ಅವಕಾಶ ಇದ್ದಾಗಲೇ ಖರ್ಗೆ ಅವರನ್ನು ಸಿಎಂ ಮಾಡಲಿಲ್ಲ, ಇನ್ನು ಪಿಎಂ ಮಾತೆಲ್ಲಿ: ಕೇಂದ್ರ ಸಚಿವ ನಾರಾಯಣಸ್ವಾಮಿ ಹೀಗೆ ಹೇಳಿದ್ದೇಕೆ?
ಚಾಮರಾಜನಗರ, ಡಿಸೆಂಬರ್, 21: ಕರ್ನಾಟಕದಲ್ಲಿ ಅವಕಾಶ ಇದ್ದಾಗಲೇ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಮಾಡಲಿಲ್ಲ, ಇನ್ನು ಮಾತೆಲ್ಲಿ ಎಂದು ಕೇಂದ್ರ ಸಚಿವ ನಾರಾಯಣಸ್ವಾಮಿ ಚಾಮರಾಜನಗರದಲ್ಲಿ ವ್ಯಂಗ್ಯವಾಡಿದರು.
ಚಾಮರಾಜನಗರದಲ್ಲಿ ಮಾಧ್ಯಮವರೊಟ್ಟಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅವಕಾಶ ಇದ್ದಾಗಲೇ ಖರ್ಗೆ ಅವರನ್ನು ಸಿಎಂ ಮಾಡಲಿಲ್ಲ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಎಷ್ಟು ಸ್ಥಾನ ಗೆಲ್ಲಲ್ಲಿದೆ ಎಂದು ಗ್ಯಾರಂಟಿ ಇಲ್ಲ. ಯಾವ ಸಂದರ್ಭದಲ್ಲಿ ಅವರನ್ನು ಪಿಎಂ ಕ್ಯಾಂಡಿಡೇಟ್ ಮಾಡಲಾಗುತ್ತಿದೆ ಎಂದು ಕಾಂಗ್ರೆಸಿಗರೇ ಹೇಳಲಿ ಎಂದರು.

ವಿಪಕ್ಷದ ಮಿಮಿಕ್ರಿ ವಿವಾದ ಕುರಿತು ಮಾತನಾಡಿ, ನಾಗರಿಕರನ್ನು ಯಾರೂ ಮೂರ್ಕರನ್ನಾಗಿ ಮಾಡಲು ಸಾಧ್ಯವಿಲ್ಲ. ಯಾವ ರೀತಿ ಉಪ ರಾಷ್ಟ್ರಪತಿಯನ್ನು ಮಿಮಿಕ್ರಿ ಮಾಡಿದರು ಎಂದು ಜನರು ನೋಡಿದ್ದಾರೆ. ಅದನ್ನು ಯಾವ ರೀತಿ ರಾಹುಲ್ ಗಾಂಧಿ ರೆಕಾರ್ಡ್ ಮಾಡಿದ್ದಾರೆಂತಲೂ ಜನರು ನೋಡಿದ್ದಾರೆ. ರಾಷ್ಟ್ರಪತಿ, ಉಪರಾಷ್ಟ್ರಪತಿ ಅವರನ್ನು ಯಾವ ರೀತಿ ಸಂಭೋದಿಸಬೇಕು ಎಂಬ ಪರಿಜ್ಞಾನ ಕಾಂಗ್ರೆಸ್‌ಗೆ ಇರಬೇಕಿತ್ತು ಎಂದು ಕಿಡಿಕಾರಿದರು.
ಇದೇ ವೇಳೆ, ಒಳ ಮೀಸಲಾತಿ ಕುರಿತು ಮಾತನಾಡಿ, ಜನವರಿ 17ರಂದು ಸುಪ್ರೀಂ ಕೋರ್ಟ್‌ನಲ್ಲಿ ಒಳ ಮೀಸಲಾತಿ ಸಂಬಂಧ ವಿಚಾರಣೆ ನಡೆಯಲಿದೆ. ಫೆಬ್ರವರಿಯಲ್ಲಿ ಮಾದಿಗರ ಪರವಾಗಿ ಆದೇಶ ಹೊರಬೀಳುವ ವಿಶ್ವಾಸವಿದೆ. ದಕ್ಷಿಣ ಭಾರತದ ಮಾದಿಗರ ಒಳ ಮೀಸಲಾತಿ ಪರವಾಗಿ ಕೇಂದ್ರ ಸರ್ಕಾರ ಇದೆ ಎಂದು ಹೇಳಿದರು.
2024ರ ಲೋಕಸಭಾ ಚುನಾವಣೆ ಸಂಬಂಧ ಮಾತನಾಡಿ, 2024ರಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ. ಭಾರತವನ್ನು ವಿಶ್ವದಲ್ಲೇ ನಂ 1 ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ರಾಮಂದಿರ ಉದ್ಘಾಟನೆಗೆ ಹಿರಿಯ ನಾಯಕರ ಕಡೆಗಣನೆ ಆರೋಪ ಸಂಬಂಧ ಮಾತನಾಡಿ, ಅಡ್ವಾನಿ ಹಾಗೂ ಜೋಶಿ ಅವರನ್ನು ಮಂದಿರ ಉದ್ಘಾಟನೆಗೆ ಆಹ್ವಾನಿಸಲು ನಮ್ಮವರೇ ಹೋಗಿದ್ದರು. ವಯಸ್ಸಿನ ಕಾರಣಣದಿಂದ ಬರಲಾಗುವುದಿಲ್ಲ ಎಂಬುದನ್ನು ಅವರೇ ಹೇಳಿಕೊಂಡಿದ್ದಾರೆ. ಅವರನ್ನು ಕರೆತರುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಶಾಸಕ ಮಹೇಶ್ ಟೆಂಗಿನಕಾಯಿ ಆಕ್ರೋಶ
ಹಿಂದಿನ ಬಿಜೆಪಿ ಸರ್ಕಾರವು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆ ಸೇರಿ ಮೂಲ ಸೌಲಭ್ಯ ಕಲ್ಪಿಸುವ ಕಾಮಗಾರಿಗಾಗಿ 43 ಕೋಟಿ ರೂಪಾಯಿ ಮಂಜೂರು ಮಾಡಿತ್ತು. ಆದರೆ, ಪ್ರಸ್ತುತ ರಾಜ್ಯ ಸರ್ಕಾರ ಈ ಪೈಕಿ ಸುಮಾರು 30 ಕೋಟಿ ರೂಪಾಯಿ ಕೆಲಸಗಳಿಗೆ ತಡೆ ನೀಡಿದೆ ಎಂದು ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಆರೋಪಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಪ್ರಮುಖ ರಸ್ತೆಗಳ ಕಾಂಕ್ರೀಟಿಕರಣ, ಒಳಚರಂಡಿ ಮುಂತಾದ ಕಾಮಗಾರಿಗಳು ಈ ಅನುದಾನದಲ್ಲಿ ನಡೆಯಬೇಕಾಗಿತ್ತು. ಬಹಳಷ್ಟು ಕಾಮಗಾರಿಗಳು ಟೆಂಡರ್ ಹಂತದಲ್ಲಿ ಇದ್ದಾಗ ಸರ್ಕಾರ ಇವುಗಳನ್ನು ನಿಲ್ಲಿಸಲು ಸೂಚನೆ ನೀಡಿದೆ. ಇದರಿಂದಾಗಿ ಜನರಿಗೆ ನೀಡಿದ ಭರವಸೆಗಳು ಈಡೇರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದ ಯಾವುದೇ ನಗರದಲ್ಲಿ ಇಂತಹ ಪ್ರಸಂಗಗಳು ನಡೆದಿಲ್ಲ. ಇಲ್ಲಿ ಮಾತ್ರ ಸ್ಥಳಿಯ ನಾಯಕರೊಬ್ಬರ ಒತ್ತಡದಿಂದಾಗಿ ಅಧಿಕಾರಿಗಳು ಅಭಿವೃದ್ಧಿ ಕಾರ್ಯಗಳಿಗೆ ಕೊಕ್ಕೆ ಹಾಕಿದ್ದಾರೆ. ಯಾರೇ ಆಗಲಿ ಅಭಿವೃದ್ಧಿ ಕೆಲಸಗಳನ್ನು ನಿಲ್ಲಿಸುವುದು ಸರಿಯಲ್ಲ. ಈ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಇನ್ನಷ್ಟು ವಿವರ ಪಡೆದುಕೊಂಡು ಮುಂದೇನು ಮಾಡಬೇಕೆಂದು ನಿರ್ಧರಿಸುವೆ ಎಂದು ಹೇಳಿದರು.
ಬೆಳಗಾವಿಯಲ್ಲಿ ನಡೆದ ವಿಧಾನಸಭೆ ಅಧಿವೇಶನದಲ್ಲಿ ಉತ್ತಮ ಚರ್ಚೆಯಾಗಿವೆ. ನಾನು ಕೂಡ 31 ಇಲಾಖೆಗಳಿಗೆ ಸಂಬಂಧಿಸಿ 25 ಪ್ರಶ್ನೆಗಳನ್ನು ಕೇಳಿರುವೆ. ಅದರಲ್ಲಿ ವಿಶೇಷವಾಗಿ ಗಂಗೂಬಾಯಿ ಹಾನಗಲ್ಲ ಗುರುಕುಲಕ್ಕೆ ಅನುದಾನ ಬಿಡುಗಡೆ ಸೇರಿ ವಿವಿಧ ವಿಷಯಗಳು ಚರ್ಚೆಯಾಗಿವೆ. ಹಾಗೆಯೇ ಹುಬ್ಬಳ್ಳಿಗೆ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರ ಮಂಜೂರಾಗಲಿದೆ ಎಂದರು.
