ಚಿಕ್ಕಬಳ್ಳಾಪುರದಲ್ಲಿ ಮಳೆ ಕೊರತೆ: ಶುದ್ಧ ಕುಡಿಯುವ ನೀರಿಗಾಗಿ ನಿಲ್ಲದ ಪರದಾಟ
ಚಿಕ್ಕಬಳ್ಳಾಪುರ, ಆಗಸ್ಟ್ 16: ಆಗಸ್ಟ್ ತಿಂಗಳು ಮುಗಿಯುವ ದಿನಗಳು ಹತ್ತಿರ ಬಂದರೂ ಈ ಬಾರಿ ಜಿಲ್ಲೆಯಲ್ಲಿ ಹೇಳಿಕೊಳ್ಳುವಂತಹ ಮಳೆಯಾಗದ ಕಾರಣ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಸಹ ಮಳೆಯ ಕೊರತೆ ಎದುರಾಗಿದೆ. ಈ ಬಾರಿ ಜಿಲ್ಲೆಯಲ್ಲಿ ಒಟ್ಟಾರೆ ಶೇ.50ಕ್ಕಿಂತಲೂ ಕಡಿಮೆ ಬಿತ್ತನೆಯಾಗಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯು ಮತ್ತೊಮ್ಮೆ ಬರಪೀಡಿತ ಸಮಸ್ಯೆ ಎದುರಿಸುವ ಎಲ್ಲಾ ಲಕ್ಷಣಗಳು ಸಹ ಗೋಚರಿಸುತ್ತಿದೆ.
ಜಿಲ್ಲೆಯಲ್ಲಿ ಬಿತ್ತನೆಯಾಗಿರುವ ಹೊಲಗಳು ಮಳೆ ಕೊರತೆಯಿಂದ ಕಮರುತ್ತಿವೆ. ಕೆಲ ರೈತರು ಬೆಳೆಯ ಸಂರಕ್ಷಣೆಗಾಗಿ ಟ್ಯಾಂಕರ್‌ಗಳಲ್ಲಿ ನೀರು ಹೊಡೆದು ಬೆಳೆ ಕಾಪಾಡಿಕೊಳ್ಳುವ ಅನಿವಾರ್ಯತೆ ಎದುರಾಗಿದ್ದು ಇದು ರೈತರಿಗೆ ಹೆಚ್ಚು ತ್ರಾಸದಾಯಕವಾಗಿದೆ. ಇದರೊಟ್ಟಿಗೆ ಬೇಸಿಗೆಗೂ ಮುನ್ನವೇ ಜಿಲ್ಲೆಯ ಕೆಲವು ಗ್ರಾಮಗಳಲ್ಲಿ, ಕುಡಿಯುವ ನೀರಿಗೂ ಆಗಲೇ ಸಮಸ್ಯೆ ಎದುರಾಗಿದೆ. ಕಳೆದ 2-3 ವರ್ಷಗಳಿಂದ ಬಿಟ್ಟು ಬಿಡದೆ ಸುರಿದು ಕೆರೆ ಕುಂಟೆಗಳು ತುಂಬಿ ಎಲ್ಲೂ ಸಹ ಕುಡಿವ ನೀರಿನ ಸಮಸ್ಯೆ ಕಂಡುಬಡಿರಲಿಲ್ಲ , ಆದರೆ ಈಗ ಮತ್ತೆ ನೀರಿನ ಸಮಸ್ಯೆ ಕಾಡತೊಡಗಿದೆ.

ಹಿಂದಿನ ವರ್ಷಗಳಲ್ಲಿ ಮಿತಿ ಮೀರಿದ ಮಳೆ ಕಾರಣ ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿರಲಿಲ್ಲ, ಆದರೆ ಈ ಬಾರಿ ಇನ್ನೂ ಮಳೆಗಾಲವೇ ಮುಗಿದಿಲ್ಲ. ಆಗಲೇ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ಕಳೆದ 2-3 ವರ್ಷಗಳಿಂದ ಜಿಲ್ಲೆಯ ಬಹುತೇಕ ಕೆರೆಗಳು ತುಂಬಿಕೊಂಡಿದ್ದವು. ಆದರೆ ಈಗ ಬಹುತೇಕ ಕೆರೆಗಳು ಖಾಲಿಯಾಗಿದ್ದು ಅಂತರ್ಜಲ ಸಮಸ್ಯೆಯೂ ಎದುರಾಗುವ ಮುನ್ಸೂಚನೆ ಕಂಡುಬಂದಿದೆ.
ಎಲ್ಲೆಲ್ಲಿ ನೀರಿನ ಸಮಸ್ಯೆ..?
ಚಿಕ್ಕಬಳ್ಳಾಪುರ ತಾಲೂಕಿನ 7 ಗ್ರಾಮಗಳು, ಬಾಗೇಪಲ್ಲಿ ತಾಲೂಕಿನ ಗ್ರಾಮಗಳು, ಚಿಂತಾಮಣಿ ತಾಲೂಕಿನ 4 ಗ್ರಾಮಗಳು , ಗೌರಿಬಿದನೂರು ತಾಲೂಕಿನ 3 ಗ್ರಾಮಗಳು ಹಾಗೂ ಶಿಡ್ಲಘಟ್ಟ ತಾಲೂಕಿನ 4 ಗ್ರಾಮಗಳಲ್ಲಿ ನೀರಿನ ಸಮಸ್ಯೆಯಾಗಿದೆ. ಸದ್ಯ ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಪೂರೈಸಲು ಕ್ರಮ ವಹಿಸಲಾಗಿದೆ.
ಮುಂದಿನ ದಿನಗಳಲ್ಲಿ ಮಳೆ ಬಾರದಿದ್ದಲ್ಲಿ ಚಿಂತಾಮಣಿ ತಾಲೂಕಿನಲ್ಲಿ 26 ಗ್ರಾಮ, ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 7 ಗ್ರಾಮ, ಶಿಡ್ಲಘಟ್ಟ ತಾಲೂಕಿನಲ್ಲಿ 10 ಗ್ರಾಮ, ಗೌರಿಬಿದನೂರು ತಾಲೂಕಿನ 6 ಗ್ರಾಮ ಹಾಗೂ ಬಾಗೇಪಲ್ಲಿ ತಾಲೂಕಿನ ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ತಲೆದೊರಲಿದ್ದು, ಈಗಲೇ ಎಚ್ಚೆತ್ತುಕೊಳ್ಳಬೇಕಿದೆ.

ಲೆಕ್ಕವೇ ಬೇರೆ ವಾಸ್ತವಂಶವೇ ಬೇರೆ
ಸದ್ಯ ಜಿಲ್ಲೆಯಲ್ಲಿ 1,800ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿನ ಶುದ್ಧೀಕರಣ ಘಟಕಗಳ ಅಗತ್ಯವಿದೆ. ಈ ಪೈಕಿ 920 ಘಟಕಗಳನ್ನು ಸ್ಥಾಪಿಸಲಾಗಿದೆ. ಇನ್ನುಳಿದ ಸುಮಾರು 924 ಗ್ರಾಮಗಳಲ್ಲಿ ಘಟಕಗಳನ್ನು ಸ್ಥಾಪಿಸಬೇಕಿದೆ. ಸಮಸ್ಯೆ ಎಂದರೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸುವುದರ ಜತೆಗೆ ಅವುಗಳನ್ನು ನಿರ್ವಹಣೆ ಮಾಡುವುದೇ ದೊಡ್ಡ ಸವಾಲು. ಎಷ್ಟೋ ಕಡೆ ಹೆಸರಿಗೆ ಮಾತ್ರ ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು ನೇರವಾಗಿ ಸರಬರಾಜು ಆಗುವ ನೀರನ್ನು ಬಳಸುತ್ತಿರುವ ನಿದರ್ಶನಗಳು ಹೆರಳವಾಗಿ ಕಂಡು ಬರುತ್ತಿವೆ.
ಶುದ್ದ ಕುಡಿಯುವ ನೀರಿನ ಘಟಕಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ವ್ಯರ್ಥವಾಗುತ್ತದೆ ಎಂಬ ಕಾರಣಕ್ಕೆ ಸಾಕಷ್ಟು ಮಾರ್ಪಾಡುಗಳನ್ನು ಮಾಡಲಾಗಿದೆ. ಇದರಿಂದ ಎಲ್ಲ ಕೇಂದ್ರಗಳಲ್ಲೂ ಶುದ್ಧ ಕುಡಿಯವ ನೀರು ಸಿಗುತ್ತದೆ ಎಂದು ಹೇಳುವುದೂ ಕಷ್ಟ. ಇನ್ನೊಂದೆಡೆ ಶುದ್ಧೀಕರಿಸಿ ನೀರನ್ನು ಕುಡಿಯುವುದು ಒಳ್ಳೆಯದಲ್ಲ ಎಂಬ ಸುದ್ದಿಯೂ ಹರಿದಾಡುತ್ತಿರುವುದರಿಂದ ಜನರು ಗೊಂದಲಕ್ಕೀಡಾಗಿದ್ದಾರೆ. ಇದರ ಬಗ್ಗೆ ಜಾಗೃತಿ ಮೂಡಿಸಬೇಕಾದ ಇಲಾಖೆಗಳು ಮಾತ್ರ ನಮಗೂ ಅದಕ್ಕೂ ಸಂಬಂಧವೇ ಇಲ್ಲ ಎನ್ನುವಂತೆ ಉದಾಸೀನ ವಹಿಸುತ್ತಿವೆ.
ಇನ್ನೊಂದೆಡೆ ಜಲಜೀವನ್ ಮಿಷನ್ ಯೋಜನೆಯಡಿ ಕೋಟ್ಯಂತರ ರೂ. ಖರ್ಚು ಮಾಡಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡುತ್ತಿರುವುದಾಗಿ ಹೇಳುತ್ತಿದ್ದಾರೆ. ಆದರೆ ಅದ್ಯಾವ ಮಾನದಂಡದಲ್ಲಿ ಮಾಡುತ್ತಿದ್ದಾರೆ ಎನ್ನುವುದು ತಿಳಿದು ಬರುತ್ತಿಲ್ಲ. ಕೆಲವೊಂದು ಕಡೆ ಹೊಸದಾಗಿ ಪೈಪ್ ಲೈನ್ ಅಳವಡಿಸಲು ನೆಲವನ್ನು ಅಗೆದಿದ್ದು, ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ತೊಡಕಾಗಿದೆ.
