ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಣಗಳ್ಳಿ ಜನಕ್ಕೆ ಬರ ಬಂದಾಗ ಬಾವಿ ನೆನಪಾಯಿತು!

By ಮೈಸೂರು ಪ್ರತಿನಿಧಿ
|
Google Oneindia Kannada News

ಚಾಮರಾಜನಗರ: ಒಂದು ಕಾಲದಲ್ಲಿ ಗ್ರಾಮದ ಜನರ ದಾಹ ತಣಿಸುತ್ತಿದ್ದ ಬಾವಿಯೊಂದು ನಿರ್ಲಕ್ಷಿಸಿ ಅದನ್ನು ಕಸದ ತೊಟ್ಟಿಯನ್ನಾಗಿಸಿದ ಇಲ್ಲಿನ ಗ್ರಾಮವೊಂದರ ಗ್ರಾಮಸ್ಥರು, ಇದೀಗ, ಬರದ ಹಿನ್ನೆಲೆಯಲ್ಲಿ ತಾವು ಮಾಡಿದ ತಪ್ಪಿನ ಬಗ್ಗೆ ಹಣೆ ಚಚ್ಚಿಕೊಳ್ಳುವ ಪೇಚಿಗೆ ಸಿಲುಕಿದ್ದಾರೆ.

ಹೀಗೆ, ಹಪಹಪಿಸುತ್ತಿರುವ ಜನ ಹನೂರು ಸಮೀಪದ ಮಣಗಳ್ಳಿ ಗ್ರಾಮದವರು. ಅದೇ ಗ್ರಾದ ಅಂಬೇಡ್ಕರ್ ಬೀದಿಯಲ್ಲಿ ಇದ್ದ ಪುರಾತನ ಕಾಲದ ಬಾವಿಯೊಂದನ್ನು ಕಾಲಕ್ರಮೇಣ ನಿರ್ಲಕ್ಷಿಸಿದ್ದಕ್ಕೆ ಅದರ ಪ್ರತಿಫಲ ಉಣ್ಣುತ್ತಿದ್ದಾರೆ.

Villegers curse upon themselves on scuppering ancient drinking water well

ಈ ನಿರ್ಲಕ್ಷ್ಯಕ್ಕೆ ಪ್ರಮುಖವಾದ ಕಾರಣ, ಕೆಲವಾರು ವರ್ಷಗಳ ಹಿಂದೆ ಹಳ್ಳಿಗೆ ಬಂದ ಕೊಳಾಯಿ ನೀರಿನ ವ್ಯವಸ್ಥೆ. ತಮ್ಮ ತಮ್ಮ ಮನೆಗಳ ಬಳಿಯೇ ಬಂದ ಕೊಳವೆಬಾವಿಗೆ ಮಾರು ಹೋಗಿದ್ದರಿಂದ ಬಾವಿಯ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಹೊಸ ನೀರಿನ ಸೌಕರ್ಯದಿಂದ ಹಿಗ್ಗಿ ಹೀರೇಕಾಯಿ ಆದ ಜನ, ಪುರಾತನ ಕಾಲದಿಂದಲೂ ತಮ್ಮ ಪೂರ್ವಿಕರಿಗೆ ಜಲಾಧಾರವಾಗಿದ್ದ ಬಾವಿಯನ್ನು ಮರೆತೇಬಿಟ್ಟರು.

ಬರೀ ಮರೆತಿದ್ದರೆ ಸಾಕಿತ್ತೇನೋ, ಅದನ್ನು ಕಸದ ತೊಟ್ಟಿಯನ್ನಾಗಿಸಿದರು. ತ್ಯಾಜ್ಯ ವಸ್ತುಗಳನ್ನೆಲ್ಲಾ ಎಸೆದು ಅದನ್ನು ಸಂಪೂರ್ಣವಾಗಿ ಹಾಳುಗೆಡವಿದರು. ಆದರೀಗ, ಆ ಹಳ್ಳಿಯಲ್ಲಿ ಬರ ತಾಂಡವವಾಡುತ್ತಿದೆ. ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಯಾಗಿದೆ. ಹಾಗಾಗಿ, ಈಗ ಆ ಜನರಿಗೆ ಪುರಾತನ ಬಾವಿ ನೆನಪಾಗಿದೆ!

ಆದರೆ, ಗ್ರಾಮಸ್ಥರ ಇಂದಿನ ಬೇಡಿಕೆಯನ್ನು ಪೂರೈಸುವ ಸ್ಥಿತಿಯಲ್ಲಿ ಬಾವಿಯಿಲ್ಲ. ವರ್ಷಾನುಗಟ್ಟಲೇ ತನ್ನಲ್ಲಿ ಸಂಗ್ರಹವಾಗಿರುವ ಕಸದಿಂದ ಈ ಬಾರಿ ದುರ್ನಾತ ಬೀರುತ್ತಿದೆ.

