ಯುಗಾದಿಗೆ ಚಿಕ್ಕಬಳ್ಳಾಪುರ ಜನತೆಗೆ ಭರ್ಜರಿ ಗಿಫ್ಟ್: ಇಂದಿನಿಂದ BMTC ಬಸ್ ಸೇವೆ ಆರಂಭ, ಇಲ್ಲಿದೆ ವಿವರ
ಚಿಕ್ಕಬಳ್ಳಾಪುರಕ್ಕೆ ಇಂದಿನಿಂದ ಹವಾನಿಯಂತ್ರಿತ ಬಸ್ ಸೇವೆಯನ್ನು ಕಲ್ಪಿಸುವ ಮೂಲಕ ಬಿಎಂಟಿಸಿ ಸೇವೆಯ ಮೂಲಕ ಯುಗಾದಿ ಹಬ್ಬಕ್ಕೆ ವಿಶೇಷ ಕೊಡುಗೆ ನೀಡಿದೆ.
ಚಿಕ್ಕಬಳ್ಳಾಪುರ, ಮಾರ್ಚ್ 21: ಚಿಕ್ಕಬಳ್ಳಾಪುರ ಜಿಲ್ಲೆಯ ಜನರ ಬಹು ದಿನಗಳ ಬೇಡಿಕೆ ಈಡೇರುವ ಸಮಯ ಬಂದಿದೆ. ಬೆಂಗಳೂರು ಮಹಾನಗರ ಪಾಲಿಕೆಯಿಂದ ಚಿಕ್ಕಬಳ್ಳಾಪುರಕ್ಕೆ ಇಂದಿನಿಂದ ಹವಾನಿಯಂತ್ರಿತ ಬಸ್ ಸೇವೆಯನ್ನು ಕಲ್ಪಿಸುವ ಮೂಲಕ ಬಿಎಂಟಿಸಿ ಸೇವೆಯ ಮೂಲಕ ಯುಗಾದಿ ಹಬ್ಬಕ್ಕೆ ವಿಶೇಷ ಕೊಡುಗೆ ನೀಡಿದೆ.
ಈ ಮೂಲಕ ಕಳೆದ ಬಾರಿ ಚಾಲನೆ ದೊರೆಯುವ ಮುನ್ನವೇ ಮುರಿದು ಬಿದ್ದಿದ್ದ ಬಿಎಂಟಿಸಿ ಬಸ್ ಸಂಚಾರವು ಶುಕ್ರವಾರದಿಂದ ಆರಂಭವಾಗಲಿದ್ದು, ಸದ್ಯ ಹವಾ ನಿಯಂತ್ರಿತ ಬಸ್‌ಗಳು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಂಚಾರ ಪ್ರಾರಂಭಿಸಲಿವೆ.

ಬಿಎಂಟಿಸಿ ಬಸ್ ಸೇವೆ ಚಿಕ್ಕಬಳ್ಳಾಪುರಕ್ಕೆ ವಿಸ್ತರಿಸುತ್ತಿದ್ದಂತೆ ಕೆಎಸ್‌ಆರ್‌ಟಿಸಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು. ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ಸುಮಾರು 60 ಕಿ.ಮೀ ಅಂತರವಿದೆ. ಹೀಗಾಗಿ ಬಸ್ ಸಂಚಾರ ವಿಸ್ತರಿಸಲು ಅವಕಾಶ ಇಲ್ಲ ಎಂದು ಕೆಎಸ್‌ಆರ್‌ಟಿಸಿ ಆಕ್ಷೇಪ ವ್ಯಕ್ತಪಡಿಸಿದ್ದರು.
ನಿಯಮದಂತೆ ಬಿಬಿಎಂಪಿ ವ್ಯಾಪ್ತಿಯ 25 ಕಿಮೀ ಮಾತ್ರ ಬಿಎಂಟಿಸಿ ಬಸ್ ಓಡಿಸಲು ಅವಕಾಶ ಇದೆ. ಆದರೆ ಚಿಕ್ಕಬಳ್ಳಾಪುರಕ್ಕೂ ಸಂಚಾರ ವಿಸ್ತರಣೆ ಮಾಡಿರುವ ಹಿನ್ನಲೆ ಆಕ್ಷೇಪ ವ್ಯಕ್ತಪಡಿಸಿದ್ದ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಬಿಎಂಟಿಸಿ ನಡೆಯನ್ನು ಖಂಡಿಸಿದ್ದರು. ಚಿಕ್ಕಬಳ್ಳಾಪುರದಲ್ಲಿ ಬಿಎಂಟಿಸಿ ಸಂಚಾರ ಮಾಡಿದರೆ ಏಕಾಏಕಿ ನಿಗಮದ ಆದಾಯಕ್ಕೆ ಹೊಡೆತ ಬೀಳುವ ಭೀತಿ ಕೆಎಸ್‌ಆರ್‌ಟಿಸಿಗೆ ಎದುರಾಗಿತ್ತು.
ಇದರಿಂದ ಎರಡ್ಮೂರು ತಿಂಗಳಿಂದ ಹಗ್ಗಜಗ್ಗಾಟಕ್ಕೆ ಕೆಎಸ್‌ಆರ್‌ಟಿಸಿ ತಿಲಾಂಜಲಿ ಇಡುವ ಮೂಲಕ ಚಿಕ್ಕಬಳ್ಳಾಪುರ ಜನರ ಬೇಡಿಕೆಗೆ ಸ್ಪಂದಿಸಿದ್ದು, ಪ್ರಸ್ತುತ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಎಸಿ ಬಸ್ ಸಂಚಾರಕ್ಕೆ ಕೆಎಸ್‌ಆರ್‌ಟಿಸಿಯು ಒಪ್ಪಿಗೆ ಸೂಚಿಸಿದೆ.

ಖುಷಿ ಹಂಚಿಕೊಂಡ ಸಚಿವ ಸುಧಾಕರ್
ಕೆಎಸ್‌ಆರ್‌ಟಿಸಿ ಒಪ್ಪಿಗೆ ಸೂಚಿಸಿದ ನಂತರ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿ ಚಿಕ್ಕಬಳ್ಳಾಪುರ ಜನತೆಗೆ ಯುಗಾದಿ ಕೊಡುಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ಸುಗಳನ್ನು ಚಿಕ್ಕಬಳ್ಳಾಪುರಕ್ಕೆ ವಿಸ್ತರಿಸುವ ಜಿಲ್ಲೆಯ ಜನತೆಯ ಬಹುನಿರೀಕ್ಷಿತ ಬೇಡಿಕೆಯಂತೆ ಬಿಎಂಟಿಸಿ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಲಾಗಿದೆ.
ಇನ್ನು ಮುಂದೆ ಬಿಎಂಟಿಸಿ ಬಸ್ಸುಗಳು ನಮ್ಮ ಚಿಕ್ಕಬಳ್ಳಾಪುರಕ್ಕೂ ಸಂಚರಿಸಲಿವೆ. ಇದರಿಂದ ರೈತರು, ವಿದ್ಯಾರ್ಥಿಗಳು, ಸಣ್ಣ ವ್ಯಾಪಾರಸ್ಥರು, ಉದ್ಯೋಗಿಗಳು ಸೇರಿದಂತೆ ದಿನನಿತ್ಯ ಬೆಂಗಳೂರಿಗೆ ಓಡಾಡುವ ಎಲ್ಲ ನಾಗರಿಕರಿಗೂ ಇದರಿಂದ ಅನುಕೂಲವಾಗಲಿದ್ದು, ಜಿಲ್ಲೆಯ ಆರ್ಥಿಕ ಪ್ರಗತಿಗೂ ವೇಗ ದೊರೆಯಲಿದೆ ಎಂದು ಟ್ವೀಟ್ ಮಾಡಿದ್ದಾರೆ. ಸಾರಿಗೆ ಇಲಾಖೆಯ ಯುಗಾದಿ ಉಡುಗೊರೆಗೆ ಚಿಕ್ಕಬಳ್ಳಾಪುರ ಜನತೆ ಸಂತಸ ವ್ಯಕ್ತಪಡಿಸಿದ್ದಾರೆ.
ಬಿಎಂಟಿಸಿ ಪ್ರಕಟಣೆ
ಇನ್ನು ಚಿಕ್ಕಬಳ್ಳಾಪುರಕ್ಕೆ ಬಸ್ ಸಂಚಾರ ವಿಸ್ತರಿಸಿರುವ ಬಗ್ಗೆ ಬಿಎಂಟಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. 'ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕರ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮಾದಾಯಕ ಹಾಗೂ ಮಿತವ್ಯಯ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತದೆ.
ಹೀಗಾಗಿ ಪ್ರಯಾಣಿಕರ ಅನುಕೂಲಕ್ಕಾಗಿ ದಿನಾಂಕ, 21-03-2023ರಿಂದ ಜಾರಿಗೆ ಬರುವಂತೆ ಕೆಂಪೇಗೌಡ ಬಸ್ ನಿಲ್ದಾಣದಿಂದ ಹೆಬ್ಬಾಳ, ಯಲಹಂಕ, ದೇವನಹಳ್ಳಿ ಮಾರ್ಗವಾಗಿ ಚಿಕ್ಕಬಳ್ಳಾಪುರ ಬಸ್ ನಿಲ್ದಾಣಕ್ಕೆ ನೂತನವಾಗಿ ಹವಾನಿಯಂತ್ರಿತ ಸಾರಿಗೆಗಳನ್ನು ಪರಿಚಯಿಸಿ ಪ್ರಾಯೋಗಿಕವಾಗಿ ಕಾರ್ಯಾಚರಣೆ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಎಂಟಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಚಿಕ್ಕಬಳ್ಳಾಪುರ ಬಸ್ ನಿಲ್ದಾಣದಿಂದ ಬೆಂಗಳೂರು ಮೆಜೆಸ್ಟಿಕ್‌ಗೆ ಬೆಳಗ್ಗೆ 8:10, 8:20, ಮಧಾಹ್ನ 12.35, 1:05, ಹಾಗೂ ಸಂಜೆ 7:15, 7.35 ಬಸ್ ಹೊರಡಲಿದೆ. ಮೆಜೆಸ್ಟಿಕ್‌ನಿಂದ ಚಿಕ್ಕಬಳ್ಳಾಪುರಕ್ಕೆ ಬೆಳಗ್ಗೆ 10:25, 11ಕ್ಕೆ ಸಂಜೆ 5:30ಕ್ಕೆ, 5:45ಕ್ಕೆ, ರಾತ್ರಿ 9:15, 9:35ಕ್ಕೆ ಬಸ್ ಹೊರಡಲಿದೆ ಎಂದು ಬಿಎಂಟಿಸಿ ತಿಳಿಸಿದೆ.
ಬೆಂಗಳೂರು ನೆರೆಯ ಜಿಲ್ಲೆಯಾದ ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ಸೇವೆಯನ್ನು ವಿಸ್ತರಿಸಬೇಕು ಎಂಬ ಬೇಡಿಕೆ ದಶಕಗಳಿಂದ ಇತ್ತು. ಕೆಲ ತಿಂಗಳ ಹಿಂದೆ ಬಸ್ ಸೌಲಭ್ಯ ಆರಂಭಿಸಲು ಬಿಎಂಟಿಸಿ ಮುಂದಾಗಿತ್ತು. ಆದರೆ ಕೆಎಸ್‌ಆರ್‌ಟಿಸಿ ವತಿಯಿಂದ ವಿರೋಧ ವ್ಯಕ್ತವಾಗಿತ್ತು. ಇದೀಗ ಸಮಸ್ಯೆಗಳು ನಿವಾರಣೆಯಾಗಿದ್ದು, ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ಸಂಚಾರ ನಡೆಸಲಿದೆ.












Click it and Unblock the Notifications