ತಮಿಳುನಾಡಿನಲ್ಲಿ ಮೈತ್ರಿ ಸರ್ಕಾರ ಸ್ಥಾಪನೆ ಖಚಿತ: ಅಮಿತ್ ಶಾ
ಚೆನ್ನೈ, ಮಾರ್ಚ್ 7: ತಮಿಳುನಾಡಿನಲ್ಲಿ ಎಐಎಡಿಎಂಕೆ-ಬಿಜೆಪಿ-ಪಿಎಂಕೆ ಸರ್ಕಾರ ಸ್ಥಾಪನೆಯಾಗಲಿದೆ ಎಂಬ ವಿಶ್ವಾಸ ತಮಗಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದರು.
ಕಾಂಗ್ರೆಸ್ಗೆ 25 ಸೀಟುಗಳನ್ನು ನೀಡಲು ಒಪ್ಪಿದ ಡಿಎಂಕೆ
ತಮಿಳುನಾಡು ವಿಧಾನಸಭೆ ಚುನಾವಣೆ ಹಾಗೂ ಕನ್ಯಾಕುಮಾರಿ ಲೋಕಸಭೆ ಉಪ ಚುನಾವಣೆಗೆ ಪ್ರಚಾರ ನಡೆಸುವ ಸಲುವಾಗಿ ಕನ್ಯಾಕುಮಾರಿಯ ಸುಚಿಂದ್ರಮ್‌ಗೆ ಭಾನುವಾರ ಭೇಟಿ ನೀಡಿದ ಅವರು, ಸುಚೀಂದ್ರಮ್ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು. ದೇವಾಲಯದ ಸುತ್ತಲೂ ವೀಕ್ಷಣೆ ನಡೆಸಿದ ಅವರು, ಬಳಿಕ ಮನೆ ಮನೆ ಪ್ರಚಾರದ 'ವಿಜಯ್ ಸಂಕಲ್ಪ ಮಹಾಸಂಪರ್ಕ ಅಭಿಯಾನ' ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಕನ್ಯಾಕುಮಾರಿಯಲ್ಲಿ ವೆಪ್ಪಮೊಡು ಕಾಮರಾಜ್ ಪ್ರತಿಮೆಯಿಂದ ಹಿಂದೂ ಕಾಲೇಜಿನವರೆಗೆ ರೋಡ್ ಶೋದಲ್ಲಿ ಭಾಗವಹಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅಮಿತ್ ಶಾ, 'ಇಲ್ಲಿ 11 ಮನೆಗಳಿಗೆ ಭೇಟಿ ನೀಡುವ ಮೂಲಕ ಮನೆಯಿಂದ ಮನೆಗೆ ಪ್ರಚಾರವನ್ನು ಆರಂಭಿಸಿದ್ದೇವೆ. ಕನ್ಯಾಕುಮಾರಿ ಲೋಕಸಭೆ ಕ್ಷೇತ್ರ ಉಪ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಪೊನ್ ರಾಧಾಕೃಷ್ಣನ್ ಅವರನ್ನು ಗೆಲ್ಲಿಸುವಂತೆ ಎಲ್ಲರಿಗೂ ಮನವಿ ಮಾಡುತ್ತೇನೆ' ಎಂದು ತಿಳಿಸಿದರು.
Tamil Nadu: Union Home Minister Amit Shah holds roadshow in Kanyakumari pic.twitter.com/CdLeS5hXGT
— ANI (@ANI) March 7, 2021
ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಎಐಎಡಿಎಂಕೆ ಜತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ, 20 ಸೀಟುಗಳಲ್ಲಿ ಸ್ಪರ್ಧಿಸುವ ಅವಕಾಶ ಪಡೆದುಕೊಂಡಿದೆ. ಇದರ ಜತೆಗೆ ಕಾಂಗ್ರೆಸ್ ಸಂಸದ ವಸಂತ್ ಕುಮಾರ್ ಅವರ ನಿಧನದಿಂದ ತೆರವಾಗಿದ್ದ ಕನ್ಯಾಕುಮಾರಿ ಲೋಕಸಭೆ ಕ್ಷೇತ್ರಕ್ಕೆ ಕೂಡ ಏಪ್ರಿಲ್ 6ರಂದು ಉಪ ಚುನಾವಣೆ ನಡೆಯಲಿದ್ದು, ಎಐಎಡಿಎಂಕೆ ಬೆಂಬಲದೊಂದಿಗೆ ಬಿಜೆಪಿ ಅಭ್ಯರ್ಥಿ ಪೊನ್ ರಾಧಾಕೃಷ್ಣನ್ ಕಣಕ್ಕಿಳಿಯಲಿದ್ದಾರೆ.