2021ರ ಚುನಾವಣೆಯಲ್ಲಿ ಜನರಿಂದ ಪವಾಡ ಸೃಷ್ಟಿ: ರಜನಿಕಾಂತ್
ಚೆನ್ನೈ, ನವೆಂಬರ್ 21: ತಮಿಳುನಾಡಿನ 2021ರ ವಿಧಾನಸಭೆಯಲ್ಲಿ ಜನತೆ ಪವಾಡವನ್ನು ಸೃಷ್ಟಿಸಲಿದ್ದಾರೆ ಎಂದು ಸೂಪರ್ ಸ್ಟಾರ್ ರಜನಿಕಾಂತ್ ಹೇಳಿದ್ದಾರೆ.
ಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್ ಅವರ ಮಕ್ಕಳ್ ನೀಧಿ ಮೈಯಂ ಜೊತೆ ಕೈಜೋಡಿಸುವುದರ ಬಗ್ಗೆ ರಜನಿಕಾಂತ್ ಸ್ಪಷ್ಟನೆ ನೀಡಿದರು.
"ಈ ಬಗ್ಗೆ ನಾನೊಬ್ಬನೇ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ, ಪಕ್ಷದ ಕಾರ್ಯಕರ್ತರ ಅಭಿಪ್ರಾಯವನ್ನು ಆಲಿಸಿ, ಚುನಾವಣೆ ಹೊತ್ತಿಗೆ ತೀರ್ಮಾನ ಕೈಗೊಳ್ಳಲಾಗುವುದು, ಅಲ್ಲಿ ತನಕ ನಾನು ಏನು ಹೇಳಲಾರೆ" ಎಂದು ರಜನಿ ಹೇಳಿದರು.

ತಮಿಳು ಚಿತ್ರರಂಗದ ಇಬ್ಬರು ದೊಡ್ಡ ಸ್ಟಾರ್ ಗಳು ಈಗ ರಾಜಕೀಯ ರಂಗದಲ್ಲೂ ಒಟ್ಟಿಗೆ ಕೈಜೋಡಿಸಿ ತಮಿಳುನಾಡಿನ ಏಳಿಗೆಗಾಗಿ ಶ್ರಮಿಸಲಿದ್ದಾರೆ ಎಂಬ ಸುದ್ದಿಯಿದೆ.
ಇತ್ತೀಚೆಗಷ್ಟೆ, "ತಮಿಳುನಾಡು ರಾಜಕೀಯದಲ್ಲಿ ನಿರ್ವಾತ ಸೃಷ್ಟಿಯಾಗಿದೆ" ಎಂಬ ಸೂಪರ್ ಸ್ಟಾರ್ ರಜನೀಕಾಂತ್ ಅವರ ಹೇಳಿಕೆಗೆ ಬೆಂಬಲ ನೀಡಿದ್ದ ಬಹುಭಾಷಾ ನಟ ಕಮಲ್ ಹಾಸನ್, "ತಮಿಳುನಾಡು ಸಮರ್ಥ ನಾಯಕರ ಕೊರತೆ ಎದುರಿಸುತ್ತಿದೆ" ಎಂದಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.
"ತಮಿಳುನಾಡು ಅಭಿವೃದ್ಧಿಗೆ ಅಗತ್ಯವಿದೆ ಎಂದಾದರೆ ನಾನು ಮತ್ತು ರಜನಿಕಾಂತ್ ಇಬ್ಬರೂ ಒಟ್ಟಾಗಿ ಪ್ರಯಾಣ ಮಾಡುತ್ತೇವೆ. ಮೊದಲು ಕೆಲಸ ಮುಖ್ಯ, ನಂತರ ಸಿದ್ಧಾಂತದ ಬಗ್ಗೆ ಮಾತು. ನಾವು ಕಳೆದ 43 ವರ್ಷಗಳಿಂದಲೂ ಒಂದಾಗಿಯೇ ಇದ್ದೇವೆ. ಈಗ ಇಬ್ಬರೂ ಒಟ್ಟಿಗೇ ಪ್ರಯಾಣ ಮಾಡುವುದರಲ್ಲಿ ಪವಾಡವೇನಿಲ್ಲ" ಎಂದು ಕಮಲ್ ಹಾಸನ್ ಹೇಳಿದ್ದರು.
ಈಗ ರಜನಿ 2021ರಲ್ಲಿ ಜನರು ಪವಾಡ ಸೃಷ್ಟಿಸಲಿದ್ದಾರೆ ಎಂದಿದ್ದಾರೆ. ಮುಂದೇನಾಗುವುದೋ ಕಾದು ನೋಡಬೇಕಿದೆ.












Click it and Unblock the Notifications