ಪಂಜಾಬ್ ಚುನಾವಣೆ: ಸೋನು ಸೂದ್ ವಿರುದ್ಧ ಎಫ್ಐಆರ್ ದಾಖಲು
ಚಂಡೀಗಢ, ಫೆಬ್ರವರಿ 21: ಮತದಾನದ ದಿನದಂದು ತಮ್ಮ ಸಹೋದರಿ ಮತ್ತು ಕಾಂಗ್ರೆಸ್ ನಾಯಕಿ ಮಾಳವಿಕಾ ಸೂದ್ ಅವರ ಪರವಾಗಿ ಮತಗಳ ಮೇಲೆ ಪ್ರಭಾವ ಬೀರಲು ಪ್ರಚಾರ ಮಾಡಿದ್ದಕ್ಕಾಗಿ ಬಾಲಿವುಡ್ ನಟ ಸೋನು ಸೂದ್ ವಿರುದ್ಧ ಮೊಗಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮೊಗಾದ ಮತಗಟ್ಟೆಗೆ ಸೋನು ಸೂದ್ ಪ್ರವೇಶಿಸಲು ಯತ್ನಿಸಿದ ನಂತರ ಭಾನುವಾರ ದೊಡ್ಡ ವಿವಾದ ಉಂಟಾಗಿದೆ. ಅವರ ಸಹೋದರಿ ಮಾಳವಿಕಾ ಸೂದ್ ಅವರು ಮೊಗಾದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವುದರಿಂದ, ಬಾಲಿವುಡ್ ನಟನ ಈ ಪ್ರಯತ್ನವು ಅಧಿಕಾರಿಗಳು ಮತ್ತು ಮೊಗಾ ಪೊಲೀಸರ ಆಕ್ರೋಶಕ್ಕೆ ಕಾರಣವಾಗಿದೆ. ಅಕಾಲಿದಳದ ದೂರಿನ ನಂತರ ಈಗ ಎಫ್‌ಐಆರ್ ದಾಖಲು ಮಾಡಲಾಗಿದೆ.
ಭಾನುವಾರ ಪಂಜಾಬ್ ವಿಧಾನಸಭಾ ಚುನಾವಣೆಗೆ ಮತದಾನ ನಡೆದಿದೆ. ಈ ನಡುವೆ ಪೊಲೀಸರು ನಟ ಸೋನು ಸೂದ್ ಎಸ್‌ಯುವಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮೊಗಾ ಮತಗಟ್ಟೆಯಲ್ಲಿ ನಟ ಸೋನು ಸೂದ್ ಅವರ ಎಸ್‌ಯುವಿಯನ್ನು ಪೊಲೀಸರು ವಶಪಡಿಸಿಕೊಂಡರು.

ಭಾನುವಾರ ಪಂಜಾಬ್ ವಿಧಾನಸಭಾ ಚುನಾವಣೆಗೆ ಮತದಾನ ನಡೆಯುತ್ತಿದ್ದಾಗ ಮೋಗಾ ಜಿಲ್ಲೆಯ ಲಂಧೇಕೆ ಗ್ರಾಮದಲ್ಲಿ "ಸಂಶಯಾಸ್ಪದ ಚಟುವಟಿಕೆ" ನಡೆಸಲಾಗುತ್ತಿದೆ ಎಂಬ ವರದಿಗಳ ನಂತರ ಬಾಲಿವುಡ್ ನಟ ಮತ್ತು ಸಾಮಾಜಿಕ ಕಾರ್ಯಕರ್ತ ಸೋನು ಸೂದ್ ಕುಳಿತಿದ್ದ ಎಸ್‌ಯುವಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮನೆಯಿಂದ ಹೊರ ಬಂದರೆ ಕ್ರಮದ ಎಚ್ಚರಿಕೆ
ನಟನ ಕಾರನ್ನು ಜಪ್ತಿ ಮಾಡಿ ಮನೆಗೆ ಕಳುಹಿಸಲಾಗಿದೆ. ಮನೆಯಿಂದ ಹೊರ ಬಂದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮೊಗಾ ಜಿಲ್ಲಾ ಪಿಆರ್‌ಒ ಪ್ರದಬಾದೀಪ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ. ಮತದಾರರ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂದು ಆರೋಪಿಸಿ ಮೊಗಾದ ಅಕಾಲಿದಳದ ಅಭ್ಯರ್ಥಿಯೂ ಅವರ ವಿರುದ್ಧ ದೂರು ದಾಖಲಿಸಿದ್ದರು.
ಈಗ ಮೂಲಗಳ ಪ್ರಕಾರ, ಮೋಗಾ ಪೊಲೀಸರು ಸೋನು ಸೂದ್ ವಿರುದ್ಧ ಐಪಿಸಿಯ ಸೆಕ್ಷನ್ 188 ರ ಅಡಿಯಲ್ಲಿ ದೂರು ದಾಖಲು ಮಾಡಿದ್ದಾರೆ. ಪಂಜಾಬ್ ವಿಧಾನಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ (ಎಂಸಿಸಿ) ಕುರಿತು ಜಿಲ್ಲಾಧಿಕಾರಿಗಳು ಹೊರಡಿಸಿದ ನಿಷೇಧಾಜ್ಞೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ನಟನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇನ್ನು ನಿನ್ನೆ ಈ ಬಗ್ಗೆ ಮಾಹಿತಿ ನೀಡಿದ್ದ ನಗರ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ದೇವಿಂದರ್ ಸಿಂಗ್, "ಅನುಮಾನಾಸ್ಪದ ಚಟುವಟಿಕೆಯ ಆಧಾರದ ಮೇಲೆ ಎಸ್‌ಯುವಿಯನ್ನು ವಶಪಡಿಸಿಕೊಳ್ಳಲಾಗಿದೆ. ಲಂಧೇಕೆ ಗ್ರಾಮದ ಮತಗಟ್ಟೆ ಬಳಿ ಎಸ್‌ಯುವಿ ಸುತ್ತಾಡುತ್ತಿರುವ ಬಗ್ಗೆ ನಮಗೆ ದೂರು ಬಂದಿದೆ. ನಾವು ಅದನ್ನು ವಶಪಡಿಸಿಕೊಂಡಿದ್ದೇವೆ. ಮುಂದಿನ ಕ್ರಮ ನಡೆಯುತ್ತಿದೆ," ಎಂದು ತಿಳಿಸಿದ್ದಾರೆ.
"ಸೋನು ಸೂದ್‌ಗೆ ಮೋಗಾ ಕ್ಷೇತ್ರದಲ್ಲಿ ಮತ ಇಲ್ಲದ ಕಾರಣ ಆ ಪ್ರದೇಶದಲ್ಲಿ ಓಡಾಡಲು ಅವಕಾಶವಿಲ್ಲ. ಈ ಹಿನ್ನೆಲೆ ಮನೆಯಲ್ಲೇ ಇರುವಂತೆ ಸೂಚಿಸಿದ್ದೇನೆ. ಆದರೆ, ಅವರು ನಿರ್ದೇಶನವನ್ನು ಉಲ್ಲಂಘಿಸಿದ್ದಾರೆ. ಆದ್ದರಿಂದ, ನಾನು ಅವರ ಮನೆಯಲ್ಲಿ ವಿಡಿಯೋ ಕಣ್ಗಾವಲು ಇರಿಸಲು ನಿರ್ದೇಶನ ನೀಡಿದ್ದೇನೆ," ಎಂದು ಅಧಿಕಾರಿ ಸತ್ವಂತ್ ಸಿಂಗ್ ಹೇಳಿದ್ದಾರೆ.
ಸೋನು ಸೂದ್ ಹೇಳಿದ್ದು ಏನು?
"ಪ್ರತಿ ಕ್ಷಗಳು ಮತಗಳನ್ನು ಖರೀದಿಸುತ್ತಿವೆ," ಎಂದು ಸೋನು ಸೂದ್ ಆರೋಪಿಸಿದ್ದಾರೆ. "ಶಿರೋಮಣಿ ಅಕಾಲಿದಳದ ಅಭ್ಯರ್ಥಿ ಬರ್ಜಿಂದರ್ ಸಿಂಗ್, ಅಲಿಯಾಸ್ ಮಖನ್ ಬ್ರಾರ್, ನನ್ನ ವಿರುದ್ಧ ಸುಳ್ಳು ದೂರು ದಾಖಲಿಸಿದ್ದಾರೆ. ಇದು ಕೇವಲ ಪಾರ್ಕಿಂಗ್ ಸಮಸ್ಯೆಯಾಗಿತ್ತು. ವಾಹನವನ್ನು ಸರಿಯಾಗಿ ನಿಲ್ಲಿಸಿರಲಿಲ್ಲ. ಬೇರೆ ಏನೂ ಇರಲಿಲ್ಲ," ಎಂದು ಸೋನು ಸೂದ್ ಹೇಳಿದ್ದಾರೆ.
"ಪ್ರತಿಪಕ್ಷಗಳು, ವಿಶೇಷವಾಗಿ ಅಕಾಲಿದಳದ ಜನರು ವಿವಿಧ ಬೂತ್‌ಗಳಲ್ಲಿ ಬೆದರಿಕೆ ಕರೆಗಳನ್ನು ಮಾಡಿರುವುದು ನಮಗೆ ತಿಳಿದು ಬಂದಿದೆ. ಕೆಲವು ಬೂತ್‌ಗಳಲ್ಲಿ ಹಣ ಹಂಚಲಾಗುತ್ತಿದೆ. ಹಾಗಾಗಿ ನ್ಯಾಯಸಮ್ಮತ ಚುನಾವಣೆಯನ್ನು ಪರಿಶೀಲಿಸಿ ಮತ್ತು ಖಚಿತಪಡಿಸಿಕೊಳ್ಳುವುದು ನಮ್ಮ ಕರ್ತವ್ಯ. ಅದಕ್ಕೇ ಹೊರಗೆ ಹೋಗಿದ್ದೆವು. ಈಗ, ನಾವು ಮನೆಯಲ್ಲಿದ್ದೇವೆ. ನ್ಯಾಯಸಮ್ಮತ ಮತದಾನ ನಡೆಯಬೇಕು," ಎಂದು ಸೋನು ಸೂದ್ ಹೇಳಿದ್ದಾರೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications