ಗರ್ಭಿಣಿಗೆ ಎಚ್ ಐವಿ ಸೋಂಕಿನ ರಕ್ತ ನೀಡಿದ ಸರ್ಕಾರಿ ಆಸ್ಪತ್ರೆ!
ಚೆನ್ನೈ, ಡಿಸೆಂಬರ್ 26: ತಮಿಳುನಾಡಿನ ವಿರುಧುನಗರ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 24 ವರ್ಷ ವಯಸ್ಸಿನ ಗರ್ಭಿಣಿಯೊಬ್ಬರಿಗೆ ಎಚ್ ಐವಿ ಸೋಂಕು ತಗುಲಿದ ರಕ್ತವನ್ನು ನೀಡಿದ ಘಟನೆ ಇತ್ತೀಚೆಗೆ ನಡೆದಿದೆ.
ಇದೀಗ ಗರ್ಭಿಣಿ ಎಚ್ಐವಿ ಸೋಂಕಿತೆಯಾಗಿದ್ದು, ಜೀವನ ಪೂರ್ತಿ ನರಕ ಅನುಭವಿಸಬೇಕಾಗಿದೆ. ಆಕೆಯ ಗರ್ಭದಲ್ಲಿರುವ ಶಿಶುವಿಗೂ ಎಚ್ ಐವಿ ತಗುಲುವ ಸಾಧ್ಯತೆ ಇದೆ ಎಂದು ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ.
ಎಚ್ ಐವಿ ತ್ತು ಹೆಪಟೈಟಿಸ್ ಬಿ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ರಕ್ತದಾನ ಮಾಡಿದ್ದ. ಆದರೆ ಆತನ ರಕ್ತವನ್ನು ಸರಿಯಾಗಿ ಪರೀಕ್ಷಿಸದೆ ಗರ್ಭಿಣಿಯೊಬ್ಬರಿಗೆ ನೀಡುವ ಮೂಲಕ ಅಚಾತುರ್ಯವೆಸಗಿದ್ದಾರೆ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ.

ಘಟನೆಯ ನಂತರ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದ್ದು, ಎಚ್ ಐವಿ ಪೀಡಿತ ಮಹಿಳೆಗೆ ಪರಿಹಾರ ಮತ್ತು ಉದ್ಯೋಗ ನೀಡುವ ಭರವಸೆ ನೀಡಲಾಗಿದೆ. ಆದರೆ ಜೀವನ ಪರ್ಯಂತ ಈ ಸೋಂಕಿನಿಂದಲೇ ಉಳಿಯಬೇಕಾದ ಶಾಪದಿಂದ ಮಾತ್ರ ಆಕೆ ಹೊರಬರಲು ಸಾಧ್ಯವಿಲ್ಲ!
ರಕ್ತದಾನ ಮಾಡಿದ ಯುವಕನಿಗೂ ತನಗೆ ಕಾಯಿಲೆ ಇರುವ ಬಗ್ಗೆ ತಿಳಿದಿರಲಿಲ್ಲ. ಇದೀಗ ಆತನಿಗೂ ಚಿಕಿತ್ಸೆ ನೀಡಲಾಗುತ್ತಿದೆ.
ಕಳೆದ ಫೆಬ್ರವರಿಯಲ್ಲಿ ಉತ್ತರ ಪ್ರದೇಶದ ಉನ್ನಾವೋದಲ್ಲಿ ನಕಲಿ ವೈದ್ಯನೊಬ್ಬ ಒಂದೇ ಸಿರೀಂಜಿನಲ್ಲಿ ಹಲವರಿಗೆ ಚುಚ್ಚುಮದ್ದು ನೀಡಿ ಎಚ್ ಐವಿ ಸೋಂಕು ತಗುಲುವಂತೆ ಮಾಡಿದ ಘಟನೆ ವರದಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications