ತೂತುಕುಡಿ ಹಿಂಸಾಚಾರ: ಪ್ರತಿಭಟನಾ ನಿರತ ಸ್ಟಾಲಿನ್ ಬಂಧನ
ಚೆನ್ನೈ, ಮೇ 24: ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಮತ್ತು ಡಿಜಿಪಿ ಟಿ.ಕೆ. ರಾಜೇಂದ್ರನ್ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಡಿಎಂಕೆ ಪಕ್ಷದ ಕಾರ್ಯಾಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ತೂತುಕುಡಿಯಲ್ಲಿ ತಾಮ್ರದ ಕಂಪೆನಿ ವಿರುದ್ಧ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ 13 ಮಂದಿ ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಸ್ಟಾಲಿನ್ ನೇತೃತ್ವದಲ್ಲಿ ಡಿಎಂಕೆ ಸದಸ್ಯರು ಮುಖ್ಯಮಂತ್ರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದ್ದರು.
ಹದಿಮೂರು ಮುಗ್ಧರು ಮೃತಪಟ್ಟಿದ್ದರೂ ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಮುಖ್ಯಮಂತ್ರಿ ಅಸಮರ್ಥರಾಗಿದ್ದಾರೆ. ಜಿಲ್ಲೆಗೆ ತೆರಳಿ ಜನರನ್ನು ಭೇಟಿ ಮಾಡುವ ಗೋಜಿಗೂ ಹೋಗಿಲ್ಲ. ಹೀಗಾಗಿ ಅವರು ರಾಜೀನಾಮೆ ನೀಡಬೇಕು ಎಂದು ಸ್ಟಾಲಿನ್ ಆಗ್ರಹಿಸಿದರು.

ದೀರ್ಘಕಾಲದಿಂದ ಪ್ರತಿಭಟನೆ ನಡೆಸುತ್ತಿರುವ ಜನರನ್ನು ಮುಖ್ಯಮಂತ್ರಿ ತಕ್ಷಣವೇ ಕರೆಯಿಸಬೇಕಿತ್ತು. ಅಧಿಕಾರ ಕನಸಿನ ಲೋಕದಲ್ಲಿ ತೇಲಾಡುತ್ತಿರುವ ಮುಖ್ಯಮಂತ್ರಿಗೆ ಪ್ರತಿಭಟನಾಕಾರರು ಕಾಣಿಸುತ್ತಿಲ್ಲ. ಅವರಲ್ಲಿ ಯಾರನ್ನೂ ಭೇಟಿ ಮಾಡುವುದಿಲ್ಲ ಎಂದು ನಿರ್ಧರಿಸಿದ್ದಾರೆ ಎಂಬುದಾಗಿ ಸ್ಟಾಲಿನ್ ಕಿಡಿಕಾರಿದರು.
ಮುಖ್ಯಮಂತ್ರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಸ್ಟಾಲಿನ್ ಅವರನ್ನು ಪೊಲೀಸರು ಎತ್ತಿಕೊಂಡು ಹೋಗಿ ವಶಕ್ಕೆ ಪಡೆದುಕೊಂಡರು.












Click it and Unblock the Notifications