ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ 14 ಹಾಗೂ ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ 11 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.

ಚಿಕ್ಕಬಳ್ಳಾಪುರ, ಚಿಂತಾಮಣಿ, ಗೌರಿಬಿದನೂರು ಕ್ಷೇತ್ರಗಳಲ್ಲೂ ಯಾವುದೇ ಬಂಡಾಯ ಅಭ್ಯರ್ಥಿ ಕಣದಲ್ಲಿ ಇಲ್ಲ. ಬಿಜೆಪಿ ಮತ್ತು ಜೆಡಿಎಸ್‌ನಲ್ಲಿ ಬಂಡಾಯವಿರಲಿಲ್ಲ. ಬಾಗೇಪಲ್ಲಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಸಿಪಿಐಎಂಗೆ ಬೆಂಬಲ ಘೋಷಿಸಿದೆಯಾದರೂ ಜೆಡಿಎಸ್‌ನಲ್ಲಿರುವ ಮುಖಂಡರು ಹಾಗೂ ಕಾರ್ಯಕರ್ತರು ಬೇರೆ ಬೇರೆ ಪಕ್ಷಗಳಿಗೆ ವಲಸೆ ಹೋಗುತ್ತಿದ್ದಾರೆ. ಹೀಗಾಗಿ ಜೆಡಿಎಸ್‌ನಸ ಸಂಪೂರ್ಣ ಬೆಂಬಲ ಸಿಪಿಐಎಂಗೆ ಸಿಗುತ್ತದೆ ಎನ್ನಲಾಗದು.
ಚುನಾವಣಾ ಕಣದಿಂದ ಹಿಂದೆ ಸರಿದ ಎನ್.ಸಂಪಂಗಿ
ಬಾಗೇಪಲ್ಲಿಯಲ್ಲಿ ಹಾಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ವಿರುದ್ಧ ಮೊದಲಿಂದಲೂ ಸಿಡಿದಿದ್ದ ಎನ್.ಸಂಪಂಗಿ ಕಾಂಗ್ರೆಸ್ ಟಿಕೆಟ್ ನಿರೀಕ್ಷೆಯಲ್ಲಿದ್ದರು. ಟಿಕೆಟ್ ಸಿಗದೇ ಇದ್ದಾಗ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದರು. ಸರ್ಧಿಸಿಯೇ ಸಿದ್ಧ ಎಂದು ಘೋಷಿಸಿದ್ದರು. ಆದರೆ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾದ ಸೋಮವಾರ ಕಣದಿಂದ ಹಿಂದೆ ಸರಿದಿದ್ದಾರೆ. ಕಾಂಗ್ರೆಸ್ ಪಕ್ಷದ ರಾಜ್ಯ ನಾಯಕರು ಹಾಗೂ ರಾಷ್ಟ್ರ ಮುಖಂಡರು ಸಂಪಂಗಿಯವರ ಮನವೊಲಿಸಿ ನಾಮಪತ್ರ ವಾಪಸ್ ಪಡೆಯುವಂತೆ ನೋಡಿಕೊಂಡಿದ್ದಾರೆ. ಎನ್.ಸಂಪಂಗಿ ನಾಮಪತ್ರ ವಾಪಸ್ ಪಡೆದ ಮೂಲಕ ಎಸ್.ಎನ್.ಸುಬ್ಬಾರೆಡ್ಡಿಗಿದ್ದ ಅಡ್ಡಿ ನಿವಾರಣೆಯಾದಂತಾಗಿದೆ.

