ರೈತನ ಮೇಲೆ ಎಲ್ಲರೆದುರೇ ಗುಂಡು ಹಾರಿಸಿದ ಮಾಜಿ ಎಂಎಲ್ಸಿ ಸಂಬಂಧಿ
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಕ್ಷರಶಃ ಬಿಹಾರದ ವಾತಾವರಣ ಸೃಷ್ಟಿಯಾಗಿದೆ ಎಂಬ ಆರೋಪ ಕೇಳಿಬಂದಿದೆ. ರಸ್ತೆಯಲ್ಲಿ ವಾಹನ ಓಡಾಟದ ವಿಚಾರಕ್ಕೆ ಮಾರಾಮಾರಿ ನಡೆದಿದೆ. ಈ ವೇಳೆ ವಾಗ್ವಾದ ನಡೆಯುತ್ತಿದ್ದಾಗ ಗಣಿ ಮಾಲೀಕನೊಬ್ಬ ಎಲ್ಲರೆದುರೇ ರೈತನಿಗೆ ಗುಂಡು ಹಾರಿಸಿರುವ ಘಟನೆಗೆ ಜಿಲ್ಲೆಯ ಜನ ಬೆಚ್ಚಿಬಿದ್ದಿದ್ದಾರೆ. ಈ ಘಟನೆ ಜಿಲ್ಲೆಯ ಮಂಚೇನಹಳ್ಳಿಯಲ್ಲಿ ನಡೆದಿದ್ದು, ಗುಂಡು ಹಾರಿಸಿರುವ ವಿಡಿಯೋ ವೈರಲ್ ಆಗಿದೆ. ಮಾಜಿ ಎಂಎಲ್‌ಸಿಯೊಬ್ಬರ ಆಪ್ತರ ಮಾಲೀಕತ್ವದ ಕ್ರಷರ್ ಕಂಪನಿ ವಿಚಾರವಾಗಿ ಈ ದರ್ಪ ಮೆರೆಯಲಾಗಿದೆ ಎಂದು ಆರೋಪಿಸಲಾಗಿದೆ. ಈ ಘಟನೆ ಬೆನ್ನಲ್ಲೇ ಚಿಕ್ಕಬಳ್ಳಾಪುರ ಮಿನಿ ಬಿಹಾರವಾಗುತ್ತಿದೆಯಾ? ಎಂಬ ಪ್ರಶ್ನೆಯನ್ನು ಜನ ಎತ್ತಿದ್ದಾರೆ.
ಒಟ್ಟಾರೆ ಸಿನಿಮೀಯ ರೀತಿಯಲ್ಲಿ ಈ ಮಾರಾಮಾರಿ ನಡೆದಿದ್ದು, . ಕಲ್ಲು ಕ್ವಾರಿ ಕ್ರಷರ್ಗೆ ರಸ್ತೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ ಸ್ಥಳೀಯ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ರಸ್ತೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದಕ್ಕೆ ಮಾಜಿ ಎಂಎಲ್ಸಿ ಸಂಬಂಧಿ ಎನ್ನಲಾದ ಸಕಲೇಶಕುಮಾರ್ ಹಾಡಹಗಲೇ ಎಲ್ಲರೆದುರೇ ಗನ್‌ನಿಂದ ಫೈರಿಂಗ್ ಮಾಡಿದ್ದಾನೆ. ಈ ಘಟನೆ ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ.

ಗಲಾಟೆ ವೇಳೆ ಸಕಲೇಶಕುಮಾರ್ ಮೂರು ಸುತ್ತು ಗುಂಡು ಹಾರಿಸಿದ್ದಾನೆ, ಇದರಲ್ಲಿ ಒಂದು ಗುಂಡು ರವಿ ಎಂಬುವರಿಗೆ ತಗುಲಿದೆ. ಬಳಿಕ ಅವರನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಸಕಲೇಶಕುಮಾರ್ನನ್ನು ಮಂಚೇನಹಳ್ಳಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸಕಲೇಶ ಕುಮಾರ್ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಮಂಚೇನಹಳ್ಳಿ ಪೊಲೀಸ್ ಠಾಣೆ ಮುಂದೆ ಸಾರ್ವಜನಿಕರು ಭಾರಿ ಪ್ರತಿಭಟನೆ ನಡೆಸಿದ್ದಾರೆ.
