AIADMK 18 ಶಾಸಕರ ಅನರ್ಹತೆ ಎತ್ತಿಹಿಡಿದ ಮದ್ರಾಸ್ ಹೈಕೋರ್ಟ್
ಚೆನ್ನೈ, ಅಕ್ಟೋಬರ್ 25: ಪಕ್ಷವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ಎಐಎಡಿಎಂಕೆಯ 18 ಶಾಸಕರ ಅನರ್ಹತೆಯನ್ನು ಮದ್ರಾಸ್ ಹೈಕೋರ್ಟ್ ಎತ್ತಿ ಹಿಡಿದಿದೆ.
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸಾವಿನ ನಂತರ ಅವರ ಆಪ್ತೆ ಶಶಿಕಲಾ ನಟರಾಜನ್ ಮತ್ತು ಅವರ ಸಂಬಂಧಿ ಟಿಟಿವಿ ದಿನಕರನ್ ಅವರ ಬಣದೊಂದಿಗೆ ಗುರುತಿಸಿಕೊಂಡಿದ್ದ 18 ಶಾಸಕರನ್ನು ಎಐಎಡಿಎಂಕೆಯಿಂದ ಅನರ್ಹಗೊಳಿಸಲಾಗಿತ್ತು.
ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ನಿರ್ಧಾರವನ್ನು ಮದ್ರಾಸ್ ಹೈಕೋರ್ಟ್ ಎತ್ತಿಹಿಡಿದಿದೆ.
ತಮಿಳುನಾಡು ಮುಖ್ಯಮಂತ್ರಿ ಇ ಪಳಿನೀಸ್ವಾಮಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವಂತೆ ಕೋರಿ ಈ ಹದಿನೆಂಟು ಶಾಸಕರು ರಾಜ್ಯಪಾಲರಿಗೆ ಪತ್ರ ಬರೆದಿದ್ದರು.
ಶಶಿಕಲಾ ನಟಾಜನ್ ಅವರಿಗೆ ಬೆಂಬಲ ನೀಡಿ ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದ ಹದಿನೆಂಟು ಶಾಸಕರನ್ನು ಅನರ್ಹಗೊಳಿಸಿದ ನಂತರ ಈ ಪ್ರಕರಣರ ಕೋರ್ಟಿನ ಅಂಗಳಕ್ಕೆ ಹೋಗಿತ್ತು.

ಶಶಿಕಲಾ ಬಣಕ್ಕೆ ತೀವ್ರ ಮುಖಭಂಗ
ಇದೀಗ ಇವರ ಅನರ್ಹತೆಯನ್ನು ಮದ್ರಾಸ್ ಹೈ ಕೋರ್ಟ್ ಎತ್ತಿಹಿಡಿದಿದ್ದು, ಟಿಟಿವಿ ದಿನಕರನ್ ಮತ್ತು ಶಶಿಕಲಾ ನಟರಾಜನ್ ಬಣಕ್ಕೆ ತೀವ್ರ ಮುಖಭಂಗವನ್ನುಂಟು ಮಾಡಿದೆ. ಅಕ್ರಮ ಆಸ್ತಿ ಹೊಂದಿರುವ ಆರೋಪದಲ್ಲಿ ದೋಷಿ ಎಂದು ಪರಿಗಣಿಸಿ ಶಶಿಕಲಾ ಅವರಿಗೆ ಶಿಕ್ಷೆ ವಿಧಿಲಾಗಿದ್ದು, ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತದ್ದಾರೆ.

18 ಕ್ಷೇತ್ರಗಳಿಗೆ ಉಪಚುನಾವಣೆ?
ಮದ್ರಾಸ್ ಹೈಕೋರ್ಟ್ ಈ ಪ್ರಕರಣದಲ್ಲಿ ಶಾಸಕರ ಅನರ್ಹತೆಯನ್ನು ಎತ್ತಿಹಿಡಿದಿದ್ದರಿಂದ ತಮಿಳುನಾಡಿನ ಈ 18 ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಬಹುದು. ಶಾಸಕರು ಸುಪ್ರೀಂ ಕೋರ್ಟ್ ಮೊರೆ ಹೋಗದಿದ್ದರೆ ಚುನಾವಣೆ ನಡೆಯುವುದು ಅನಿವಾರ್ಯವಾಗುತ್ತದೆ. ಆದರೆ ಪಕ್ಷದಲ್ಲಿದ್ದುಕೊಂಡೇ ಪಕ್ಷ ವಿರೋಧಿ ಕೆಲಸ ಮಾಡುತ್ತಿದ್ದ ಶಾಸಕರ ಅನರ್ಹತೆಯನ್ನು ಕೋರ್ಟು ಎತ್ತಿಹಿಡಿದಿದ್ದು, ಪಳನೀಸ್ವಾಮಿ ಬಣಕ್ಕೆ ನಿರಾಳತೆಯನ್ನುಂಟುಮಾಡಿದೆ.
|
ಟಿಟಿವಿ ದಿನಕರನ್ ಏನಂತಾರೆ?
ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ ಟಿಟಿವಿ ದಿನಕರನ್, ಇದು ಖಂಡಿತ ನಮ್ಮ ಸೋಲಲ್ಲ. ಇದು ಸಂದರ್ಭಗಳನ್ನು ಎದುರಿಸಲು ನಮಗೊಂದು ಅನುಭವ ನೀಡಿದೆ ಅಷ್ಟೆ. 18 ಶಾಸಕರನ್ನು ಭೇಟಿ ಮಾಡಿದ ನಂತರ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದಿದ್ದಾರೆ. ಕಳೆದ ವರ್ಷ 18 ಶಾಸಕರನ್ನು ಟಿಟಿವಿ ದಿನಕರನ್ ಅವರು ರೆಸಾರ್ಟ್ ವೊಂದರಲ್ಲಿ ಬಚ್ಚಿಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.

ಪ್ರಕರಣವೇನು?
ತಮಿಳುನಾಡಿನ ಆಗಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರು ಅನಾರೋಗ್ಯದ ಕಾರಣ ಮೃತರಾದ ತರುವಾಯ, ಅವರ ಆಪ್ತೆ ಶಶಿಕಲಾ ನಟರಾಜನ್ ಅವರು ಎಐಎಡಿಎಂಕೆಯ ಚುಕ್ಕಾಣಿ ಹಿಡಿಯಲು ಸಿದ್ಧರಾಗಿದ್ದರು. ಆದರೆ ಅದು ಜಯಲಲಿತಾ ಬಣದ ಇ ಪಳನೀಸ್ವಾಮಿ, ಪನ್ನೀರ್ ಸೆಲ್ವಮ್ ಮುಂತಾದ ನಾಯಕರಿಗೆ ಇಷ್ಟವಿರಲಿಲ್ಲ. ಇದೇ ಸಂದರ್ಭದಲ್ಲಿ ಶಶಿಕಲಾ ನಟರಾಜನ್ ಅವರು ಜೈಲುಶಿಕ್ಷೆಗೊಳಗಾಗಿ ಬೆಂಗಳೂರಿಗೆ ಬಂದರು. ಆ ನಂತರ ಎಐಎಡಿಎಂಕೆಯಲ್ಲಿ ಬಂಡಾಯ ಎದ್ದಿತ್ತು. ಶಶಿಕಲಾ ನಟರಾಜನ್ ಬೆಂಬಲಿಗರಾಗಿದ್ದ 18 ಶಾಸಕರು ಪಕ್ಷವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಂಡು ಮುಖ್ಯಮಂತ್ರಿ ಪಳನೀಸ್ವಾಮಿ ಆವರನ್ನು ಅಧಿಕಾರದಿಂದ ಕೆಳಗಿಳಸುವಂತೆ ಕೋರಿ ರಾಜ್ಯಪಾಲರಿಗೆ ಪತ್ರಬರೆದಿದ್ದರು. ಇದನ್ನು ಪಕ್ಷವಿರೋಧಿ ಚಟುವಟಿಕೆ ಎಂದು ದೂರಿ ಅವರ ಶಾಸಕತ್ವವನ್ನು ಸ್ಪೀಕರ್ ಅನರ್ಹಗೊಳಿಸಿದ್ದರು.












Click it and Unblock the Notifications