ಪಂಜಾಬ್: ನಟಿ ಮಾಹಿ ಗಿಲ್, ನಟ ಧಲಿವಾಲ್ ಬಿಜೆಪಿಗೆ ಸೇರ್ಪಡೆ
ಚಂಡೀಗಢ, ಫೆಬ್ರವರಿ 8: ಪಂಜಾಬ್‌ನಲ್ಲಿ ಫೆಬ್ರವರಿ 20ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೂ ಮುನ್ನ ಬಾಲಿವುಡ್ ನಟಿ ಮಾಹಿ ಗಿಲ್ ಹಾಗೂ ಪಂಜಾಬ್ ನಟ ಹಾಬಿ ಧಲಿವಾಲ್ ಭಾರತೀಯ ಜನತಾ ಪಕ್ಷ(ಬಿಜೆಪಿ)ಕ್ಕೆ ಸೇರ್ಪಡೆಯಾಗಿದ್ದಾರೆ.
ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಕೇಂದ್ರ ಸಚಿವ ಪಂಜಾಬ್ ಬಿಜೆಪಿ ಉಸ್ತುವಾರಿ ಗಜೇಂದ್ರ ಸಿಂಗ್ ಶೇಖಾವತ್ ಹಾಗೂ ದುಷ್ಯಂತ್ ಗೌತಮ್ ಅವರ ಸಮ್ಮುಖದಲ್ಲಿ ಇಬ್ಬರು ಚಿತ್ರರಂಗದ ಪ್ರಮುಖರು ಬಿಜೆಪಿಗೆ ಸೇರ್ಪಡೆಗೊಂಡರು.
ಮಾಹಿ ಗಿಲ್ ಹಿಂದಿ ಹಾಗೂ ಪಂಜಾಬಿ ಚಲನಚಿತ್ರಗಳಲ್ಲಿ ಪ್ರಸಿದ್ಧರು, ಮಾಹಿ ಗಿಲ್ ಅವರ ನಿಜವಾದ ಹೆಸರು ರಿಂಪಿ ಕೌರ್ ಗಿಲ್. ಅವರು ಪಂಜಾಬಿ ಕುಟುಂಬಕ್ಕೆ ಸೇರಿದವರು ಮತ್ತು ಮೂಲತಃ ಚಂಡೀಗಢದವರು, ಮುಂಬರುವ ಚುನಾವಣೆಯಲ್ಲಿ ಅವರಿಗೆ ದೊಡ್ಡ ಜವಾಬ್ದಾರಿ ನೀಡಬಹುದು ಎಂದು ಅಂದಾಜಿಸಲಾಗಿದೆ.

ಮಾಹಿ ಅವರು ದೇವ್ ಡಿ, ಗುಲಾಲ್, ಸಾಹೇಬ್ ಬೀವಿ ಔರ್ ಗ್ಯಾಂಗ್‌ಸ್ಟರ್, ಪಾನ್ ಸಿಂಗ್ ತೋಮರ್, ದಬಂಗ್, ಸಾಹೇಬ್ ಬೀವಿ ಔರ್ ಗ್ಯಾಂಗ್‌ಸ್ಟರ್ ರಿಟರ್ನ್ಸ್, ಜಂಜೀರ್, ದುರ್ಗಮತಿ ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.
ಹಾಬಿ ಧಲ್‌ವಾಲ್ ಅವರು ಥಾನಾ ಸದರ್, ಜಿಂದೆ ಮೇರಿಯೆ ದಿಲಾವರ್, ಅಂಗ್ರೇಜ್, ಪಂಜಾಬಿಯನ್ ದಾ ಕಿಂಗ್ ಬಲರಾಜ್ ಸಿಂಗ್, ಸಾಬ್ ಬಹಾದರ್, ಲಾಹೋರಿಯೆ, ಮಂಜೆ ಬಿಸ್ತ್ರೆ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಪಂಜಾಬ್‌ನಲ್ಲಿ ಫೆಬ್ರವರಿ 20ರಂದು ಚುನಾವಣೆ ನಡೆಯಲಿದ್ದು, ಮಾರ್ಚ್ 10ಕ್ಕೆ ಫಲಿತಾಂಶ ಹೊರಬರಲಿದೆ.
ಕೆಲವೇ ದಿನಗಳ ಹಿಂದೆ ಕಾಂಗ್ರೆಸ್‌ನ ಮಾಜಿ ಶಾಸಕ ಅರವಿಂದ್ ಖನ್ನಾ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಉದ್ಯಮಿ ಹಾಗೂ ಎರಡು ಅವಧಿಗೆ ಶಾಸಕರಾಗಿದ್ದ ಖನ್ನಾ, ಕೆಲವು ವರ್ಷಗಳ ಹಿಂದೆ ಕಾಂಗ್ರೆಸ್ ತೊರೆದ ಬಳಿಕ ರಾಜಕೀಯವಾಗಿ ಸಕ್ರಿಯರಾಗಿರಲಿಲ್ಲ.
