ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆ ಉಳ್ಳ ಗುಡಿಬಂಡೆ ಬಗ್ಗೆ ನಿಮಗೆಷ್ಟು ಗೊತ್ತು?
ಚಿಕ್ಕಬಳ್ಳಾಪುರ ಜನವರಿ 27: ಇದು ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆ ಉಳ್ಳ ಊರು. 16ನೇ ಶತಮಾನದಲ್ಲಿ ವಿಜಯನಗರ ವಂಶಕ್ಕೆ ಸೇರಿದ ಹಾವಳಿ ಬೈರೇಗೌಡನಿಂದ ನಿರ್ಮಾಣವಾದ ಸುರಸದ್ಮಗಿರಿಯ ಏಳು ಸುತ್ತಿನ ಕೋಟೆ. ಅಖಂಡ ಭಾರತದ ಭೂಪಟ ಹೋಲುವ ಅಮಾನಿಬೈರಸಾಗರ ಕೆರೆ, ಶ್ರೀರಾಮನಿಂದ ಪ್ರತಿಷ್ಠಾಪಿಸಲ್ಪಟ್ಟ ರಾಮೇಶ್ವರ ದೇವಾಲಯ ಹಾಗೂ ವಿಶ್ವಾಮಿತ್ರರಿಂದ ಪ್ರತಿಷ್ಠಾಪಿಸಲ್ಪಟ್ಟ ಪಾರ್ವತಿ ದೇವಾಲಯವನ್ನ ಹೊಂದಿರುವ ಪಂಚಗಿರಿಗಳ ಮಧ್ಯದಲ್ಲಿ ಇರುವ ಪಟ್ಟಣ ಗುಡಿಬಂಡೆ.
ಅಷ್ಟಕ್ಕೂ ಈ ಗುಡಿಬಂಡೆ ಊರಿನ ಬಗ್ಗೆ ನಾವಿಲ್ಲಿ ಮಾತನಾಡುತ್ತಿರುವುದೇಕೆ ಗೊತ್ತಾ? ಇಲ್ಲಿನ ವಿಶೇಷತೆ ಹಾಗೂ ಐತಿಹಾಸಿಕ ಸ್ಥಳಗಳನ್ನು ಪರಿಚಯ ಮಾಡಿಕೊಳ್ಳುವ ದೃಷ್ಟಿಯಿಂದ. ಹೌದು... ಗುಡಿಬಂಡೆ ಹೆಸರೇ ಹೇಳುವಂತೆ ಇಲ್ಲಿ ಗುಡಿಯ ಮೇಲೊಂದು ಬಂಡೆ ಇದೆ. ಸಾಮಾನ್ಯವಾಗಿ ಬೃಹತ್ ಬಂಡೆಗಳ ಮೇಲೆ ದೇವಸ್ಥಾನಗಳಿರುವುದನ್ನು ನಾವು ಕಾಣುತ್ತೇವೆ. ಆದರೆ ಇಲ್ಲಿ ಗುಡಿಯ ಮೇಲೆ ಬಂಡೆ ಇರುವುದು ವಿಶೇಷ.

ಈ ಗುಡಿಯಲ್ಲಿ ನರಸಿಂಹ ದೇವರನ್ನು ಪೂಜಿಸಲಾಗುತ್ತದೆ. ಈ ಗುಡಿಯ ಮೇಲೆ ಬೃಹದಾಕಾರದ ಬಂಡೆ ಮೇಲ್ಛಾವಣಿಯಂತಿದೆ. ಹೀಗಾಗಿ ಗುಡಿಯ ಮೇಲೆ ಬಂಡೆ ಇರುವುದರಿಂದ ಗುಡಿಬಂಡೆ ಎಂದು ಈ ಊರಿಗೆ ಕರೆಯಲಾಗುತ್ತದೆ.
ಗುಡಿಬಂಡೆ ಪಟ್ಟಣದ ಉತ್ತರ ದಿಕ್ಕಿನಲ್ಲಿ ಭವ್ಯವಾದ ಕೋಟೆಯನ್ನು ಹೊಂದಿರುವ ಸುರಸದ್ಮಗಿರಿ ಬೆಟ್ಟವು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿನ ಅತಿದೊಡ್ಡ ಶಿಖರಗಳಲ್ಲಿ ಎರಡನೆಯದಾಗಿದ್ದು ಸುಮಾರು 888 ಅಡಿಗಳ ಎತ್ತರವಾಗಿದೆ. ಆಕರ್ಷಕವಾಗಿ ಕಂಗೊಳಿಸುವ ಸುರಸದ್ಮಗಿರಿ ಬಹಳಷ್ಟು ಐತಿಹಾಸಿಕ ಹಿನ್ನಲೆ ಹೊಂದಿರುವ ಬಗ್ಗೆ ಬ್ರಹ್ಮಾಂಡ ಪುರಾಣದಲ್ಲಿ ಉಲ್ಲೇಖವಿರುವುದು ತಾಳೆ ಗ್ರಂಥಗಳಲ್ಲಿ ತಿಳಿದು ಬಂದಿದೆ. ರೋಮ ಋಷಿ ಮತ್ತು ಯುಧಿಷ್ಟರ ನಡುವಿನ ಸಂವಾದ ರೂಪದಲ್ಲಿ ಸುರಸದ್ಮಗಿರಿ ಮಹಾತ್ಮ್ಯಂ ಎಂದು ಹೆಸರಿಸಲಾಗಿದೆ.

ದೇವತೆಗಳ ವಾಸಸ್ಥಾನ:-
ಬ್ರಹ್ಮಾಂಡ ಪುರಾಣದ ಪ್ರಕಾರ ಸುರಸದ್ಮಗಿರಿ ಇದು ದೇವತೆಗಳ ವಾಸ ಸ್ಥಾನ, ಸುರ ಎಂದರೆ ದೇವತೆಗಳೆಂದು, ಸದ್ಮ ಎಂದರೆ ನಿವಾಸ ಎಂದು ದೇವತೆಗಳು ವಾಸಿಸುವ ಸ್ಥಳ ಎಂದು ಅರ್ಥೈಸಬಹುದು. ಗುಡಿಬಂಡೆ ಪಟ್ಟಣವು ಸುತ್ತಲೂ ಬೆಟ್ಟಗಳಿಂದ ಆವೃತವಾಗಿದ್ದು, ಸಪ್ತಗಿರಿ ಸಾಲು ಪಂಚಗಿರಿಗಳ ಪ್ರಮುಖ ಬೀಡು ಎಂದು ಪ್ರಸಿದ್ದಿ ಪಡೆದಿದೆ.
ಪಂಚಗಿರಿಗಳು :-
ಇದು ನಂದಿಬೆಟ್ಟ(ನಂದಿಗಿರಿ) ಸಾಲಿನಲ್ಲಿದೆ. ಇಲ್ಲಿ ವಿದ್ಯಾಗಿರಿ, ಕೂರ್ಮಗಿರಿ(ಎಲ್ಲೋಡು), ವರಾಹಗಿರಿ(ವರ್ಲಕೊಂಡ), ಧೇನುಗಿರಿ(ಆವುಲಬೆಟ್ಟ), ಸುರಸದ್ಮಗಿರಿ(ಗುಡಿಬಂಡೆ) ಎಂಬ ಪಂಚಗಿರಿಗಳು ಇವೆ.

ಪಂಚಗಿರಿ, ಪಂಚ ದೇವಾಲಯಗಳು :-
ಈ ಪಂಚಗಿರಿಗಳು ಪ್ರಸಿದ್ಧ ಯಾತ್ರಾ ಸ್ಥಳವಾಗಿವೆ. ಸುರಸದ್ಮಗಿರಿಯಲ್ಲಿ ಶ್ರೀ ರಾಮೇಶ್ವರ ಸ್ವಾಮಿ, ಕೂರ್ಮಗಿರಿ ಎಲ್ಲೋಡಿನಲ್ಲಿದ್ದು ಇಲ್ಲಿ ಶ್ರೀ ಆದಿನಾರಾಯಣ ಸ್ವಾಮಿಯ ಉದ್ಭವ ಮೂರ್ತಿ, ಧೇನುಗಿರಿ ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ ಬಳಿ ಇದ್ದು ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಾಸ್ಥಾನ, ವರ್ಲಕೊಂಡ ಬಳಿಯ ವರಾಹಗಿರಿಯಲ್ಲಿ ರಾಮಾಲಯ, ಹಾಗೂ ವಿದ್ಯಾಗಿರಿಯಲ್ಲಿ ಗುರುಕುಲ ಇದ್ದು ಋಷಿ ಮುನಿಗಳು ವಿಧ್ಯೆದಾನ ಮಾಡುತ್ತಿದ್ದ ಸ್ಥಳ. ಆದ್ದರಿಂದ ಇದನ್ನು ವಿಧ್ಯಾಗಿರಿ ಎಂದು ಕರೆಯುತ್ತಾರೆ.
ಈ ಸ್ಥಳದಲ್ಲಿಯೇ ವಾಸಿಸಬೇಕೆಂದು ನಿರ್ಧರಿಸಿ ಸುತ್ತಲಿನ ಗ್ರಾಮಸ್ಥರನ್ನು ಕರೆಸಿ ಇಲ್ಲಿನ ಗ್ರಾಮದ ಉಸ್ತುವಾರಿಯನ್ನು ನೋಡಿಕೊಳ್ಳಲು ತಿಳಿಸಿ ಒಪ್ಪಿಸಿದನು. ಬೈರೇಗೌಡನಿಗೆ ನಾಲ್ಕು ಗಂಡು ಮಕ್ಕಳಿದ್ದರು. ದೊಡ್ಡೇಗೌಡ, ಚಿಕ್ಕೇಗೌಡ, ದೇವೇಗೌಡ,ಬೈರೇಗೌಡ. ನಾಲ್ಕು ಮಕ್ಕಳು ದೊಡ್ಡವರಾದ ಮೇಲೆ ತಮ್ಮ ಶೌರ್ಯ ಸಾಹಸಗಳಿಂದ ತಮ್ಮದೆ ಆದ ಪ್ರಾಂತ್ಯಗಳನ್ನು ಸ್ಥಾಪಿಸಿಕೊಂಡರು. ಬೈರೇಗೌಡ ಗುಡಿಬಂಡೆ ಪ್ರದೇಶವನ್ನು ಪೆನುಗೊಂಡ ಅರಸರಿಂದ ಒಂದು ಸಾವಿರದ ಎಂಟುನೂರು ವರಹಗಳಿಂದ ಖರೀದಿಸಿ ತನ್ನದಾಗಿಸಿಕೊಂಡನೆಂದು ಕಥೆ ತಿಳಿಸುತ್ತದೆ. ಹೀಗೆ 500 ವರ್ಷಗಳ ಹಿಂದೆ ಗುಡಿಬಂಡೆ ಇತಿಹಾಸ ಬೈರೇಗೌಡರಿಂದ ಪ್ರಾರಂಭವಾಯಿತೆಂದು ತಿಳಿಯುತ್ತದೆ.

ರಕ್ಷಣೆಗಾಗಿ ಕೋಟೆ ನಿರ್ಮಾಣ :-
ಗುಡಿಬಂಡೆಯ ಪಾಳೇಗಾರಿಕೆಯನ್ನು ಪಡೆದುಕೊಂಡ ಬೈರೇಗೌಡ, ಶತ್ರುಗಳಿಂದ ರಕ್ಷಣೆ ಪಡೆಯಲು ಊರಿನ ಸುತ್ತಲೂ ಭದ್ರವಾದ ಕಂದಕಗಳನ್ನು ನಿರ್ಮಿಸಿ ಸುರಸದ್ಮಗಿರಿಯ ಮೇಲೆ ಏಳು ಸುತ್ತಿನ ಭದ್ರವಾದ ಕೋಟೆಯನ್ನು ನಿರ್ಮಿಸಿದ್ದಾನೆ. ರಾಮೇಶ್ವರನಿಗೆ ದೇವಸ್ಥಾನವನ್ನು ಮತ್ತು ಹರಿಹರರಲ್ಲಿ ಭೇದವಿಲ್ಲವೆಂದು ತೋರಿಸಲು ಒಂದು ಶ್ರೀ ಕೃಷ್ಣನ ದೇವಾಲಯವನ್ನು ಸಹ ಈತನ ಕಾಲದಲ್ಲಿಯೇ ನಿರ್ಮಿಸಲಾಯಿತು.
ಇತಿಹಾಸ ಹೇಳುವ ಶಿಲಾ ಶಾಸನಗಳಿಲ್ಲ :-
ಬೈರೇಗೌಡ ನಿರ್ದಿಷ್ಟ ಕಾಲವನ್ನು ಸ್ಪಷ್ಟಪಡಿಸಲು ಯಾವುದೇ ಶಿಲಾ ಶಾಸನಗಳು ಆಧಾರಗಳು ಬೆಟ್ಟದಲ್ಲಿ ಈವರೆಗೂ ಪತ್ತೆಯಾಗಿಲ್ಲ. ಅದರ ಬಗ್ಗೆ ವಿಶ್ಲೇಷಿಸುವುದು ಕಷ್ಟಕರ ವೆನ್ನಿಸುತ್ತಿದೆ. ಒಟ್ಟಿನಲ್ಲಿ ಸುರಸದ್ಮಗಿರಿ ಬೆಟ್ಟ ಒಂದು ಭವ್ಯ ಕೋಟೆಯನ್ನು ಹೊಂದಿರುವುದು, ಇಲ್ಲಿ ಮಳೆ ನೀರು ಸಂಗ್ರಹಿಸಲು ಆ ದಿನಗಳಲ್ಲಿ ವ್ಯವಸ್ಥಿತ ರೀತಿಯಲ್ಲಿ ಯೋಜನೆ ಮಾಡಿದ್ದಾರೆ. ಆ ಕಾಲದಲ್ಲೇ ಮಳೆ ನೀರು ಕೊಯ್ಲು ಪದ್ದತಿಯನ್ನು ಅಳವಡಿಸಿಕೊಂಡು ಒಂದು ಕೊಳದಿಂದ ಮತ್ತೋಂದು ಕೊಳಕ್ಕೆ ನೀರು ಹರಿಯುವ ವ್ಯವಸ್ಥೆ ಮಾಡಲಾಗಿದೆ.
19 ದೋಣೆಗಳ ನಿರ್ಮಾಣ :-
ಸುರಸದ್ಮ ಗಿರಿಯಲ್ಲಿ ಭವ್ಯವಾದ ಕೋಟೆಯನ್ನು ಕಟ್ಟುವ ಜೊತೆಗೆ ಕುಡಿಯುವ ನೀರಿಗಾಗಿ ಬೆಟ್ಟದಲ್ಲಿ ಒಟ್ಟು 19 ದೊಣೆಗಳನ್ನು ನಿರ್ಮಾಣ ಮಾಡಲಾಗಿದೆ. ಇವುಗಳಲ್ಲಿ ಪ್ರಮುಖವಾಗಿ ರಾಮರದೊಣೆ, ಸೀತಾದೊಣೆ, ಲಕ್ಷ್ಮಣದೊಣೆ, ನೇರಳೆಮರದ ದೊಣೆ, ಜೇನುತುಪ್ಪದ ದೊಣೆ, ಅಂಜನೇಯ ದೊಣೆ, ಉಪ್ಪು ದೊಣೆ ಹಾಗೂ ಆನೇಕಾಲಿನ ದೊಣೆ ಗಳಿವೆ.
ರಾಮರ ದೊಣೆ ಪ್ರಮುಖ ನೀರಿನ ಮೂಲವಾಗಿದ್ದು ಇಲ್ಲೀನ ರಾಮೇಶ್ವರ ದೇವರ ಪೂಜೆಗೆ ಈ ನೀರನ್ನೇ ಬಳಸಲಾಗುತ್ತದೆ. ಬೆಟ್ಟದ ಮೇಲ್ಭಾಗದಲ್ಲಿ ರಾಮೇಶ್ವರ ಜೋತಿರ್ಲಿಂಗವಿದೆ ಪಕ್ಕದಲ್ಲೇ ಪಾರ್ವತಿ ದೇವಾಸ್ಥಾನವಿದೆ ಇದು ಪ್ರಾಚೀನ ದೇವಾಲಯಗಳಲ್ಲೊಂದು, ಇದು ದಂಡಕಾರಣ್ಯ ಪ್ರದೇಶವಾಗಿದ್ದು ಈ ಎಲ್ಲ ಪ್ರದೇಶಗಳಲ್ಲಿ ವನವಾಸದ ಕಾಲದಲ್ಲಿ ಶ್ರೀ ರಾಮ, ಸೀತೆ ಹಾಗೂ ಲಕ್ಷ್ಮಣರು ಸಂಚರಿಸುತ್ತಿದ್ದರು.
