ರೈತರ ಆದಾಯ ದ್ವಿಗುಣ, ಸದ್ಗುರು ಕಾರ್ಯಕ್ಕೆ ಸರ್ಕಾರದ ಬೆಂಬಲ
ಚಿಕ್ಕಬಳ್ಳಾಪುರ, ಅಕ್ಟೋಬರ್ 09: ಈಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರುಗಳು ರೈತ ಉತ್ಪಾದಕ ಕೇಂದ್ರ ರೂಪಿಸಲು ಮುಂದಾಗಿದ್ದಾರೆ. ಅವರಿಗೆ ರಾಜ್ಯ ಸರ್ಕಾರ ನೂರರಷ್ಟು ಬೆಂಬಲ ವ್ಯಕ್ತಪಡಿಸುತ್ತದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಚಿಕ್ಕಬಳ್ಳಾಪುರದಲ್ಲಿ ಈಶಾ ಫೌಂಡೇಶನ್ ವತಿಯಿಂದ ನಿರ್ಮಿಸಲಾದ 'ನಾಗಮಂಟಪ'ವನ್ನು ಶನಿವಾರ ಉದ್ಘಾಟಿಸಿ ಬಸವರಾಜ ಬೊಮ್ಮಾಯಿ ಮಾತನಾಡಿದರು. ಸದ್ಗುರುಗಳ ಕಾರ್ಯಗಳಿಂದ ರೈತರ ಆದಾಯ ದ್ವಿಗುಣವಾಗಲಿದೆ. ರೈತ ಉತ್ಪಾದಕ ಕೇಂದ್ರ ಜಾರಿಯಾದ ನಂತರ ಸರ್ಕಾರ ಅದನ್ನು ರಾಜ್ಯಾದ್ಯಂತ ಮಾದರಿಯಾಗಿ ವಿಸ್ತರಿಸಲಿದೆ ಎಂದರು.
ಸದ್ಗುರುಗಳು ನೀಡಿದ್ದ ಮಣ್ಣು ಉಳಿಸಿ ಪುಸ್ತಕವನ್ನು ಪರಿಸರ ಇಲಾಖೆಗೆ ನೀಡಿ ಕಾರ್ಯಕ್ರಮ ರೂಪಿಸಲಾಗಿದೆ. ಈ ಉದ್ದೇಶಕ್ಕಾಗಿ 100 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ರಾಜ್ಯದಲ್ಲಿ ಸರ್ಕಾರ ಮಣ್ಣು ಉಳಿಸಲು ಮಹತ್ವ ನೀಡಲಾಗಿದೆ. ಅಧಿಕಾರಿಗಳು ಯೋಜನೆ ಯಶಸ್ವಿಗೊಳಿಸಿದರೆ ಇನ್ನಷ್ಟು ಅನುದಾನ ನೀಡಲಾಗುವುದು ಎಂದು ಅವರು ಭರವಸೆ ನೀಡಿದರು.

ಸದ್ಗುರುಗಳ ಎಲ್ಲ ಯೋಜನೆಗೆ ಪ್ರೋತ್ಸಾಹವಿದೆ
ಸದ್ಗುರುಗಳು ಕಾರ್ಮಿಕರ ಶ್ರಮಕ್ಕೆ, ರೈತರ ಬೆವರಿಗೆ ಬೆಲೆ ಕೊಡುವ ಬಗ್ಗೆ ಚರ್ಚಿಸಿದ್ದಾರೆ. ರಾಜ್ಯ ಜನರ ಪರವಾಗಿ, ರೈತರ ಪರವಾಗಿರುವ ಅವರ ಮಹತ್ತರ ಉದ್ದೇಶಕ್ಕೆ, ಅವರ ಎಲ್ಲ ಕಲ್ಯಾಣ ಯೋಜನೆ, ಕಾರ್ಯಕ್ರಮಗಳಿಗೆ ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ. ಅವರು ಈ ರೈತ ಉತ್ಪಾದಕ ಕೇಂದ್ರ ಮಾದರಿ ಪ್ರೇರಣಾ ಕೇಂದ್ರವಾಗಿ ವಿಶ್ವಮಟ್ಟದಲ್ಲಿ ಬೆಳೆಯಲಿ ಎಂದು ಆಶಿಸಿದರು.
ಚಿಕ್ಕಬಳ್ಳಾಪುರ ಹಾಗೂ ಕೊಲಾರ ಜಿಲ್ಲಾ ವ್ಯಾಪ್ತಿಯಲ್ಲಿ ಅನೇಕ ವರ್ಷಗಳಿಂದ ನೀರಿನ ಬವಣೆ ಇತ್ತು. ಕಳೆದ ಒಂದೂವರೆ ವರ್ಷದಿಂದ ಎಲ್ಲಾ ಕೆರೆ ಕಟ್ಟೆಗಳು ತುಂಬಿ ಕೋಡಿ ಬಿದ್ದಿವೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಮರು ಭೂಮಿ ಕೃಷಿ ಭೂಮಿ ಯಾಗಿ ಪರಿವರ್ತನೆಯಾಗಿರುವುದು ಸಂತಸ ತಂದಿದೆ. ಯೋಗ ಕೇಂದ್ರ ಮುಂತಾದವು ಇಲ್ಲಿ ಸ್ಪಾಪನೆಯಾಗುತ್ತಿದೆ. ನಾಲ್ಕು ತಿಂಗಳಲ್ಲಿ ಆದಿಗುರು ಮೂರ್ತಿ ನಿರ್ಮಾಣ ಮಾಡಲಾಗುತ್ತಿದೆ. ಇದು ಹೆಮ್ಮೆಯ ವಿಷಯ ಎಂದು ಹೇಳಿದರು.

ಎಲ್ಲಿರಿಗಾಗಿ ಜಗತ್ತು ಸೃಷ್ಟಿ
ಸದ್ಗುರುಗಳು ತಾವು ಕಂಡ ಒಳಿತಿನ, ಭವಿಷ್ಯಕ್ಕಾಗುವ ಉತ್ತಮ ಜಗತ್ತನ್ನು ಎಲ್ಲರಿಗಾಗಿ ಸೃಷ್ಟಿಸುತ್ತಿದ್ದಾರೆ. ಅವರೊಬ್ಬ ಮಹಾನ್ ಸೃಷ್ಟಿಕರ್ತ. ಅವರಲ್ಲಿ ಕ್ರಿಯಾಶೀಲತೆ ಇದೆ. ಅವರಲ್ಲೊಬ್ಬ ಕಲಾವಿದರಿದ್ದಾರೆ. ನಾಗಮಂಟಪ ದಿಂದ ಎಲ್ಲವೂ ಅವರ ಸೃಷ್ಟಿಯ ಫಲಿತಾಂಶ. ಸಣ್ಣ ವಿಚಾರಗಳಲ್ಲಿ ಅವರು ಹೀಗೆ ಮಾಡಲು ಅವರಲ್ಲಿರುವ ವಿನ್ಯಾಸಕಾರನಿದ್ದಾನೆ. ದೇವರು ಕೂಡ ಒಬ್ಬ ವಿನ್ಯಾಸಕಾರ. ದೇವರು ಸೃಷ್ಟಿಸಿರುವ ತಂತ್ರಾಂಶ ವನ್ನು ಲೋಕಕಲ್ಯಾಣಕ್ಕೆ ಉಪಯೋಗವಾಗಲು ಸದ್ಗುರುಗಳನ್ನು ಅನುಸರಿಸಬೇಕು. ಅವರು ಮಾನವೀಯ ಮೌಲ್ಯಗಳನ್ನು ಹೊಂದಿರುವ ವ್ಯಕ್ತಿ. ಮಣ್ಣು ಉಳಿಸಿದರೆ ಭವಿಷ್ಯದ ಮಾನವನನ್ನು ಉಳಿಸಲು ಸಾಧ್ಯ ಎಂದರು.

ಜ್ಞಾನ, ಕರ್ಮದಿಂದ ಸಾಧಿಸುವವರಿಗೆ ಅವಕಾಶ
ಮುಂದಿನ ಪೀಳಿಗೆಗೆ ಆಧ್ಯಾತ್ಮಿಕ ಹಾಗೂ ತತ್ವಜ್ಞಾನದ ಕೇಂದ್ರವನ್ನು ರೂಪಿಸುವುದು ಸದ್ಗುರುಗಳ ಉದ್ದೇಶ. ನಾವು ಮುಂದಿನ ಜನಾಂಗಕ್ಕೆ ಏನು ಬಿಟ್ಟು ಹೋಗುತ್ತೇವೆ ಎನ್ನುವುದು ಮುಖ್ಯ. ಜನ ಸಾಮಾನ್ಯರ ಮಿತಿಗಳು ಅವರಿಗೆ ಗೊತ್ತಿದೆ. ಜ್ಞಾನದಿಂದ ಸಾಧನೆ ಮಾಡುವುದು ಬೇರೆ , ಕರ್ಮದಿಂದ ಸಾಧನೆ ಮಾಡುವುದು ಬೇರೆ ಇದೆ. ಜ್ಞಾನ ಮತ್ತು ಕರ್ಮದಿಂದ ಸಾಧನೆ ಮಾಡುವವರಿಗೆ ಇಲ್ಲಿ ಅವಕಾಶವಿದೆ. ಇದೊಂದು ಬಹಳ ಅದ್ಬುತವಾದ ಕಲ್ಪನೆ. ನಾನು ಪ್ರತಿ ಸಾರಿ ಅವರನ್ನು ಭೇಟಿ ಮಾಡಿದಾಗ ವೈಚಾರಿಕವಾಗಿ ಚರ್ಚೆ ಮಾಡಿದಾಗ ಜ್ಞಾನ, ಪ್ರಶ್ನೆಗಳಿಗೆ ಉತ್ತರ ದೊರಕಿದೆ ಎಂದರು.

ನಾಗಮಂಟಪದಲ್ಲಿ ಶ್ರೇಷ್ಠ ಚಿಂತನೆ
ಅಮರತ್ವ ಇರುವ 112 ನಾಗದೇವತೆಗಳನ್ನು ಇಲ್ಲಿ ಬಿಂಬಿಸಲಾಗಿದೆ. ಶ್ರೇಷ್ಠ ಚಿಂತನೆ ಇಲ್ಲಿ ಮೂಡಿ ಬಂದಿದೆ. ಹಿಂದೆ ಇದ್ದದ್ದು ನಾಗರಿಕತೆ, ಏನಾಗಿದ್ದೇವೆ ಎನ್ನುವುದು ಸಂಸ್ಕೃತಿ, ಇಲ್ಲಿಗೆ ಬಂದರೆ ನಾವೇನಾಗಿದ್ದೇವೆ ಎನ್ನುವುದು ತಿಳಿಯುತ್ತದೆ. ಜ್ಞಾನದ ಬಾಗಿಲನ್ನು ತೆರೆಯುವ, ಅಂತರಾತ್ಮದ ಜಾಗೃತಿ ಮೂಡಿಸುವ, ಮಾನಸಿಕ ನೆಮ್ಮದಿ ಮನಸ್ಸು ಶುದ್ಧಗೊಳಿಸುತ್ತದೆ. ನಮ್ಮಲ್ಲಿರುವ ವಿಸ್ಮಯ ಗುಣಗಳನ್ನು ದೂರ ಮಾಡಿ ಚಾರಿತ್ರ್ಯ ನಿರ್ಮಾಣ ಮಾಡಲು ಈ ಸ್ಥಳ ಸ್ಥಾಪನೆಯಾಗಿದೆ ಎಂದು ವಿವರಿಸಿದರು.
ಸದ್ಗುರುಗಳು ಕನ್ನಡದವರು. ಕರ್ನಾಟಕ ನೀಡಿರುವ ಜಾಗತಿಕ ಗುರು ಈ ಸದ್ಗುರುಗಳು. ಅವರ ತಾಯಿ ಊರು ಚಿಕ್ಕಬಳ್ಳಾಪುರ. ಖಂಡಿತವಾಗಿಯೂ ಈ ಕೇಂದ್ರ ಅಂತರರಾಷ್ಟ್ರೀಯ ಕೇಂದ್ರವಾಗಲಿದೆ ಎಂದರು.












Click it and Unblock the Notifications