ತೀರ್ಪು ಕೇಳಲು ತವರಿಗೆ ಜಯಾ 'ಅಮ್ಮ' ಬರಲೇಬೇಕು
ಬೆಂಗಳೂರು, ಸೆ. 26 : ಜಯಲಲಿತಾ ಅಕ್ರಮ ಆಸ್ತಿಗಳಿಕೆ ಪ್ರಕರಣದ ಅಂತಿಮ ತೀರ್ಪನ್ನು ಬೆಂಗಳೂರು ಬಿಟ್ಟು ಬೇರೆಡೆ ನೀಡುವಂತೆ ಜಯಲಲಿತಾ ಪರ ವಕೀಲ ಕೃಷ್ಣಮೂರ್ತಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ. ಹಾಗಾಗಿ ಪ್ರಕರಣದ ಅಂತಿಮ ತೀರ್ಪನ್ನು ಕೇಳಲು ಜಯಲಲಿತಾ ಬೆಂಗಳೂರಿಗೆ ಆಗಮಿಸುವುದು ಅನಿವಾರ್ಯವಾಗಿದೆ.
ಅಲ್ಲದೇ ಅರ್ಜಿದಾರ ಕೃಷ್ಣಮೂರ್ತಿಯನ್ನು ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್, ಜಯಲಲಿತಾ ಅವರಿಗೆ ಯಾರಾದರೂ ಜೀವ ಬೆದರಿಕೆ ಹಾಕಿದ್ದಾರೆಯೇ? ಅಥವಾ ಜಯಲಲಿತಾ ತಮಗೆ ಜೀವ ಭಯವಿದೆ ಎಂದು ಎಲ್ಲಾದರೂ ಹೇಳಿದ್ದರೆ? ರಾಜ್ಯ ಸರ್ಕಾರಗಳು ಸಮರ್ಪಕ ಭದ್ರತೆ ನೀಡುವಲ್ಲಿ ವಿಫಲವಾದ ಉದಾಹರಣೆಗಳಿವೆಯೇ? ಸ್ವತಃ ಜಯಲಲಿತಾರೇ ತಮಿಳುನಾಡು ಗೃಹ ಸಚಿವರಾಗಿದ್ದಾರೆ. ಅಷ್ಟಕ್ಕೂ ಜಯಲಲಿತಾಗೆ ಭದ್ರತೆ ಕೇಳಲು ನೀವು ಯಾರು ಎಂದು ಪ್ರಶ್ನಿಸಿದೆ.(ಬೆಂಗಳೂರಲ್ಲಿ ಜಯಾ 'ಅಮ್ಮ' ಪಡೆಗೆ ನೋ ಎಂಟ್ರಿ?)

ಪ್ರಕರಣಕ್ಕೆ ಸಂಬಂಧಿಸಿರದ ಮೂರನೇ ವ್ಯಕ್ತಿ ಸಲ್ಲಿಸುವ ಅರ್ಜಿಗೆ ಯಾವುದೆ ಮಹತ್ವ ಬರುವುದಿಲ್ಲ. ಅಲ್ಲದೇ ಇದು ಯಾವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೂ ಅಲ್ಲ. ನ್ಯಾಯಾಲಯದ ಸಮಯ ಹಾಳು ಮಾಡುವುದು ಎಷ್ಟು ಸರಿ ಎಂದು ಛೀಮಾರಿ ಹಾಕಿದೆ.
ಮೈಸೂರು ದಸರಾ ಹಿನ್ನೆಲೆಯಲ್ಲಿ ಸಮರ್ಪಕ ಭದ್ರತೆ ಒದಗಿಸಲಾಗಿಲ್ಲ. ಈ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಅವರಿಗೆ ಪತ್ರ ಬರೆದಾಗ ಭದ್ರತೆ ನೀಡಲಾಗಿಲ್ಲ ಎಂಬ ಉತ್ತರ ಬಂದಿದೆ. ತಮಿಳುನಾಡು ಮುಖ್ಯಮಂತ್ರಿ ಪ್ರಾಣದ ಕಾಳಜಿ ಪ್ರತಿಯೊಬ್ಬ ನಾಗರಿಕರಿಗಿದೆ. ಸೂಕ್ತ ಭದ್ರತೆ ಇರದ ಕಾರಣ ತೀರ್ಪು ನೀಡುವ ಜಾಗವನ್ನು ಕರ್ನಾಟಕ ಬಿಟ್ಟು ಬೇರೆಡೆಗೆ ವರ್ಗಾಯಿಸಬೇಕು ಎಂದು ಕೃಷ್ಣಮೂರ್ತಿ ಪರ ವಕೀಲರು ವಾದ ಮಂಡಿಸಿದ್ದರು.(ಜಯಲಲಿತಾ ಅಕ್ರಮ ಆಸ್ತಿಗಳಿಕೆ ಪ್ರಕರಣ ತೀರ್ಪು ಸೆ.27ಕ್ಕೆ)
ಕಾವೇರಿ ನದಿ ನೀರು ಹಂಚಿಕೆ ಕುರಿತು ರಾಜ್ಯಗಳ ನಡುವೆ ಭಿನ್ನಾಭಿಪ್ರಾಯವಿದೆ. ಇದು ನಾಳೆ ಅವಘಡ ಸಂಭವಿಸಲು ಕಾರಣವಾಗಬಹುದು ಎಂದು ವಕೀಲರು ವಾದಿಸಿದ್ದರು.
ಪ್ರಕರಣವೇನು
ಜಯಲಲಿತಾ 1991 ರಿಂದ 1996ರ ಅವಧಿಯಲ್ಲಿ ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 66.65 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂಬ ಆರೋಪದ ಸಂಬಂಧ ದೂರು ದಾಖಲಾಗಿದ್ದು. ಆ ಸಂದರ್ಭದಲ್ಲಿ ಅವರ ಮನೆ ಮೇಲೆ ದಾಳಿ ನಡೆದಿತ್ತು. 1997ರಲ್ಲಿ ದಾಳಿ ನಡೆಸಿದ ಸಂದರ್ಭದಲ್ಲಿ, 800 ಕೆಜಿ ಬೆಳ್ಳಿ, 28 ಕೆಜಿ ಚಿನ್ನ, 750 ಜತೆ ಶೂ, 10,500 ಸೀರೆ, 91 ವಾಚ್ ಸೇರಿದಂತೆ ಇತರೆ ಬೆಲೆಬಾಳುವ ವಸ್ತುಗಳನ್ನು ಜಪ್ತಿ ಮಾಡಲಾಗಿತ್ತು. ಈ ವಸ್ತುಗಳು ಸದ್ಯ ನ್ಯಾಯಾಲಯದ ವಶದಲ್ಲಿವೆ.












Click it and Unblock the Notifications