ಟಿಪ್ಪು ಸುಲ್ತಾನ್ ಸ್ಮಾರಕಕ್ಕೆ ತಮಿಳು ದಲಿತರ ವಿರೋಧ
ದಿಂಡಿಗಲ್(ತಮಿಳುನಾಡು), ಅ.15: ಮೈಸೂರು ಹುಲಿ ಟಿಪ್ಪು ಸುಲ್ತಾನ್ ಅವರ ಸ್ಮಾರಕ ಸ್ಥಾಪನೆಗೆ ಪುದು ಕೊಡಂಗಿಪಟ್ಟಿ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ದಿಂಡಿಗಲ್ ನಿಂದ ಸುಮಾರು 15 ಕಿ.ಮೀ ದೂರದಲ್ಲಿರುವ ಈ ಗ್ರಾಮದಲ್ಲಿ ಬುಧವಾರ ನಡೆದ ಗ್ರಾಮಸ್ಥರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಟಿಪ್ಪು ಸುಲ್ತಾನ್ ಅವರ ಸ್ಮಾರಕವನ್ನು ನಮ್ಮ ಊರಿನಲ್ಲಿ ಸ್ಥಾಪಿಸಲು ನಾವು ಒಪ್ಪುವುದಿಲ್ಲ ಎಂದು ಹೇಳಿ ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಟಿಪ್ಪು ಸ್ಮಾರಕ ಸ್ಥಾಪನೆಗೆ ತಮಿಳುನಾಡು ಸರ್ಕಾರ ಸೂಚಿಸಿರುವ ಜಾಗವನ್ನು 1983ರಿಂದ ಪವಿತ್ರ ಭೂಮಿಯಾಗಿ ಕಾಣುತ್ತಾ ಬಂದಿದ್ದೇವೆ ಎಂದು ಪುದು ಕೊಡಂಗಿಪಟ್ಟಿಯ ಗ್ರಾಮ ಮುಖ್ಯಸ್ಥ ಸಿ ಪಾಲಸ್ವಾಮಿ ಹಾಗೂ ಪಿ ಸುಂದರಪಾಂಡಿ ಅವರು ಹೇಳಿದ್ದಾರೆ.
ಕೊಡಂಗಿಪಟ್ಟಿ ಗ್ರಾಮದಲ್ಲಿ ಕೋಮುಗಲಭೆಯಾದ ನಂತರ 1983ರಿಂದ ಪುದು ಕೊಡಂಗಿಪಟ್ಟಿ ಗ್ರಾಮದಲ್ಲಿ ಸುಮಾರು 1850ಕ್ಕೂ ಅಧಿಕ ದಲಿತ ಕುಟುಂಬಗಳು ವಾಸವಾಗಿವೆ. ಗಣೇಶ, ಕಾಳಿ ಅಮ್ಮ, ಮಾರಿಯಮ್ಮ ಮುಂತಾದ ದೇವರನ್ನು ಪೂಜಿಸುವ ಸ್ಥಳವನ್ನು ಸರ್ಕಾರ ಈಗ ಟಿಪ್ಪು ಸ್ಮಾರಕಕ್ಕೆ ಮೀಸಲಿರಿಸಿದೆ.

ಸರ್ಕಾರ ಗೊತ್ತು ಮಾಡಿರುವ 5 ಎಕರೆ ಜಾಗದಲ್ಲಿ ದೇಗುಲಗಳು ಇಲ್ಲದೆ ಇರಬಹುದು ಅದರೆ, ನಾವು ಸುಮಾರು ವರ್ಷಗಳಿಂದ ಪೂಜೆ ಸಲ್ಲಿಸುವ ಭೂಮಿಯಾಗಿದೆ. ಈ ಜಾಗದಲ್ಲಿ ಸ್ಮಾರಕ ನಿರ್ಮಾಣ ಸಾಧ್ಯವೇ ಇಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಗ್ರಾಮದಲ್ಲಿ ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಶಾಲೆ ಇಲ್ಲ, ಮೂಲ ಸೌಕರ್ಯ ಕೊರತೆ ಕಣ್ಣಿಗೆ ರಾಚುತ್ತಿದೆ. ಆರೋಗ್ಯದಲ್ಲಿ ಏರುಪೇರಾಗಿ ಯಾವುದೇ ಸಹಾಯ ಬೇಕಾದರೂ 11 ಕಿ.ಮೀ ದೂರದಲ್ಲಿರುವ ಅಲಮರತ್ತುಪಟ್ಟಿ ಗ್ರಾಮಕ್ಕೆ ಓಡಬೇಕು ಮೊದಲು ಸರ್ಕಾರ ಗಮನ ಹರಿಸಲಿ ಎಂದು ಪಾಲಸ್ವಾಮಿ ಕೋರಿದ್ದಾರೆ.
ವಿರೋಧ ಏಕೆ?: ಒಂದು ವೇಳೆ ಇದೇ ಜಾಗದ ಒಂದು ಬದಿಯಲ್ಲಿ ಟಿಪ್ಪು ಸ್ಮಾರಕ ಸ್ಥಾಪನೆಯಾಗಬಹುದು. ಅದರೆ, ಇದಕ್ಕೆ ಹೊಂದಿಕೊಂಡಂತೆ ಇರುವ ನಮ್ಮ ಪೂಜಾಸ್ಥಳಗಳಲ್ಲಿ ಉತ್ಸವ, ಮೆರವಣಿಗೆ ಸೇರಿದಂತೆ ನಮ್ಮ ಧಾರ್ಮಿಕ ವಿಧಿ ವಿಧಾನಗಳನ್ನು ಆಚರಿಸಲು ಸರ್ಕಾರ ಅನುಮತಿ ನೀಡುವ ಬಗ್ಗೆ ನಮಗೆ ಭರವಸೆ ಇಲ್ಲ.
ಗ್ರಾಮಸ್ಥರು ಟಿಪ್ಪು ಸುಲ್ತಾನ್ ವಿರೋಧಗಳಲ್ಲ. ನಮ್ಮಲ್ಲಿ ಹಲವರಿಗೆ ಟಿಪ್ಪು ಯಾರು ಯಾವ ಊರಿನ ರಾಜನಾಗಿದ್ದ ಎಂಬುದೂ ತಿಳಿದಿಲ್ಲ. ನಮಗೆ ಸ್ಮಾರಕ ಸ್ಥಾಪನೆ ನಂತರದ ತೊಂದರೆ ಬಗ್ಗೆ ಚಿಂತೆಯಾಗಿದೆ ಅಷ್ಟೇ, ಬೇಗಂಪುರಂದಲ್ಲಿ ಸಾಕಷ್ಟು ಜಮೀನಿಗೆ ಅಲ್ಲಿ ಬೇಕಾದರೆ ಸ್ಮಾರಕ ಸ್ಥಾಪಿಸಲಿ ಎಂದು ಪಾಲಸ್ವಾಮಿ ತಮ್ಮ ನೋವು ತೋಡಿಕೊಂಡಿದ್ದಾರೆ.
ಸ್ಮಾರಕ ಸ್ಥಾಪನೆಗಾಗಿ ಕಾಮಗಾರಿ ಆರಂಭಿಸಲು ಬಂದಿದ್ದ ಲೋಕೋಪಯೋಗಿ ಇಲಾಖೆ ಸಿಬ್ಬಂದಿ ಗ್ರಾಮದಲ್ಲಿನ ಪರಿಸ್ಥಿತಿ ನೋಡಿ ಕಾಲ್ತೆಗೆದಿದ್ದಾರೆ. ಕಳೆದ ವರ್ಷ ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಅವರು ದಿಂಡಿಗಲ್ ಜಿಲ್ಲೆಯಲ್ಲಿ ಟಿಪ್ಪು ಸುಲ್ತಾನ್ ಹಾಗೂ ಹೈದರಾಲಿ ಅವರ ಮಣಿಮಂಡಲಂ(ಸ್ಮಾರಕ) ಸ್ಥಾಪನೆಗೆ ಆದೇಶಿಸಿದ್ದರು. (ಪಿಟಿಐ)












Click it and Unblock the Notifications