ಹನೂರು: ಒಂದು ತಿಂಗಳಿನಿಂದಲೂ ಬೆಳಕಿಲ್ಲದೆ ತುಳಸಿಕೆರೆ ಗ್ರಾಮಸ್ಥರ ಪರದಾಟ
ಚಾಮರಾಜನಗರ, ಅಕ್ಟೋಬರ್, 21: ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತುಳಸಿಕೆರೆ ಗ್ರಾಮದಲ್ಲಿ 170ಕ್ಕೂ ಹೆಚ್ಚು ಕುಟುಂಬಗಳಿವೆ. ಇನ್ನು 1,000ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಈ ಕುಗ್ರಾಮದಲ್ಲಿ ಸೋಲಾರ್ ವಿದ್ಯುತ್ ಪ್ಲಾಂಟ್ ಕೆಟ್ಟ ಪರಿಣಾಮ ತಿಂಗಳಿನಿಂದ ವಿದ್ಯುತ್ ಇಲ್ಲದೇ ಜನರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ಒಂದು ತಿಂಗಳಿನಿಂದ ಗ್ರಾಮಸ್ಥರು ಸಂಬಂಧಪಟ್ಟ ಚೆಸ್ಕಾಂ ಸಿಬ್ಬಂದಿ ಹಾಗೂ ಗ್ರಾಮ ಪಂಚಾಯಿತಿ ಸೇರಿದಂತೆ ವಿವಿಧ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ, ದುರಸ್ತಿಗೆ ಮುಂದಾಗದೆ ಇರುವುದರಿಂದ ಒಂದು ತಿಂಗಳಿನಿಂದ ಕತ್ತಲಲ್ಲೇ ಜೀವನ ಸಾಗಿಸುವಂತಾಗಿದೆ.

ಮಲೆ ಮಹದೇಶ್ವರ ಬೆಟ್ಟದಿಂದ 3 ಕಿಲೋ ಮೀಟರ್ ದೂರದಲ್ಲಿರುವ ನಮ್ಮ ಗ್ರಾಮ ಕಗ್ಗತ್ತಲ್ಲಿನಲ್ಲಿ ಇರುವುದರಿಂದ ಹಳ್ಳದ ನೀರು-ಕೊಳ್ಳಿ ಬೆಳಕಿನಲ್ಲಿ ಅಡುಗೆ ಮಾಡುವಂತಾಗಿದೆ. ವಿದ್ಯಾರ್ಥಿಗಳ ಓದಿಗೂ ತೊಂದರೆಯಾಗಿದೆ, ಸಂಬಂಧಪಟ್ಟ ಜನಪ್ರತಿನಿಧಿಗಳು ಸಹ ಇತ್ತ ಗಮನ ಹರಿಸದೆ ಗ್ರಾಮವನ್ನು ಕಡೆಗಣಿಸಿದ್ದಾರೆ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕೆಂಪಯ್ಯ ಕಿಡಿಕಾರಿದ್ದಾರೆ.
ಲೋಕಸಭಾ ಚುನಾವಣೆ ಹೊತ್ತಲ್ಲಿ ಜಿಲ್ಲಾಡಳಿತ ಗ್ರಾಮಗಳಿಗೆ ಭೇಟಿ ನೀಡಿ ಮೂಲಸೌಕರ್ಯ ಕೊಡಲಾಗುವುದು ಎಂದು ಭರವಸೆ ಕೊಟ್ಟಿದ್ದರು. ಈಗ ಅದು ಸುಳ್ಳಾಗಿದೆ, ಕನಿಷ್ಠ ಸೋಲಾರ್ ವಿದ್ಯುತ್ ಅನ್ನು ಕೂಡ ರಿಪೇರಿ ಮಾಡಿಲ್ಲ ಎಂದು ಅಳಲನ್ನು ತೋಡಿಕೊಂಡರು. ವಿದ್ಯುತ್ ಸೋಲಾರ್ ಪ್ಲಾಂಟ್ ದುರಸ್ತಿ ಪಡಿಸಲು ಈಗಾಗಲೇ ಸಂಬಂಧಪಟ್ಟ ಗುತ್ತಿಗೆದಾರರ ಜೊತೆ ಮಾತನಾಡಿದ್ದೇವೆ, ಒಂದೆರಡು ದಿನದಲ್ಲಿ ದುರಸ್ತಿಪಡಿಸಿ ಗ್ರಾಮಸ್ಥರಿಗೆ ಸೋಲಾರ್ ವಿದ್ಯುತ್ ನೀಡಲು ಕ್ರಮ ವಹಿಸಲಾಗುವುದು ಎಂದು ಹನೂರಿನ ಸೆಸ್ಕ್ ಎಇಇ ಶಂಕರ್ ಭರವಸೆ ನೀಡಿದ್ದಾರೆ.
ಗುಂಡಿಮಯ ರಸ್ತೆಗಳಿಗೆ ರೀಲ್ಸ್ ಟಚ್: ರಾಜ್ಯದಲ್ಲಿ ಮತ್ತೆ ಮಳೆರಾಯನ ಆರ್ಭಟ ಮುಂದುವರೆದಿದೆ. ಇನ್ನು ನಿರಂತರವಾಗಿ ಸುರಿಯುತ್ತಿರುವ ಜೋರು ಮಳೆಗೆ ಚಾಮರಾಜನಗರ ಜಿಲ್ಲೆಯ ಹಲವೆಡೆ ಗುಂಡಿ ಬಿದ್ದ ರಸ್ತೆಗಳೆಲ್ಲಾ ಕೆರೆಯಂತಾಗಿವೆ. ಇದರಿಂದ ಸಂಚರಿಸುವವರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ದೃಶ್ಯಗಳನ್ನು ಯುವಕನೋರ್ವ ಸೆರೆಹಿಡಿದು ಇವುಗಳು ದೊಡ್ಡ ದೊಡ್ಡ ಕೆರೆಗಳು ಎಂದು ವರ್ಣಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ.
ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತೀ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ ರಸ್ತೆಯಲ್ಲಿನ ಗುಂಡಿಗಳನ್ನು ಗ್ರಾಮದ ಯುವಕನೋರ್ವ ವಿಡಿಯೋ ಮಾಡಿ, ತನ್ನದೇ ಆದ ರೀತಿಯಲ್ಲಿ ವರ್ಣನೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಇದೀಗ ಈ ವಿಡಿಯೋ ಭಾರೀ ಸದ್ದು ಮಾಡುತ್ತಿದೆ.
ಮಾರ್ಟಳ್ಳಿ ಗ್ರಾಮದ ಮುಖ್ಯರಸ್ತೆಯಲ್ಲಿರುವ ಗುಂಡಿಗಳನ್ನು ವಿಡಿಯೋ ಮಾಡಿ, ಇದು ಯಾವ ಕೆರೆ ಅಂದುಕೊಂಡಿದ್ದೀರಾ ಇದು ನಮ್ಮ ಊರಿನ ದೊಡ್ಡ ಕೆರೆ. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ ಕೆರೆಗಳೆಲ್ಲ ತುಂಬಿಹೋಗಿವೆ. ಕುಡಿಯುವ ನೀರಿಗೆ ತೊಂದರೆಯಾಗಿತ್ತು. ಇದೀಗ ಕೆರೆ ತುಂಬಿರುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಬರುವುದಿಲ್ಲ ಅನ್ನಿಸುತ್ತಿದೆ. ಕೆರೆಯ ನೋಡಲು ತುಂಬಾ ಚೆನ್ನಾಗಿ ಇದೆಯಲ್ಲವಾ, ನಮ್ಮ ಊರಿನ ರಸ್ತೆಯಲ್ಲಿ ಹಲವಾರು ಕೆರೆಗಳೆಲ್ಲ ತುಂಬಿರುವುದರಿಂದ ರೈತರಿಗೂ ತುಂಬಾ ಸಂತೋಷವಾಗಿದೆ ಎಂದು ವರ್ಣನೆ ಮಾಡಿದ್ದಾರೆ.
ಬಂಡಳ್ಳಿ ರಸ್ತೆ ಅದ್ಭುತ ರಸ್ತೆ: ಹನೂರು ತಾಲೂಕು ಕೇಂದ್ರ ಸ್ಥಾನದಿಂದ ಚಂಗವಾಡಿ, ಮಣಗಳ್ಳಿ, ಬಂಡಳ್ಳಿ ಶಾಗ್ಯ ಗ್ರಾಮದವರೆಗಿನ ರಸ್ತೆ ತುಂಬಾ ಹದಗಟ್ಟಿರುವುದರಿಂದ, ಸದಾಶಿವಪ್ಪ ಬೆಟ್ಟಪ್ಪ ಬಂಡಳ್ಳಿ ಎಂಬುವವರು ಸಾಮಾಜಿಕ ಜಾಲತಾಣ ಮುಖಪುಟದಲ್ಲಿ ಕರುನಾಡು ಬಂಧುಗಳೇ ನಮ್ಮ ರಸ್ತೆ ಅದ್ಭುತ ರಸ್ತೆ. ಹನೂರಿನಿಂದ ಶಾಗ್ಯ ಗ್ರಾಮದವರೆಗೆ ರಸ್ತೆಯಲ್ಲಿ ಉತ್ತಮ ತಳಿಯ ಭತ್ತ ಬೆಳೆಯಬಹುದು. ಈಗಾಗಲೇ ಮಳೆ ಬಿದ್ದಿರುವುದರಿಂದ ನಾಟಿ ಮಾಡಲು ಸಿದ್ಧವಾಗಿದೆ. ಯಾವುದೇ ರೀತಿಯ ಗೊಬ್ಬರ ಬೇಕಿಲ್ಲ ಎಂದು ಗ್ರಾಮಸ್ಥರನ್ನು ಮಾತನಾಡಿಸಿ ವಿಡಿಯೋ ಹರಿಬಿಟ್ಟಿದ್ದಾರೆ.












Click it and Unblock the Notifications