ಪಂಜಾಬ್ ಚುನಾವಣೆ; ಜನವರಿ 3ರಿಂದ ರಾಹುಲ್ ಗಾಂಧಿ ಪ್ರಚಾರ

ಚಂಡೀಗಢ, ಡಿಸೆಂಬರ್ 27; ಪಂಜಾಬ್ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷ ಜನವರಿ 3ರಂದು ಅಧಿಕೃತವಾಗಿ ಪ್ರಚಾರ ಆರಂಭಿಸಲಿದೆ. 2022ರಲ್ಲಿ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಪಂಜಾಬ್ ಸಹ ಒಂದು ಮತ್ತು ಕಾಂಗ್ರೆಸ್ ಅಧಿಕಾರದಲ್ಲಿರುವ ಏಕೈಕ ರಾಜ್ಯ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜನವರಿ 3ರಂದು ಮೋಗದಲ್ಲಿ ಪಕ್ಷದ ಸಮಾವೇಶ ಉದ್ದೇಶಿಸಿ ಮಾತನಾಡುವ ಮೂಲಕ ಕಾಂಗ್ರೆಸ್ ಪ್ರಚಾರಕ್ಕೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.

2022ರ ಫೆಬ್ರವರಿ ಅಥವ ಮಾರ್ಚ್‌ನಲ್ಲಿ ಪಂಜಾಬ್ ವಿಧಾನಸಭೆ ಚುನಾವಣೆ ನಡೆಯಲಿದೆ. 2017ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 117 ಸದಸ್ಯ ಬದಲ ವಿಧಾಸಭೆಯಲ್ಲಿ 77 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಸ್ಪಷ್ಟ ಬಹುಮತ ಪಡೆದು ಅಧಿಕಾರದ ಗದ್ದುಗೆ ಏರಿತ್ತು.

Punjab Assembly Elections Rahul Gandhi To Start Campaign On January 3

ಪಂಜಾಬ್‌ನಲ್ಲಿ ಕಾಂಗ್ರೆಸ್ ಅಧಿಕಾರ ಪಡೆಯುವ ಮೂಲಕ 10 ವರ್ಷಗಳ ಎಸ್‌ಎಡಿ-ಬಿಜೆಪಿ ಮೈತ್ರಿಕೂಟ ಅಧಿಕಾರ ಕಳೆದುಕೊಂಡಿತ್ತು. ಕಳೆದ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ 20 ಸ್ಥಾನದಲ್ಲಿ ಜಯಗಳಿಸುವ ಮೂಲಕ 2ನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.

10 ವರ್ಷ ರಾಜ್ಯದಲ್ಲಿ ಆಡಳಿತ ನಡೆಸಿದರೂ ಕಳೆದ ಚುನಾವಣೆಯಲ್ಲಿ ಶಿರೋಮಣಿ ಅಕಾಲಿ ದಳಗಳಿಸಿದ್ದು ಕೇವಲ 15 ಸ್ಥಾನ ಮತ್ತು ಬಿಜೆಪಿ 3 ಸ್ಥಾನ. ಆದರೆ ಈ ಬಾರಿಯ ಚುನಾವಣೆ ಪ್ರಬಲ ಪೈಪೋಟಿಗೆ ಸಾಕ್ಷಿಯಾಗಲಿದೆ. ಕಾಂಗ್ರೆಸ್‌ಗೆ ಅಧಿಕಾರವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ.

2022ರಲ್ಲಿ ಉತ್ತರ ಪ್ರದೇಶ, ಗೋವಾ, ಉತ್ತರಾಖಂಡ, ಮಣಿಪುರ ಮತ್ತು ಪಂಜಾಬ್ ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯಲಿದೆ. ಈ 5 ರಾಜ್ಯಗಳ ಪೈಕಿ ಪಂಜಾಬ್‌ನಲ್ಲಿ ಮಾತ್ರ ಕಾಂಗ್ರೆಸ್ ಪಕ್ಷ ಅಧಿಕಾರಲ್ಲಿದೆ. ಬಿಜೆಪಿ ಜೊತೆಗೆ ಆಮ್ ಆದ್ಮಿ ಪಕ್ಷ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆ ಇದೆ.

ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ?; ಪಂಜಾಬ್ ಚುನಾವಣೆಗೆ ಪ್ರಚಾರ ಆರಂಭಿಸಲಿರುವ ರಾಹುಲ್ ಗಾಂಧಿ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡಲಿದ್ದಾರೆಯೋ? ಅಥವ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುವ ಮಂತ್ರ ಪಠಿಸಲಿದ್ದಾರೆಯೋ? ಕಾದು ನೋಡಬೇಕಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿಯಾಗಿದ್ದ ಕ್ಯಾಪ್ಟನ್ ಅಮರಿಂದರ್ ಸಿಂಗ್‌ಗೆ ರಾಜೀನಾಮೆ ನೀಡುವಂತೆ ಸೂಚಿಸಿತ್ತು. ಬಳಿಕ ಚರಣ್‌ಜಿತ್‌ಸಿಂಗ್‌ ಚನ್ನಿ ಮುಖ್ಯಮಂತ್ರಿಯಾದರು. ಆದರೆ ಪಂಜಾಬ್ ಕಾಂಗ್ರೆಸ್‌ನ ಅಧ್ಯಕ್ಷರು ನವಜೋತ್ ಸಿಂಗ್ ಸಿಧು.

ಒಂದು ವೇಳೆ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಚುನಾವಣೆ ಪೂರ್ವದಲ್ಲಿಯೇ ಘೋಷಣೆ ಮಾಡಿದರೆ ಕಾಂಗ್ರೆಸ್‌ನಲ್ಲಿ ಅಸಮಾಧಾನ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುವ ಚಿಂತನೆಯಲ್ಲಿ ಪಕ್ಷವಿದೆ.

ಪಂಜಾಬ್ ಚುನಾವಣೆಗೆ ಆಮ್ ಆದ್ಮಿ ಪಕ್ಷ, ಶಿರೋಮಣಿ ಅಕಾಲಿದಳಗಳು ಈಗಾಗಲೇ ಪ್ರಚಾರವನ್ನು ಆರಂಭಿಸಿವೆ. ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಪಂಜಾಬ್ ಲೋಕ ಕಾಂಗ್ರೆಸ್ ಎಂಬ ಹೊಸ ಪಕ್ಷ ಘೋಷಣೆ ಮಾಡಿದ್ದಾರೆ.

ಪಂಜಾಬ್ ಲೋಕ ಕಾಂಗ್ರೆಸ್, ಸುಖದೇವ್ ಡಿಂಡ್ಸಾರ ಎಸ್‌ಎಡಿ (ಸಂಯುಕ್ತ) ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡು ವಿಧಾನಸಭೆ ಚುನಾವಣೆ ಎದುರಿಸಲಿವೆ. ಈ ಮೂರು ಪಕ್ಷಗಳು ಜಂಟಿಯಾಗಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಲಿವೆ.

ಬಿಜೆಪಿಯ ಪಂಜಾಬ್ ಚುನಾವಣಾ ಉಸ್ತುವಾರಿ, ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಈ ಕುರಿತು ಮಾತನಾಡಿದ್ದಾರೆ, "ಸೀಟು ಹಂಚಿಕೆಯನ್ನು ಅಂತಿಮಗೊಳಿಸಲು ಪ್ರತಿ ಪಕ್ಷದಿಂದ ಇಬ್ಬರು ನಾಯಕರನ್ನು ಒಳಗೊಂಡ ಸಮಿತಿ ರಚನೆ ಮಾಡಲಾಗುತ್ತದೆ" ಎಂದು ಹೇಳಿದ್ದಾರೆ.

ಕೆಲವು ಚುನಾವಣಾ ಪೂರ್ವ ಸಮೀಕ್ಷೆಗಳು ಪಂಜಾಬ್‌ನಲ್ಲಿ ಯಾವ ಪಕ್ಷಕ್ಕೂ ಬಹುಮತ ಬರುವುದಿಲ್ಲ, ಅತಂತ್ರ ವಿಧಾನಸಭೆ ರಚನೆಯಾಗಲಿದೆ ಎಂದು ಹೇಳಿವೆ. ಆಮ್‌ ಆದ್ಮಿ ಪಕ್ಷ ದೊಡ್ಡ ಪಕ್ಷವಾಗಿ ಹೊರ ಹೊಮ್ಮಬಹುದು ಎಂದು ತಿಳಿಸಿವೆ.

ಆಮ್ ಆದ್ಮಿ ಪಕ್ಷ 51-57, ಕಾಂಗ್ರೆಸ್ 38-46 ಕ್ಷೇತ್ರಗಳಲ್ಲಿ ಗೆಲ್ಲಬಹುದು ಎಂದು ಸಮೀಕ್ಷೆ ವರದಿ ಅಂದಾಜಿಸಿವೆ. ಕಾಂಗ್ರೆಸ್ ಪಕ್ಷದಲ್ಲಿನ ಒಳಜಗಳ ಚುನಾವಣೆಯಲ್ಲಿ ಹಿನ್ನಡೆ ಉಂಟು ಮಾಡಲಿದೆಯೇ? ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+