ಮೂರ್ತಿಯನ್ನು ಬಿಟ್ಟು ಬೇರೆ ಯಾರೂ ತಾಳಿ ಕಟ್ಟ ಬಾರದು: ದೇವರಿಗೆ ಪತ್ರ ಬರೆದ ಯುವತಿ
ಚಾಮರಾಜನಗರ, ಡಿಸೆಂಬರ್ 30: ದೇವರಿಗೆ ತಮ್ಮ ಇಷ್ಟಾರ್ಥ ಫಲಿಸಲೆಂದು ಭಕ್ತರು ವಿವಿಧ ರೀತಿಯ ಹರಕೆ ನೀಡುವುದು ಅಥವಾ ಹರಕೆ ಕೋರಿಕೆಯ ಪತ್ರಗಳನ್ನು ಹಾಕುವುದು ಸಾಮಾನ್ಯ. ಅದರಂತೆ, ಇಲ್ಲೋರ್ವ ಯುವತಿ ತಾನಿಷ್ಟಪಟ್ಟ ಹುಡುಗ ನನಗೆ ಸಿಗಲಿ ಎಂದು ಪತ್ರ ಬರೆದು ದೇವರ ಹುಂಡಿಗೆ ಹಾಕಿ ಬೇಡಿಕೊಂಡಿದ್ದಾಳೆ
ಈ ಮೊದಲು ಭಕ್ತರು ತಮ್ಮ ಇಷ್ಟಾರ್ಥಗಳನ್ನು ನೆರವೇರಿಸು ಎಂದು ದೇವರಿಗೆ ಕಾಣಿಕೆ ಹಾಕುತ್ತಿದ್ದರು. ಅಲ್ಲದೇ ಹರಕೆ ರೂಪದಲ್ಲಿ ಚಿನ್ನ, ಬೆಳ್ಳಿಯಂತಹ ಬೆಲೆ ಬಾಳುವ ವಸ್ತುಗಳನ್ನು ನೀಡುತ್ತಿದ್ದರು. ಆದರೆ ಈಗ ತೀರ ಅಪರೂಪವೆಂಬಂತೆ ಕಾಣಿಕೆ ಹಾಕುವ ಹುಂಡಿಯಲ್ಲಿ ಕೆಲವೊಂದು ವಿಚಿತ್ರ ಪತ್ರಗಳನ್ನು ದೇವರ ಹುಂಡಿಯಲ್ಲಿ ಪತ್ತೆಯಾಗುತ್ತಿರುವುದು ವಿಪರ್ಯಾಸವಾಗಿದೆ.
ಚಾಮರಾಜನಗರ ತಾಲೂಕಿನ ಮುಕ್ಕಡಹಳ್ಳಿ ಗ್ರಾಮದ 'ಮಾಯಮ್ಮ ದೇವಮ್ಮ' ದೇವಾಲಯದಲ್ಲಿ ಶುಕ್ರವಾರ ಹುಂಡಿ ಎಣಿಕೆ ನಡೆದಿದ್ದು, ಈ ವೇಳೆ ಯುವತಿಯೊರ್ವಳು ಬರೆದಿರುವ ವಿಚಿತ್ರ ಪತ್ರ ಪತ್ತೆಯಾಗಿದೆ. ' ದೇವರೇ, ಮೂರ್ತಿನಾ ಬಿಟ್ಟು ಯಾರೂ ನನ್ನ ಕುತ್ತಿಗೆಗೆ ತಾಳಿ ಕಟ್ಟಬಾರದು' ಎಂದು ಪತ್ರ ಹಾಕಿದ್ದಾಳೆ. ಆಕೆಯ ಪ್ರಾರ್ಥನೆ ಫಲಿಸಿತೇ ಇಲ್ಲವೇ ಎನ್ನುವ ಸತ್ಯ ನಿಗೂಢವಾಗಿದೆ.