ಕಾಂಗ್ರೆಸ್ ಹೈಕಮಾಂಡ್ ಎನ್.ಸಂಪಂಗಿಯವರಿಗೆ ಕಾಂಗ್ರೆಸ್ ಪಕ್ಷಕ್ಕೆ ಹಾನಿ ಮಾಡಬೇಡಿ ಪಕ್ಷವನ್ನು ಅಧಿಕಾರಕ್ಕೆ ತನ್ನಿ ಮುಂದಿನ ದಿನಗಳಲ್ಲಿ ಉತ್ತಮ ಸ್ಥಾನಮಾನ ನೀಡಲಾಗುವುದು ಎಂದು ಭರವಸೆ ಕೊಟ್ಟ ಹಿನ್ನಲೆಯಲ್ಲಿ ಗೌರವ ಪೂರ್ವಕವಾಗಿ ನಾಮಪತ್ರ ವಾಪಸ್ ಪಡೆದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕಾಂಗ್ರೆಸ್ ವಿರುದ್ಧ ತೊಡೆ ತಟ್ಟಿದ ಪುಟ್ಟು ಆಂಜಿನಪ್ಪ
ಬಾಗೇಪಲ್ಲಿ ಕ್ಷೇತ್ರದಲ್ಲಿ ಆದಂತೆ ಶಿಡ್ಲಘಟ್ಟ ಕ್ಷೇತ್ರದಲ್ಲಿ ಬಂಡಾಯ ಶಮನ ಮಾಡುವಲ್ಲಿ ಕಾಂಗ್ರೆಸ್ ಮುಖಂಡರು ವಿಫಲರಾಗಿದ್ದಾರೆ. ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್‌ಗಾಗಿ ಪುಟ್ಟು ಅಂಜಿನಪ್ಪ ಮತ್ತು ರಾಜೀವ್ ಗೌಡ ನಡುವೆ ಭಾರಿ ಪೈಪೋಟಿ ಇತ್ತು. ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಹೈಕಮಾಂಡ್ ರಾಜೀವ್ ಗೌಡರಿಗೆ ಟಿಕೆಟ್ ಘೋಷಣೆ ಮಾಡಿತ್ತು. ಹೀಗಾಗಿ ಪುಟ್ಟು ಆಂಜಿನಪ್ಪ ಅವರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಆದರೆ ನಾಮಪತ್ರ ವಾಪಸ್ ಪಡೆಯುವಂತೆ ಕಾಂಗ್ರೆಸ್ ಹೈಕಮಾಂಡ್ ಮನವೊಲಿಸುವಲ್ಲಿ ವಿಫಲವಾಗಿದ್ದು, ಕಾಂಗ್ರೆಸ್ ಈಗ ಬಂಡಾಯವನ್ನು ಎದುರಿಸುವಂತಾಗಿದೆ.

2018ರ ಚುನಾವಣೆಯಲ್ಲಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಪುಟ್ಟು ಆಂಜಿನಪ್ಪ ಪಕ್ಷೇತರ ಅಭ್ಯರ್ಥಿಯಾಗಿ ಸರ್ಧಿಸಿದ್ದರು. ಆಗ 10,986 ಮತಗಳನ್ನು ಪಡೆದು 3ನೇ ಸ್ಥಾನದಲ್ಲಿದ್ದರು. ಆಗಿನಿಂದಲೂ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಪುಟ್ಟು ಅಂಜಿನಪ್ಪ ಅವರು ಈ ಬಾರಿ ಕಾಂಗ್ರೆಸ್ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದರು. ಕಾಂಗ್ರೆಸ್‌ನಿಂದ ನಾಮಪತ್ರ ಸಲ್ಲಿಸಿದ್ದರು. ಆದರೆ ಹಾಲಿ ಶಾಸಕ ಕಾಂಗ್ರೆಸ್ ವಿ.ಮುನಿಯಪ್ಪ ಅವರ ಶಿಫಾರಸಿನ ಮೇರೆಗೆ ಕಾಂಗ್ರೆಸ್ ಹೈಕಮಾಂಡ್ ರಾಜೀವ್ ಗೌಡರಿಗೆ ಟಿಕೆಟ್ ಕೊಟ್ಟ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಸೆಡ್ಡು ಹೊಡೆದಿದ್ದಾರೆ.












Click it and Unblock the Notifications