ಚಿಕ್ಕಬಳ್ಳಾಪುರ; ಟೆಕ್ಕಿ ನೇಣಿಗೆ ಶರಣು, ಪತಿ ಮೇಲೆ ಹಲ್ಲೆ
ಚಿಕ್ಕಬಳ್ಳಾಪುರ, ಫೆಬ್ರವರಿ 24; ಆಕೆ ಟೆಕ್ಕಿ ಮದುವೆಯಾಗಿ ಇನ್ನೂ ಒಂದು ವರ್ಷ ತುಂಬಿತ್ತು. ಆದರೆ ಗಂಡನ ಮನೆಯಲ್ಲಿಯೇ ವಿವಾಹಿತ ಮಹಿಳೆ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾಳೆ. ಇದರಿಂದ ಆಕ್ರೋಶಗೊಂಡ ಆಕೆಯ ಸಂಬಂಧಿಕರು ಅಳಿಯನ ಮೇಲೆ ಹಲ್ಲೆ ಮಾಡಿದ್ದಾರೆ.
ಟಿಕ್ಕಿ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ನಗರದ ಪ್ರಶಾಂತ ನಗರದಲ್ಲಿ ನಡೆದಿದೆ. ಮನೆಯ ಮೂರನೇ ಅಂತಸ್ತಿನ ಸ್ಟೋರ್ ರೂಂನಲ್ಲಿ 23 ವರ್ಷದ ನವ್ಯಾ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ನಗರ ಪೊಲೀಸರು ಹಾಗೂ ತಾಲೂಕು ದಂಡಾಧಿಕಾರಿ ಗಣಪತಿ ಶಾಸ್ತ್ರೀ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಿದರು. ನವ್ಯಾ ಸಂಬಂಧಿಕರು ಗಂಡ ಚೇತನ್ ಹಾಗೂ ಅತ್ತೆ ಮಾವನ ವಿರುದ್ದ ವರದಕ್ಷಿಣೆ ಕಿರುಕುಳದ ಆರೋಪ ಮಾಡಿದ್ದಾರೆ. ತಮ್ಮ ಮಗಳ ಮೇಲೆ ಹಲ್ಲೆ ಮಾಡಿ, ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ದೂರಿದ್ದಾರೆ.

ನವ್ಯಾ ಕಳೆದುಕೊಂಡಿದ್ದಆಕೆಯ ಸಂಬಂಧಿಕರು ಚೇತನ್ ಮೇಲೆ ಹಲ್ಲೆ ನಡೆಸಿದ್ದಾರೆ. ಇತ್ತ ಗಂಡನ ಕಡೆಯವರು ವರದಕ್ಷಿಣೆ ಕಿರುಕುಳದ ಆರೋಪ ತಳ್ಳಿ ಹಾಕಿದ್ದಾರೆ. ಕೆಲಸದ ಒತ್ತಡ, ಮಾನಸಿಕ ಒತ್ತಡದಿಂದ ದಂಪತಿಗಳ ನಡುವೆ ಕಲಹ ನಡೆಯುತ್ತಿತ್ತು ಎಂದು ಹೇಳಿದ್ದಾರೆ.
ಕಳೆದ 6 ತಿಂಗಳಿಂದ ಒಂದಷ್ಟು ಕಲಹಗಳು ನಡೆದಿವೆ. ಹೊಂದಾಣಿಕೆ ಇರಲಿಲ್ಲ ಎಂದು ಹೇಳಿದ್ದಾರೆ. ಆದರೆ ನವ್ಯಾ ಸಾವಿಗೆ ಕಾರಣ ಏನು? ಎಂಬುದು ತನಿಖೆಯ ಬಳಿಕ ಬಯಲಾಗಬೇಕಿದೆ.
ಬಾಗೇಪಲ್ಲಿ ತಾಲೂಕಿನ ಅಡ್ಲವಾರಪಲ್ಲಿ ನಿವಾಸಿ ನವ್ಯಾ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದಳು. ಖಾಸಗಿ ಬ್ಯಾಂಕ್ ಉದ್ಯೋಗಿ ಚೇತನ್ ಸಂಬಂಧ ಆಕೆಗೆ ಬಂದಿತ್ತು. ಪೋಷಕರು ಚೇತನ್ ಜೊತೆ ವಿವಾಹಕ್ಕೆ ಒಪ್ಪಿದ್ದರು. ಆದರೆ ಮದುವೆಯಾಗಿ ಒಂದು ವರ್ಷದಲ್ಲೇ ನವ್ಯಾ ಸಾವನ್ನಪ್ಪಿದ್ದಾಳೆ.
ನವ್ಯಾ ಮನೆಯಿಂದಲೇ ಕೆಲಸ ಮಾಡುತ್ತಿದ್ದಳು. ಪ್ರತಿ ತಿಂಗಳು 25 ಸಾವಿರ ರೂಪಾಯಿ ಸಂಬಳವನ್ನು ಅತ್ತೆಗೆ ಕೊಡುತ್ತಿದ್ದಳು. ವರದಕ್ಷಿಣೆ ತರುವಂತೆ ಪೀಡಿಸುತ್ತಾ, ಸೊಸೆಯನ್ನು ಮನೆಕೆಲಸದವರ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದರು ಎಂಬುದು ಆರೋಪ.
ನವ್ಯಾ ಕಿರುಕುಳದ ಬಗ್ಗೆ ತಾಯಿಯ ಮುಂದೆ ಹೇಳಿಕೊಂಡಿದ್ದಳಂತೆ. ಬುಧವಾರ ಸಂಜೆ ಮನೆಯ ಮಹಡಿಯ ಮೇಲೆ ಇರುವ ಸ್ಟೋರ್ ರೂಮ್‌ನಲ್ಲಿ ಸಾವಿಗೆ ಶರಣಾಗಿದ್ದಾಳೆ. "ತನ್ನ ಹೆಂಡತಿ ತುಂಬಾ ಒಳ್ಳೆಯವಳು, ಅವಳಿಂದ ನಮ್ಮ ಮನೆಯಲ್ಲಿ ಸಂತೋಷ ತುಂಬಿತ್ತು, ಕೆಲಸದ ಒತ್ತಡವೂ ಇತ್ತು. ಯಾಕೆ ಆತ್ಮಹತ್ಯೆ ಮಾಡಿಕೊಂಡಳಿ ತಿಳಿದಿಲ್ಲ" ಎಂದು ಚೇತನ್ ಹೇಳಿದ್ದಾರೆ.
ಚಿಕ್ಕಬಳ್ಳಾಪುರ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ. ತನಿಖೆ ಬಳಿಕ ನವ್ಯಾ ಸಾವಿನ ರಹಸ್ಯ ಬಯಲಾಗಲಿದೆ.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ 080 - 25497777












Click it and Unblock the Notifications