ಯಡವನಹಳ್ಳಿ: ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಚಿಕನ್ ಊಟ ಸೇವಿಸಿದ 30 ಮಕ್ಕಳು ಅಸ್ವಸ್ಥ
ಚಾಮರಾಜನಗರ, ಜುಲೈ, 17: ಚಿಕನ್ ಊಟ ಸೇವಿಸಿದ್ದ ಮಕ್ಕಳಿಗೆ ವಾಂತಿ-ಬೇಧಿಯಾಗಿ ಅಸ್ವಸ್ಥಗೊಂಡ ಘಟನೆ ಗುಂಡ್ಲುಪೇಟೆ ತಾಲೂಕಿನ ಯಡವನಹಳ್ಳಿ ಗ್ರಾಮದ ಮೊರಾರ್ಜಿ ವಸತಿ ಶಾಲೆಯಲ್ಲಿ ನಡೆದಿದೆ.
ಒಟ್ಟು 30 ವಿದ್ಯಾರ್ಥಿಗಳಿಗೆ ವಾಂತಿ-ಬೇಧಿಯಾಗಿದ್ದು, ಈ ಪೈಕಿ ತೀವ್ರ ಅಸ್ವಸ್ಥಗೊಂಡಿದ್ದ 15 ಮಂದಿಗೆ ಬೇಗೂರು ಆಸ್ಪತ್ರೆಯಲ್ಲಿ ಡ್ರಿಪ್ ಹಾಕಿ ಚಿಕಿತ್ಸೆ ಕೊಡಲಾಗುತ್ತಿದೆ. ಭಾನುವಾರ ರಾತ್ರಿ ಚಿಕನ್ ಊಟವನ್ನು ಮಾಡಲಾಗಿತ್ತು. ಅದನ್ನು ತಿಂದ ಬಳಿಕ ವಾಂತಿ-ಬೇಧಿ ಶುರುವಾಗಿ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ಸದ್ಯ, ಶಿಕ್ಷಣ ಇಲಾಖೆ ಅಧಿಕಾರಿಗಳು, ಪೊಲೀಸರು ಆಸ್ಪತ್ರೆಗೆ ಭೇಟಿ ಪರಿಶೀಲನೆ ನಡೆಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಊಟದಲ್ಲಿ ಹಲ್ಲಿ ಬಿದ್ದು ವಿದ್ಯಾರ್ಥಿಗಳು ಅಸ್ವಸ್ಥ
ಇನ್ನು ಇತ್ತೀಚೆಗಷ್ಟೇ ಊಟದಲ್ಲಿ ಹಲ್ಲಿ ಬಿದ್ದು ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ರಾಯಚೂರು ತಾಲೂಕಿನ ಅಪ್ಪನದೊಡ್ಡಿ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ನಡೆದಿತ್ತು.
ಶಾಲೆಯಲ್ಲಿ ಮಕ್ಕಳಿಗಾಗಿ ಮಧ್ಯಾಹ್ನ ಬಿಸಿಯೂಟಕ್ಕೆ ಉಪ್ಪಿಟ್ಟು ಮಾಡಿದ್ದರು. ಅದನ್ನು ಎಲ್ಲ ಮಕ್ಕಳಿಗೆ ಬಡಿಸಲಾಗಿದ್ದು, ಈ ವೇಳೆ ಪಾತ್ರೆಯ ಅಡಿಯಲ್ಲಿ ಸತ್ತ ಹಲ್ಲಿಯೊಂದು ಪತ್ತೆಯಾಗಿದೆ. ಅಷ್ಟರಲ್ಲಾಗಲೇ ಉಪ್ಪಿಟ್ಟು ತಿಂದ ಹಲವು ಮಕ್ಕಳಿಗೆ ಹೊಟ್ಟೆ ತೊಳೆಸಲು ಆರಂಭವಾಯಿತು. ಬಳಿಕ ಕೆಲವು ಮಕ್ಕಳು ವಾಂತಿ ಮಾಡಲು ಶುರು ಮಾಡಿದರು. ಈ ಪೈಕಿ ಮೂರು ಮಕ್ಕಳು ತೀವ್ರ ಅಸ್ವಸ್ಥರಾಗಿದ್ದು, ಅವರನ್ನು ಯಾಪಲದಿನ್ನಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿತ್ತು.
ಶಾಲೆಯಲ್ಲಿ ಇಬ್ಬರು ಅಡುಗೆ ಸಿಬ್ಬಂದಿಯ ನಿರ್ಲಕ್ಷದಿಂದ ಈ ಘಟನೆ ನಡೆದಿದೆ ಎಂದು ಆಪಾದಿಸಲಾಗಿತ್ತು. ಇನ್ನು ಸ್ಥಳಕ್ಕೆ ಯಾಪಲದಿನ್ನಿ ಪೊಲೀಸರು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಸಿಬ್ಬಂದಿಗಳ ವಿಚಾರಣೆ ನಡೆಸಿದ್ದರು. ಶಾಲೆಯ ಆವರಣದಲ್ಲಿ ವೈದ್ಯರು ಮೊಕ್ಕಾಂ ಹೂಡಿದ್ದರು. ಅಲ್ಲದೆ ಕ್ಯಾಂಪಸ್‌ನಲ್ಲಿ ಪೋಷಕರು ಕೂಡಾ ಜಮಾಯಿಸಿದ್ದರು. ಎಲ್ಲ ಮಕ್ಕಳ ಆರೋಗ್ಯದ ಮೇಲೆ ವೈದ್ಯರು ನಿಗಾ ಇಟ್ಟಿದ್ದರು. ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತಿರುವುದಾಗಿ ಇಲ್ಲಿನ ಅಧಿಕಾರಿಗಳು ತಿಳಿಸಿದ್ದರು.
ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಅಪ್ಪನದೊಡ್ಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 70ಕ್ಕೂ ಅಧಿಕ ವಿದ್ಯಾರ್ಥಿಗಳು ಬಿಸಿಯೂಟ ಸೇವಿಸಿ ಅಸ್ವಸ್ಥರಾದ ಘಟನೆ ಜರುಗಿತ್ತು. ವಿಷಯ ತಿಳಿಯುತ್ತಿದ್ದಂತೆ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಶ್ರೀ ಬಸನಗೌಡ ದದ್ದಲ್ ರವರು ದಿಢೀರನೇ ಯಾಪಲದಿನ್ನಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಅಪ್ಪನದೊಡ್ಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ರಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದರು. ನಂತರ ಮಾತನಾಡಿದ್ದ ಶಾಸಕರು, ಫೋಷಕರು ಯಾರು ಕೂಡ ಗಾಬರಿ ಪಡುವ ಅವಶ್ಯಕತೆ ಇಲ್ಲ. ಎಲ್ಲಾ ಮಕ್ಕಳ ಆರೋಗ್ಯ ಸಹಜ ಸ್ಥಿತಿಗೆ ಬಂದಿದೆ ಎಂದಿದ್ದರು.












Click it and Unblock the Notifications