ಕಮಲ್ ಹಾಸನ್‌ಗೆ ಕುಟುಂಬಗಳನ್ನು ಒಡೆಯುವುದಷ್ಟೇ ಗೊತ್ತು: ಪಳನಿಸ್ವಾಮಿ
ಏರಿಯೂರು, ಡಿಸೆಂಬರ್ 18: ತಮಿಳುನಾಡು ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಮಕ್ಕಳ್ ನೀದಿಮಯಂ ಪಕ್ಷದ ಸ್ಥಾಪಕ ಕಮಲ್ ಹಾಸನ್ ಅವರ ವಿರುದ್ಧ ಗುಡುಗಿದ್ದಾರೆ.
ಕಮಲ್ ಹಾಸನ್ ಅವರಿಗೆ ಕುಟುಂಬಗಳನ್ನು ಒಡೆಯುವುದೇ ಕೆಲಸ ಎಂದು ಪಳನಿಸ್ವಾಮಿ ಟೀಕಿಸಿದ್ದಾರೆ.
'ಬಿಗ್ ಬಾಸ್' ರಿಯಾಲಿಟಿ ಶೋ ಉಲ್ಲೇಖಿಸಿ ಕಮಲ್ ಅವರನ್ನು ಪಳನಿಸ್ವಾಮಿ ಈ ರೀತಿ ಟೀಕಿಸಿದ್ದಾರೆ. ಮನೆಗಳನ್ನು ಹಾಳು ಮಾಡುವುದೇ ಅವರ ಕೆಲಸವಾಗಿದೆ, ರಾಜಕೀಯಕ್ಕೆ ಅವರು ಸೂಕ್ತವಲ್ಲ ಎಂದು ಪಳನಿಸ್ವಾಮಿ ಲೇವಡಿ ಮಾಡಿದ್ದಾರೆ.
ಕಮಲ್ ಹಾಸನ್ ಗೆ ಯಾವುದೇ ವಯಕ್ತಿಕ ಪ್ರಭವಾವಿಲ್ಲ, ಮತಗಳನ್ನು ಪಡೆಲು ವಿವಿಧ ರಾಜಕೀಯ ಪಕ್ಷಗಳು ಎಂಜಿಆರ್ ಪರಂಪರೆಯ ಬಗ್ಗೆ ಮಾತನಾಡುತ್ತಾರೆ, ಕಮಲ್ ಕೂಡ ಅದೇ ದಾರಿಯಲ್ಲಿ ನಡೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕಮಲ್ ಹಾಸನ್ ಮಾಜಿ ಮುಖ್ಯಮಂತ್ರಿ ದಿ. ಎಂ.ಜಿ. ರಾಮಚಂದ್ರನ್ ಅವರ ಪರಂಪರೆಯ ಬಗ್ಗೆ ಪ್ರಸ್ತಾಪಿಸಿದ ಹಾಗೂ ಸರ್ಕಾರವನ್ನು ಟೀಕಿಸಿದ ಬೆನ್ನಲ್ಲೇ ಪಳನಿಸ್ವಾಮಿ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ರಾಮಚಂದ್ರನ್ ಅವರಿಂದ ಸ್ಥಾಪಿತವಾಗಿರುವ ಎಐಎಡಿಎಂಕೆ ಮಾತ್ರವೇ ಅವರ ಪರಂಪರೆಗೆ ಹಕ್ಕುದಾರ ಎಂದು ಪ್ರತಿಪಾದಿಸಿರುವ ಪಳನಿಸ್ವಾಮಿ, ಹಾಸನ್ ಅವರು ಬೇರೊಬ್ಬರ ಮಗುವಿಗೆ ನಾಮಕರಣ ಮಾಡಬಹುದೇ ಎಂದು ಪ್ರಶ್ನಿಸಿದ್ದಾರೆ.
ಪಳನಿಸ್ವಾಮಿ ಹೇಳಿಕೆಗೆ ಕಮಲ್ ಹಾಸನ್ ತಿರುಗೇಟು ನೀಡಿದ್ದು, ಮುಖ್ಯಮಂತ್ರಿಯವರೂ ಬಿಗ್ ಬಾಸ್ ರಿಯಾಲಿಟಿ ಶೋ ನೋಡಿದ್ದಾರೆಂದರೆ ಬಹಳ ಸಂತೋಷ ಎಂದು ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications