ಚಾಮರಾಜನಗರ: ನಾವು ಕೂಡ ರಾಜ್ಯದಲ್ಲಿ ತಮಿಳು ಚಿತ್ರ, ವಾಹನಗಳಿಗೆ ನಿರ್ಬಂಧ ಹೇರುತ್ತೇವೆ: ಕನ್ನಡಪರ ಸಂಘಟನೆಗಳಿಂದ ಎಚ್ಚರಿಕೆ
ಚಾಮರಾಜನಗರ, ಸೆಪ್ಟೆಂಬರ್, 22: ಕಾವೇರಿ ಸಂಕಷ್ಟಕ್ಕೆ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ವಿವಾದ ಬಗೆಹರಿಸಬೇಕೆಂದು ಆಗ್ರಹಿಸಿ ಚಾಮರಾಜನಗರದಲ್ಲಿ ಕನ್ನಡಪರ ಸಂಘಟನೆಗಳು ಬಿಎಸ್ಎನ್‌ಎಲ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಇದೇ ವೇಳೆ ತಮಿಳುನಾಡು ಇದೇ ರೀತಿ ಖ್ಯಾತೆ ತೆಗೆದರೆ ತಕ್ಕ ಪಾಠ ಕಲಿಸಲು ನಾವು ಸಜ್ಜಾಗಿದ್ದೇವೆ ಎನ್ನುವ ಎಚ್ಚರಿಕೆಯನ್ನು ನೀಡಿದರು.

ಚಾಮರಾಜನಗರದ ಮಾರಿಗುಡಿ ಸಮೀಪ ಇರುವ ಬಿಎಸ್‌ಎನ್‌ಎಲ್ ಕಚೇರಿಗೆ ಚಾ.ರಂ.ಶ್ರೀನಿವಾಸಗೌಡ ನೇತೃತ್ವದಲ್ಲಿ ಪ್ರತಿಭಟನಾಕರರು ಮುತ್ತಿಗೆ ಹಾಕಿ ತಮಿಳುನಾಡು, ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ತಮಗೇ ಕುಡಿಯಲು ನೀರಿಲ್ಲ. ಆದರೆ ತಮಿಳುನಾಡು 3ನೇ ಬೆಳೆಗೆ ನೀರು ಕೇಳುತ್ತಿದೆ. ಸರ್ಕಾರ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರನ್ನು ಹರಿಸಬಾರದು. ತಮಿಳುನಾಡು ಇದೇ ರೀತಿ ಕ್ಯಾತೆ ತೆಗೆಯುತ್ತಿದ್ದರೇ ತಮಿಳು ಚಿತ್ರ, ತಮಿಳು ವಾಹನಗಳಿಗೆ ನಿರ್ಬಂಧ ಹೇರುತ್ತೇವೆ ಎಂದು ಕಿಡಿಕಾರಿದರು.
ಪ್ರಧಾನಿಯವರು ಮಧ್ಯಸ್ಥಿಕೆ ವಹಿಸಬೇಕು
ಕಾವೇರಿ ನದಿ ನೀರು ಹಂಚಿಕೆ ವಿವಾದ ಜೋರಾಗಿದ್ದು, ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸುವಂತೆ ಮಾಜಿ ಸಂಸದ ವಿಎಸ್ ಉಗ್ರಪ್ಪ ಅವರು ಆಗ್ರಹಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ ಒಂದು ಒಕ್ಕೂಟ ವ್ಯವಸ್ಥೆಯಲ್ಲಿದೆ. ದಕ್ಷಿಣ ಭಾರತದ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ಸಭೆ ನಡೆಸಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ದತ್ತವಾಗಿರುವ ಅಧಿಕಾರದ ವ್ಯಾಪ್ತಿಯಲ್ಲಿ ನಮ್ಮ ರಾಜ್ಯದ ಜನತೆ ಹಾಗೂ ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಬದ್ಧವಾಗಿದೆ. ಭಾಷೆ, ನೆಲ, ಜಲ ಬಂದಾಗ ನಾವು ರಾಜಕೀಯವಾಗಿ ಪರಿಗಣಿಸಬಾರದು. ಸಮಸ್ತ ಜನತೆಯ ಹಿತವನ್ನು ಕಾಪಾಡಬೇಕು ಎಂದರು. ಇನ್ನು ಬಿಜೆಪಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ನೀರು ಬಿಟ್ಟು ಈಗ ನಮ್ಮ ಹತ್ತಿರ ಬಂದಿದ್ದಾರೆ ಎಂದು ವ್ಯಂಗ್ಯವಾಗಿ ಮಾತನಾಡಿದ್ದಾರೆ. ಇವರಿಗೆ ರಾಜಕೀಯ ಬೆರೆಸುವ ಪ್ರಯತ್ನ ಮಾಡಿರುವುದು ಅವರ ನಂಜಿನ ಮಾತುಗಳು ಗೊತ್ತಾಗುತ್ತದೆ ಎಂದು ಹೇಳಿದರು.
ಈ ಹಿಂದೆ ಇಂದಿರಾಗಾಂಧಿ ಅವರು ಸಹ ಕರ್ನಾಟಕ, ಆಂಧ್ರ ಪ್ರದೇಶ ಹಾಗೂ ಮಹಾರಾಷ್ಟ್ರ ಜನರನ್ನು ಒಪ್ಪಿಸಿ ಚೆನ್ನೈಗೆ ನೀರು ಕೊಟ್ರೋ ಹಾಗೆ ಕರ್ನಾಟಕದ ನೀರನ್ನು ಉಳಿಸುವ ಪ್ರಯತ್ನ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಬೇಕು ಎಂದು ಆಗ್ರಹಿಸಿದರು. ನಮ್ಮ ರಾಜ್ಯದಿಂದ 25 ಜನ ಸಂಸದರನ್ನು ಹೊಂದಿರುವ ಪ್ರಧಾನಿ ನಮ್ಮ ರಾಜ್ಯದ ಬಗ್ಗೆ ಬದ್ಧತೆ ಇದ್ದರೆ ಕೂಡಲೇ ಮಧ್ಯಪ್ರವೇಶ ಮಾಡಬೇಕು ಎಂದರು.
ಇನ್ನು ಮಂಡ್ಯದಲ್ಲಿ ರೈತರ ಹೋರಾಟದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಗ್ರಪ್ಪ, ಅನ್ಯಾಯ ಆದಾಗ ಹೋರಾಟ ಮಾಡಬೇಕಾಗುತ್ತದೆ. ನಾವೆಲ್ಲರೂ ಒಟ್ಟಿಗೆ ಸೇರಿ ಹೋರಾಟ ಮಾಡಬೇಕು. ಈ ಹೋರಾಟ ದಕ್ಕೆ ಬರದಂತೆ ನಮ್ಮ ಹಕ್ಕನ್ನು ಪಡೆಯಲು ನ್ಯಾಯಯುತವಾಗಿ, ಶಾಂತಿಯುತವಾಗಿ ಹೋರಾಟ ಇರಲಿ ಎಂದರು.












Click it and Unblock the Notifications