ಸ್ವಚ್ಛತೆಯನ್ನು ಕಾಪಾಡ ಬೇಕಿದೆ :-
ರಾಮರದೋಣಿಯಲ್ಲಿನ ನೀರು ಕುಡಿಯಲು ಉತ್ತಮವಾಗಿದೆ. ಬಂಡೆಗಳ ನಡುವಿನ ನೀರು ಕುಡಿದರೆ ಹಲವು ರೋಗ ರುಜಿನಗಳಿಗೆ ಔಷಧಿ ಎಂದು ಹೇಳಲಾಗುತ್ತದೆ ಹಾಗಾಗಿ ಸಾರ್ವಜನಿಕರು ನೀರಿನಲ್ಲಿ ಪ್ಲಾಸ್ಟಿಕ್, ತ್ಯಾಜ್ಯ ಹಾಕಿ ಮಲಿನಗೊಳಿಸದೇ ಸ್ವಚ್ಛತೆಯನ್ನು ಕಾಪಾಡಿದರೆ ಪ್ರವಾಸಿಗರಿಗೆ ಅನುಕೂಲವಾಗಲಿದೆ.
ಕೆಲ ಕಾಲ ಇಲ್ಲಿ ತಂಗಿದ್ದು ಲಂಕಾದ ರಾವಣನನ್ನು ವಧಿಸಿದ ನಂತರ ಬ್ರಹ್ಮ ಹತ್ಯಾ ದೋಷದ ನಿವಾರಣೆಗೆ ಶ್ರೀರಾಮ ನೂರಾ ಎಂಟು ಲಿಂಗಗಳನ್ನು ಪ್ರತಿಷ್ಟಾಪಿಸಿದ್ದು ಅದರಲ್ಲಿ ಒಂದನ್ನು ಸುರಸದ್ಮಗಿರಿಯಲ್ಲಿ ಪ್ರತಿಷ್ಟಾಪಿಸಿದ್ದ ಎಂದು ಸ್ಥಳ ಪುರಾಣ ತಿಳಿಸುತ್ತದೆ.
ಸುರಸದ್ಮಗಿರಿ ಬೆಟ್ಟವು ಐತಿಹಾಸಿಕ ಪರಂಪರೆಯನ್ನು ಹೊಂದಿದ್ದರು ಮಲತಾಯಿ ದೊರಣೆಯಿಂದ ಇಂದಿಗೂ ಅಭಿವೃದ್ಧಿಯಲ್ಲಿ ಕುಂಠಿತಗೊಂಡಿದೆ ಹಾಗೂ ರಾಜ್ಯದ ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ರಾಜ್ಯ ಸರ್ಕಾರ ಇದರ ಬಗ್ಗೆ ಕಾಳಜಿವಹಿಸಿ ಪ್ರವಾಸೋದ್ಯೋಮ ಸ್ಥಳವಾಗಿ ಅಭಿವೃದ್ಧಿ ಮಾಡಬೇಕೆಂಬುದೇ ಪಟ್ಟಣದ ನಿವಾಸಿಗಳ ಒಕ್ಕೊರಳಿನ ಕೂಗು.
ಹಾವಳಿ ಬೈರೇಗೌಡರು 16ನೇ ಶತಮಾನದಲ್ಲೇ ಅಖಂಡ ಭಾರತ ಕಲ್ಪನೆಯನ್ನು ಹೊಂದಿ ನಿರ್ಮಾಣ ಮಾಡಿರುವ ಅಮಾನಿ ಬೈರಸಾಗರ, ಹಾಗೂ ಐತಿಹಾಸಿಕ ಮತ್ತು ಚಾರಿತ್ರಿಕ ಹಿನ್ನೆಲೆಯನ್ನು ಹೊಂದಿರುವಂತಹ ಗುಡಿಬಂಡೆಯನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಮಾಡಿ ಈ ಪ್ರದೇಶವನ್ನು ಅಭಿವೃದ್ಧಿ ಮಾಡುವ ಜೊತೆಗೆ ಮುಂದಿನ ಪೀಳಿಗೆಗೆ ಈ ಪ್ರದೇಶದ ಇತಿಹಾಸವನ್ನು ಪರಿಚಯಿಸುವ ಜವಾಬ್ದಾರಿ ಸರಕಾರದ್ದು ಎಂದು ಗುಡಿಬಂಡೆಯ ಪ್ರಸಿದ್ದ ಪುರೋಹಿತರು ಹಾಗೂ ಉಪನ್ಯಾಸಕರಾದ ಸ.ನಾ. ನಾಗೇಂದ್ರ ಭಟ್ ಹೇಳಿದರು.












Click it and Unblock the Notifications