ಜಯಲಲಿತಾ ಮುಖ ಹೋಲಿಕೆಯಾಗದ್ದಕ್ಕೆ ಪ್ರತಿಮೆಯನ್ನೇ ಬದಲಿಸಿದರು!
ಚೆನ್ನೈ, ನವೆಂಬರ್ 14: ತಮಿಳುನಾಡಿನ ಆಡಳಿತಾರೂಢ ಎಐಎಡಿಎಂಕೆ ಸರ್ಕಾರ, ಚೆನ್ನೈನಲ್ಲಿರುವ ಪಕ್ಷದ ಕೇಂದ್ರ ಕಚೇರಿ ಮುಂಭಾಗದಲ್ಲಿದ್ದ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಕಂಚಿನ ಪ್ರತಿಮೆಯನ್ನು ಬದಲಿಸಿದೆ.
ಜಯಲಲಿತಾ ಅವರದೇ ಗಾತ್ರವನ್ನು ಹೊಂದಿರುವ ಈ ಪ್ರತಿಮೆಯ ಅನಾವರಣ ಪಕ್ಷದ ಕಾರ್ಯಕರ್ತರಲ್ಲಿ ಕೊನೆಗೂ ನೆಮ್ಮದಿ ಮತ್ತು ಸಂತಸ ತಂದಿದೆ.
2016ರ ಡಿಸೆಂಬರ್‌ನಲ್ಲಿ ನಿಧನರಾದ ಜಯಲಲಿತಾ ಅವರ ಜ್ಞಾಪಕಾರ್ಥ ಅವರ 70ನೇ ಜನ್ಮದಿನೋತ್ಸವದ ಸಂದರ್ಭದಲ್ಲಿ ಫೆಬ್ರುವರಿಯಲ್ಲಿ ಎಐಎಡಿಎಂಕೆ ಪಕ್ಷದ ಕೇಂದ್ರ ಕಚೇರಿ ಮುಂಭಾಗದಲ್ಲಿ ಬೃಹತ್ ಕಾರ್ಯಕ್ರಮದೊಂದಿಗೆ ಜಯಲಲಿತಾ ಅವರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿತ್ತು.

ಗುಲಾಬಿಯ ಹೂವಿನಿಂದ ಅಲಂಕರಿಸಿದ್ದ ಕಂಚಿನ ಪ್ರತಿಮೆಯು ಪಕ್ಷದ ಚಿಹ್ನೆಯಾದ ಎರಡು ಎಲೆಯನ್ನು ಸಂಕೇತಿಸುವಂತೆ ಜಯಲಲಿತಾ ಅವರು ಎರಡು ಬೆರಳುಗಳನ್ನು ಎತ್ತಿ ಹಿಡಿದಿರುವಂತೆ ಅದನ್ನು ನಿರ್ಮಿಸಲಾಗಿತ್ತು.
ಅವರ ಪ್ರತಿಮೆಯನ್ನು ಎಐಎಡಿಎಂಕೆ ಮುಖಂಡ, ಮಾಜಿ ಮುಖ್ಯಮಂತ್ರಿ ಎಂ.ಜಿ. ರಾಮಚಂದ್ರನ್ ಅವರ ಪ್ರತಿಮೆ ಪಕ್ಕದಲ್ಲಿಯೇ ಇರಿಸಲಾಗಿತ್ತು.
ಆದರೆ, ಪಕ್ಷದ ಕಾರ್ಯಕರ್ತರ ಸಂಭ್ರಮ ಅಲ್ಪಾವಧಿಯದ್ದಾಗಿತ್ತು. ಆ ಪ್ರತಿಮೆಯ ಮುಖವು ಜಯಲಲಿತಾ ಅವರನ್ನು ಹೋಲುತ್ತಿರಲಿಲ್ಲ. ಸಮೀಪದಿಂದ ನೋಡಿದಾಗ ಅದು ಯಾರ ಮುಖ ಎಂಬುದೇ ಗೊತ್ತಾಗುತ್ತಿರಲಿಲ್ಲ.
Is this a conspiracy to project chinamma's face onto amma... starting with her hairstyle, naamam, blouses, now statue...completing sasikala's metamorphosis into jayalalitha ! https://t.co/YXnaGtDESS
— Kasturi Shankar (@KasthuriShankar) 24 February 2018
ಇದರ ಬಗ್ಗೆ ಸಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ಕಟುವಾದ ಟೀಕೆ ವ್ಯಕ್ತವಾಗಿತ್ತು. ಮುಜುಗರಕ್ಕೆ ಒಳಗಾದ ಪಕ್ಷ ಅದನ್ನು ತೆರವುಗೊಳಿಸಿ ಹೊಸ ಪ್ರತಿಮೆಯನ್ನು ಸ್ಥಾಪಿಸಿದೆ. ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಓ. ಪನ್ನೀರ್ ಸೆಲ್ವಂ ಪ್ರತಿಮೆಯನ್ನು ಅನಾವರಣಗೊಳಿಸಿದರು.
ಇದು ಜಯಲಲಿತಾ ಅವರ ಮುಖವನ್ನೇ ಹೋಲುವುದರಿಂದ ಪಕ್ಷದ ಕಾರ್ಯಕರ್ತರಲ್ಲಿ ಸಂಭ್ರಮ ಮನೆಮಾಡಿದೆ. ಪ್ರತಿಮೆಯ ಕಾಲಗೆ ನಮಸ್ಕರಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.












Click it and Unblock the Notifications