ಈ ಸೇದು ಬಾವಿಯನ್ನು ಶತಮಾನಗಳ ಹಿಂದೆ ಈ ಹಳ್ಳಿಯ ಪೂರ್ವಜರು ಶ್ರಮವಹಿಸಿ ನೂರಾರು ಅಡಿ ಆಳ ತೋಡಿ ನಿರ್ಮಿಸಿದ್ದರು. ಆಗ ಈಗಿನಷ್ಟು ಅಂತರ್ಜಲದ ಮಟ್ಟ ಕುಸಿದಿರಲಿಲ್ಲ. ಹೀಗಾಗಿ ಬೇಗ ನೀರು ಸಿಕ್ಕಿತ್ತಲ್ಲದೆ, ಬೀದಿಯ ವಾಸಿಗಳಿಗೆ ಸಾಕಾಗುವಷ್ಟು ನೀರು ಇದರಲ್ಲಿ ಸಂಗ್ರಹವಾಗುತ್ತಿತ್ತು.

ಕ್ರಮೇಣ ಮಳೆ ಕಡಿಮೆಯಾಗಿ ಅಂತರ್ಜಲದ ಮಟ್ಟ ಕುಸಿಯುತ್ತಿದ್ದಂತೆಯೇ ಬಾವಿಯಲ್ಲಿ ನೀರು ಕಡಿಮೆಯಾಗ ತೊಡಗಿತು. ಜತೆಗೆ ಸುತ್ತಮುತ್ತಲ ಪ್ರದೇಶಗಳಲ್ಲಿ ಕೊಳವೆ ಬಾವಿಗಳನ್ನು ಕೊರೆಯಿಸಿದ್ದರಿಂದ ಅಂತರ್ಜಲ ಮಟ್ಟ ಭಾರೀ ಮಟ್ಟದ ಕುಸಿತ ಕಂಡಿತ್ತು. ಪರಿಣಾಮ ಬಾವಿಯಲ್ಲಿ ನೀರು ಕಡಿಮೆಯಾಯಿತು.

ಹೀಗಾಗಿಯೇ ಎಲ್ಲರ ದಾಹ ತಣಿಸುತ್ತಿದ್ದ ಸೇದು ಬಾವಿ ಸದ್ದಿಲ್ಲದೆ ನೇಪಥ್ಯಕ್ಕೆ ಸರಿಯಿತು. ಆದರೂ, ಆಯಾ ಕಾಲಘಟ್ಟಕ್ಕೆ ತಕ್ಕಂತೆ ಈ ಬಾವಿಯ ಆಳವನ್ನು ಹೆಚ್ಚಿಸಿ ಇದನ್ನು ದುರಸ್ತಿ ಮಾಡಿಸಿ ಸುಸ್ಥಿತಿಯಲ್ಲಿಟ್ಟುಕೊಳ್ಳುವ ಪ್ರಯತ್ನವನ್ನು ಯಾರೂ ಮಾಡಲಿಲ್ಲ.

ಅದನ್ನು ದುರಸ್ತಿ ಮಾಡುವ ಹಣಕ್ಕೆ ಕೊಳವೆಬಾವಿಯನ್ನು ಕೊರೆಯಿಸಿ ಬಿಡಬಹುದು ಎಂಬ ಲೆಕ್ಕಚಾರದಿಂದಾಗಿ ಬಾವಿ ಯಾರಿಗೂ ಬೇಡವಾಗಿ ಪಾಳು ಬಿತ್ತು. ಹೀಗೆ ಪಾಳು ಬಿದ್ದ ಬಾವಿಗೆ ಕೆಲವರು ಕಸ ಸೇರಿದಂತೆ ಅನುಪಯುಕ್ತ ವಸ್ತುಗಳನ್ನು ಸುರಿಯತೊಡಗಿದರು. ದಿನಕಳೆದಂತೆ ಕಸದಿಂದಲೇ ಬಾವಿ ಮುಚ್ಚಿಹೋಯಿತು.

ಒಂದು ವೇಳೆ ಈ ಬಾವಿಯನ್ನು ಉಳಿಸಿಕೊಂಡು ಮಳೆಗಾಲದಲ್ಲಿ ಮಳೆಕೊಯ್ಲು ಮಾಡಿದ್ದರೆ ಅಂತರ್ಜಲದ ಮಟ್ಟವನ್ನಾದರೂ ಹೆಚ್ಚಿಸಬಹುದಿತ್ತು. ಇದೀಗ ಗ್ರಾಮದ ಪ್ರಜ್ಞಾವಂತರು ಈ ಬಾವಿಯನ್ನು ದುರಸ್ತಿಗೊಳಿಸಿದರೆ ಇದರಲ್ಲಿ ಕುಡಿಯಲು ಯೋಗ್ಯವಾದ ನೀರು ಸಿಗಬಹುದು ಎಂದು ಹೇಳುತ್ತಿದ್ದಾರೆ. ಆದರೆ ಅದನ್ನು ಕೇಳುವವರು ಮಾತ್ರ ಇಲ್ಲವೇ ಇಲ್ಲ ಎಂಬಂತಾಗಿದೆ.

English summary
An ancient drinking water well in Managalli village of Chamarajanagara district of Karnataka has become a huge dust bin due to the negligence of villagers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X