ಯಳಂದೂರು ಕೃಷ್ಣಯ್ಯನ ಕಟ್ಟೆ ಕೆರೆಯಲ್ಲಿ ಸಿಲುಕಿದ್ದ ಕಾಡಾನೆಯ ರಕ್ಷಣೆ
ನೀರು ಅರಸಿ ಬಂದಿದ್ದ ಕಾಡಾನೆಯೊಂದು ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನ ಕೃಷ್ಣಯ್ಯನ ಕಟ್ಟೆ ಕೆರೆಯ ಹೂಳಿನಲ್ಲಿ ಶುಕ್ರವಾರ ಸಿಲುಕಿಕೊಂಡಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಅದನ್ನು ರಕ್ಷಿಸಿದ್ದಾರೆ
ಚಾಮರಾಜನಗರ, ಮಾರ್ಚ್ 10: ಬಂಡೀಪುರದಲ್ಲಿ ನೀರಿಗೆ ಸಮಸ್ಯೆ ಆಗಿರುವ ಕಾರಣದಿಂದ ನೀರು ಅರಸುತ್ತ ಬಂದ ಕಾಡಾನೆಯೊಂದು ಕೆರೆಯ ಹೂಳಲ್ಲಿ ಸಿಲುಕಿಕೊಂಡ ಘಟನೆ ಯಳಂದೂರು ತಾಲೂಕಿನ ಕೃಷ್ಣಯ್ಯನ ಕಟ್ಟೆಯ ಕೆರೆಯಲ್ಲಿ ನಡೆದಿದ್ದು, ಗ್ರಾಮಸ್ಥರ ಸಹಕಾರದಿಂದ ಆನೆಯನ್ನು ರಕ್ಷಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಬಂಡೀಪುರದ ಅರಣ್ಯದಿಂದ ಬೆಳಗ್ಗಿನ ಜಾವ 4 ಗಂಟೆ ವೇಳೆಗೆ ಕಾಡಾನೆ ಬಿಳಿಗಿರಿರಂಗನ ಬೆಟ್ಟದ ಕೃಷ್ಣಯ್ಯನ ಕಟ್ಟೆಯ ಕೆರೆಗೆ ನೀರು ಕುಡಿಯಲೆಂದು ಇಳಿದಿದೆ. ಈ ಸಂದರ್ಭ ಕೆರೆಯಲ್ಲಿ ಹೂಳು ತುಂಬಿದ್ದರಿಂದ ಮೇಲೆದ್ದು ಬರಲು ಸಾಧ್ಯವಾಗದೆ ಅದರಲ್ಲಿ ಹೂತುಕೊಂಡಿತು.[ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಹುಲಿ ದಾಳಿಗೆ ಆನೆಮರಿ ಬಲಿ]

ಕೆರೆಯಲ್ಲಿ ಒದ್ದಾಡಿದ ಈ ಆನೆ ಪ್ರಾಣಸಂಕಟದಲ್ಲಿ ಅರಚಾಡಿದೆ. ಬೆಳಗ್ಗೆ ಆನೆ ಅರಚುವ ಶಬ್ದ ಕೇಳಿದ ಗ್ರಾಮಸ್ಥರು ಅತ್ತ ತೆರಳಿದ್ದಾರೆ. ಕೂಡಲೇ ರೈತರಾದ ಗುಂಬಳ್ಳಿ ಸೋಮಣ್ಣ, ಯರಗಂಬಳ್ಳಿ ರಾಜಣ್ಣ ಹಾಗೂ ಚಂದ್ರು ಅವರು ಕೆಸರಿನಲ್ಲಿ ಸಿಲುಕಿರುವ ಆನೆಯ ಬಗ್ಗೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ತಿಳಿಸಿ, ಕಾರ್ಯಾಚರಣೆಗೆ ಸಜ್ಜುಗೊಳಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.[ದುಬಾರೆ ಆನೆ ಶಿಬಿರಕ್ಕೆ ಬರಲಿದೆ ತೂಗು ಸೇತುವೆ]

ಗ್ರಾಮಸ್ಥರು ಆನೆಗೆ ಹಗ್ಗ ಹಾಕಿ ಎಳೆಯುವ ಪ್ರಯತ್ನ ಮಾಡಿದ್ದಾರೆ. ಇದೇ ವೇಳೆಗೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಕ್ರೇನ್ ತರಿಸಿ, ಹಗ್ಗ ಹಾಕಿ ಎಳೆಯುವ ಮೂಲಕ ಬೆಳಗ್ಗೆ 10.30ರ ವೇಳೆಗೆ ಕಾಡಾನೆಯನ್ನು ದಡ ಸೇರಿಸುವಲ್ಲಿ ಯಶಸ್ವಿಯಾದರು. ಕಾರ್ಯಾಚರಣೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಾಗರಾಜು, ಉಪ ಅರಣ್ಯ ಸಂರಕ್ಷಣಾಧಿಕಾರಿ ಮಹದೇವಯ್ಯ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.












Click it and Unblock the Notifications