ಕೊವಿಡ್ 19 ಸೋಂಕಿಗೆ ತಮಿಳುನಾಡಿನ ಕೃಷಿ ಸಚಿವ ಬಲಿ
ಚೆನ್ನೈ, ನ.1: ಕೊರೊನಾವೈರಸ್ ಸೋಂಕಿಗೆ ತಮಿಳುನಾಡಿನ ಕೃಷಿ ಸಚಿವ ಆರ್ ದೊರೈಕಣ್ಣು ಅವರು ಮೃತರಾಗಿದ್ದಾರೆ. ಶನಿವಾರ ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ದೊರೈಕಣ್ಣು ಅವರಿಗೆ 72 ವರ್ಷ ವಯಸ್ಸಾಗಿತ್ತು. ಶನಿವಾರ ರಾತ್ರಿ ಸುಮಾರು 11.15ರ ವೇಳೆಗೆ ದೊರೈಕಣ್ಣು ಅವರು ಮೃತರಾದರು ಎಂದು ಕಾವೇರಿ ಆಸ್ಪತ್ರೆಯ ಕಾರ್ಯಕಾರಿ ನಿರ್ದೇಶಕ ಡಾ. ಅರವಿಂದನ್ ಸೆಲ್ವರಾಜ್ ಅವರು ಪ್ರಕಟಿಸಿದ್ದಾರೆ.
ವಿಳ್ಳುಪುರಂನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಅವರನ್ನು ಅಕ್ಟೋಬರ್ 13ರಂದು ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನ್ಯುಮೋನಿಯಾ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರಿಗೆ ಉತ್ತಮ ಚಿಕಿತ್ಸೆ ನೀಡಲಾಗಿತ್ತು. ವೆಂಟಿಲೇಟರ್ ಸಹಾಯದಿಂದ ಉಸಿರಾಟ ನಡೆಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

2006, 2011 ಹಾಗೂ 2016ರಲ್ಲಿ ತಂಜಾವೂರಿನ ಪಾಪನಾಶಂ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದ ದೊರೈ ಅವರನ್ನು 2016ರಲ್ಲಿ ಜಯಲಲಿತಾ ಅವರು ಕ್ಯಾಬಿನೆಟ್ ಸಚಿವರನ್ನಾಗಿಸಿದ್ದರು.

ತಮಿಳುನಾಡಿನ ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಸೇರಿದಂತೆ ಅನೇಕ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.












Click it and Unblock the Notifications