ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ವಿರುದ್ಧ ಪತ್ರ ಚಳವಳಿ ಪ್ರಾರಂಭಿಸಿದ ಕಾಂಗ್ರೆಸ್, ಪತ್ರದಲ್ಲಿರುವ ಅಂಶಗಳೇನು?
ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಪತ್ರ ಚಳವಳಿ ಪ್ರಾರಂಭಿಸಿದೆ. ಹಾಗಾದರೆ ಪತ್ರದಲ್ಲಿ ಇರುವ ಅಂಶಗಳೇನು ಎನ್ನುವ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಚಿಕ್ಕಬಳ್ಳಾಪುರ, ಫೆಬ್ರವರಿ, 24: ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿಯಿದೆ. ಆದರೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇನ್ನು ಘೋಷಣೆ ಆಗಿಲ್ಲ. ಕ್ಷೇತ್ರದಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ಮಾತ್ರ ಆಡಳಿತ ಪಕ್ಷ ಬಿಜೆಪಿ ವಿರುದ್ಧ ಪತ್ರ ಚಳವಳಿ ಪ್ರಾರಂಭಿಸಿ ಗಮನ ಸೆಳೆದಿದ್ದಾರೆ. ಹಾಗಾದರೆ ಪ್ರಚಾರದಲ್ಲಿ ಬಿಜೆಪಿ, ಜೆಡಿಎಸ್ ವಿರುದ್ಧ ಹೇಗೆ ವಾಗ್ದಾಳಿ ನಡೆಸಿದ್ದಾರೆ ಎಂದು ನೀವೆ ನೋಡಿ.
ಬಿಜೆಪಿಯಿಂದ ಡಾ.ಕೆ.ಸುಧಾಕರ್ ಹಾಗೂ ಜೆಡಿಎಸ್ ಪಕ್ಷದಿಂದ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡರನ್ನು ಅಭ್ಯರ್ಥಿಗಳನ್ನಾಗಿ ಘೋಷಣೆ ಮಾಡಿದ್ದಾರೆ. ಆದರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿ ಯಾರು ಎಂಬುದನ್ನು ಇನ್ನು ಘೋಷಣೆ ಮಾಡದೆ ಇರುವುದು ಕಾರ್ಯಕರ್ತರ, ಮುಖಂಡರ ಗೊಂದಲಕ್ಕೆ ಕಾರಣವಾಗಿದೆ. ಹಾಲಿ ಸಚಿವ ಡಾ.ಕೆ.ಸುಧಾಕರ್ ಚುನಾವಣೆಗೆ ಬಾರಿ ತಯಾರಿ ನಡೆಸುತ್ತಿದ್ದಾರೆ. ಮತದಾರರನ್ನು ಓಲೈಸಲು ಕಾರ್ಯಕ್ರಮಗಳನ್ನು ಕೂಡ ರೂಪಿಸುತ್ತಿದ್ದಾರೆ.
ಇನ್ನು ಜೆಡಿಎಸ್ ಅಭ್ಯರ್ಥಿ ಹಾಗೂ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಕ್ಷೇತ್ರದ ಗ್ರಾಮ ಪಂಚಾಯಿತಿವಾರು ಮನೆಮನೆಗೆ ಭೇಟಿ ನೀಡಿ ಗಮನ ಸೆಳೆದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಅನುಷ್ಠಾನಗೊಳಿಸುವ ಪಂಚರತ್ನ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಹಾಗೆಯೇ ಬಿಜೆಪಿ, ಕಾಂಗ್ರೆಸ್ ಮುಖಂಡರ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ಜನರಲ್ಲಿ ಎರಡು ಪಕ್ಷಗಳ ಬಗ್ಗೆ ಅವಿಶ್ವಾಸ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಭರ್ಜರಿ ಪ್ರಚಾರ
ಕ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಎನ್.ಜಯರಾಂ ಮತ್ತು ಮಂಚೇನಹಳ್ಳಿ ರಾಮಕೃಷ್ಣ ಕರ ಪತ್ರಗಳನ್ನು ಮುದ್ರಿಸಿ ಜನರಿಗೆ ಹಂಚುವ ಕೆಲಸವನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್ ಪ್ರನಾಳಿಕೆಯಲ್ಲಿ ಗೃಹ ಜ್ಯೋತಿ ಯೋಜನೆಯಡಿ 200 ಯೂನಿಟ್ ಉಚಿತ ವಿದ್ಯುತ್, ಗೃಹ ಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ರೂ. ಮತ್ತು ಮನೆ ನಿರ್ವಹಣೆಗೆ ಕಾಂಗ್ರೆಸ್ ಪರಿಹಾರ ಎಂದು ಹೇಳುವ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

ಬಿಜೆಪಿ ಸರ್ಕಾರದ ವಿರುದ್ದ ಕಾಂಗ್ರೆಸ್ ವಾಗ್ದಾಳಿ
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಜನಪರ ಕೆಲಸಗಳನ್ನು ಮಾಡಿಲ್ಲ. ಕೇವಲ ಸುಳ್ಳು ಭರವಸೆಗಳನ್ನು ನೀಡಿ ಜನರನ್ನು ಯಾಮಾರಿಸಿಕೊಂಡು ಬರುತ್ತಿದ್ದಾರೆ. ಗ್ಯಾಸ್ ಬೆಲೆ, ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆ, ಅಡುಗೆ ಎಣ್ಣೆ, ಅಕ್ಕಿ, ವಿದ್ಯುತ್ ದರ, ರಸಗೊಬ್ಬರಗಳ ಬೆಲೆ ಏರಿಕೆ, ಕೃಷಿ ಪರಿಕರಗಳ ಬೆಲೆ ಏರಿಕೆ ಮಾಡಿರುವುದೇ ಸರ್ಕಾರದ ಸಾಧನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಸಿದ್ದಾರೆ.

ಅಕ್ಕಪಕ್ಕದ ರಾಜ್ಯಗಳು ಬಿಜೆಪಿಯನ್ನು ಟೀಕಿಸುತ್ತಿವೆ
ಇನ್ನು ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಚಾರ ತಾಂಡವಾಡುತ್ತಿದೆ. ಶೇ. 40ರಷ್ಟು ಕಮಿಷನ್ ಸರ್ಕಾರ ರಾಜ್ಯದಲ್ಲಿ ಇದೆ ಎಂದು ಅಕ್ಕಪಕ್ಕದ ರಾಜ್ಯಗಳು ಬಿಜೆಪಿಯನ್ನು ಟೀಕಿಸುತ್ತಿವೆ. ಕಳೆದ 2019ರಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಡವರಿಗೆ ನಿವೇಶನ ನೀಡುವುದಾಗಿ ನಂಬಿಸಿದ್ದರು. ಈಗ ಮತ್ತೆ 2023ರಲ್ಲಿ ಚುನಾವಣೆಯ ಸಮಯದಲ್ಲಿ ನಿವೇಶನ ನೀಡುವುದು ಹೇಳಿ ದಾಖಲೆಗಳನ್ನು ಸಂಗ್ರಹಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಮತದಾರರಿಗೆ ಮಂಕು ಬೂದಿ ಎರಚುತ್ತಿದ್ದಾರೆ
ನಗರದಿಂದ ಹೊರಗಿರುವ ಜಾಗಕ್ಕೆ ಭೂ ಪರಿವರ್ತನೆಯಿಲ್ಲ. ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದನೆ ಪಡೆದಿಲ್ಲ. ಗೋಮಾಳ, ಕರಾಬು ಸ್ಥಳಗಳನ್ನು ತೋರಿಸಿ ಮತದಾರರನ್ನು ವಂಚಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಎತ್ತಿನಹೊಳೆ ಎಚ್‌ಎನ್ ವ್ಯಾಲಿ, ಮೆಡಿಕಲ್ ಕಾಲೇಜು, ಗ್ರಂಥಾಲಯ, ಕೆನರಾ ಬ್ಯಾಂಕ್ ತರಬೇತಿ ಕೇಂದ್ರ, ಕನ್ನಡ ಭವನ, ನ್ಯಾಯಾಲಯಗಳು ಸಂಕೀರ್ಣ ನಮ್ಮದೇ ಎಂದು ಬಿಂಬಿಸಿ ಮತದಾರರಿಗೆ ಮಂಕು ಬೂದಿ ಎರಚುವ ಕೆಲಸ ಮಾಡುತ್ತಿದ್ದಾರೆ.
ಸೋಲುವ ಭೀತಿಯಲ್ಲಿ 2 ವರ್ಷಗಳು ಕಳೆದರೂ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗಳನ್ನು ನಡೆಸದೆ ನ್ಯಾಯಾಲಯದಿಂದ ಸರ್ಕಾರ ಛೀಮಾರಿ ಹಾಕಿಸಿಕೊಂಡಿದೆ. ನಗರಸಭೆಯಲ್ಲಿ ಸಾರ್ವಜನಿಕರ ಆಸ್ತಿಗಳಿಗೆ ಖಾತೆ, ಇ ಆಸ್ತಿ ದಾಖಲೆಗಳನ್ನು ನೀಡದೆ ಅಧಿಕಾರಿಗಳು ಅರ್ಜಿದಾರರನ್ನು ಅಲೆದಾಡಿಸುತ್ತಿದ್ದಾರೆ. ನಗರದಲ್ಲಿ ಸ್ವಚ್ಚತೆ ಮರೀಕೆಯಾಗಿದ್ದು ಗೊಬ್ಬುನಾರುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಇನ್ನು ಯುಜಿಡಿ ನಿರ್ವಹಣೆಯಿಲ್ಲದೆ ನಾಗರಿಕರು ಪ್ರತಿನಿತ್ಯ ತೊಂದರೆಗಳನ್ನು ಅನುಭವಿಸುವಂತಾಗಿದೆ. ಬಸವರಾಜ ಬೊಮ್ಮಾಯಿ ಅವರು ಮಂಡಿಸಿರುವ ಬಜೆಟ್ ಮತದಾರರ ಕಿವಿ ಮೇಲೆ ಹೂ ಇಟ್ಟಂತೆ ಕಾಣುತ್ತಿದೆ. ಆದ್ದರಿಂದ ಬಿಜೆಪಿ ಮುಕ್ತ ರಾಜ್ಯ ನಿರ್ಮಿಸಲು ಮತದಾರರು ಕಾಂಗ್ರೆಸ್‌ಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.












Click it and Unblock the Notifications