ಹೃದಯಾಘಾತ; ಚಿಕ್ಕಬಳ್ಳಾಪುರ ಜನಪ್ರಿಯ ವೈದ್ಯ ಅನಿಲ್ ಕುಮಾರ್ ನಿಧನ
ಚಿಕ್ಕಬಳ್ಳಾಪುರ, ಏಪ್ರಿಲ್ 16: ಆರೋಗ್ಯ ಇಲಾಖೆಯೊಂದಿಗೆ ಕೊರೊನಾ ವಿರುದ್ಧ ಹೋರಾಡಲು ಕೈಜೋಡಿಸಿದ್ದ ಚಿಕ್ಕಬಳ್ಳಾಪುರದ ಜನಪ್ರಿಯ ವೈದ್ಯ, ಜಿಲ್ಲಾ ಆಸ್ಪತ್ರೆ ಶಸ್ತ್ರಚಿಕಿತ್ಸಕ ಡಾ.ಅನಿಲ್ ಕುಮಾರ್ ಅವರು ಇಂದು ಮಧ್ಯಾಹ್ನ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಡಾ.ಅನಿಲ್ ಕುಮಾರ್ ಅವರು ಸುಮಾರು ಎಂಟು ತಿಂಗಳಿನಿಂದ ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕೊರೊನಾ ಸೋಂಕು ತಡೆಯುವ ಉದ್ದೇಶದೊಂದಿಗೆ ಜಿಲ್ಲಾ ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸಿ ನಗರದ ಹಳೆ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್-19 ಆಸ್ಪತ್ರೆ ತೆರೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಕೊರೊನಾ ನಿರ್ಮೂಲನೆಗೆ ಸಾಕಷ್ಟು ಶ್ರಮ ವಹಿಸಿ ಕಾರ್ಯನಿರ್ವಹಿಸಿದ್ದ ಅನಿಲ್ ಕುಮಾರ್ ಅವರಿಗೆ ಇಂದು ಮಧ್ಯಾಹ್ನ ತೀವ್ರ ಹೃದಯಾಘಾತವಾಗಿದ್ದು, ಮೃತ ಪಟ್ಟಿದ್ದಾರೆ.

ಡಾ. ಅನಿಲ್ ಕುಮಾರ್ ಅವರ ನಿಧನಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಸಂತಾಪ ಸೂಚಿಸಿದ್ದಾರೆ. ಅನಿಲ್ ಕುಮಾರ್ ಅವರ ನಿಧನದಿಂದ ಜಿಲ್ಲೆಗೆ ಹಾಗೂ ವೈದ್ಯಕೀಯ ರಂಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸಂತಾಪ ಸೂಚಿಸಿದ್ದಾರೆ.












Click it and Unblock the Notifications