ಪಂಜಾಬ್ ಚುನಾವಣೆ: ಸಿಧು 'ಇತಿಹಾಸದಲ್ಲೆ ಮೊದಲು' ಎಂದಿದ್ದೇಕೆ?
ಚಂಡೀಗಢ, ಡಿಸೆಂಬರ್ 17: ಮುಂದಿನ ವರ್ಷ ಪಂಜಾಬ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆ ಎಲ್ಲಾ ಪಕ್ಷಗಳು ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ. ಕಾಂಗ್ರೆಸ್ ಪಕ್ಷ ಎಲ್ಲಾ ವಿಧಾನಸಭೆ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿದೆ.
ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮುನ್ನ ಅಭ್ಯರ್ಥಿ ಆಕಾಂಕ್ಷಿಗಳು ಅರ್ಜಿಯನ್ನು ಸಲ್ಲಿಕೆ ಮಾಡಬೇಕಾಗುತ್ತದೆ. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಅರ್ಜಿ ಸಲ್ಲಿಕೆಗೆ ಶುಲ್ಕವನ್ನು ಅಭ್ಯರ್ಥಿಗಳೇ ಸಲ್ಲಿಕೆ ಮಾಡಬೇಕಾಗುತ್ತದೆ. ಆದರೆ ಈ ಬಾರಿ ಕಾಂಗ್ರೆಸ್ ಪಕ್ಷವು ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡಿದೆ. ಈ ಪ್ರಕ್ರಿಯೆಯನ್ನು ನವಜೋತ್ ಸಿಂಗ್ ಸಿಧು "ಇತಿಹಾಸದಲ್ಲೇ ಮೊದಲು" ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಂಜಾಬ್ ಚುನಾವಣಾ ಸಮಿತಿಯ ಅಧ್ಯಕ್ಷರನ್ನು ಇತ್ತೀಚೆಗೆ ಆಯ್ಕೆ ಮಾಡಲಾಗಿದೆ. ಈ ಬೆನ್ನಲ್ಲೇ ಕೂ ಮೂಲಕ ಪೋಸ್ಟ್ ಮಾಡಿರುವ ನವಜೋತ್ ಸಿಂಗ್ ಸಿಧು, "ಅಭ್ಯರ್ಥಿ ಆಕಾಂಕ್ಷಿಗಳು ಅರ್ಜಿ ಸಲ್ಲಿಕೆ ಮಾಡುವ ವೇಳೆ ಶುಲ್ಕವನ್ನು ಪಾವತಿ ಮಾಡಬೇಕಾಗಿಲ್ಲ. ಇದು ಇತಿಹಾಸದಲ್ಲೇ ಮೊದಲ ಬಾರಿಗೆ," ಎಂದು ತಿಳಿಸಿದ್ದಾರೆ.

"ಪಂಜಾಬ್ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿ ಆಂಕಾಕ್ಷಿಗಳು ಅರ್ಜಿ ಸಲ್ಲಿಕೆ ಮಾಡಬಹುದು. ಡಿಸೆಂಬರ್ 20 ರವರೆಗೆ ಅರ್ಜಿ ಸಲ್ಲಿಕೆ ಮಾಡಬಹುದು. ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಅರ್ಜಿದಾರರಿಂದ ಯಾವುದೇ ಶುಲ್ಕವನ್ನು ಪಡೆಯಲಾಗುತ್ತಿಲ್ಲ," ಎಂದು ನವಜೋತ್ ಸಿಂಗ್ ಸಿಧು ಕೂ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮೆರಿಟ್ ಆಧಾರದಲ್ಲಿ ಟಿಕೆಟ್ ನೀಡುತ್ತೇವೆ ಎಂದ ನವಜೋತ್
ಇನ್ನು ಮೆರಿಟ್ ಆಧಾರದಲ್ಲಿ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗುತ್ತದೆ ಎಂದು ಹೇಳಿದ ನವಜೋತ್ ಸಿಂಗ್ ಸಿಧು, "ಕಾಂಗ್ರೆಸ್ ಒಂದು ಜಾತ್ಯಾತೀತ ಪಕ್ಷವಾಗಿದೆ. ಇಲ್ಲಿ ಎಲ್ಲಾ ನಿರ್ಧಾರಗಳನ್ನು ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಕಾಂಗ್ರೆಸ್ ಎಲ್ಲಾ ಪ್ರಕ್ರಿಯೆ ಪ್ರಕಾರವಾಗಿ ನಡೆಯುತ್ತದೆ. ಯಾರು ಗೆಲುವು ಹೊಂದಲು ಸಾಧ್ಯವೋ ಅವರಿಗೆ ನಾವು ಟಿಕೆಟ್ ಅನ್ನು ನೀಡುತ್ತೇವೆ. ಟಿಕೆಟ್ ಮೆರಿಟ್ ಆಧಾರದಲ್ಲಿ ನೀಡಲಾಗುತ್ತದೆ," ಎಂದು ತಿಳಿಸಿದ್ದಾರೆ. ಇನ್ನು "ಎಲ್ಲ ಸಹಭಾಗಿತ್ವದೊಂದಿಗೆ ಪಕ್ಷವು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತದೆ," ಎಂದು ಕೂಡಾ ಹೇಳಿದ್ದಾರೆ. "ಕಾಂಗ್ರೆಸ್ ಒಗ್ಗಟ್ಟಿನಲ್ಲಿ ಇರಲಿದೆ. ಎಲ್ಲಾ ನಾಯಕರುಗಳಿಗೂ ಜವಾಬ್ದಾರಿಯನ್ನು ಹಂಚಲಾಗುತ್ತದೆ. ದಿನ ಕಳೆದಂತೆ ನಾವು ಹೆಚ್ಚು ಶಕ್ತಿಯುತರಾಗುತ್ತಿದ್ದೇವೆ," ಎಂದು ಕೂಡಾ ನವಜೋತ್ ಸಿಂಗ್ ಸಿಧು ಹೇಳಿದ್ದಾರೆ.
ಪಂಜಾಬ್ ಕಾಂಗ್ರೆಸ್‌ನ ಚುನಾವಣಾ ಸಮಿತಿ
ಪಂಜಾಬ್ ಪ್ರದೇಶ ಚುನಾವಣಾ ಸಮಿತಿಯಲ್ಲಿ ನವಜೋತ್ ಸಿಂಗ್ ಸಿಧು ಮಾತ್ರವಲ್ಲದೇ, ಪಂಜಾಬ್ ಮುಖ್ಯಮಂತ್ರಿ ಚರಣ್ ಜೀತ್ ಸಿಂಗ್ ಚನ್ನಿ, ಅಂಬಿಕಾ ಸೋನಿ, ಸುನಿಲ್ ಜಖರ್, ಪ್ರತಾಪ್ ಸಿಂಗ್ ಬಾಜ್ವಾ ಇದ್ದಾರೆ. ಹಾಗೆಯೇ ಮಾಜಿ ಸಚಿವ ಬಲ್‌ಬೀರ್ ಸಿಂಗ್ ಸಿಧು, ಶ್ಯಾಮ್ ಸುಂದರ್ ಅರೋರಾ, ರಾಣಾ ಗುರ್ಮಿತ್ ಸಿಂಗ್ ಸೋದಿ, ಸಾಧು ಸಿಂಗ್ ಧರಮ್‌ಸೋತ್, ಗುರ್‌ಪ್ರೀತ್ ಕಂಗಾರ್, ಅಜಲಿಬ್ ಸಿಂಗ್ ಬತ್ತಿ, ನವ್‌ತೇಜ್ ಸಿಂಗ್ ಚೀಮಾ ಕೂಡಾ ಈ ಸಮಿತಿಯಲ್ಲಿ ಇದ್ದಾರೆ.
ಮುಂದಿನ ವರ್ಷ ಉತ್ತರ ಪ್ರದೇಶ, ಗೋವಾ, ಮಣಿಪುರ, ಉತ್ತರಾಖಂಡ, ಪಂಜಾಬ್‌ನಲ್ಲಿ ವಿಧಾನಸಭೆ ಚುನಾವಣೆಯು ನಡೆಯಲಿದೆ. ಈ ಪೈಕಿ ಪಂಜಾಬ್ ರಾಜ್ಯ ಮಾತ್ರ ಕಾಂಗ್ರೆಸ್ ಆಡಳಿತವಿರುವ ರಾಜ್ಯವಾಗಿದೆ. ಈ ನಿಟ್ಟಿನಲ್ಲಿ ಪಂಜಾಬ್‌ನ ವಿಧಾನಸಭೆ ಚುನಾವಣೆಯು ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ. ಇನ್ನು ಪಂಜಾಬ್ ಕಾಂಗ್ರೆಸ್‌ನಲ್ಲಿ ಹಲವಾರು ಬಿಕ್ಕಟ್ಟುಗಳು ಕಾಣಿಸಿಕೊಂಡಿದೆ. ಈಗಾಗಲೇ ಪಂಜಾಬ್ ಕಾಂಗ್ರೆಸ್ ಅನ್ನು ತೊರೆದಿರುವ ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಸಿಧು ಬಿಜೆಪಿ ಮೈತ್ರಿಯೊಂದಿಗೆ ಚುನಾವಣಾ ಕಣಕ್ಕೆ ಇಳಿಯಲು ಮುಂದಾಗಿದ್ದಾರೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications