ಹೀಗೂ ಮಾಡಬಹುದಾ?: ಕುದುರೆ ಬಣ್ಣ ಬದಲಾದರೆ ವ್ಯಾಪಾರಿಗೆ 22.65 ಲಕ್ಷ ರೂಪಾಯಿ ನಷ್ಟ!
ಚಂಡೀಗಢ, ಏಪ್ರಿಲ್ 25: ಟೋಪಿ ಹಾಕಿಸಿಕೊಳ್ಳುವವರು ಇರೋವರೆಗೂ, ಟೋಪಿ ಹಾಕುವವರೂ ಇದ್ದೇ ಇರುತ್ತಾರೆ ಎನ್ನುವುದಕ್ಕೆ ಪಂಜಾಬಿನಲ್ಲಿ ನಡೆದ ಇದೊಂದು ಘಟನೆಯೇ ಜೀವಂತ ಸಾಕ್ಷಿ. ಅಪರೂಪದ ಕುದುರೆಯನ್ನು ಖರೀದಿಸಿರುವ ವ್ಯಕ್ತಿ ಬರೋಬ್ಬರಿ 22 ಲಕ್ಷ ರೂಪಾಯಿ ಮಕ್ಮಲ್ ಟೋಪಿ ಹಾಕಿಸಿಕೊಂಡಿದ್ದಾರೆ.
ಸಂಗ್ರೂರ್ ಜಿಲ್ಲೆಯ ಸುನಮ್ ಪಟ್ಟಣದ ಬಟ್ಟೆ ವ್ಯಾಪಾರಿ ರಮೇಶ್ ಕುಮಾರ್ ಅವರಿಗೆ ಕುದುರೆ ವ್ಯಾಪಾರದ ಹೆಸರಿನಲ್ಲಿ 22.65 ಲಕ್ಷ ರೂಪಾಯಿ ವಂಚನೆ ಮಾಡಲಾಗಿದೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಿರುವ ಅವರು, "ಮಾರ್ವಾರಿ ತಳಿಯ ಸ್ಟಾಲಿಯನ್ ಅನ್ನು ಮಾರಾಟ ಮಾಡುವ ನೆಪದಲ್ಲಿ ಕುದುರೆ ವ್ಯಾಪಾರಿಗಳಾದ ಜತೀಂದರ್ ಪಾಲ್ ಸಿಂಗ್ ಸೆಖೋನ್, ಲಖ್ವಿಂದರ್ ಸಿಂಗ್ ಮತ್ತು ಲಾಚ್ರಾ ಖಾನ್ ತಮಗೆ ವಂಚಿಸಿದ್ದಾರೆ," ಎಂದು ಆರೋಪಿಸಿದ್ದಾರೆ.
ಸ್ಟಡ್ ಫಾರ್ಮ್ ಅನ್ನು ಪ್ರಾರಂಭಿಸಲು ಕಪ್ಪು ಕುದುರೆ ಖರೀದಿಗಾಗಿ ರಮೇಶ್ ಕುಮಾರ್ ಹಣ ಹೂಡಿಕೆ ಮಾಡಿದರು. ಆದರೆ ಕಪ್ಪು ಕುದುರೆ ಮಾರಾಟದ ನೆಪದಲ್ಲಿ ವಂಚಿಸಿರುವುದು ಬೆಳಕಿಗೆ ಬಂದಿದೆ.

ಮರ್ವಾರ್ ಪ್ರಾಂತ್ಯದ ಪ್ರಸಿದ್ಧ ತಳಿಗೆ ಸಖತ್ ಡಿಮ್ಯಾಂಡ್
ಪಂಜಾಬಿನ ಮಾರ್ವಾರ್ ಪ್ರಾಂತ್ಯದ ಮಾರ್ವಾರಿ ಎಂಬ ಕುದುರೆ ತಳಿಗೆ ಸಖತ್ ಡಿಮ್ಯಾಂಡ್ ಇದೆ. ಇದನ್ನೇ ಅಸ್ತ್ರವಾಗಿ ಬಳಸಿಕೊಂಡಿರುವ ವಂಚಕರು ವ್ಯಾಪಾರಿಗಳಿಗೆ ಉಂಡೆನಾಮ ಎಳೆಯುತ್ತಿದ್ದಾರೆ. ರಮೇಶ್ ಕುಮಾರ್ ಹೊರತಾಗಿ ಇನ್ನೂ ಎಂಟು ಮಂದಿಗೆ ಇದೇ ರೀತಿ ವಂಚನೆ ನಡೆದಿರುವುದು ಗೊತ್ತಾಗಿದೆ. ಯಾವುದೋ ತಳಿಯ ಹೆಸರಿನಲ್ಲಿ ಇನ್ಯಾವುದೋ ತಳಿಯ ಕುದುರೆ ಮಾರಾಟ ಮಾಡಿರುವುದು ಖರೀದಿಸಿದವರು ಬಾಯಿ ಬಾಯಿ ಬಿಡುವಂತಾಗಿದೆ.

5 ಲಕ್ಷ ಗಳಿಸುವ ಆಸೆಯಿಂದ 22 ಲಕ್ಷ ಹೋಯಿತು!
ಗಡಸುತನಕ್ಕೆ ಹೆಸರಾದ ಮಾರ್ವಾರಿ ತಳಿಯ ಕುದುರೆಯನ್ನು ಖರೀದಿಸಿ ಕೆಲವು ದಿನಗಳ ನಂತರ ಅದನ್ನು ಮಾರಾಟ ಮಾಡಿದರೆ ಕನಿಷ್ಠ ಐದು ಲಕ್ಷ ರೂಪಾಯಿ ಗಳಿಸಬಹುದು ಎಂದು ಆಸೆ ತೋರಿಸಲಾಗಿದೆ. ಸ್ನೇಹಿತನ ಮಾತಿಗೆ ಮಾರುಹೋದ ಬಟ್ಟೆ ವ್ಯಾಪಾರಿ ರಮೇಶ್ ಕುಮಾರ್, ಬರೋಬ್ಬರಿ 22.65 ಲಕ್ಷ ರೂಪಾಯಿ ಹಣವನ್ನು ನೀಡಿ ಕುದುರೆಯನ್ನು ಖರೀದಿಸಿದ್ದಾರೆ. ಆ ಮೂಲಕ ಒಂದನ್ನು ಸಂಪಾದಿಸುವ ಆಸೆಯಲ್ಲಿ ನಾಲ್ಕುಪಟ್ಟು ಹಣವನ್ನು ಕಳೆದುಕೊಂಡಿದ್ದಾರೆ. ಈ ಕುರಿತು ಸ್ವತಃ ವಂಚನೆಗೊಳಗಾದ ರಮೇಶ್ ಕುಮಾರ್ ಹೇಳಿಕೊಂಡಿದ್ದಾರೆ.

ಬಣ್ಣ ಬದಲಿಸಿದ ಕುದುರೆ, 22.65 ಲಕ್ಷ ನಷ್ಟ
ಲಾಭ ಗಳಿಸುವ ಆಸೆಯಲ್ಲೇ 22.65 ಲಕ್ಷ ರೂಪಾಯಿ ಕಾಸು ಕೊಟ್ಟು ಮಾರ್ವಾರ್ ತಳಿಯ ಕುದುರೆ ಖರೀದಿಸಿದ ವ್ಯಾಪಾರಿ ರಮೇಶ್ ಕುಮಾರ್ ಅದನ್ನು ತೊಳೆಯುವುದಕ್ಕೆ ಮುಂದಾಗಿದ್ದಾರೆ. ಒಂದು ಕಡೆ ಕುದುರೆಗೆ ಸ್ನಾನ ಮಾಡಿಸುತ್ತಿದ್ದರೆ, ಇನ್ನೊಂದು ಕಡೆಯಿಂದ ಕುದುರೆಯ ಬಣ್ಣವೇ ಚೇಂಜ್ ಆಗುತ್ತಿತ್ತು. ಕಪ್ಪು ಕುದುರೆಯ ಅಸಲಿಗೆ ಬಣ್ಣ ಹೊರ ಬೀಳುವುದಕ್ಕೆ ಶುರುವಾಯಿತು. ಕಪ್ಪು ಕುದುರೆ ಹೋಗಿ ಅದು ಕಂದು ಬಣ್ಣದ ಕುದುರೆಯಾಗಿ ಪರಿವರ್ತನೆ ಆಯಿತು. ನಿಜ ಹೇಳಬೇಕಾದರೆ ಆ ಕುದುರೆಯ ಅಸಲಿ ಬಣ್ಣವೇ ಕಂದು ಎನ್ನುವುದು ವ್ಯಾಪಾರಿಗೆ ಮನವರಿಕೆ ಆಯಿತು.

ಪಂಜಾಬ್ ಪೊಲೀಸರಿಂದ ವಂಚನೆ ಪ್ರಕರಣ ದಾಖಲು
ಕುಮಾರ್ ಸ್ಟಡ್ ಫಾರ್ಮ್ ಅನ್ನು ಪ್ರಾರಂಭಿಸಲು ಕಪ್ಪು ಕುದುರೆಯಲ್ಲಿ ಹಣವನ್ನು ಹೂಡಿಕೆ ಮಾಡಿದರು. ಆದರೆ ಹೂಡಿಕೆಯ ಹಣವೆಲ್ಲ ನೀರಿನಲ್ಲಿ ಹೋಮ ಮಾಡಿದಂತೆ ಆಗಿದೆ. ಈ ಹಿನ್ನೆಲೆ ರಮೇಶ್ ಕುಮಾರ್ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಗಳು ನಕಲಿ ತಳಿಯ ಕುದುರೆಗಳನ್ನು ಮಾರಾಟ ಮಾಡಿ ಎಂಟು ಮಂದಿಗೆ ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ವಿರುದ್ಧ ಪೊಲೀಸರು ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications