ವಿಧಾನಸಭಾ ಚುನಾವಣೆ ಹೊತ್ತು, ಗುದ್ದಲಿ ಪೂಜೆಗೆ ಒತ್ತು: 1 ತಿಂಗಳಲ್ಲಿ ಹತ್ತಾರು ಕಾಮಗಾರಿಗಳಿಗೆ ಚಾಲನೆ
ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರು ಕಳೆದ ಒಂದು ತಿಂಗಳಿನಿಂದ ಸರಿ ಸುಮಾರು ಕೋಟಿ ರೂ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿರುವುದು ಕುತೂಹಲ ಮೂಡಿಸಿದೆ.
ಚಿಕ್ಕಬಳ್ಳಾಪುರ, ಮಾರ್ಚ್ 22: ಮುಂಬರುವ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲೇ ಬಾಗೇಪಲ್ಲಿ ಕ್ಷೇತ್ರದಾದ್ಯಂತ ಕಾಮಗಾರಿಗಳ ಭೂಮಿಪೂಜೆ, ಉದ್ಘಾಟನೆಯಂತಹ ಕೆಲಸಗಳ ಭರಾಟೆ ಜೋರಾಗಿ ಸದ್ದು ಮಾಡುತ್ತಿದೆ.
ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರು ಕಳೆದ ಒಂದು ತಿಂಗಳಿನಿಂದ ಸರಿ ಸುಮಾರು ಕೋಟಿ ರೂ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿರುವುದು ಕುತೂಹಲ ಮೂಡಿಸಿದೆ. ಕ್ಷೇತ್ರದಲ್ಲಿ ಮತ್ತೊಮ್ಮೆ ಸ್ಪರ್ಧೆ ಬಯಸಿರುವ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರು ಈಗ ಕಾಮಗಾರಿಗಳತ್ತ ಚಿತ್ತ ನೆಟ್ಟಿರುವುದು ಅವರ ಅಭಿಮಾನಿಗಳಲ್ಲಿ ಹಾಗೂ ಕಾರ್ಯಕರ್ತರಲ್ಲಿ ಹುರುಪು ಹೆಚ್ಚಿಸಿದೆ.

ಎಸ್.ಎನ್. ಸುಬ್ಬಾರೆಡ್ಡಿ, ವಿರೋಧ ಪಕ್ಷದ ಶಾಸಕರಾಗಿದ್ದರೂ ಕಳೆದ ನಾಲ್ಕೂವರೆ ವರ್ಷದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದಾರಾದರೂ, ಈಗ ಎಲೆಕ್ಷನ್ ಕಾವು ಏರುತ್ತಿರುವ ಸಂದರ್ಭದಲ್ಲಿ ಕಾಮಗಾರಿಗಳ ಭೂಮಿಪೂಜೆ ಹಾಗೂ ಉದ್ಘಾಟನೆಗೆ ವೇಗ ಸಿಕ್ಕಿರುವುದು ಅಚ್ಚರಿ ಮೂಡಿಸಿದೆ.
ಬಗರ್ ಹುಕುಂ ಸಾಗುವಳಿ ಚೀಟಿಗಳ ವಿತರಣೆ, ತಾಲೂಕಿನ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಪೂರ್ವ ಭಾವಿ ಸಭೆ, ದೇವಾಲಯಗಳ ಅಭಿವೃದ್ಧಿ ಕಾಮಗಾರಿ, ರಸ್ತೆ ಅಭಿವೃದ್ಧಿ , ಸಮುದಾಯ ಭವನಗಳು, ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣ, ಪೋಷಕ ಕಾಲುವೆಗಳ ಅಭಿವೃದ್ಧಿ, ಶಾಲಾ ಕೊಠಡಿಗಳ ನಿರ್ಮಾಣ, ಜೆಜೆಎಂ ಕಾಮಗಾರಿಗಳು, ವಸತಿ ಶಾಲೆಗಳ ಉದ್ಘಾಟನೆ, ವಸತಿ ನಿಯಗಳ ಉದ್ಘಾಟನೆ ಸೇರಿದಂತೆ ನಾನಾ ಕಾಮಗಾರಿಗಳ ಉದ್ಘಾಟನೆ ಮತ್ತು ಗುದ್ದಲಿ ಪೂಜೆಗಳು ನಡೆಯುತ್ತಿವೆ.

ಒಟ್ಟಾರೆಯಾಗಿ ಚುನಾವಣೆ ಸಮೀಪಿಸುತ್ತಿರುವಾಗಲೇ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ಹೆಚ್ಚಿಸಿರುವ ಶಾಸಕರು ಮತ್ತೊಮ್ಮೆ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಶತಾಯ ಗತಾಯ ಗೆಲುವು ಸಾಧಿಸಬೇಕೆಂದು ಪಣತೊಟ್ಟಿರುವ ಶಾಸಕರು ವಿವಿಧ ಅಭಿವೃದ್ಧಿ ಕಾಮಗಾರಿಗಳ ಮೂಲಕ ಹಳ್ಳಿಗಳಲ್ಲಿ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ಹುರುಪು ಹೆಚ್ಚಿಸಿ, ಮತದಾರರ ಮನಸ್ಸು ಗೆಲ್ಲಲು ಹೊರಟಿದ್ದು ವಿರೋಧಿಗಳ ನಿದ್ದೆಗೆಡಿಸುವಲ್ಲಿ ಕಾರ್ಯೋನ್ಮುಕರಾಗಿದ್ದು ಚುನಾವಣಾ ರಣ ಕಣ ರಂಗೇರಿಸುವಲ್ಲಿ, ಚುನಾವಣಾ ಕಾವು ಮತ್ತಷ್ಟು ರಂಗೇರಿದೆ.
ಎಚ್ಎನ್ ವ್ಯಾಲಿ ಪೈಪ್ ಲೈನ್ ಅಳವಡಿಕೆ ಕಾಮಗಾರಿ ವೀಕ್ಷಣೆ
ಬೆಂಗಳೂರು ನಗರದ ನೀರನ್ನು ಸಂಸ್ಕರಿಸಿ ಬಾಗೇಪಲ್ಲಿ ತಾಲೂಕಿನ ವಿವಿಧ ಕೆರೆಗಳನ್ನು ತುಂಬಿಸುವ ಹೆಚ್ ಎನ್ ವ್ಯಾಲಿ ಯೋಜನೆಯ ಪೈಪ್ ಲೈನ್ ಅಳವಡಿಕೆ ಕಾಮಗಾರಿ ಪ್ರಾರಂಭ ಮಾಡಲಾಗಿದ್ದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹತ್ತಾರು ಕೋಟಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ
ಮಾರ್ಚ್ 22 ರಂದು ಬಾಗೇಪಲ್ಲಿ ಪಟ್ಟಣದ ನ್ಯಾಷನಲ್ ಕಾಲೇಜು ಬಳಿಯಿಂದ ಯಲ್ಲಂಪಲ್ಲಿ ರಸ್ತೆಗೆ 3 ಕೋಟಿ ರೂಪಾಯಿ ವೆಚ್ಚದ ಡಾಂಬರಿಕರಣಕ್ಕೆ ಗುದ್ದಲಿ ಪೂಜೆ, ಕಾರಕೂರು ಗ್ರಾಮಕ್ಕೆ 50 ಲಕ್ಷ ರೂಪಾಯಿ ರಸ್ತೆ ಅಭಿವೃದ್ಧಿ, ಪಾತಪಾಳ್ಯ ಚೇಳೂರು ರಸ್ತೆ ಅಭಿವೃದ್ಧಿಗೆ 2 ಕೋಟಿ ರೂಪಾಯಿ, ಘಂಟವಾರಪಲ್ಲಿಯ ಶಾಲೆಯ ಸಮಗ್ರ ಅಭಿವೃದ್ಧಿಗಾಗಿ 65 ಲಕ್ಷ ರೂಪಾಯಿ, ಕ್ಷೇತ್ರದ ವಿವಿಧೆಡೆ ಸಿಸಿ ರಸ್ತೆಗಳ ಅಭಿವೃದ್ಧಿಗಾಗಿ ಕೋಟಿ ಕೋಟಿ ವೆಚ್ಚದ ಯೋಜನೆಗಳಿಗೆ ಚಾಲನೆ ನೀಡುವಲ್ಲಿ ಬ್ಯುಸಿಯಾಗಿದ್ದಾರೆ.
