ಸಮುದಾಯಗಳನ್ನು ಒಡೆದು ರಾಜಕಾರಣ ಮಾಡುವ ಅನಿವಾರ್ಯತೆ ನಮಗಿಲ್ಲ- ಸಚಿವ ಸುಧಾಕರ್
ಚಿಕ್ಕಬಳ್ಳಾಪುರ, ಏಪ್ರಿಲ್ 15: ಸಮುದಾಯಗಳನ್ನು ಒಡೆದು ರಾಜಕಾರಣ ಮಾಡುವ ಅನಿವಾರ್ಯತೆ ನಮಗಿಲ್ಲ. ಸಾರ್ವಜನಿಕ ಬದುಕಿನಲ್ಲಿ ಎಲ್ಲಾ ಸಮುದಾಯ, ಧರ್ಮದ ನಡುವೆ ತಾರತಮ್ಯ ಮಾಡದೆ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಕೆಲಸ ಮಾಡಿದ್ದೇನೆ. ಕಳೆದ ಹತ್ತು ವರ್ಷಗಳಲ್ಲಿ ಎಲ್ಲಾ ಸಮಾಜಕ್ಕೂ ಸಾಧ್ಯವಿರುವ ಎಲ್ಲ ನೆರವು, ಸೌಲಭ್ಯಗಳನ್ನು ಒದಗಿಸುವ ಕೆಲಸ ಮಾಡಿದ್ದೇನೆ ಎಂದು ಸಚಿವ ಸುಧಾಕರ್ ಹೇಳಿದ್ದಾರೆ.
ನಗರದಲ್ಲಿ ಆಯೋಜಿಸಿದ್ದ ಕುರುಬ ಸಮುದಾಯದ ಸ್ನೇಹಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿರುವ ಹಾಲುಮತಸ್ಥ ಸಮುದಾಯದ ಕೆಲ ಮುಖಂಡರು ಒಬ್ಬ ವ್ಯಕ್ತಿಗೆ ಸಮುದಾಯವನ್ನು ಸೀಮಿತ ಮಾಡುವ ಕೆಲಸ ಮಾಡುತ್ತಿದ್ದು, ಹಲವು ಮುಖಂಡರನ್ನು ಬೆಳೆಸುವ ಕೆಲಸವಾಗಬೇಕು ಎಂದರು.

ಎಂ.ಟಿ.ಬಿ. ನಾಗರಾಜ್ ಅವರು ಸಮುದಾಯಕ್ಕಾಗಿ ಎಷ್ಟು ಶ್ರಮಿಸಿದ್ದಾರೆ, ಅವರನ್ನು ಸೋಲಿಸಿದವರು ಯಾರು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಆರ್. ಶಂಕರ್, ಎಚ್. ವಿಶ್ವನಾಥ್ ಅವರಿಗೆ ಏನಾಯಿತು ಎಂಬುದನ್ನು ಸಮುದಾಯದ ಮುಖಂಡರು ಅರಿಯಬೇಕು ಎಂದು ಹೇಳಿದರು.
ಎಂಟಿಬಿ ನಾಗರಾಜು, ಎಚ್. ವಿಶ್ವನಾಥ್, ಆರ್. ಶಂಕರ್ ಇವರೆಲ್ಲ ಹಾಲುಮತಸ್ಥರಲ್ಲವೇ, ಅನೇಕ ಮುಖಂಡರನ್ನು ಬೆಳೆಸುವ ಕೆಲಸ ಸಮುದಾಯ ಮಾಡಬೇಕು, ಒಬ್ಬರನ್ನೇ ನೆಚ್ಚಿಕೊಂಡರೆ ಸಮುದಾಯಕ್ಕೆ ಅನ್ಯಾಯವಾಗಲಿದೆ. ಈ ಸಮುದಾಯದ ನಾಯಕರು ಎಲ್ಲ ಪಕ್ಷಗಳಲ್ಲಿ ಇದ್ದಾರೆ. ಬಿಜೆಪಿ ಸರ್ಕಾರದಲ್ಲಿ ಹಾಲುಮತಸ್ಥ ಸಮುದಾಯದ ನಾಲ್ವರು ಸಚಿವರಿದ್ದರು ಎಂದರು.
