ಸುಧಾಕರ್ ನೀಡುವ ಕುಕ್ಕರ್, ಮಿಕ್ಸಿ, ಸ್ಟೌವ್‍ಗೆ ಮರುಳಾಗಬೇಡಿ: ಚಿಕ್ಕಬಳ್ಳಾಪುರ ಜನರಿಗೆ ಕೆ.ಪಿ.ಬಚ್ಚೇಗೌಡ ಮನವಿ
ಕೆ. ಸುಧಾಕರ್ ಸುಳ್ಳು ಭರವಸೆಗಳನ್ನು ನೀಡಿ ಜನರನ್ನು ಮರುಳು ಮಾಡುತ್ತಿದ್ದಾರೆ ಎಂದು ಕೆ.ಪಿ. ಬಚ್ಚೇಗೌಡ ಆಕ್ರೋಶ ವ್ಯಕ್ತಪಡಿಸಿದ್ದು, ಇದರ ಹಿಂದಿನ ಉದ್ದೇಶವೇನು ಎಂದು ತಿಳಿಯಿರಿ.
ಚಿಕ್ಕಬಳ್ಳಾಪುರ, ಫೆಬ್ರವರಿ, 27: ಚುನಾವಣೆ ಸಂದರ್ಭದಲ್ಲಿ ಸಚಿವ ಡಾ.ಕೆ.ಸುಧಾಕರ್ ನೀಡುವ ಸೀರೆ, ಕುಕ್ಕರ್, ಮಿಕ್ಸಿ, ಸ್ಟೌವ್‍ಗಳಿಗೆ ಮತದಾರರು ಮರಳಾಗಬೇಡಿ. ಅವರು ಮತ ಪಡೆಯುವ ಉದ್ದೇಶದಿಂದ ಈ ತಂತ್ರಗಾರಿಕೆಯನ್ನು ಬಳಸಿ ಜನತೆಗೆ ಮಂಕು ಬೂದಿ ಎರಚುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಚಿಕ್ಕಬಳ್ಳಾಪುರದಲ್ಲಿ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸೀರೆ, ಕುಕ್ಕರ್, ಮಿಕ್ಸಿ, ಸ್ಟೌವ್ ಯಾವುದು ಶಾಶತ್ವವಲ್ಲ. ಇದು ಮತ ಪಡೆಯುವ ಗಿಮಿಕ್ ಅಷ್ಟೇ. ಹೀಗಾಗಿ ಮತದಾರರು ಈಗಲೇ ಎಚ್ಚೇತ್ತುಕೊಂಡು ಮುಂಬರುವ ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಮನವಿ ಮಾಡಿದರು.

10 ವರ್ಷ ಕಳೆದರೂ ಅಭಿವೃದ್ಧಿಯಾಗದ ಕ್ಷೇತ್ರ
ಕಳೆದ 10 ವರ್ಷಗಳಿಂದ ಕ್ಷೇತ್ರವನ್ನು ಅಭಿವೃದ್ಧಿ ಮಾಡದ ಸಚಿವ ಡಾ.ಕೆ.ಸುಧಾಕರ್ ಅವರು, ಪ್ರಸ್ತುತ ಚುನಾವಣೆಯ ನೀತಿ ಸಂಹಿತೆ ಘೋಷಣೆಯಾಗುವ ಸಂದರ್ಭದಲ್ಲಿ ಬಡವರಿಗೆ ನಿವೇಶನ ನೀಡುವ ಅಸ್ತ್ರವನ್ನು ಮುಂದಿಟ್ಟುಕೊಂಡಿದ್ದಾರೆ. ಹೀಗೆ ಮತ ಪಡೆಯುವ ತಂತ್ರಗಾರಿಕೆ ಅನುಸರಿಸುತ್ತಿದ್ದು, ಈ ಬಾರಿ ಅವರ ಪೊಳ್ಳು ಭರವಸೆಗಳಿಗೆ ಮತದಾರರು ಮರುಳಾಗಬಾರದು ಎಂದು ಮನವಿ ಮಾಡಿದರು.
ಸುಧಾಕರ್ ವಿರುದ್ಧ ಬಚ್ಚೇಗೌಡ ವಾಗ್ದಾಳಿ
ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಮುಂಬರುವ ಚುನಾವಣೆಯಲ್ಲಿ ಜನತೆ ಜೆಡಿಎಸ್‍ಗೆ ಬೆಂಬಲ ನೀಡಬೇಕು. ಜೆಡಿಎಸ್ ಅಧಿಕಾರಕ್ಕೆ ಬಂದರೆ ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾ, ಎಲ್ಲ ಮಾಸಾಶನಗಳ ಹೆಚ್ಚಳ, ಪಂಚರತ್ನ ಯೋಜನೆಗಳ ಜಾರಿ ಸೇರಿದಂತೆ ಕುಮಾರಸ್ವಾಮಿ ಅವರು ನೀಡಿರುವ ಎಲ್ಲ ಭರವಸೆಗಳು ಈಡೇರಿಸಲಿವೆ. ಈ ನಿಟ್ಟಿನಲ್ಲಿ ಕ್ಷೇತ್ರದ ಮತದಾರರ ಆಸೆಗೆ ಬಲಿಯಾಗದೇ ಅಭಿವೃದ್ಧಿಗೆ ಮತ ನೀಡಬೇಕೆಂದು ಕೋರಿದರು.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೆ.ಸಿ.ರಾಜಾಕಾಂತ್ ಮಾತನಾಡಿ, ಸಚಿವ ಸುಧಾಕರ್ ಅವರು ಈ ಬಾರಿ ಚುನಾವಣೆಯಲ್ಲಿ ಹಣಬಲವಿಲ್ಲದೆ ಅಭಿವೃದ್ಧಿ ವಿಚಾರವನ್ನು ಮುಂದಿಟ್ಟುಕೊಂಡು ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಮುನೇಗೌಡ, ತಾಲೂಕು ಅಧ್ಯಕ್ಷ ಮುನಿರಾಜು, ಮುಖಂಡರಾದ ಕೆ.ಆರ್.ರೆಡ್ಡಿ, ಮುಕ್ತ ಮುನಿಯಪ್ಪ, ನಾರಾಯಣಸ್ವಾಮಿ, ಶ್ರೀಧರ್, ಸಾಧಿಕ್‍ಪಾಷ, ವೀಣಾ ರಾಮು, ಅಣ್ಣಮ್ಮ, ಮುನಿಲಕ್ಷ್ಮಮ್ಮ, ಪಾರಿಜಾತ ಗೌಡ, ಚೇತನ್, ಮಧು, ಡೇವಿಡ್, ಶಿವಪ್ರಸಾದ್, ರವಿ, ರಾಜುಬಚ್ಚಳ್ಳಿ, ಜಫ್ರುಲ್ಲ, ಮಂಜು, ರಮೇಶ್, ಕೃಷ್ಣರೆಡ್ಡಿ ಸೇರಿದಂತೆ ಮತ್ತತರರು ಉಪಸ್ಥಿತರಿದ್ದರು.












Click it and Unblock the Notifications