ಧಾರವಾಡದಲ್ಲಿ ಎಫ್ಎಂಸಿಜಿ ಕ್ಲಸ್ಟರ್ ನಿರ್ಮಾಣದ ಕನಸು ನನಸು ಮಾಡಲು ಈಗಿನ ಸರ್ಕಾರ ಮುತುವರ್ಜಿ ವಹಿಸಬೇಕು. ಬಿಜೆಪಿ ಸರ್ಕಾರ ಎಕರೆಗೆ 98 ಲಕ್ಷ ರೂಪಾಯಿ ನಿಗದಿ ಮಾಡಿತ್ತು. ಆದರೆ, ಈಗಿನ ಸರ್ಕಾರ 1.38 ಕೋಟಿ ರೂಪಾಯಿ ವಿಧಿಸುತ್ತಿದೆ. ಇದರಿಂದ ಉದ್ಯಮಿಗಳು ಹಿಂದೆ ಸರಿಯುವ ಸಾಧ್ಯತೆ ಇದೆ. ಈ ಬಗ್ಗೆ ಕೈಗಾರಿಕೆ ಸಚಿವರಿಗೆ ಮನವರಿಕೆ ಮಾಡಿರುವೆ. ಸರ್ಕಾರ ಧನಾತ್ಮಕವಾಗಿ ಆಲೋಚಿಸಿದರೆ ಹೆಚ್ಚಿನ ಕಂಪನಿಗಳು ಕ್ಲಸ್ಟರ್‌ನಲ್ಲಿ ಬರಲಿವೆ ಎಂದರು.
ಬಿಯಾಂಡ್ ಬೆಂಗಳೂರು ಪರಿಕಲ್ಪನೆ ಜಾರಿಯಾಗುತ್ತಿಲ್ಲ. ಐಟಿ ಕಂಪನಿಗಳು ಈ ಭಾಗಕ್ಕೆ ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಶಾಸಕ ಟೆಂಗಿನಕಾಯಿ ಅವರು, ಹುಬ್ಬಳ್ಳಿ ಧಾರವಾಡವನ್ನು ಟೂರಿಸಂ ಹಬ್ ಆಗಿ ಪರಿವತಿರ್ಸುವ ಕುರಿತು ಸಂಬಂಧಪಟ್ಟ ಸಚಿವರೊಂದಿಗೆ ಚಚಿರ್ಸಿರುವೆ. ನೃಪತುಂಗ ಬೆಟ್ಟದಲ್ಲಿ ಜಿಪ್ಲೈನ್ ಆಗಬೇಕು. ಇಲ್ಲಿನ ಪ್ರವಾಸಿ ತಾಣಗಳ ವೀಕ್ಷಣೆಗೆ ಸೌಲಭ್ಯಗಳನ್ನು ನೀಡಬೇಕು ಎಂದು ಕೋರಿದ್ದೇನೆ ಎಂದರು.
ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಫ್ಲೈಓವರ್ ಕಾಮಗಾರಿಯು ನಿಧಾನವಾಗಿದೆ. ನಿಗದಿತ ಅವಧಿಯಲ್ಲಿ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಇದೀಗ ಬರೀ ಶೇಕಡಾ 40ರಷ್ಟು ಕೆಲಸ ಮುಗಿದಿದೆ. ಹಾಗಾಗಿ ಮುಂದಿನ ವಾರ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಹಾಗೂ ತಾವು ಸೇರಿ ಅಧಿಕಾರಿಗಳೊಂದಿಗೆ ಸಭೆ ಮಾಡಲಿದ್ದೇವೆ. ಅಡೆತಡೆಗಳ ಬಗ್ಗೆ ಚರ್ಚೆ ಮಾಡಿ ಕಾಮಗಾರಿಗೆ ವೇಗ ನೀಡಲು ಪ್ರಯತ್ನಿಸಲಾಗುವುದು ಎಂದರು.
ಒಟ್ಟಾರೆ, ಅಧಿವೇಶನದಲ್ಲಿ ಕ್ಷೇತ್ರದ ಜನರ ಧ್ವನಿಯಾಗಿ ಮಾತನಾಡಿದ್ದೇನೆ. ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿಯಾಗಿದೆ. ಇದಕ್ಕೆ ಯಾರೇ ಆಗಲಿ ಅಡ್ಡಿಪಡಿಸುವ ಕೆಲಸ ಮಾಡಬಾರದು ಎಂದು ಮನವಿ ಮಾಡಿದರು.












Click it and Unblock the Notifications