ಅರವಿಂದ್ ಖನ್ನಾ ಜತೆ, ಗುರುಚರಣ್ ಸಿಂಗ್ ತೊಹ್ರಾ ಅವರ ಮೊಮ್ಮಗ ಕನ್ವರ್ ವೀರ್ ಸಿಂಗ್ ತೋಹ್ರಾ, ಅಕಾಲಿದಳದಲ್ಲಿದ್ದ ಗುರುದೀಪ್ ಸಿಂಗ್ ಗೋಶಾ ಮತ್ತು ಧರಂವೀರ್ ಸರೀನ್ ಬಿಜೆಪಿಗೆ ಸೇರ್ಪಡೆಗೊಂಡರು.
ಗೋವಾ, ಪಂಜಾಬ್, ಮಣಿಪುರ್, ಉತ್ತರಾಖಂಡ್ ಹಾಗೂ ಉತ್ತರ ಪ್ರದೇಶ ಸೇರಿದಂತೆ ಪಂಚರಾಜ್ಯಗಳಿಗೆ ಚುನಾವಣಾ ದಿನಾಂಕವನ್ನು ಘೋಷಿಸಲಾಗಿದೆ. ಪಂಜಾಬ್ ವಿಧಾನಸಭಾ ಚುನಾವಣೆಯು ಫೆಬ್ರವರಿ 14ರಂದು ಸೋಮವಾರ ನಡೆಯಲಿದೆ. ಒಟ್ಟು ಏಳು ಹಂತಗಳಲ್ಲಿ ಪಂಚರಾಜ್ಯ ಚುನಾವಣೆ ನಡೆಯಲಿದೆ.
ಚುನಾವಣೆಗೆ 900 ವೀಕ್ಷಕರ ನೇಮಕ ಮಾಡಲಾಗುವುದು. ಅಭ್ಯರ್ಥಿಗಳು ತಮ್ಮ ಅಪರಾಧ ಹಿನ್ನೆಲೆಯನ್ನು ತಿಳಿಸಬೇಕು. ಕ್ರಿಮಿನಲ್ ಹಿನ್ನೆಲೆಯ ಅಭ್ಯರ್ಥಿ ಬಗ್ಗೆ ಪಕ್ಷ ಕಾರಣ ನೀಡಬೇಕು. ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ನಾಮಪತ್ರವನ್ನು ಸಲ್ಲಿಸಬಹುದು. ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನೆಲೆ ಬಗ್ಗೆ ಮಾಹಿತಿ ಪ್ರಕಟಿಸಬೇಕು. ಆಯಾ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸಬೇಕು. KNOW YOUR CANDIDATE ಆ್ಯಪ್‌ನಲ್ಲಿ ಮಾಹಿತಿ ನೀಡಬೇಕು.
ಪಕ್ಷದ ವೆಬ್ಸೈಟ್ನ ಮುಖಪುಟದಲ್ಲಿ ಮಾಹಿತಿ ನೀಡಬೇಕು. ಗೋವಾ, ಮಣಿಪುರದಲ್ಲಿ ಚುನಾವಣಾ ವೆಚ್ಚ 28 ಲಕ್ಷ ರೂ. ಆಗಿರಲಿದೆ. ಉತ್ತರಾಖಂಡ್, ಉತ್ತರ ಪ್ರದೇಶ, ಪಂಜಾಬ್‌ನಲ್ಲಿ 40 ಲಕ್ಷ ಆಗಿರಲಿದೆ ಎಂದು ಅಭ್ಯರ್ಥಿಗಳಿಗೆ ಚುನಾವಣಾ ವೆಚ್ಚವನ್ನು ಆಯೋಗ ಮಿತಿಗೊಳಿಸಿದೆ.
ಚುನಾವಣೆಯಲ್ಲಿ ಒಟ್ಟು 18.34 ಕೋಟಿ ಮತದಾರರು ಮತದಾನ ಮಾಡಲಿದ್ದಾರೆ. 24.9 ಲಕ್ಷ ಜನರು ಮೊದಲ ಬಾರಿ ಮತ ಚಲಾಯಿಸ್ತಿದ್ದಾರೆ. ಕೊರೊನಾ ಮಾರ್ಗಸೂಚಿ ಪಾಲಿಸಿ ಚುನಾವಣೆ ನಡೆಸುತ್ತೇವೆ. ಮತಗಟ್ಟೆಗಳನ್ನು ಗ್ರೌಂಡ್ ಫ್ಲೋರ್‌ನಲ್ಲಿ ಸ್ಥಾಪಿಸಲಾಗುತ್ತದೆ. ಥರ್ಮಲ್ ಸ್ಕ್ಯಾನಿಂಗ್, ಮಾಸ್ಕ್, ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗುತ್ತದೆ.












Click it and Unblock the Notifications