ಮದುವೆ ಹೆಸರಲ್ಲಿ ಮಹಿಳೆಯರಿಗೆ ಮೋಸ ಮಾಡುತ್ತಿದ್ದ ಮುರುಗನ್ ಕಂಬಿ ಹಿಂದೆ
ಚೆನ್ನೈ, ಆಗಸ್ಟ್ 15: ತಾಂಬರಮ್ ಪೊಲೀಸರು 59 ವರ್ಷದ ಈ ವ್ಯಕ್ತಿಯನ್ನು ಬಂಧಿಸಿದ ಮೇಲೆ ಗೊತ್ತಾಗಿದ್ದು, ಇವನ ವಂಚನೆ ಪುರಾಣಕ್ಕೆ ದಶಕದ ಇತಿಹಾಸ ಇದೆ ಎಂಬ ಸಂಗತಿ. ಈತನ ಹೆಸರು ಎಂ.ಮುರುಗನ್. ತಾನೊಬ್ಬ ವಿಚ್ಛೇದಿತ. ಅನುಕೂಲಸ್ಥ ಉದ್ಯಮಿ. ಎರಡನೇ ಮದುವೆ ಪ್ರಯತ್ನದಲ್ಲಿ ಇದ್ದೀನಿ ಎಂದು ನಕಲಿ ಜಾಹೀರಾತು ಪ್ರಕಟಿಸಿ, ಮೂವತ್ತು ಮಹಿಳೆಯರನ್ನು ವಂಚಿಸಿದ್ದಾನೆ.
ಪತ್ರಿಕೆಗಳಲ್ಲಿ ಜಾಹೀರಾತು ನೀಡುತ್ತಿದ್ದ ಈತ, ತಾನೊಬ್ಬ ಉದ್ಯಮಿ. ತಿಂಗಳಿಗೆ ನಲವತ್ತರಿಂದ ಐವತ್ತು ಸಾವಿರ ಆದಾಯ ಇದೆ. ಯಾವುದೇ ಜಾತಿ ಆದರೂ ಪರವಾಗಿಲ್ಲ. ನಾನು ಮದುವೆ ಆಗ್ತೀನಿ ಎಂದು ಒಕ್ಕಣೆ ಹಾಕಿರುತ್ತಿದ್ದನಂತೆ. ಇದನ್ನು ನೋಡಿ, ಪತಿಯನ್ನು ಕಳೆದುಕೊಂಡವರು ಹಾಗೂ ವಿಚ್ಛೇದನ ಪಡೆದವರು ಇವನನ್ನು ಸಂಪರ್ಕಿಸುತ್ತಿದ್ದರಂತೆ.
ಆ ನಂತರ ಈತ ರೆಸ್ಟೋರೆಂಟ್ ನಲ್ಲಿ ಭೇಟಿ ಮಾಡೋಣ ಅಂತ ಹೇಳಿ, ಎಲ್ಲಿ ಯಾವುದೇ ಸಿಸಿಟಿವಿ ಕ್ಯಾಮೆರಾ ಮತ್ತೊಂದು ಇರುವುದಿಲ್ಲವೋ ಅಂಥಲ್ಲಿ ಭೇಟಿ ಆಗುತ್ತಿದ್ದ. ಆ ನಂತರ ಚೆನ್ನಾಗಿ ಮಾತನಾಡಿ, ನಂಬಿಕೆ ಮೂಡಿಸುತ್ತಿದ್ದ. ಮದುವೆ ಖರ್ಚಿಗೆ ಹಣ ಬೇಕಾಗುತ್ತದೆ. ಹಣ ಅಥವಾ ಒಡವೆ ಇದ್ದರೆ ಕೊಡುವಂತೆ ಹೇಳುತ್ತಿದ್ದ.

ಇವನ ಮಾತನ್ನು ನಂಬಿದ ಮಹಿಳೆಯರು ಚಿನ್ನ ಹಾಗೂ ಹಣವನ್ನು ನೀಡುತ್ತಿದ್ದರು. ಆ ನಂತರ ಇವನು ಮೊಬೈಲ್ ಫೋನ್ ನ ಸಿಮ್ ಕಾರ್ಡ್ ನೇ ಕಿತ್ತು ಬಿಸಾಡುತ್ತಿದ್ದ. ಇದೀಗ ಹೊಸೂರಿನ ನಲವತ್ತೇಳು ವರ್ಷದ ಮಹಿಳೆಯೊಬ್ಬರು ದೂರು ಕೊಟ್ಟ ನಂತರ ಮುರುಗನ್ ನ ವಂಚನೆ ಪ್ರಕರಣಗಳು ಬಯಲಾಗಿವೆ.
ಈ ಮುರುಗನ್ ಬರ್ಮಾ ಕಾಲೋನಿ ನಿವಾಸಿ. ಹೀಗೆ ಚಿನ್ನ-ಹಣ ಮೋಸ ಮಾಡಿದ್ದರಲ್ಲೇ ಸ್ವಂತದ್ದೊಂದು ಮನೆ ಕೂಡ ಕಟ್ಟಿಕೊಂಡಿದ್ದಾನೆ. ಒಂದು ಕಾಲಕ್ಕೆ ಸೆಕ್ಯೂರಿಟಿ ಗಾರ್ಡ್ ಗಳ ನೇಮಕ ಮಾಡುವ ಏಜೆನ್ಸಿ ನಡೆಸುತ್ತಿದ್ದ ಈತ, ಸುಲಭವಾಗಿ ಹಣ ಮಾಡುವ ಆಲೋಚನೆಯಲ್ಲಿ ಈ ವಂಚನೆಗೆ ಇಳಿದಿದ್ದಾನೆ.
ತನ್ನ ಮೊದಲನೇ ಮದುವೆಯಿಂದ ಎಷ್ಟೆಲ್ಲ ತೊಂದರೆ ಆಯಿತು, ಹೇಗೆ ವಿಚ್ಛೇದನ ಪಡೆದೆ ಅಂತ ಬಗೆಬಗೆಯಾದ ಕಥೆ ಹೆಣೆಯುತ್ತಿದ್ದ ಈ ಮುರುಗನ್ ಗೆ ಮದುವೆಯಾಗಿದ್ದು, ಹೆಂಡತಿ- ಇಬ್ಬರು ಮಕ್ಕಳು ಇದ್ದಾರೆ. ಸದ್ಯಕ್ಕೆ ಪೊಲೀಸರ ಆತಿಥ್ಯ ಪಡೆಯುತ್ತಾ ತನ್ನ ಮೋಸದ ಎಪಿಸೋಡ್ ಗಳನ್ನು ಬಿಚ್ಚಿಡುತ್ತಿದ್ದಾನೆ.












Click it and Unblock the Notifications