Nandi Hills: ನಂದಿ ಹಿಲ್ಸ್ ಕಡೆ ಜಾಲಿ ರೈಡ್ ಹೋಗುವವರಿಗೆ ಬಿಗ್ ಶಾಕ್
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ನಂದಿ ಬೆಟ್ಟ (Nandi Hills) ಬೆಂಗಳೂರಿಗರ ಹಾಟ್‌ಸ್ಟಾಟ್. ವಾರಾಂತ್ಯದಲ್ಲಿ ಜನ ಇಲ್ಲಿ ಕಿಕ್ಕಿರಿದು ಸೇರುತ್ತಾರೆ. ಇಲ್ಲಿನ ಪ್ರಕೃತಿಯ ರಮಣೀಯ ದೃಶ್ಯಗಳನ್ನು ಸವಿಯುವ ಜೊತೆಗೆ ಒಂದೊಳ್ಳೆ ಬೈಕ್ ರೈಡ್‌ಗೂ ಇದು ಹೇಳಿ ಮಾಡಿಸಿದ ಜಾಗ. ಹಾಗಾಗಿ ಪ್ರವಾಸಿಗರು, ಮುಖ್ಯವಾಗಿ ಪ್ರೇಮಿಗಳಿಗೆ ಇದು ಸ್ವರ್ಗ ಎಂದೇ ಕರೆಸಿಕೊಂಡಿದೆ. ಆದರೆ, ನಂದಿ ಬೆಟ್ಟಕ್ಕೆ ಟ್ರಿಪ್ ಪ್ಲ್ಯಾನ್ ಮಾಡುವವರಿಗೆ ಇದೀಗ ಕಹಿಸುದ್ದಿಯೊಂದು ಹೊರಬಿದ್ದಿದೆ. ಮುಂಜಾನೆ ಸೂರ್ಯೋದಯ ನೋಡಬೇಕು ಅಂತೇನಾದ್ರೂ ನಂದಿ ಹಿಲ್ಸ್ ಕಡೆ ಬರೋ ನಿರ್ಧಾರ ಮಾಡಿದ್ರೆ ದಯವಿಟ್ಟು ಈಗಲೇ ಅದನ್ನ ಮರೆತುಬಿಡಿ..
ಇನ್ನು ಮುಂದೆ ಬರೋಬ್ಬರಿ ಒಂದು ತಿಂಗಳ ಕಾಲ ನಂದಿಬೆಟ್ಟಕ್ಕೆ ವಾರದ ದಿನಗಳಲ್ಲಿ ಪ್ರವೇಶ ನಿರ್ಬಂಧಿಸಲಾಗಿದೆ. ಆದರೆ ಬೇಜಾರಾಗಬೇಡಿ, ವೀಕೆಂಡ್‌ನಲ್ಲಿ ಮಾತ್ರವೇ ನಂದಿ ಗಿರಿಧಾಮಕ್ಕೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಇನ್ನುಳಿದ ದಿನಗಳಲ್ಲಿ ಮಾತ್ರವೇ ಈ ನಿರ್ಬಂಧ ಇರಲಿದೆ. ಈ ಸಂಬಂಧ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ಆದೇಶವೂ ಹೊರಡಿಸಿದ್ದಾರೆ. ಇಷ್ಟಕ್ಕೂ ಪ್ರವಾಸಿಗರಿಗೆ ಈ ನಿರ್ಬಂಧ ಹೇರಿರುವುದು ಯಾಕೆ ಗೊತ್ತಾ?

ನಂದಿ ಗಿರಿಧಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಅಲ್ಲಲ್ಲಿ ಹಾಳಾಗಿರುವ ಹಿನ್ನೆಲೆ ಈ ರಸ್ತೆಯ ನವೀಕರಣ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಹಾಗಾಗಿ ನಂದಿ ಗಿರಿಧಾಮದ ಪ್ರಮುಖ ರಸ್ತೆಯಲ್ಲೇ ಕಾಮಗಾರಿ ನಡೆಯುವುದರಿಂದ ವಾರದ ದಿನಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ಬೆಟ್ಟದ ತಿರುವು ರಸ್ತೆಗಳಲ್ಲಿ ಕಾಮಗಾರಿ ನಡೆಸಲು ವಾಹನಗಳ ಪ್ರವೇಶ ನಿರ್ಬಂಧಿಸುವಂತೆ ಗುತ್ತಿಗೆದಾರರು ಕೂಡ ಮನವಿ ಮಾಡಿದ ಹಿನ್ನೆಲೆ ಈ ಆದೇಶ ಹೊರಡಿಸಿರುವುದಾಗಿ ತಿಳಿದುಬಂದಿದೆ.
ನಂದಿ ಬೆಟ್ಟಕ್ಕೆ ಮೇಲೆ ಇರುವ ರಸ್ತೆಯನ್ನು ಹೇರ್‌ಪಿನ್ ರಸ್ತೆ ಎಂದೇ ಕರೆಯಲಾಗುತ್ತದೆ. ಇದು ಹಲವು ತಿರುವುಗಳಿಂದ ಕೂಡಿದ್ದು, ಇಲ್ಲಿ ರಸ್ತೆ ಕಾಮಗಾರಿ ಮಾಡುವುದು ಕೂಡ ಸವಾಲಿನ ಕೆಲಸ. ಹಾಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಈ ಹೇರ್‌ಪಿನ್ ರಸ್ತೆಯ ತಿರುವಿನಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುವುದರಿಂದ ಈ ವೇಳೆ ಪ್ರವಾಸಿಗರು ಹಾಗೂ ಅವರ ವಾಹನಗಳ ಪ್ರವೇಶಕ್ಕೆ ಅವಕಾಶ ನಿರಾಕರಿಸಲಾಗಿದೆ.
ಗುತ್ತಿಗೆದಾರರ ಮನವಿ ಪುರಸ್ಕರಿಸಿರುವ ಜಿಲ್ಲಾಡಳಿತವು ನಂದಿ ಗಿರಿಧಾಮ ರಸ್ತೆಯಲ್ಲಿ ಇದೇ ಮಾರ್ಚ್ 24ರಿಂದ ಮುಂದಿನ ಏಪ್ರಿಲ್ 25ರವರೆಗೆ ವಾರದ ದಿನಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಿದೆ. ಇನ್ನು ವಾರಂತ್ಯದ ದಿನಗಳಲ್ಲಿ ಮಾತ್ರ ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಅದರಂತೆ ಶುಕ್ರವಾರ ಸಂಜೆ 6.30 ಗಂಟೆಯಿಂದ ಸೋಮವಾರ ಬೆಳಿಗ್ಗೆ 8 ಗಂಟೆಯವರೆಗೆ ಮಾತ್ರವೇ ಪ್ರವೇಶಕ್ಕೆ ಅವಕಾಶವಿದೆ. ಇದನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಸಾರ್ವಜನಿಕರ ವಾಹನ ಸಂಚಾರ ನಿರ್ಬಂಧಿಸಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಆದೇಶಿಸಿದ್ದಾರೆ.

ಬೆಂಗಳೂರಿಗೆ ಹತ್ತಿರವೇ ಇರುವ ಕಾರಣ ಸಿಟಿ ಮಂದಿ ನಂದಿ ಬೆಟ್ಟದಲ್ಲಿ ಸನ್‌ರೈಸ್ ನೋಡಲು ನಸುಕಿನ ಜಾವವೇ ಇಲ್ಲಿಗೆ ದಾಂಗುಡಿ ಇಡುತ್ತಿದ್ದರು. ಇದರಿಂದ ಈ ಬೆಟ್ಟ ಬೆಂಗಳೂರಿಗರ ಊಟಿ ಎಂದೇ ಕರೆಸಿಕೊಂಡಿದೆ. ಈ ಪ್ರವಾಸಿಗರ ಅನುಕೂಲಕ್ಕಾಗಿಯೇ ಉತ್ತಮ ರಸ್ತೆ ನಿರ್ಮಾಣ ಮಾಡುತ್ತಿರುವುದರಿಂದ ಇದಕ್ಕೆ ಸಹಕರಿಸಲೇಬೇಕಿದೆ. ಒಂದು ತಿಂಗಳೊಳಗೆ ಈ ಕಾಮಗಾರಿ ಪೂರ್ಣಗೊಳ್ಳಲಿದ್ದು, ಬಳಿಕ ಎಂದಿನಂತೆಯೇ ಮುಕ್ತ ಪ್ರವೇಶಕ್ಕೆ ಅವಕಾಶವಿರಲಿದೆ.












Click it and Unblock the Notifications