ರಂಗೇರಿದ ಬಾಗೇಪಲ್ಲಿ ಚುನಾವಣಾ ಅಖಾಡ: ಜೆಡಿಎಸ್ ಅಭ್ಯರ್ಥಿಯಿಂದ ಭರ್ಜರಿ ಪ್ರಚಾರ
ಬಿಜೆಪಿ, ಕಾಂಗ್ರೆಸ್ ಮುಖಂಡರು ಮತದಾರರನ್ನು ಸೆಳೆಯಲು ವಿವಿಧ ಆಮಿಷಗಳನ್ನು ಹಾಗೂ ಸುಳ್ಳು ಭರವಸೆಗಳನ್ನು ನೀಡುತ್ತಿದ್ದು, ಮತದಾರರು ಬಣ್ಣದ ಮಾತುಗಳಿಗೆ ಮರುಳಾಗಬಾರದು ಎಂದು ಬಾಗೇಪಲ್ಲಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಿ.ಜೆ.ನಾಗರಾಜ್ ರೆಡ್ಡಿ ಮನವಿ ಮಾಡಿದರು.
ಚಿಕ್ಕಬಳ್ಳಾಪುರ ಮಾರ್ಚ್ 22: ವಿಧಾನಸಭಾ ಚುನಾವಣೆ ಸಮೀಪಿಸುತಿದ್ದು, ರಾಜ್ಯದಲ್ಲಿ ಜನರ ವಿಶ್ವಾಸ ಕಳೆದುಕೊಂಡಿರುವ ಬಿಜೆಪಿ, ಕಾಂಗ್ರೆಸ್ ಮುಖಂಡರು ಮತದಾರರನ್ನು ಸೆಳೆಯಲು ವಿವಿಧ ಆಮಿಷಗಳನ್ನು ಹಾಗೂ ಸುಳ್ಳು ಭರವಸೆಗಳನ್ನು ನೀಡುತ್ತಿದ್ದು, ಮತದಾರರು ಬಣ್ಣದ ಮಾತುಗಳಿಗೆ ಮರುಳಾಗಬಾರದು ಎಂದು ಬಾಗೇಪಲ್ಲಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಿ.ಜೆ.ನಾಗರಾಜ್ ರೆಡ್ಡಿ ಮನವಿ ಮಾಡಿದರು.
ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಮನೆಮನೆಗೆ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಪಕ್ಷಗಳು ಅಧಿಕಾರಕ್ಕೆ ಬಂದರೆ ಸ್ವತಂತ್ರವಾಗಿ ಅಧಿಕಾರ ನಡೆಸಲು ಅವಕಾಶವಿಲ್ಲ, ಯಾವುದೇ ಒಂದು ನಿರ್ಧಾರ ತೆಗೆದುಕೊಳ್ಳಬೇಕಾದರೂ ದೆಹಲಿಗೆ ಹೋಗಿ ಅಪ್ಪಣೆ ಪಡೆದು ಬರಬೇಕು. ಆದರೆ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದ ಅಭಿವೃದ್ಧಿಗಾಗಿ ಸಾಮಾನ್ಯ ಕಾರ್ಯಕರ್ತನೂ ಸಹ ತನ್ನ ಅಭಿಪ್ರಾಯವನ್ನು ಮುಖ್ಯಮಂತ್ರಿಗಳ ಮುಂದೆ ವ್ಯಕ್ತಪಡಿಸಬಹುದು ಎಂದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ವಂತ ಬಲದಿಂದ 123 ಸ್ಥಾನಗಳಲ್ಲಿ ಗೆದ್ದು ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುವ ವಿಶ್ವಾಸವಿದ್ದು, ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಜಾರಿಗೆ ತರುವ ಪಂಚರತ್ನ ಕಾರ್ಯಕ್ರಮಗಳ ವಿವಿರಗಳನ್ನು ಮನೆ ಮನೆಗೂ ತೆರಳಿ ಕರಪತ್ರಗಳನ್ನು ನೀಡಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿದ್ದಾಗ ಜಾರಿಗೆ ತಂದಿರುವ ಅನೇಕ ಯೋಜನೆಗಳ ಕುರಿತು ಮನವರಿಕೆ ಮಾಡಿಕೊಡಲಾಗಿದೆ ಎಂದರು.
ಮಾತು ಮುಂದುವರಿಸಿದ ಜೆಡಿಎಸ್ ಅಭ್ಯರ್ಥಿ ಡಿ.ಜೆ.ನಾಗರಾಜ್ ರೆಡ್ಡಿ ಕಳೆದ 30 ವರ್ಷಗಳಿಂದ ಸಕ್ರಿಯ ರಾಜಕೀಯದಲ್ಲಿದ್ದೇನೆ. ಹಲವು ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದೇನೆ. ಕೆಲವು ಸಲ ಪಕ್ಷದ ವತಿಯಿಂದ ಟಿಕೆಟ್ ವಂಚಿತನಾಗಿ ಅನ್ಯಾಯವಾಗಿದೆ. ಈ ಬಾರಿ ಪಕ್ಷದ ವರಿಷ್ಠರು ತನಗೆ ಟಿಕೆಟ್ ಘೋಷಣೆಯಾಗಿದ್ದು ಶತಾಯ ಗತಾಯ ಗೆಲ್ಲಬೇಕೆಂದು ಹಗಲಿರಳು ಶ್ರಮಿಸುತ್ತಿದ್ದೇನೆ. ಈ ಬಾರಿ ತಾವು ನನ್ನನ್ನು ಗೆಲ್ಲಿಸಿದರೆ ಸುವರ್ಣಾಕ್ಷರಗಳಲ್ಲಿ ಬೆರೆದಿಡುವ ರೀತಿ ಈ ಬಾಗೇಪಲ್ಲಿ ಕ್ಷೇತ್ರವನ್ನು ಅಭಿವೃದ್ಧಿ ಮಾಡಿ ತೋರಿಸುತ್ತೇನೆ ಎಂದು ಭರವಸೆ ನೀಡಿದರು.

ಈ ವೇಳೆ ಉಪಸ್ಥಿತರಿದ್ದ ಜೆಡಿಎಸ್ ಪಕ್ಷದ ಯುವ ಮುಖಂಡ ಡಿ.ಜೆ. ದೀಪಕ್ ಗೌಡ ಮಾತನಾಡಿ ಚಿಕ್ಕಬಳ್ಳಾಪುರವನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಣೆ ಮಾಡಿದ್ದಕ್ಕಾಗಿ ಮೆಡಿಕಲ್ ಕಾಲೇಜು ಸೇರಿದಂತೆ ಅನೇಕ ಹೊಸ ಹೊಸ ಯೋಜನೆಗಳು ಚಿಕ್ಕಬಳ್ಳಾಪುರ ಜಿಲ್ಲೆಗೆ ಬರಲು ಸಾಧ್ಯವಾಗಿದೆ ಎಂದರು.
ಜೆಡಿಎಸ್ ಪಕ್ಷ ಜನಸಾಮಾನ್ಯರ ಅಭಿವೃದ್ಧಿಗಾಗಿ ಹೊಂದಿರುವ ಧ್ಯೇಯ, ರೈತರ ವಿಚಾರದಲ್ಲಿ ಎಚ್.ಡಿ.ಕುಮಾರಸ್ವಾಮಿ ಕಳೆದ ಎರಡು ಬಾರಿ ಮುಖ್ಯಮಂತ್ರಿಗಳಾಗಿದ್ದಾಗ ಸಾಲ ಮನ್ನಾ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿ ರೈತರ ಅಭ್ಯುದಯಕ್ಕಾಗಿ ಶ್ರಮಿಸಿದ್ದು. ನಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಜೆಡಿಎಸ್ ಪಕ್ಷವು ಪಂಚರತ್ನ ಯೋಜನೆಗಳನ್ನು ಮುಂದಿನ ಐದು ವರ್ಷಗಳಲ್ಲಿ ಜಾರಿಗೊಳಿಸಲು ಮುಂದಾಗಿದ್ದು ಜೆಡಿಎಸ್ ಬೆಂಬಲಿಸಿ ನಮ್ಮ ಪಕ್ಷದ ಅಭ್ಯರ್ಥಿ ಡಿ.ಜೆ.ನಾಗಾರಾಜರೆಡ್ಡಿಗೆ ಮತ ನೀಡುವಂತೆ ಮನವಿ ಮಾಡಿದರು.

30 ವರ್ಷಗಳ ಸೇವೆ ಗುರುತಿಸಿ ಜೆಡಿಎಸ್ ಗೆಲ್ಲಿಸಿ
ಕಳೆದ 30 ವರ್ಷಗಳಿಂದ ಬಾಗೇಪಲ್ಲಿ ಕ್ಷೇತ್ರದಲ್ಲಿ ಸಮಾಜ ಸೇವೆಯ ಮೂಲಕ ಕೈಲಾದಷ್ಟು ಸಹಾಯ ಮಾಡುವ ಮೂಲಕ ಜನಸಾಮಾನ್ಯರ ಕಷ್ಟ ಸುಖಗಳಲ್ಲಿ ಭಾಗಿಯಾಗಿದ್ದೇನೆ. ಜೆಡಿಎಸ್ ಪಕ್ಷವನ್ನು ಬೆಂಬಲಿಸುವ ಮೂಲಕ ಕುಮಾರಸ್ವಾಮಿಯವರ ಪಂಚರತ್ನ ಯೋಜನೆಗಳ ಅನುಷ್ಠಾನಕ್ಕಾಗಿ ಜೆಡಿಎಸ್ ಗೆಲ್ಲಿಸಬೇಕೆಂದು ಮಯಖಂಡರಾದ ತಿರುಮಣಿ ಗ್ರಾ.ಪಂ ಸದಸ್ಯ ದಿನ್ನಹಳ್ಳಿ ಪ್ರತಾಪ್ ರೆಡ್ಡಿ ತಿಳಿಸಿದರು.
ಕರ್ನಾಟಕ ಚುನಾವಣೆ ಸಮೀಪಿಸುತ್ತಿದ್ದಂತೆ ಬಾಗೇಪಲ್ಲಿ ಕ್ಷೇತ್ರದಾದ್ಯಂತ ಚುನಾವಣಾ ಕಾವು ರಂಗೇರಿದೆ. ಈಗಾಗಲೇ ಜೆಡಿಎಸ್ ಅಭ್ಯರ್ಥಿ ಡಿ.ಜೆ.ನಾಗರಾಜ್ ರೆಡ್ಡಿ ಮನೆ ಮನೆಗೂ ತೆರಳಿ ಮತಯಾಚನೆ ಮಾಡುತ್ತಿದ್ದರೆ, ಅತ್ತ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ, ಹಾಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಕಳೆದ ಒಂದು ತಿಂಗಳಿನಿಂದ ಸರಿ ಸುಮಾರು ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡುವ ಮೂಲಕ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ.












Click it and Unblock the Notifications