ಆರ್. ಶಂಕರ್, ಬೈರತಿ ಬಸವರಾಜ್, ಈಶ್ವರಪ್ಪ ಮತ್ತು ಎಂಟಿಬಿ ನಾಗರಾಜ್ ಸೇರಿ ನಾಲ್ಕು ಮಂದಿ ಸಂಪುಟ ದರ್ಜೆ ಸಚಿವರಿದ್ದರು. ಆದರೂ ಬಿಜೆಪಿಯನ್ನು ಟೀಕೆ ಮಾಡುತ್ತಾರೆ, ಟೀಕೆ ಮಾಡುವವರಿಗೆ ಹೇಳುತ್ತೇನೆ, ಇದನ್ನು ಪರಾಮರ್ಶೆ ಮಾಡುವ ತಿಳಿವಳಿಕೆ ಸಮುದಾಯದವರಲ್ಲಿದೆ. ಯಾವುದೇ ಕಾರಣಕ್ಕೂ ಕೇವಲ ಒಂದು ವ್ಯಕ್ತಿಯ ಆದರ್ಶವನ್ನು ನಂಬಿಕೊಳ್ಳುವ ಕೆಲಸ ಮಾಡಬೇಡಿ, ಸಮುದಾಯಕ್ಕೆ ಯಾರು ಕೆಲಸ ಮಾಡುತ್ತಾರೆ, ಯಾರು ನಿಮಗೆ ನೆರವಾಗುತ್ತಾರೆ ಅವರೇ ನಿಮ್ಮ ಸಹೋದರ ಎಂದು ಭಾವಿಸಿ ಎಂದು ಮತದಾರರಲ್ಲಿ ಮನವಿ ಮಾಡಿದರು.
ಇಡೀ ದೇಶದಲ್ಲಿ ಹಾಲು ಮತ ಸಮುದಾಯಕ್ಕೆ ವಿಶೇಷ ಗೌರವ ಇದೆ, ಹಿಂದುಳಿದ ಸಮುದಾಯವಾಗಿದ್ದರೂ ಪ್ರಬಲ ಸಮುದಾಯವಾಗಿದೆ. ರಾಜಕೀಯ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಅನೇಕರು ಶ್ರಮದಿಂದ ಪ್ರಗತಿ ಕಂಡಿದ್ದಾರೆ. ಹಾಲು ಮತಸ್ಥ ಸಮುದಾಯ ಬೆವರನ್ನು ನಂಬಿ ಅಭಿವೃದ್ಧಿಯಾಗಿರುವ ಸಮುದಾಯ ಎಂದು ಹೇಳಿದರು.

ಜಾತಿ ಒಡೆಯುವ ಕೆಲಸ ಮಾಡಿಲ್ಲ
ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಹಾಲುಮತಸ್ಥ ಸಮುದಾಯದ ಶೇ.90 ರಷ್ಟು ಮಂದಿ ಬಿಜೆಪಿ ಪರ ಇದ್ದಾರೆ. ಉಳಿದ ಶೇ.10 ರಷ್ಟು ಮಂದಿ ಮಾತ್ರ ಬೇರೆ ಕಡೆ ಇದ್ದಾರೆ. ಕಾಂಗ್ರೆಸ್ ಪರ ಇರುವ ಶೇ.10 ಮಂದಿ ತಮ್ಮ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದು, ಇದಕ್ಕೆ ಸ್ಪಷ್ಟನೆ ನೀಡಲೇಬೇಕಿದೆ ಎಂದರು.
ತಾವು ಜಾತಿಯನ್ನು ಒಡೆಯುತ್ತಿರುವುದಾಗಿ ಮತ್ತು ಸಮುದಾಯಕ್ಕೆ ಏನೂ ಮಾಡಿಲ್ಲ. ಸಾಮಾಜಿಕ ನ್ಯಾಯ ಒದಗಿಸುವುದು ಯಾವುದೇ ರಾಜಕಾರಣಿಯ ಜವಾಬ್ದಾರಿ. 2015ರ ಜಿಪಂ ಚುನಾವಣೆ ಸಮಯದಲ್ಲಿ ನಂದಿ ಕ್ಷೇತ್ರದಿಂದ ಶಂಕರ್ ಅವರಿಗೆ ಟಿಕೆಟ್ ನೀಡಲು ಬಯಸಿದ್ದೆ. ಆದರೆ ಇಂದು ಕಾಂಗ್ರೆಸ್ ನಲ್ಲಿರುವವರು ಶಂಕರ್ ಅವರಿಗೆ ಟಿಕೆಟ್ ನೀಡದಂತೆ ಅಡ್ಡಿಪಡಿಸಿದರು ಎಂದರು.
ಎಂದೂ ಸುಳ್ಳು ಹೇಳಿಲ್ಲ
ನಾವು ಎಂದು ಸುಳ್ಳು ಹೇಳಿಲ್ಲ, ಸಮಾಜದ ಸ್ವಾಸ್ಥ್ಯ ಉತ್ತಮ ಮಾಡಿ, ಸಮೃದ್ಧಿಗೆ ತರುವ ಯತ್ನ ಮಾಡಲಾಗುತ್ತಿದೆ. ಎಲ್ಲ ಸಮುದಾಯಗಳನ್ನು ಮೇಲೆತ್ತಲು ಶ್ರಮಿಸಲಾಗುತ್ತಿದೆ, ಎಲ್ಲ ಸಮುದಾಯಗಳನ್ನೂ ಪ್ರೀತಿ, ವಿಶ್ವಾಸದಿಂದ ನಡೆಸಿಕೊಂಡಿದ್ದು, ಮುಂದೆಯೂ ಅದೇ ರೀತಿ ನಡೆಸಿಕೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.
ನಾನು ಚಿಕ್ಕಬಳ್ಳಾಪುರ ರಾಜಕೀಯ ಪ್ರವೇಶ ಮಾಡಿದ 15 ವರ್ಷಗಳಲ್ಲಿ ಎಂದೂ ಬಡವ ಶ್ರೀಮಂತ ಎಂಬ ತಾರತಮ್ಯ ಮಾಡಿಲ್ಲ, ಜಾತಿ, ಅಂತಸ್ತು ನೋಡಿ ಮಣೆ ಹಾಕಿಲ್ಲ. ಬದಲಿಗೆ ಅವರಲ್ಲಿರುವ ಒಳ್ಳೆಯ ತನವನ್ನು ನೋಡಿದ್ದೇನೆ, ಹಾಗೆ ತಾರತಮ್ಯ ಮಾಡಿರುವ ನಿದರ್ಶನಗಳಿದ್ದರೆ ಹೇಳಲಿ ಎಂದು ಸಚಿವ ಸುಧಾಕರ್ ಹೇಳಿದರು.
ಕ್ಷೇತ್ರದಲ್ಲಿ ಎರಡು ಕಡೆ ಭೂಮಿ ಮಂಜೂರು
ಪ್ರಸ್ತುತ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಯಾವುದೇ ಭರವಸೆ ನೀಡುವಂತಿಲ್ಲ. ಆದರೆ ನಿಮ್ಮ ಮನವಿಗಳನ್ನು ಬದ್ಧತೆಯಿಂದ ನಿಮ್ಮ ಪರವಾಗಿ ನಿರ್ಧಾರ ಕೈಗೊಳ್ಳುತ್ತೇವೆ. ಅಲ್ಲದೆ ಕಳೆದ 75 ವರ್ಷದಲ್ಲಿ ಸುಮಾರು 12 ಮಂದಿ ಶಾಸಕರಾಗಿದ್ದು, ಯಾವುದೇ ಶಾಸಕ ಒಂದು ಗುಂಟೆ ಭೂಮಿ ಈ ಸಮುದಾಯಕ್ಕೆ ನೀಡಿದ ಉದಾಹರಣೆ ಇಲ್ಲ. ಆದರೆ ನಾವು ಕ್ಷೇತ್ರದ ಎರಡು ಕಡೆ ಜಮೀನು ನೀಡಿದ್ದೇನೆ. ಮಂಚೇನಹಳ್ಳಿ ತಾಲೂಕಿನಲ್ಲಿ 1 ಎಕರೆ ಭೂಮಿ ಮತ್ತು ಚಿಕ್ಕಬಳ್ಳಾಪುರದಲ್ಲಿ ಅರ್ಧ ಎಕರೆ ಭೂಮಿ ಮಂಜೂರು ಮಾಡಿಸಲಾಗಿದೆ. ಮುಂದಿನ ಅವಧಿಯಲ್ಲಿ ನಿಮ್ಮ ಆಶೋತ್ತರಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತೇನೆ, ಮುಂದೆಯೂ ನಿಮ್ಮ ಪ್ರೀತಿ, ವಿಶ್ವಾಸ ಕಳೆದುಕೊಳ್ಳುವ ಕೆಲಸ ಮಾಡುವುದಿಲ್ಲ ಎಂದು ಹೇಳಿದರು.
ಜಾತಿಯನ್ನು ಲೆಕ್ಕ ಮಾಡದೆ, ಈ ಸಮುದಾಯದಲ್ಲಿ ಹುಟ್ಟದಿದ್ದರೂ ನಿಮ್ಮಲ್ಲಿ ಒಬ್ಬರಾಗಿರುವೆ, ಅದೇ ಪ್ರೀತಿಯಿಂದ ಏ.17ರಂದು ನಾಮಪತ್ರ ಸಲ್ಲಿಸುವ ದಿನವಾಗಿದ್ದು, ಅಂದು ನಿಮ್ಮ ಬೆಂಬಲ, ಅಭಿಮಾನ, ವಿಶ್ವಾಸ ಅಗತ್ಯವಿದೆ. ನಾಮಪತ್ರ ಸಲ್ಲಿಕೆ ದಿನ ನೀವು ತಮ್ಮೊಂದಿಗೆ ಇದ್ದರೆ ತಮಗೆ ಮತ್ತಷ್ಟು ಶಕ್ತಿ ನೀಡಿದಂತಾಗುತ್ತದೆ, ನಿಷ್ಕಲ್ಮಶ ಮನಸ್ಸು, ಸ್ನೇಹ, ವಿಶ್ವಾಸದಿಂದ ಇರಬೇಕು ಎಂದು ಕನಕದಾಸರು ಹೇಳಿದ್ದಾರೆ. ಅದೇ ಜಿವನದ ತಾತ್ಪರ್ಯ ಹಾಗಾಗಿ ಎಲ್ಲರ ಪ್ರೀತಿ ಮತ್ತು ವಿಶ್ವಾಸ ಇರಲಿ ಎಂದು ಸಚಿವರು ಜನರಲ್ಲಿ ಮನವಿ ಮಾಡಿದ್ದಾರೆ.












Click it and Unblock the Notifications