ಜಲ ಮೂಲವೇ ಭದ್ರಗೊಳಿಸಿಲ್ಲ
ಜಲಮೂಲವನ್ನೇ ಭದ್ರಗೊಳಿಸದೇ ಕೋಟ್ಯಂತರ ರೂ.ಗಳನ್ನು ಮಣ್ಣುಪಾಲು ಮಾಡಲು ಹೊರಟಿರುವುದು . ಈಗ ಜನರ ಆಕ್ರೋಶಕ್ಕೆ ಕಾರಣವಾಗುತ್ತಿದೆ, ಈ ಘಟಕಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ವ್ಯರ್ಥವಾಗುತ್ತದೆ ಎಂಬ ಕಾರಣಕ್ಕೆ ಸಾಕಷ್ಟು ಮಾರ್ಪಾಡುಗಳನ್ನು ಮಾಡಲಾಗಿದೆ. ಇದರಿಂದ ಎಲ್ಲ ಕೇಂದ್ರಗಳಲ್ಲೂ ಶುದ್ಧ ಕುಡಿಯವ ನೀರು ಸಿಗುತ್ತದೆ ಎಂದು ಹೇಳುವುದೂ ಕಷ್ಟ. ಇನ್ನೊಂದೆಡೆ ಶುದ್ಧೀಕರಿಸಿ ನೀರನ್ನು ಕುಡಿಯುವುದು ಒಳ್ಳೆಯದಲ್ಲ ಎಂಬ ಸುದ್ದಿಯೂ ಹುದಾಡುತ್ತಿರುವುರಿಂದ ಜನರು ಗೊಂದಲಕ್ಕೀಡಾಗಿದ್ದಾರೆ. ಇದರ ಬಗ್ಗೆ ಜಾಗೃತಿ ಮೂಡಿಸಬೇಕಾದ ಇಲಾಖೆಗಳು ಮಾತ್ರ ನಮಗೂ ಅದಕ್ಕೂ ಸಂಬಂಧವೇ ಇಲ್ಲ ಎನ್ನುವಂತೆ ಉದಾಸೀನ ವಹಿಸುತ್ತಿವೆ.
ಶುದ್ಧ ನೀರಿಗಾಗಿ ಪರದಾಟ
ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಒಂದೆಡೆ ಯಾದರೆ ಮತ್ತೊಂದೆಡೆ ಶುದ್ಧ ಕುಡಿಯುವ ನೀರಿನ ಸಮಸ್ಯೆಯೂ ಜನರನ್ನು ಕಾಡುತ್ತಿದೆ. ಸಾಕಷ್ಟು ಕಡೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆಯಾದರೂ ಹಲವು ಕಡೆ ನಿರ್ವಹಣೆಯಿಲ್ಲದೆ ಜನ ಘಟಕಗಳ ಆ ಕಡೆ ಮುಖ ಮಾಡುವುದಿಲ್ಲ. ಇದೇ ನಿರ್ಲಕ್ಷ್ಯಕ್ಕೆ ಸಾಕಷ್ಟು ಶುದ್ಧ ಕುಡಿಯುವ ನೀರಿನ ಘಟಕಗಳು ಬೆದರುಗೊಂಬೆಗಳಾಗಿ ನಿಂತಿವೆ. ವಿಶೇಷವಾಗಿ ಸ್ಥಳೀಯ ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯತಿ, ನಗರಸಭೆ ಸಂಸ್ಥೆಗಳ ನಿರ್ವಹಣೆಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಿತಿ ದೇವರಿಗೇ ಪ್ರೀತಿ ಎನ್ನುವಂತಿದೆ.
ಕೆಲ ಗ್ರಾಮಗಳಲ್ಲಿ ಹೆಸರಿಗಷ್ಟೇ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತೆರೆಯಲಾಗಿದೆ. ಕೆಲವು ಕಡೆ ಸರಿಯಾಗಿ ನಿರ್ವಹಣೆಯಿಲ್ಲದೆ ಜನರು ನೀರನ್ನೇ ಬಳಸುತ್ತಿಲ್ಲ. ಯಾರೂ ಹೇಳೋರು ಕೇಳೋರು ಇಲ್ಲದಂತಾಗಿದ್ದು ಜನರು ಕೊಳವೆಬಾವಿ ನೀರನ್ನೇ ನೇರವಾಗಿ ಕುಡಿಯುವಂತಾಗಿದೆ ಎಂದು ಗ್ರಾಮಸ್ಥರು ಸಂಕಷ್ಟ ತೋಡಿಕೊಂಡಿದ್ದಾರೆ.












Click it and Unblock the Notifications