ವಾಸ್ತು ಸಮಸ್ಯೆಗೆ ನಿಧಿ ಆಸೆ ತೋರಿದ ಜ್ಯೋತಿಷಿ: ಮನೆಯೊಳಗೆ 20 ಅಡಿ ಗುಂಡಿ ತೆಗೆದ ಮಹಿಳೆ..!
ಚಾಮರಾಜನಗರ, ಆಗಸ್ಟ್ 22: ಜ್ಯೋತಿಷಿ ತೋರಿದ ನಿಧಿಯಾಸೆಗೆ ಮಹಿಳೆಯೊಬ್ಬಳು ಕುಟುಂಬಸ್ಥರೊಂದಿಗೆ ಸೇರಿ ಮನೆಯಲ್ಲಿ 20 ಅಡಿ ಗುಂಡಿ ತೆಗೆದ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ವಿ.ಎಸ್. ದೊಡ್ಡಿ ಗ್ರಾಮದಲ್ಲಿ ನಡೆದಿದೆ.
ವಿ.ಎಸ್.ದೊಡ್ಡಿ ಗ್ರಾಮದ ಭಾಗ್ಯ ಎನ್ನುವವರ ಮನೆಯಲ್ಲಿ ಘಟನೆ ನಡೆದಿದ್ದು, ನಿಧಿ ಆಸೆಗೆ ಗುಂಡಿ ತೋಡಿದ ಮಾಹಿತಿ ಬೇರೆಯವರಿಗೆ ತಿಳಿಯುತ್ತಿದ್ದಂತೆ ಮನೆ ಮಂದಿ ನಾಪತ್ತೆಯಾಗಿದ್ದಾರೆ.

ವಿ.ಎಸ್ ದೊಡ್ಡಿ ಗ್ರಾಮದ ಭಾಗ್ಯ ಎನ್ನುವವರು ಕಳೆದ ನಾಲ್ಕೈದು ವರ್ಷದ ಹಿಂದೆ ವಾಸ್ತು ಸರಿಯಿಲ್ಲ ಎಂದು ತಿಳಿದು ಮನೆಯನ್ನು ತೊರೆದು ಬೆಂಗಳೂರಿನಲ್ಲಿ ತಳ್ಳುವ ಗಾಡಿಯಲ್ಲಿ ಮಜ್ಜಿಗೆ, ಜ್ಯೂಸ್ ವ್ಯಾಪಾರ ಮಾಡಿಕೊಂಡಿದ್ದರು. ಈ ವೇಳೆ ಸಹೋದರಿಯ ಸಂಬಂಧಿಕ ಪರಶಿವ ಎನ್ನುವವರು ಭಾಗ್ಯ ಅವರನ್ನು ಸ್ಥಳೀಯ ಜ್ಯೋತಿಷ್ಯರೊಬ್ಬರ ಬಳಿ ಕರೆದುಕೊಂಡು ಹೋಗಿ ಮನೆಯ ಬಗ್ಗೆ ಶಾಸ್ತ್ರ ಕೇಳಿಸಿದ್ದರಂತೆ.
ಈ ವೇಳೆ ಭಾಗ್ಯ ಅವರ ಸ್ಥಿತಿ ಅರಿತುಕೊಂಡ ಜ್ಯೋತಿಷಿ ಮನೆಯಲ್ಲಿ ನಿಧಿ ಇರುವುದಾಗಿ ತಿಳಿಸಿದ್ದಾರೆ. ಜ್ಯೋತಿಷಿಯ ಮಾತು ನಂಬಿದ ಭಾಗ್ಯ ಅವರು, ಮನೆಯಲ್ಲಿ ನಿಧಿ ಶೋಧನೆಗಾಗಿ ಅನುಮತಿ ನೀಡಿದ್ದರು ಎನ್ನಲಾಗಿದೆ.
ಈ ಹಿನ್ನಲೆಯಲ್ಲಿ ಜ್ಯೋತಿಷಿ ತನ್ನ ಜೊತೆಗಾರನೊಂದಿಗೆ ಕಳೆದ ವಾರದ ಹಿಂದೆ ವಿ.ಎಸ್ ದೊಡ್ಡಿಗೆ ಆಗಮಿಸಿ ಭಾಗ್ಯ ಅವರ ಸಮ್ಮುಖದಲ್ಲೇ ರಾತ್ರಿ ವೇಳೆ ಮನೆಯಲ್ಲಿ ಕಳಸವಿಟ್ಟು ವಿಶೇಷ ಪೂಜೆಯನ್ನು ನೆರವೇರಿಸಿ, ಯಾರಿಗೂ ತಿಳಿಯದಂತೆ ನಿಧಿಗಾಗಿ ಗುಂಡಿ ತೆಗೆಯುವ ಕಾರ್ಯವನ್ನು ಆರಂಭಿಸಿದ್ದರು. 3 ಅಡಿ ಅಗಲ ಹಾಗೂ 20 ಅಡಿ ಆಳವನ್ನು ತೆಗೆದಿದ್ದು, ಶೋಧ ಕಾರ್ಯ ಮುಂದುವರಿದಿತ್ತು. ಈ ಬಗ್ಗೆ ಸ್ಥಳೀಯರಿಗೆ ವಿಷಯ ಗೊತ್ತಾಗಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

ಪೊಲೀಸರಿಗೆ ಮಾಹಿತಿ ತಿಳಿದ ವಿಚಾರ ತಿಳಿಯುತ್ತಿದ್ದಂತೆ ಭಾಗ್ಯ ಸೇರಿದಂತೆ ಜ್ಯೋತಿಷಿ ಹಾಗೂ ಇನ್ನಿತರರು ಕಣ್ಮರೆಯಾಗಿದ್ದಾರೆ. ಹನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಈ ಬಗ್ಗೆ ಮುಂದಿನ ಕ್ರಮ ಕೈಗೊಂಡಿದ್ದಾರೆ.












Click it and Unblock the Notifications