ಚಾಮರಾಜನಗರ: ಮದಗಜಗಳ ಕಾಳಗ, ಎದುರಾಳಿಯ ದಂತ ಚುಚ್ಚಿ ಕಾಡಾನೆ ಸಾವು
ಚಾಮರಾಜನಗರ, ಅಕ್ಟೋಬರ್ 04: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಭಯಾರಣ್ಯ ಓಂಕಾರ ವನ್ಯಜೀವಿ ವಲಯ ವ್ಯಾಪ್ತಿಯ ಕುರುಬರಹುಂಡಿಯ ಆಲದ ಮರದ ಹಳ್ಳ ಅರಣ್ಯ ಪ್ರದೇಶದಲ್ಲಿ 35 ವರ್ಷದ ಗಂಡು ಕಾಡಾನೆ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.ಅಅ
ಕಾಡಾನೆಯು ಮತ್ತೊಂದು ಕಾಡಾನೆಯ ಜೊತೆ ಕಾದಾಟ ನಡೆಸಿ ಮೃತಪಟ್ಟಿರುವುದಾಗಿ ಅರಣ್ಯ ಅಧಿಕಾರಿಗಳು ದೃಢಪಡಿಸಿದ್ದಾರೆ.

ಕಾಡಾನೆಯ ಕಣ್ಣಿನ ಕೆಳಭಾಗದಲ್ಲಿ ಎದುರಾಳಿ ಕಾಡಾನೆಯ ದಂತ ಚುಚ್ಚಿರುವುದು ಕಂಡು ಬಂದಿದ್ದು, ರಕ್ತಸ್ರಾವ ಹಾಗೂ ನಿತ್ರಾಣದಿಂದ ಮೃತಪಟ್ಟಿದೆ. ಎದುರಾಳಿ ಕಾಡಾನೆಯ ದಂತ ಚುಚ್ಚಿ ದಂತವು ಮೃತ ಕಾಡಾನೆಯ ಮೇಲ್ದವಡೆಯವರೆಗೆ 30 ಸೆ.ಮೀ ಆಳದವರೆಗೆ ಹೊಳಹೊಕ್ಕಿದ್ದು, ದವಡೆಯ ಒಳಗೆ ದಂತವು ಮುರಿದಿರುವುದರಿಂದ ಕಾಡಾನೆಯು ಸಾವನ್ನಪ್ಪಿದೆ ಎಂದು ಬಂಡೀಪುರ ಹುಲಿ ಯೋಜನೆಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ.ರಮೇಶ್‍ಕುಮಾರ್ ಮಾಹಿತಿ ನೀಡಿದ್ದಾರೆ.
ಎದುರಾಳಿ ಆನೆಯ ಮುರಿದ ದಂತದ ಭಾಗ ಹಾಗೂ ಮೃತ ಕಾಡಾನೆಯ ಎರಡು ದಂತಗಳನ್ನು ಇಲಾಖೆಯು ವಶಪಡಿಸಿಕೊಂಡು ಮೃತ ಕಾಡಾನೆಯ ಶವವನ್ನು ಮರಣೋತ್ತರ ಪರೀಕ್ಷೆ ನಡೆಸಿ ಕಳೆಬರವನ್ನು ನಿಯಮಾನುಸಾರ ಅರಣ್ಯ ಪ್ರದೇಶದಲ್ಲೇ ಬಿಡಲಾಗಿದೆ.
ಈ ಸಂದರ್ಭದಲ್ಲಿ ಬಂಡೀಪುರ ಹುಲಿ ಯೋಜನೆ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ.ರಮೇಶ್ ಕುಮಾರ್, ಗುಂಡ್ಲುಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ರವೀಂದ್ರ, ಓಂಕಾರ ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿ ಕೆ.ಪಿ.ಸತೀಶ್ ಕುಮಾರ್, ಇಲಾಖಾ ಪಶುವೈದ್ಯಾಧಿಕಾರಿ ಡಾ.ಮಿರ್ಜಾ ವಾಸಿಂ, ಗಸ್ತು ವನಪಾಲಕ ಸಂತೋಷ್ ಸೇರಿದಂತೆ ಅರಣ್ಯ ವೀಕ್ಷಕ ಹಾಗೂ ಇಲಾಖಾ ಸಿಬ್ಬಂದಿ ವರ್ಗದವರು ಹಾಜರಿದ್ದರು.

ಮರಕ್ಕೆ ಬೈಕ್ ಡಿಕ್ಕಿ: ರೀಲ್ಸ್ ಸ್ಟಾರ್ ಸ್ಥಳದಲ್ಲೇ ಸಾವು
ಚಾಮರಾಜನಗರ: ಸಾಮಾಜಿಕ ಜಾಲಾತಾಣದಲ್ಲಿ ರೀಲ್ಸ್ ಮೂಲಕ ಗಮನ ಸೆಳೆಯುತ್ತಿದ್ದ ಯುವಕ ಬೈಕ್ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಯಳಂದೂರು ತಾಲೂಕಿನ ಗುಂಬಳ್ಳಿ ಬಳಿ ನಡೆದಿದೆ.
ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನ ಕೃಷ್ಣಾಪುರದ ಮಹೇಶ್(24) ಮೃತ ದುರ್ದೈವಿ. ನಿಯಂತ್ರಣ ತಪ್ಪಿ ಮರವೊಂದಕ್ಕೆ ಬೈಕ್ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಯುವಕ ಕೊನೆಯುಸಿರೆಳೆದಿದ್ದಾನೆ.
ಈತ ಎಳನೀರು ಕೀಳುವ ಕೆಲಸ ಮಾಡುವ ಜೊತೆಗೆ ರೀಲ್ಸ್ ಮಾಡುವ ಹವ್ಯಾಸ ಬೆಳೆಸಿಕೊಂಡಿದ್ದರು. ಡ್ಯಾನ್ಸ್, ಸ್ಟಂಟ್ ಗಳನ್ನು ರೀಲ್ಸ್ ಮಾಡಿ ಗಮನ ಸೆಳೆಯುತ್ತಿದ್ದ. ಯಳಂದೂರು ಪೊಲೀಸರು ಸದ್ಯ ಶವವನ್ನು ಮರಣೋತ್ತರ ಪರೀಕ್ಷೆ ರವಾನಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.












Click it and Unblock the Notifications