ಶಾಸಕರ ಎದುರಾಳಿಗಳ ಭರ್ಜರಿ ಪ್ರಚಾರ ಕಡಿಮೆ ಇಲ್ಲ
ಕಳೆದ 20 ದಿನಗಳಲ್ಲಿ 10 ಕೋಟಿಗೂ ಹೆಚ್ಚಿನ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿರುವುದು ಕ್ಷೇತ್ರದಲ್ಲಿ ಕುತೂಹಲ ಮೂಡಿಸಿ ಹಾಲಿ ಶಾಸಕರು ಕ್ಷೇತ್ರದಲ್ಲಿ ಕಾಮಗಾರಿಗಳಿಗೆ ವೇಗ ನೀಡುತ್ತಿದ್ದರೆ, ಅನ್ಯ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳು ಸಹ ತಮ್ಮ ಸ್ವಂತ ಖರ್ಚಿನಲ್ಲಿ ಆರೋಗ್ಯ ತಪಾಸಣಾ ಶಿಬಿರ, ಶ್ರೀನಿವಾಸ ಕಲ್ಯಾಣೋತ್ಸವ, ಕ್ಷಯ ರೋಗಿಗಳಿಗೆ ನ್ಯೂಟ್ರೀಷಿಯನ್ ಪುಡ್ ವಿತರಣೆ, ಯುಗಾದಿ ಹಬ್ಬದ ಕಿಟ್ ವಿತರಣೆ, ಪುಣ್ಯ ಕ್ಷೇತ್ರಗಳಿಗೆ ಪ್ರವಾಸ ಭಾಗ್ಯ, ಬಾಗೀನ ಹೆಸರಲ್ಲಿ ಸೀರೆ, ಕುಕ್ಕರ್ ವಿತರಣೆ ಸೇರಿ ನಾನಾ ವಿಧದ ಸಮಾಜಸೇವೆಯಲ್ಲಿ ತೊಡಗಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಕಾವು
ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕ ಎನ್.ಸಂಪಗಿ ಈಗಾಗಲೇ ಕ್ಷೇತ್ರವ್ಯಾಪ್ತಿ ಚುನಾವಣಾ ಸಿದ್ಧತೆಗಾಗಿ ಇತ್ತೀಚಿಗೆ ಬಾಗೇಪಲ್ಲಿ ಪಟ್ಟಣದ ರಾಮಕೃಷ್ಣ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಆತ್ಮೀಯರ ಬೃಹತ್ ಸಮಾವೇಶದಲ್ಲಿ ಮಾತನಾಡಿ ವಿಧಾನಸಭೆ ಕ್ಷೇತ್ರದ ಉಳಿವಿಗಾಗಿ ಹಾಗೂ ಸಮಗ್ರ ಅಭಿವೃದ್ಧಿಗಾಗಿ ಕಾಂಗ್ರೆಸ್ ಟಿಕೆಟ್ ನೀಡಿ ಇಲ್ಲವೆ ಬಂಡಾಯ ಬಾವುಟ ಹಾರಿಸುವ ಸೂಚನೆ ನೀಡಿದ್ದು ಪಕ್ಷದ ವತಿಯಿಂದ ಟಿಕೆಟ್ ಸಿಗದಿದ್ದ ಪಕ್ಷದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಮಾತಾಡಿದ್ದು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಹಾಲಿ ಶಾಸಕರಿಗಾ ? ಅಥವಾ ಮಾಜಿ ಶಾಸಕರಿಗಾ ? ಎಂಬ ಕುತೂಹಲ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮೂಡಿಸಿದೆ.
ಟಿಕೆಟ್ ಸಿಗುವ ಭರವಸೆ
ಕಳೆದ 20 ವರ್ಷಗಳಿಂದ ಕ್ಷೇತ್ರದಲ್ಲಿ ಅನೇಕ ಸಮಾಜ ಸೇವೆಗಳ ಮೂಲಕ ಮನೆ ಮನೆಗೂ ಪರಿಚಿತರಾಗಿರುವ ಹಾಲಿ ಶಾಸಕರಿಗೆ ಟಿಕೆಟ್ ಬಹುತೇಕ ಖಚಿತ ಎಂದು ಹೇಳುತ್ತಿರುವುದು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನತ್ತ ಚಿತ್ತ ನೆಟ್ಟಿದ್ದಲ್ಲದೆ. ಕ್ಷೇತ್ರದಲ್ಲಿ 20 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಗಳ ಮೂಲಕ ರಾಜ್ಯ ಮಟ್ಟದ ನಾಯಕರ ಮೂಲಕ ಪ್ರಚಾರ ಹಾಗೂ ಬೆಂಬಲ ಪಡೆದಿರುವುದು ಹಾಲಿ ಶಾಸಕ ಎಸ್.ಎನ್. ಸುಬ್ಬರೆಡ್ಡಿ ಅವರ ಹುಮ್ಮಸ್ಸು ಇಮ್ಮುಡಿಗೊಂಡಿದೆ.












Click it and Unblock the Notifications