ರಸ್ತೆ ನಿರ್ಮಾಣಕ್ಕೆ ತಡೆ
ಮಂಚೇನಹಳ್ಳಿ ಗ್ರಾಮದ ಸರ್ವೆ ನಂಬರ್ 188ರಲ್ಲಿ 2.20 ಎಕರೆ ಜಮೀನನ್ನು ಸಾರ್ವಜನಿಕ ರಸ್ತೆಗಾಗಿ ಕಾಯ್ದಿರಿಸುವ ಮೂಲಕ ಈ ಹಿಂದೆ ಜಿಲ್ಲಾಡಳಿತ ಆದೇಶಿಸಿತ್ತು. ಇಲ್ಲಿ ರಸ್ತೆ ನಿರ್ಮಿಸಬಾರದು ಎಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದರು. ಬಳಿ ಪರ, ವಿರೋಧದ ಗಲಾಟೆಗಳು ನಡೆದಿದ್ದವು. ಇದೇ ವಿಚಾರವಾಗಿ ಬುಧವಾರ ರೈತರ ಮೇಲೆ ಗಣಿಗಾರಿಕೆ ನಡೆಸುವ ಸಕಲೇಶ್ ಗುಂಡು ಹಾರಿಸಿದ ಘಟನೆ ಭಾರೀ ಸದ್ದು ಮಾಡಿತ್ತು. ಇಲ್ಲಿನ ಕನಗಾನಕೊಪ್ಪ ಗ್ರಾಮದಲ್ಲಿ ವಿವಾದಕ್ಕೆ ಕಾರಣವಾಗಿರುವ ಈ ರಸ್ತೆ ನಿರ್ಮಾಣ ಕಾರ್ಯಕ್ಕೆ ಪೂರ್ಣವಾಗಿ ತಡೆ ಬಿದ್ದಿದ್ದು, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ಈ ಜಾಗದಲ್ಲಿ ರಸ್ತೆ ನಿರ್ಮಾಣ ರದ್ದು ಮಾಡಿದ್ದಾರೆ.
ಜಮೀನಿನಲ್ಲಿ ರಸ್ತೆ ಮಾಡುವುದರಿಂದ ಪರಿಸರ ನಾಶ, ಸಾರ್ವಜನಿಕರಿಗೆ ಹಾಗೂ ಬೆಳೆಗಳಿಗೂ ಹಾನಿ ಉಂಟಾಗುತ್ತದೆ ಹಾಗಾಗಿ ರಸ್ತೆ ನಿರ್ಮಾಣ ವಿಚಾರವನ್ನು ಕೈಬಿಡಬೇಕು ಎಂದು ಮಂಚೇನಹಳ್ಳಿ ತಹಶೀಲ್ದಾರರಿಗೆ ಮನವಿ ಸಲ್ಲಿಕೆ ಮಾಡಲಾಗಿತ್ತು. ಈ ಮನವಿ ಮೇರೆಗೆ ಚಿಕ್ಕಬಳ್ಳಾಪುರ ಉಪವಿಭಾಗಾಧಿಕಾರಿ ಜಿಲ್ಲಾಧಿಕಾರಿಗೆ ವರದಿ ನೀಡಿದ್ದರು. ಇದನ್ನು ಆಧರಿಸಿ ರಸ್ತೆ ನಿರ್ಮಾಣದ ಆದೇಶವನ್ನು ಜಿಲ್ಲಾಧಿಕಾರಿ ರದ್ದುಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications