ನದಿ ಜೋಡಣೆಗೆ ಪರ ನಿಂತ ತಮಿಳರು ಇನ್ನೇನು ಕಾದಿದೆಯೋ!
ಚೆನ್ನೈ,ಜ.7: ಕೇಂದ್ರ ಸರ್ಕಾರ ಕೈಗೊಂಡಿರುವ ಗಂಗಾ ಶುದ್ಧೀಕರಣ ಯೋಜನೆ ಬೆನ್ನಲ್ಲೇ ನೆನೆಗುದಿಗೆ ಬಿದ್ದಿರುವ ನದಿ ಜೋಡಣೆ ಯೋಜನೆಯನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳುವಂತೆ ತಮಿಳುನಾಡು ಸರ್ಕಾರ ಆಗ್ರಹಿಸಿದೆ.
ಯೋಜನೆಗೆ ಸಹಮತ ವ್ಯಕ್ತಪಡಿಸದ ರಾಜ್ಯಗಳ ಒಪ್ಪಿಗೆಗಾಗಿ ಕಾಯುವುದು ಯೋಜನೆಯನ್ನು ಇನ್ನಷ್ಟೂ ನಿಧಾನಗೊಳಿಸಲಿದೆ. ಇದರಿಂದ ಉಳಿದ ರಾಜ್ಯಗಳಿಗೆ ತೊಂದರೆಯಾಗುತ್ತದೆ ಎಂದು ನದಿಗಳನ್ನು ಪರಸ್ಪರ ಜೋಡಿಸುವುದರ ಪರವಾಗಿ ತಮಿಳುನಾಡು ದನಿ ಎತ್ತಿದೆ.
ಗಂಗಾ ಶುದ್ಧೀಕರಣದ ಯೋಜನೆಯ ರೀತಿಯಲ್ಲಿಯೇ ಇದನ್ನು ಕೈಗೆತ್ತಿಕೊಳ್ಳಬೇಕು ಎಂದು ಕೇಂದ್ರ ಸರಕಾರವನ್ನು ಒತ್ತಾಯಿಸಿದೆ. ಯೋಜನೆಗೆ ಸಹಮತ ವ್ಯಕ್ತಪಡಿಸದ ರಾಜ್ಯಗಳ ಒಪ್ಪಿಗೆಗಾಗಿ ಕಾಯುವುದು ಯೋಜನೆಯನ್ನು ಇನ್ನಷ್ಟೂ ನಿಧಾನಗೊಳಿಸಲಿದೆಯೇ ವಿನಃ ಬೇರೇನೂ ಪ್ರಯೋಜನವಿಲ್ಲ ಎಂದು ಅದು ಹೇಳಿದೆ.
ಸುಪ್ರೀಂ ಕೋರ್ಟ್ ಆದೇಶವಿದೆ: ನದಿಗಳನ್ನು ಪರಸ್ಪರ ಜೋಡಿಸುವುದನ್ನು ತ್ವರಿತವಾಗಿ ಅನುಷ್ಠಾನಗೊಳಿಸುವಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಪರಿಗಣನೆಗೆ ತೆಗೆದುಕೊಂಡು ಗಂಗಾ ಶುದ್ಧೀಕರಣ ಯೋಜನೆಯಂತೆ ರಾಷ್ಟ್ರೀಯ ದೃಷ್ಟಿಕೋನ ಯೋಜನೆ(ಎನ್‌ಪಿಪಿ)ಯಲ್ಲಿ ಇದನ್ನು ಒಳಪಡಿಸಿ ಜಾರಿಗೊಳಿಸಬೇಕು ಎಂದು ಮುಖ್ಯಮಂತ್ರಿ ಒ ಪನ್ನೀರ್‌ಸೆಲ್ವಮ್ ಆಗ್ರಹಿಸಿದ್ದಾರೆ.

ತ್ವರಿತವಾಗಿ ಇದನ್ನು ಕೈಗೆತ್ತಿಕೊಳ್ಳದಿದ್ದರೆ ನದಿ ಜೋಡಣೆಯು ಆರಂಭಗೊಳ್ಳದೆ ಬಾಕಿಯಾಗಿ ಉಳಿಯಲಿದೆ ಎಂದು ಅವರು ಅಭಿಪ್ರಾಯಿಸಿದ್ದಾರೆ.
ಮಹಾನದಿ-ಗೋದಾವರಿ-ಕೃಷ್ಣಾ-ಪಾಲಾರ್- ಕಾವೇರಿ-ವೈಗಾಯಿ-ಗುಂಡಾರ್ ಜೋಡಣೆಯ ಕುರಿತ ಅನುಕೂಲಕರ ವರದಿಯನ್ನು ರಾಷ್ಟ್ರೀಯ ಜಲಾಭಿವೃದ್ಧಿ ಏಜೆನ್ಸಿಯು ಈ ಹಿಂದೆಯೇ ಪೂರ್ಣಗೊಳಿಸಿದ್ದು, ಈ ಬಗ್ಗೆ ವಿಸ್ತೃತ ಯೋಜನಾ ವರದಿ(ಡಿಪಿಆರ್)ನ್ನು ಸಲ್ಲಿಸುವಂತೆ ಕೇಂದ್ರ ಸರಕಾರವನ್ನು ಅವರು ಒತ್ತಾಯಿಸಿದ್ದಾರೆ.
ನಾಲ್ಕು ಅಂತರಾಜ್ಯ ಜೋಡಣಾ ಯೋಜನೆಯನ್ನು ಪಟ್ಟಿ ಮಾಡಿರುವ ತಮಿಳುನಾಡು ತನ್ನ ಪ್ರಸ್ತಾವನೆಯನ್ನು ಕೇಂದ್ರ ಸಲ್ಲಿಸಿದೆ. ಇದನ್ನು ಕಾಲಬದ್ಧ ಯೋಜನೆಯಾಗಿ ಪರಿಗಣಿಸಿ ಪೂರೈಸಬೇಕು ಎಂದು ಪನ್ನೀರ್ ಸೆಲ್ವಂ ಹೇಳಿದ್ದಾರೆ.
ತಮಿಳುನಾಡಿನ ಪ್ರಸ್ತಾವನೆ ಪ್ರಕಾರ ತಮಿಳುನಾಡಿಗೆ ಹೆಚ್ಚುವರಿಯಾಗಿ 22 ಟಿಎಂಸಿ ಅಡಿಗಳಷ್ಟು ನೀರು ಸಿಗಲಿದೆ. ಇದಲ್ಲದೆ ರಾಜ್ಯದೊಳಗೆ ನದಿಗಳ ಜೋಡಣೆ ಮಾಡಿಕೊಳ್ಳಲು ಸರ್ಕಾರ ಯೋಜನೆ ರೂಪಿಸಿದೆ. ಪೆನ್ನೈಯಾರ್, ಪಾಲಾರ್, ಮೆಟ್ಟೂರ್ ಅಣೆಕಟ್ಟು ಕಾವೇರಿ, ಅಥಿಕಡವು,ಥಾವರಬರಣಿ, ನಂಬಿಯಾರ್ ಜೋಡಣೆಯಾಗಲಿದೆ.












Click it and Unblock the Notifications