ಕೆಲ ದಿನಗಳ ಹಿಂದೆಯಷ್ಟೇ ಚಾಮರಾಜನಗರದ ಚಾಮರಾಜೇಶ್ವರ ದೇವಾಲಯ ಹುಂಡಿ ಎಣಿಕೆ ಕಾರ್ಯ ನಡೆದಿದ್ದ ವೇಳೆ ಕೆಲವು ಪತ್ರಗಳು, ಆಹ್ವಾನ ಪತ್ರಿಕೆಗಳು ಕೂಡ ಪತ್ತೆಯಾಗಿತ್ತು. ಏಸು ಭಕ್ತನೋರ್ವ ಕ್ರಿಸ್ತ ಹುಟ್ಟಿದ ಬಗೆ, ಕ್ರಿಸ್ತನನ್ನು ನಂಬಿದ್ದೆಲ್ಲಾ ಬರೆದು ದೇವರ ಹುಂಡಿಗೆ ಹಾಕಿದ್ದು 'ದೇವರ ರಾಜ್ಯ ಸಮೀಪಿಸಿದೆ' ಎಂಬ ನಿಗೂಢ ಅರ್ತ ವಾಕ್ಯವನ್ನು ಬರೆದು ಹಾಕಿದ್ದ.
ಇನ್ನು, ಯುವಕನೋರ್ವ ತನಗೆ ಹುಡುಗಿ ಕರುಣಿಸು, ಪ್ರೀತಿಯ ದೇವರೆ ಎಂದು ಶಿವಲಿಂಗದ ಚಿತ್ರ ಬರೆದು ಹುಂಡಿಗೆ ಹಾಕಿ ಪ್ರಾರ್ಥಿಸಿದ್ದನು. ಯುವತಿ ಭಾವಚಿತ್ರ, ಆಹ್ವಾನ ಪತ್ರಿಕೆಗಳು ಕೂಡ ಹುಂಡಿಯಲ್ಲಿ ಪತ್ತೆಯಾಗಿತ್ತು.

ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿರುವ ಕಳಸೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪರಿವಾರ ದೇವರುಗಳ ಕಾಣಿಕೆ ಹುಂಡಿ ಎಣಿಕೆ ಕಾರ್ಯ ವೇಳೆ ಮಗನ ಇಡೀ ಬದುಕನ್ನೇ ಬದಲಿಸಪ್ಪಾ ಎಂದು ಪತ್ರ ಬರೆದು ಕಾಣಿಕೆ ಹುಂಡಿಗೆ ಹಾಕಿರುವ ಪತ್ರ ಕೂಡ ವೈರಲ್ ಆಗಿತ್ತು,
ಜನರು ದೇವರ ಬಳಿ ವಿವಿಧ ಕೋರಿಕೆಗಳನ್ನು ಇಡುತ್ತಿದ್ದು, ಬೇಗ ಕೆಲಸ ಸಿಗುವಂತೆ ಮಾಡು ತಂದೆ, ಕುಡಿತದ ಚಟ ಬಿಡಿಸು, ಕೋಪ ಹೋಗಲಾಡಿಸು, ಚಂಚಲ ಸ್ವಭಾವ ಹೋಗಲಾಡಿಸು. ರಾತ್ರಿ ಹೊತ್ತು ನಿದ್ದೆ ಬರುವಂತೆ ಮಾಡು, ಭಯ ನಿವಾರಣೆ ಮಾಡಪ್ಪ, ಮನಸ್ಸಿಗೆ ಸುಖ, ಶಾಂತಿ ನೆಮ್ಮದಿ ನೀಡಪ್ಪ ಎಂದು ಪತ್ರದ ಮೂಲಕ ಭಕ್ತರು ದೇವರಿಗೆ ಮನವಿ ಸಲ್ಲಿಸುತ್ತಿದ್ದಾರೆ.












Click it and Unblock the Notifications