ಪಂಜಾಬ್ ನೂತನ ಸಚಿವ ಸಂಪುಟ: ಮಾ.19ರಂದು ಪ್ರಮಾಣವಚನ ಸ್ವೀಕಾರ
ಚಂಡೀಗಢ, ಮಾರ್ಚ್ 18: ನೂತನವಾಗಿ ರಚನೆಯಾದ ಪಂಜಾಬ್ ಸರ್ಕಾರದ ಪದಗ್ರಹಣ ಸಮಾರಂಭ ನಾಳೆ (ಮಾರ್ಚ್ 19) ಚಂಡೀಗಢದಲ್ಲಿ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಸಚಿವರು ಪ್ರಮಾಣ ವಚನ ಸ್ವೀಕರಿಸಿದ ನಂತರ, ಅವರು ಪಂಜಾಬ್ ಸಿವಿಲ್ ಸೆಕ್ರೆಟರಿಯೇಟ್‌ನಲ್ಲಿ ಅಧಿಕಾರ ವಹಿಸಿಕೊಳ್ಳುತ್ತಾರೆ.
ನಂತರ ಮಧ್ಯಾಹ್ನ 12.30 ಕ್ಕೆ ಆಮ್ ಆದ್ಮಿ ಪಕ್ಷದ ನೇತೃತ್ವದ ಪಂಜಾಬ್ ಸರ್ಕಾರದ ಮೊದಲ ಸಚಿವ ಸಂಪುಟ ಸಭೆಯಲ್ಲಿ ನೂತನ ಸಚಿವರುಗಳು ಭಾಗಿಯಾಗಲಿದ್ದಾರೆ. ಇದಕ್ಕೂ ಮೊದಲು, ಮಾರ್ಚ್ 17 ರಂದು, ಮುಖ್ಯಮಂತ್ರಿ ಭಗವಂತ್ ಮಾನ್ ಸೇರಿದಂತೆ ಪಂಜಾಬ್‌ನ ನೂತನ ಚುನಾಯಿತ ಶಾಸಕರು ವಿಧಾನಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಹಂಗಾಮಿ ಸ್ಪೀಕರ್ ಡಾ ಇಂದರ್‌ಬೀರ್ ಸಿಂಗ್ ನಿಜ್ಜರ್ ಅವರು ಶಾಸಕರಿಗೆ ಪ್ರಮಾಣ ವಚನ ಬೋಧನೆ ಮಾಡಲಿದ್ದು, ಪಂಜಾಬ್ ವಿಧಾನಸಭೆಯಲ್ಲಿ ಶಾಸಕರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. "ಆಮ್ ಆದ್ಮಿ ಪಕ್ಷದ ಸರ್ಕಾರ ಪಂಜಾಬ್‌ನಲ್ಲಿ ಹೊಸ ಬದಲಾವಣೆಯನ್ನು ತರಲಿದೆ ಅದಕ್ಕಾಗಿ ಜನರು ನಮ್ಮನ್ನು ಆಯ್ಕೆ ಮಾಡಿದ್ದಾರೆ. ನಮ್ಮ ಸರ್ಕಾರವು ಪಂಜಾಬ್‌ನ ಅತ್ಯಂತ ಪ್ರಾಮಾಣಿಕ ಸರ್ಕಾರ ಎಂದು ಕರೆಯಲ್ಪಡುತ್ತದೆ," ಎಂದು ನೂತನ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ತಿಳಿಸಿದ್ದಾರೆ.

ಎಎಪಿ ನಾಯಕ ಮತ್ತು ಇತ್ತೀಚೆಗೆ ನಡೆದ ಪಂಜಾಬ್ ವಿಧಾನಸಭಾ ಚುನಾವಣೆಗೆ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಭಗವಂತ್ ಮಾನ್ ಮಾರ್ಚ್ 16 ರಂದು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಇತ್ತೀಚೆಗೆ ಮುಕ್ತಾಯಗೊಂಡ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ 92 ಸ್ಥಾನಗಳನ್ನು ಗೆಲ್ಲುವ ಮೂಲಕ ಎಎಪಿ ತನ್ನ ಹೆಚ್ಚಿನ ಪ್ರತಿಸ್ಪರ್ಧಿಗಳನ್ನು ಬದಿಗೊತ್ತಿ ಪ್ರಚಂಡ ವಿಜಯವನ್ನು ದಾಖಲಿಸಿದೆ.
ಪಂಜಾಬ್‌ನ ನೂತನ ಮುಖ್ಯಮಂತ್ರಿ ಭಗವಂತ್ ಮಾನ್ ಧುರಿ ಕ್ಷೇತ್ರದಲ್ಲಿ 58,000 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇದಕ್ಕೂ ಮುನ್ನ ಇತ್ತೀಚೆಗೆ, ಭಗವಂತ್ ಮಾನ್ ರಾಷ್ಟ್ರ ರಾಜಧಾನಿಯಲ್ಲಿರುವ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ನಿವಾಸದಲ್ಲಿ ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಭೇಟಿಯಾದರು. ಅರವಿಂದ್ ಕೇಜ್ರಿವಾಲ್ ಕಾಲಿಗೆರಗಿ ಆಶೀರ್ವಾದವನ್ನು ಪಡೆದಿದ್ದಾರೆ.
ಎಎಪಿ ಸೇರಿದ ಬಿಜೆಪಿ, ಕಾಂಗ್ರೆಸ್ ನಾಯಕರು
ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವಿನ ನಂತರ ಹರಿಯಾಣದ ಹಲವು ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಸೇರ್ಪಡೆಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಬಿಜೆಪಿಯ ಗುರುಗ್ರಾಮ್ ಮಾಜಿ ಶಾಸಕ ಉಮೇಶ್ ಅಗರ್ವಾಲ್ ಮತ್ತು ಮಾಜಿ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಬಿಜೇಂದ್ರ ಸಿಂಗ್ ಎಎಪಿಗೆ ಸೇರಿದ್ದಾರೆ ಎಂದು ವರದಿಯಾಗಿದೆ. ಐಎನ್‌ಎಲ್‌ಡಿ ನಾಯಕ ಮತ್ತು ಹರಿಯಾಣದ ಮಾಜಿ ಸಚಿವ ಬಲ್ಬೀರ್ ಸಿಂಗ್ ಸೈನಿ ಕೂಡ ಪಕ್ಷದ ಪ್ರಧಾನ ಕಚೇರಿಯಲ್ಲಿ ಎಎಪಿಗೆ ಸೇರ್ಪಡೆಯಾದರು. ಎಎಪಿಗೆ ಸೇರ್ಪಡೆಗೊಂಡ ಹರಿಯಾಣದ ಇತರ ನಾಯಕರಲ್ಲಿ ಮಾಜಿ ಸಮಲ್ಖಾ ಶಾಸಕ (ಸ್ವತಂತ್ರ) ರವೀಂದ್ರ ಕುಮಾರ್, ಜಗತ್ ಸಿಂಗ್ (ಕಾಂಗ್ರೆಸ್), ಅಶೋಕ್ ಮಿತ್ತಲ್ (ಬಿಎಸ್ಪಿ), ಅಮನದೀಪ್ ಸಿಂಗ್ ವಾರಾಚ್ (ಬಿಜೆಪಿ), ಬ್ರಹ್ಮ್ ಸಿಂಗ್ ಗುರ್ಜರ್ (ಬಿಜೆಪಿ), ಸರ್ದಾರ್ ಗುರ್ಲಾಲ್ ಸಿಂಗ್ (ಸರ್ಪಂಚ್ ಹರಿಯಾಣ) ಅವರು ಸೇರಿದ್ದಾರೆ.
ಪಂಜಾಬ್‌ನ ನೂತನ ಸಚಿವ ಸಂಪುಟ
ಭಗವಂತ್ ಮಾನ್: ಪಂಜಾಬ್ ನೂತನ ಮುಖ್ಯಮಂತ್ರಿ, ಗೃಹ ಖಾತೆ
ಕುಲ್ತಾರ್ ಸಿಂಗ್ ಸಂದ್ವಾ: ಉಪಮುಖ್ಯಮಂತ್ರಿ
ಅಮಾನ್ ಅರೋರಾ: ಹಣಕಾಸು ಸಚಿವ
ಬುಧ್ ರಾಮ್: ಶಿಕ್ಷಣ ಸಚಿವ
ಜಗದೀಪ್ ಸಿಂಗ್ ಕಾಕ ಬ್ರಾರ್: ಕೃಷಿ ಸಚಿವ
ಗುರ್ಮಿತ್ ಸಿಂಗ್ ಮೀತ್ ಹಯೇರ್: ಲೋಕಪಯೋಗಿ ಸಚಿವ
ಡಾ. ಬಲ್ವೀರ್ ಸಿಂಗ್: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ
ಜೈ ಕಿಶಾನ್ ರೌದಿ: ಆಹಾರ ಮತ್ತು ಪಡಿತರ ಖಾತೆ
ಫ್ರೋ. ಬಲ್ಜೀಂದರ್ ಕೌರ್: ಸ್ಥಳೀಯ ಸಂಸದೀಯ ವ್ಯವಹಾರ ಖಾತೆ
ಕುನ್ವಾರ್ ವಿಜಯ್ ಪ್ರತಾಪ್: ವಾಣಿಜ್ಯ ಸಚಿವ
ಕುಲ್ವಾಂತ್ ಸಿಂಗ್ ಪಂಡೋರಿ: ತಾಂತ್ರಿಕ ಶಿಕ್ಷಣ ಸಚಿವ
ಸವರ್‌ಜೀತ್ ಕೌರ್ ಮನೋಕೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ
ಗುರ್ಮಿತ್ ಸಿಂಗ್ ಕುಡಿಯಾಣ: ಗ್ರಾಮೀಣ ಅಭಿವೃದ್ಧಿ, ಪಂಚಾಯತ್ ಖಾತೆ
ಲಾಭ್ ಸಿಂಗ್ ಉಗೋಕೆ: ವಸತಿ ಮತ್ತು ನಗರಾಭಿವೃದ್ಧಿ ಪಂಚಾಯತ್ ಸಚಿವ
ಜೀವನ್‌ಜೋತ್ ಕೌರ್: ಕಂದಾಯ ಸಚಿವ
ನರೀಂದರ್ ಕೌರ್ ಭಾರಜ್: ಜಲ ಖಾತೆ












Click it and Unblock the Notifications