ನಂದಿಗಿರಿಧಾಮದಲ್ಲಿ ರಸ್ತೆ ಕುಸಿತ; ಸ್ಟೀಲ್ ಬ್ರಿಡ್ಜ್ ನಿರ್ಮಾಣ
ಚಿಕ್ಕಬಳ್ಳಾಪುರ, ಸೆಪ್ಟೆಂಬರ್ 01; ಪ್ರಸಿದ್ಧ ಪ್ರವಾಸಿ ತಾಣ ನಂದಿಗಿರಿಧಾಮದಲ್ಲಿ ಗುಡ್ಡ ಕುಸಿದಿದ್ದು ಬೆಟ್ಟದ ಮೇಲ್ಭಾಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯೂ ಹಾಳಾಗಿದೆ. ರಸ್ತೆ ದುರಸ್ಥಿ ಕಾರ್ಯಕ್ಕೆ ಸುಮಾರು 2 ತಿಂಗಳು ಬೇಕು ಎಂದು ಅಂದಾಜಿಸಲಾಗಿದ್ದು, ಪ್ರವಾಸಿಗರ ಭೇಟಿಗೆ ನಿರ್ಬಂಧ ಹೇರಲಾಗಿದೆ.
Recommended Video
ಲೋಕೋಪಯೋಗಿ ಇಲಾಖೆ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಜಯಪ್ರಸಾದ್ ಗುಡ್ಡ ಕುಸಿದಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂದಿಗಿರಿಧಾಮದಲ್ಲಿ ಗುಡ್ಡ ಕುಸಿದು ರಸ್ತೆ ಹಾಳಾಗಿರುವ ಪ್ರದೇಶದಲ್ಲಿ ಸ್ಟೀಲ್ ಬ್ರಿಡ್ಜ್ ನಿರ್ಮಿಸಲು ತೀರ್ಮಾನ ಮಾಡಲಾಗಿದೆ.
ಸುಮಾರು 40 ಮೀಟರ್ ಉದ್ದದ ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೆ ತೀರ್ಮಾನ ಕೈಗೊಳ್ಳಲಾಗಿದೆ. ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೂ ಮುನ್ನ ಪೈಪ್‌ಗಳನ್ನು ಆಳವಡಿಕೆ ಮಾಡಿ ಸೇತುವೆ ಒಳಗೊಂಡ ತಾತ್ಕಾಲಿಕ ರಸ್ತೆಯನ್ನು ನಿರ್ಮಾಣ ಮಾಡಲಾಗುತ್ತದೆ.
ತಾತ್ಕಾಲಿಕ ರಸ್ತೆ ನಿರ್ಮಾಣವಾದರೆ ಪ್ರವಾಸಿಗರು ವಾಹನದ ಮೂಲಕ ಗಿರಿಧಾಮದ ಮೇಲ್ಪಭಾಗಕ್ಕೆ ಸಂಚಾರ ನಡೆಸಬಹುದಾಗಿದೆ. ಆಗಸ್ಟ್ 24ರಂದು ನಂದಿಗಿರಿಧಾಮದ ಪ್ರದೇಶದಲ್ಲಿ ಭಾರೀ ಮಳೆಯಾಗಿತ್ತು. ಇದರಿಂದಾಗಿ ಗುಡ್ಡ ಕುಸಿದಿತ್ತು, ವಿದ್ಯುತ್ ಕಂಬ ಧರೆಗೆ ಉರುಳಿತ್ತು. ಮಳೆಯ ನೀರಿನ ಜೊತೆ ಮಣ್ಣು, ಬಂಡೆ, ಗಿಡಗಳು ರಸ್ತೆಗೆ ಬಂದು ಬಿದ್ದಿದ್ದವು. ಆದ್ದರಿಂದ ಜಿಲ್ಲಾಡಳಿತ ಪ್ರವಾಸಿಗರ ಭೇಟಿಗೆ ನಿರ್ಬಂಧ ಹೇರಿತ್ತು.

ಹೇಗಿರಲಿದೆ ಸ್ಟೀಲ್ ಬ್ರೀಡ್ಜ್?
ಸುಮಾರು 40 ಮೀಟರ್ ಉದ್ದದ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಮಾಡಲಾಗುತ್ತದೆ. ಈ ಸಂಬಂಧ ಶೀಘ್ರದಲ್ಲಿಯೇ ವಿಸ್ತೃತ ಯೋಜನಾ ವರದಿಯನ್ನು ತಯಾರು ಮಾಡಲಾಗುತ್ತದೆ. ಒಂದು ತಿಂಗಳಿನಲ್ಲಿ ತಾತ್ಕಾಲಿಕ ರಸ್ತೆ ನಿರ್ಮಾಣವಾಗಲಿದೆ. ಸರ್ಕಾರದ ಜೊತೆ ಮಾತನಾಡಿ ಸ್ಟೀಲ್ ಬ್ರಿಡ್ಜ್‌ಗೆ ಅಧಿಕಾರಿಗಳು ಅನುದಾನ ಒದಗಿಸುವ ಭರವಸೆಯನ್ನು ನೀಡಿದ್ದಾರೆ. ಸ್ಟೀಲ್ ಬ್ರಿಡ್ಜ್ ಆಗುವ ತನಕ ತಾತ್ಕಾಲಿಕ ರಸ್ತೆಯ ಮೂಲಕ ಜನರು ನಂದಿಗಿರಿಧಾಮದ ಮೇಲ್ಪಭಾಗಕ್ಕೆ ಸಂಚಾರ ನಡೆಸಬಹುದಾಗಿದೆ.

ತಾತ್ಕಾಲಿಕ ರಸ್ತೆಯೂ ಕುಸಿದಿತ್ತು
ವನಂದಿಗಿರಿಧಾಮದಲ್ಲಿ ಗುಡ್ಡ ಕುಸಿದು ರಸ್ತೆ ಹಾಳಾದ ಬಳಿಕ ಸಿಬ್ಬಂದಿಗಳ ಸಂಚಾರಕ್ಕಾಗಿ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಲಾಗಿತ್ತು. ಆದರೆ ಆ ರಸ್ತೆ ಸಹ ಕುಸಿದು ಹೋಗಿತ್ತು. ಆದ್ದರಿಂದ ನಂದಿಗಿರಿಧಾಮದ ಮೇಲ್ಪಭಾಗಕ್ಕೆ ವಾಹನಗಳ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಶಾಶ್ವತ ಸೇತುವೆ ನಿರ್ಮಾಣಕ್ಕಾಗಿ ಜೆಸಿಬಿಯಂತ್ರದ ಮೂಲಕ ಗುಡ್ಡ ಕುಸಿದಿರುವ ಪ್ರದೇಶದಲ್ಲಿ ಮಣ್ಣನ್ನು ತೆಗೆಯಲಾಗುತ್ತಿದೆ. ಶಾಶ್ವತ ಸೇತುವೆ ಕಾಮಗಾರಿ 2 ತಿಂಗಳಿನಲ್ಲಿ ಪೂರ್ಣಗೊಳ್ಳಬಹುದು ಎಂದು ಅಂದಾಜಿಸಲಾಗಿದೆ.

ಮಲೆನಾಡಿನಂತೆ ಕುಸಿದ ಗುಡ್ಡ
ಮಲೆನಾಡಿನಂತೆ ಗುಡ್ಡ ಕುಸಿದಿರುವುದು ನಂದಿಗಿರಿಧಾಮದಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಇದೇ ಮೊದಲ ಬಾರಿ ಇಷ್ಟು ಪ್ರಮಾಣದಲ್ಲಿ ಗುಡ್ಡ ಕುಸಿದಿದ್ದು, ರಸ್ತೆಗೆ ಸಹ ಹಾನಿಯಾಗಿದೆ. ರಸ್ತೆಗೆ ಹಾನಿಯಾಗಿದ್ದರಿಂದ ಬೆಟ್ಟದ ಮೇಲ್ಭಾಗದಲ್ಲಿನ ಹೋಟೆಲ್, ವಸತಿ ಗೃಹ ಮತ್ತು ಗಿರಿಧಾಮದ ಸಿಬ್ಬಂದಿಗಳ ಸಂಚಾರಕ್ಕೆ ಸಹ ತೊಂದರೆ ಉಂಟಾಗಿದೆ. ಈಗ ತಾತ್ಕಾಲಿಕ ರಸ್ತೆಯನ್ನು ನಿರ್ಮಾಣ ಮಾಡುವ ಕಾರ್ಯ ನಡೆಯುತ್ತಿದೆ. ಲೋಕೋಪಯೋಗಿ ಇಲಾಖೆ ತಾಂತ್ರಿಕ ಸಲಹಾ ಸಮಿತಿ ಮಂಗಳವಾರ ಪ್ರದೇಶದ ಪರಿಶೀಲನೆಯನ್ನು ನಡೆಸಿದೆ.

ನಂದಿಗಿರಿಧಾಮದ ಪ್ರವಾಸಿಗರಿಗೆ ನಿರ್ಬಂಧ
ನಂದಿಗಿರಿಧಾಮದಲ್ಲಿ ಗುಡ್ಡ ಕುಸಿದ ಬಳಿಕ ಪ್ರವಾಸಿಗರ ಭೇಟಿ ನಿರ್ಬಂಧಿಸಲಾಗಿದೆ. 20 ದಿನಗಳ ಕಾಲ ಪ್ರವಾಸಿಗರ ಭೇಟಿ ನಿರ್ಬಂಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಬೆಂಗಳೂರು ನಗರಕ್ಕೆ ಸಮೀಪದಲ್ಲಿರುವ ನಂದಿಗಿರಿಧಾಮಕ್ಕೆ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಅದರಲ್ಲೂ ವಾರಾಂತ್ಯ ಮತ್ತು ಸರ್ಕಾರಿ ರಜೆ ದಿನಗಳಲ್ಲಿ ನಂದಿಗಿರಿಧಾಮದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುತ್ತದೆ. ಈಗ ತಾತ್ಕಾಲಿಕ ರಸ್ತೆ ಆಗುವ ತನಕ ಪ್ರವಾಸಿಗರು ನಂದಿಗಿರಿಧಾಮದಲ್ಲಿ ಸೂರ್ಯೋದಯವನ್ನು ಕಣ್ತುಂಬಿಕೊಳ್ಳುವಂತಿಲ್ಲ.












Click it and Unblock the Notifications