ಚಿಕ್ಕಬಳ್ಳಾಪುರದಲ್ಲಿ ಮೂಲಭೂತ ಸೌಲಭ್ಯಗಳಿಲ್ಲದೆ ಸೊರಗುತ್ತಿರುವ ಜಿಲ್ಲಾಸ್ಪತ್ರೆ, ಹೇಳೋರಿಲ್ಲ.. ಕೇಳೋರೂ ಇಲ್ಲ: ಜನಾಕ್ರೋಶ
ಚಿಕ್ಕಬಳ್ಳಾಪುರ, ಏಪ್ರಿಲ್, 05: ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ಕಲ್ಪಿಸಬೇಕಾಗಿರುವ ಇಲ್ಲಿನ ಸರ್ಕಾರಿ ಜಿಲ್ಲಾ ಆಸ್ಪತ್ರೆಯು ಮೂಲಭೂತ ಸೌಲಭ್ಯಗಳು ಇಲ್ಲದೆ ಸೊರಗುತ್ತಿದೆ. ಪ್ರತಿನಿತ್ಯ ಆಸ್ಪತ್ರೆಗೆ ಒಂದು ಸಾವಿರಕ್ಕೂ ಹೆಚ್ಚು ರೋಗಿಗಳು ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ಪಡೆದುಕೊಳ್ಳಲು ಆಗಮಿಸುತ್ತಾರೆ. ಆದರೆ ಇಲ್ಲಿ ಮೂಲಭೂತ ಸೌಲಭ್ಯಗಳೇ ಇಲ್ಲದಂತಾಗಿದೆ.
300 ಹಾಸಿಗೆಗಳ ಸಾಮರ್ಥ್ಯ ಹೊಂದಿದ್ದು, ಹೆರಿಗೆ ಮತ್ತು ಪ್ರಸೂತಿ ವಿಭಾಗ, ಮಕ್ಕಳ ಮತ್ತು ಮಹಿಳಾ ಚಿಕಿತ್ಸಾ ಘಟಕ, ಪ್ರಯೋಗಾಲಯಗಳು, ಎಕ್ಸ್ ರೇ, ರಕ್ತ ಪರೀಕ್ಷಾ ಕೇಂದ್ರ, ತುರ್ತು ಚಿಕಿತ್ಸಾ ಘಟಕ ಸೇರಿದಂತೆ ವಿವಿಧ ಚಿಕಿತ್ಸಾ ಘಟಕಗಳನ್ನು ತೆರೆಯಲಾಗಿದೆ. ಹಾಗೆಯೇ ವೈದ್ಯರು ಸರಿಯಾದ ಸಮಯಕ್ಕೆ ರೋಗಿಗಳಿಗೆ ಲಭ್ಯವಾಗಬೇಕು ಎಂದು ಸಮಯವನ್ನು ನಿಗಧಿಪಡಿಸಿದ್ದಾರೆ. ಆದರೆ ಇಲ್ಲಿ ಮೂಲಭೂತ ಸೌಲಭ್ಯಗಳಿಲ್ಲದೆ ಜನರು ಅಧಿಕಾರಿಗಳ ವಿರುದ್ಧ ಕೆಂಡಕಾರುತ್ತಿದ್ದಾರೆ.

ವೈದ್ಯಕೀಯ ಕಾಲೇಜು ಹೆಗಲಿಗೆ ಆಸ್ಪತ್ರೆಯ ಜವಾಬ್ದಾರಿ
ಈ ಹಿಂದೆ ಜಿಲ್ಲಾಸ್ಪತ್ರೆಯು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸುಪರ್ದಿಯಲ್ಲಿತ್ತು. ಆದರೆ ಚಿಕ್ಕಬಳ್ಳಾಪುರಕ್ಕೆ ವೈದ್ಯಕೀಯ ವಿಜ್ಞಾನ ಸಂಸ್ಥೆ ಬಂದ ನಂತರ ಜಿಲ್ಲಾಸ್ಪತ್ರೆಯು ಇದರಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಆಸ್ಪತ್ರೆಯ ಜವಾಬ್ದಾರಿ ಇದೀಗ ವೈದ್ಯಕೀಯ ಕಾಲೇಜಿನ ಹೆಗಲಿಗೆ ವರ್ಗಾವಣೆಯಾಗಿದೆ.
ಆಸ್ಪತ್ರೆಯ ಜವಾಬ್ದಾರಿ ವೈದ್ಯಕೀಯ ಕಾಲೇಜಿಗೆ ವರ್ಗಾವಣೆಯಾದ ನಂತರ ಇಲ್ಲಿ ಸೇವೆ ಸಿಗುವುದು ಮರೀಚಿಕೆಯಾದಂತಾಗಿದೆ. ಆಸ್ಪತ್ರೆ ಇದೀಗ ವೈದ್ಯಕೀಯ ವಿದ್ಯಾರ್ಥಿಗಳ ತರಗತಿ ಕೇಂದ್ರವಾಗಿ ಮಾರ್ಪಟ್ಟಿದೆ. ಮತ್ತು ಇಲ್ಲಿರುವ ಸಿಬ್ಬಂದಿ ಮತ್ತು ವೈದ್ಯರಿಗೆ ಸಾರ್ವಜನಿಕರ ಆಸ್ಪತ್ರೆ ಎಂಬ ಭಾವೆಯೇ ಇಲ್ಲದಂತಾಗಿದೆ.
ಸಾರ್ವಜನಿಕರ ಆರೋಪ
ಮೆಡಿಕಲ್ ಕಾಲೇಜು ನಿರ್ಮಾಣದ ನಂತರ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ಸಿಗುತ್ತದೆ ಎಂಬ ನಿರೀಕ್ಷೆಯಿತ್ತು. ಆದರೆ ಇಲ್ಲಿ ವೈದ್ಯರು, ಸಿಬ್ಬಂದಿ ಲಭ್ಯವಾಗುತ್ತಿಲ್ಲ, ಚೀಟಿಯನ್ನು ಸಹ ಹೊರಗಡೆಗೆ ಬರುದುಕೊಡುತ್ತಾರೆ. ಇದೀಗ ಬೇಸಿಗೆ ಆರಂಭವಾಗಿದ್ದು, ಆಸ್ಪತ್ರೆ ಆವರಣದಲ್ಲಿ ಕುಡಿಯುವ ನೀರನ್ನು ಸಹ ವ್ಯವಸ್ಥೆ ಮಾಡಿಲ್ಲ. ಇನ್ನು ಸ್ವಚ್ಛತೆಯಂತೂ ಮರೀಚಿಕೆಯಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ತುರ್ತು ಸಂದರ್ಭದಲ್ಲಿ ರೋಗಿಗಳು ಆಸ್ಪತ್ರೆಗೆ ಬಂದರೆ ಸ್ಟೆಚ್ಚರ್ ವ್ಯವಸ್ಥೆಯಿಲ್ಲ. ರೋಗಿಗಳನ್ನು ಕರೆದುಕೊಂಡು ಹೋಗಲು ಸಿಬ್ಬಂದಿ ಇರುವುದಿಲ್ಲ ಎಂದು ದೂರಿದ್ದಾರೆ.
ವ್ಯವಸ್ಥೆ ಸರಿಪಡಿಸುವಂತೆ ಒತ್ತಾಯ
ಇತ್ತೀಚಿಗೆ ಬದಲಾದ ವಾತಾವರಣದಿಂದ ಮಕ್ಕಳು, ವಯಸ್ಕರು ಜ್ವರ, ಕೆಮ್ಮು, ನೆಗಡಿ, ಮೈಕೈ ನೋವು, ಗಂಟಲು ನೋವುವಂತಹ ಕಾಯಿಲೆಗಳಿಗೆ ತುತ್ತಾಗಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಆಗಮಿಸುತ್ತಾರೆ. ಆದರೆ ಇಲ್ಲಿ ವೈದ್ಯರ ಕೊಠಡಿಗಳು ಖಾಲಿ ಇದ್ದು, ವೈದ್ಯರು ಸಕಾಲಕ್ಕೆ ಲಭ್ಯವಾಗುತ್ತಿಲ್ಲ. ಇದರಿಂದಾಗಿ ತುರ್ತು ಚಿಕಿತ್ಸೆ ಪಡೆದುಕೊಳ್ಳಲು ರೋಗಿಗಳು ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುವ ಪರಿಸ್ಥಿತಿ ಎದುರಾಗಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಸಾರ್ವಜನಿಕರ ಹಿತದೃಷ್ಟಿಯಿಂದ ಆಸ್ಪತ್ರೆಯಲ್ಲಿನ ವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಜನ ಒತ್ತಾಯಿಸಿದ್ದಾರೆ.
ಮಾರ್ಚ್ 27ರಂದು ಮುಖ್ಯಮಂತ್ರಿ ಬಸರಾಜ ಬೊಮ್ಮಾಯಿ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಇಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜು ಕಟ್ಟವನ್ನು ಉದ್ಘಾಟಿಸಿದ್ದು, ಈ ಆಸ್ಪತ್ರೆ ಇದುವರೆಗೂ ಸಾರ್ವಜನಿಕರಿಗೆ ಉಪಯೋಗಕ್ಕೆ ಲಭ್ಯವಾಗಿಲ್ಲ. ಸದ್ಯ ಜನರಿಗೆ ಆಸ್ಪತ್ರೆ ಸೇವೆಗಳು ಸಿಗುವ ಲಕ್ಷಣಗಳು ಕಾಣುತ್ತಿಲ್ಲ. ಇದರಿಂದ ಸೂಕ್ತ ಚಿಕಿತ್ಸೆಗಾಗಿ ಜನರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಚಿಕ್ಕಬಳ್ಳಾಪುರದಲ್ಲಿ ಮೆಡಿಕಲ್ ಕಾಲೇಜು ಉದ್ಘಾಟನೆಯಾದ ಮೇಲೆ ಉತ್ತಮ ಆರೋಗ್ಯ ಸೇವೆ ಸಿಗುತ್ತದೆ ಎಂದು ಭಾವಿಸಿದ್ದೆವು. ಇದೀಗ ಆಸ್ಪತ್ರೆಗೆ ಬಂದವರು ವಾಪಸ್ ತೆರಳುವಂತಹ ಪರಿಸ್ಥಿತಿಯಿದೆ. ಸರ್ಕಾರಿ ಆಸ್ಪತ್ರೆಯಲ್ಲಿನ ಔಷದಿ ಮಳಿಗೆಯನ್ನು ನಿಗಧಿತ ಸಮಯಕ್ಕೂ ಮುಂಚೆಯೇ ಮುಚ್ಚುತ್ತಿದ್ದಾರೆ. ಇದರಿಂದಾಗಿ ಜನರು ಔಷಧಿಗಳಿಗಾಗಿ ಹೊರಗಡೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬಂದಿದ್ದ ಚೇತನ್ ಎಂಬುವವರು ಅಸಮಾಧಾನ ಹೊರಹಾಕಿದ್ದಾರೆ.
ಸಮಯಕ್ಕೆ ಸರಿಯಾಗಿ ವೈದ್ಯರು, ಸಿಬ್ಬಂದಿ ಕೆಲಸಕ್ಕೆ ಹಾಜರಾಗಬೇಕು. ಹಾಜರಾತಿಗಾಗಿ ಬಯೋಮೆಟ್ರಿಕ್ ಅಳವಡಿಸಲಾಗಿದೆ. ಈಗಾಗಲೇ ಕೆಲಸದಲ್ಲಿ ನಿರ್ಲಕ್ಷ ತೋರಿರುವವ ವೈದ್ಯರಿಗೆ, ಸಿಬ್ಬಂದಿಗೆ ನೊಟೀಸ್ ನೀಡಿ ಎಚ್ಚರಿಕೆ ನೀಡಲಾಗಿದೆ. ಆಸ್ಪತ್ರೆಗೆ ಸರಬರಾಜು ಆಗುವ ಔಷಧಿಗಳನ್ನು ಕೂಡ ನೀಡಲಾಗುತ್ತಿದೆ. ಹೊರಗಡೆಗೆ ಚೀಟಿ ಬರೆದುಕೊಡಬಾರದು ಎಂದು ವೈದ್ಯರಿಗೆ ಸೂಚಿಸಿದ್ದೇನೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ರಾಜರೆಡ್ಡಿ ಹೇಳಿದ್ದಾರೆ.












Click it and Unblock the Notifications