Chikkaballapur: ವಾರದೊಳಗೆ ನಾಮಫಲಕ ಅಳವಡಿಸದಿದ್ದರೆ ಕ್ರಮಕ್ಕೆ ಡಿಸಿ ಸೂಚನೆ- ಶೇ.60 ರಷ್ಟು ಕನ್ನಡ ಇರಲೇಬೇಕೆಂದು ಆದೇಶ
ಚಿಕ್ಕಬಳ್ಳಾಪುರ ಮಾರ್ಚ್ 8: ಎಲ್ಲಾ ಸರಕಾರಿ ಕಚೇರಿಗಳು, ಖಾಸಗಿ ವಹಿವಾಟು ಮಳಿಗೆಗಳು, ಸಂಸ್ಥೆಗಳು, ಅಂಗಡಿ ಮುಂಗಟ್ಟುಗಳ ಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಇರಲೇಬೇಕು. ಇಲ್ಲವಾದಲ್ಲಿ ಮುಲಾಜಿಲ್ಲದೆ ದಂಡ ವಿಧಿಸಿ ಪರವಾನಗಿ ರದ್ದುಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಕನ್ನಡ ಅನುಷ್ಠಾನದ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ನಾಮಫಲಕದಲ್ಲಿ ಕನ್ನಡ ಶೇ.60ರಷ್ಟು ಅಳತೆಯ ಪ್ರಮಾಣದಲ್ಲಿರ ಬೇಕು. ಇನ್ನೊಂದು ವಾರದೊಳಗೆ ಎಲ್ಲವೂ ಬದಲಾಗಬೇಕು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಜಿಲ್ಲಾ ಮಟ್ಟದ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಆದೇಶಿಸಿದರು.

ಜಿಲ್ಲೆಯಲ್ಲಿನ ಎಲ್ಲಾ ಸರಕಾರಿ ಕಚೇರಿಗಳು, ಖಾಸಗಿ ವಹಿವಾಟು ಮಳಿಗೆಗಳು, ಸಂಸ್ಥೆಗಳು, ಅಂಗಡಿ ಮುಂಗಟ್ಟುಗಳ ಫಲಕಗಳಲ್ಲಿ ಯಾವುದೇ ಕನ್ನಡೇತರ ಭಾಷೆಗಳನ್ನು ಬಳಸಬಹುದು. ಆದರೆ ಕನ್ನಡದ ಅಕ್ಷರಗಳನ್ನು ಮತ್ತು ಪದಗಳನ್ನು ಶೇ. 60 ರಷ್ಟು ಅಳತೆಯ ಪ್ರಮಾಣದಲ್ಲಿ ಬಳಸುವುದು ಕಡ್ಡಾಯ ಎಂದರು.
ಸರಕಾರಿ ಕಚೇರಿಗಳಲ್ಲಿ ಪತ್ರ ವ್ಯವಹಾರ ಸೇರಿದಂತೆ ದಿನ ನಿತ್ಯದ ಕಚೇರಿ ಕೆಲಸಗಳಲ್ಲಿ ಕನ್ನಡವನ್ನು ಬಳಸಬೇಕು. ಜನರೊಂದಿಗೆ ಕನ್ನಡದಲ್ಲಿಯೇ ವ್ಯವಹರಿಸಬೇಕು. ಆದರೆ ಕೆಲವೆಡೆ ನಿಯಮಗಳು ಉಲ್ಲಂಘನೆಯಾಗುತ್ತಿರುವುದು ಕಂಡುಬರುತ್ತಿದೆ. ಆ ಹಿನ್ನೆಲೆಯಲ್ಲಿ ಮುಂದಿನ ಒಂದು ವಾರದ ಒಳಗೆ ನಾಮಫಲಕಗಳನ್ನು ಸರಕಾರದ ನಿಯಮಾವಳಿ ರೀತ್ಯ ಸರಿಪಡಿಸಬೇಕು ಎಂದು ಸೂಚನೆ ನೀಡಿದರು. ಕೇಂದ್ರ ಸರಕಾರದ ಅಧೀನದಲ್ಲಿ ಬರುವ ಸರಕಾರಿ ಕಚೇರಿಗಳು, ಬ್ಯಾಂಕ್‌ಗಳು ಸಹ ಈ ನಿಯಮವನ್ನು ಪಾಲಿಸುವುದು ಕಡ್ಡಾಯವಾಗಿರುತ್ತದೆ. ಖಾಸಗಿ ಸಂಸ್ಥೆಗಳು, ವ್ಯಾಪಾರಿ ಮಳಿಗೆಗಳ ಮಾಲೀಕರಿಗೂ ತಿಳಿಸಿ ನಾಮಫಲಕಗಳು ಕಡ್ಡಾಯವಾಗಿ ಕನ್ನಡದಲ್ಲಿರುವಂತೆ.
ನೋಡಿಕೊಳ್ಳಬೇಕು ಎಂದರು. ಪ್ರತಿ 3 ತಿಂಗಳಿಗೊಮ್ಮೆ ಪರಿಶೀಲಿಸಲು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಸಮಿತಿಗಳನ್ನು ರಚಿಸಿ ನಿಗದಿತವಾಗಿ ಪ್ರಗತಿ ಪರಿಶೀಲನೆ ಸಭೆ ನಡೆಸಬೇಕು. ಈ ಸಮಿತಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಸದಸ್ಯ ಕಾರ್ಯದರ್ಶಿಗಳಾಗಿದ್ದು, ಜಿಲ್ಲೆಯ ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಮನ್ವಯತೆ ಸಾಧಿಸಿ ಸೂಕ್ತ ಕ್ರಮ ಜರುಗಿಸಲು ತಿಳಿಸಿದರು.
ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಅಪರ ಜಿಲ್ಲಾಧಿಕಾರಿ ಡಾ. ಎನ್.ತಿಪ್ಪೇಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಎನ್. ಮನಿಷಾ, ನಾನಾ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.
ಕನ್ನಡ ಬಳಕೆಯ ನಿಯಮಗಳನ್ನು ಉಲ್ಲಂಘಿಸಿದವರಿಗೆ ಮುಲಾಜಿಲ್ಲದೆ ದಂಡ ವಿಧಿಸಬೇಕು. ಪರವಾನಗಿ ರದ್ದುಗೊಳಿಸಲು ಸಕ್ಷಮದ ಅಧಿಕಾರಿಗಳು ಕೂಡಲೇ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಹೇಳಿದರು.












Click it and Unblock the Notifications